ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ಬಣಬಣ ಇಂದು ಮನೋಲ್ಲಾಸ ತಾಣ!

Last Updated 14 ಜನವರಿ 2013, 19:59 IST
ಅಕ್ಷರ ಗಾತ್ರ

ಬಾಗಲಕೋಟೆ ಜಿಲ್ಲೆ ಹುನಗುಂದದಲ್ಲೊಬ್ಬ ನಿವೃತ್ತ ಪ್ರಾಧ್ಯಾಪಕರಿದ್ದಾರೆ. ಹೆಸರು ಶಿವಸಂಗಪ್ಪ ಬಾಲಪ್ಪ ಸಿಂಗನಗುತ್ತಿ. ಮೂಲತಃ ಕುಷ್ಟಗಿ ತಾಲೂಕು ರ‌್ಯಾವಣಕಿಯವರಾದ ಶಿವಸಂಗಪ್ಪ ಅವರಿಗೆ ಬಾಲ್ಯದಿಂದಲೂ ಕೃಷಿಯಲ್ಲಿ ತುಂಬ ಆಸಕ್ತಿ. ಉಪನ್ಯಾಸಕ ವೃತ್ತಿಯಲ್ಲಿದ್ದರೂ ರಜೆ ದಿನಗಳಲ್ಲಿ ಹೊಲ-ತೋಟದ ನಿರ್ವಹಣೆ ಮಾಡುತ್ತಲೇ ಬಂದಿದ್ದ ಇವರಿಗೆ ನಿವೃತ್ತಿ ನಂತರ ಸುಮ್ಮನೇ ಕುಳಿತು ಕಾಲಹರಣ ಮಾಡುವುದಕ್ಕಿಂತ ಏನನ್ನಾದರೂ ಮಾಡಬೇಕೆಂದು ಆಲೋಚಿಸಿದಾಗ ಮೊಟ್ಟಮೊದಲು ಹೊಳೆದದ್ದೇ ಲಾಭದಾಯವಾಗಿ ಮಾಡಬಹುದಾದ ಕೃಷಿ.
 
ನಿವೃತ್ತಿಯ ಹಣದಲ್ಲಿ ರಾಷ್ಟ್ರೀಯ ಹೆದ್ದಾರಿ13ಕ್ಕೆ ಹೊಂದಿಕೊಂಡಂತೆ ಕುಷ್ಟಗಿ ಇಳಕಲ್ ಮಧ್ಯೆ 6 ಎಕರೆ ಜಮೀನು ಖರೀದಿಸಿ ಕೊಳವೆಬಾವಿ ಕೊರೆಸಿದ ಇವರು 1990ರಲ್ಲಿ ನಾಲ್ಕು ಎಕರೆಯಲ್ಲಿ ದಾಳಿಂಬೆ, 2 ಎಕರೆಯಲ್ಲಿ ಬಾಳೆ, ಪಪ್ಪಾಯ ಬೆಳೆಸಿದರು. 10 ವರ್ಷ ತಕ್ಕಮಟ್ಟಿನ ಫಲ ನೀಡಿದ ದಾಳಿಂಬೆ ಗಿಡಗಳು ಕಾಂಡಕೊರಕ, ದುಂಡಾಣುರೋಗಕ್ಕೆ ತುತ್ತಾಗಿ ಹಸಿರಿನಿಂದ ನಳನಳಿಸುವ ಗಿಡಗಳೆಲ್ಲ ಮರುಳುಗಾಡಿನ ಕುರುಚಲು ಸಸ್ಯದಂತಾದವು. ಹಾಕಿದ ಬಂಡವಾಳವೂ ಮರಳದಾಯಿತು.

`ಕೆಟ್ಟದ್ದನ್ನು ಅಟ್ಟು ಉಣ್ಣುವವನೇ ಜಾಣ' ಎಂಬ ನಾಣ್ಣುಡಿಯಂತೆ ದಾಳಿಂಬೆ ಕೃಷಿಯ ವೈಫಲ್ಯದಿಂದ ಕಂಗೆಟ್ಟರೂ ವಿಚಲಿತರಾಗದ ಶಿವಸಂಗಪ್ಪ ಅವರು ಅದೇ ಭೂಮಿಯಲ್ಲಿ ಹೊಸ ಪ್ರಯೋಗ ಮಾಡುವ ಸಂಕಲ್ಪ ಮಾಡಿದರು. ಹತ್ತಾರು ಜನ ಅನುಭವಿ ಕೃಷಿಕರೊಂದಿಗೆ, ಕೃಷಿ ವಿಜ್ಞಾನಿಗಳೊಂದಿಗೆ, ಮಾರಾಟಗಾರರೊಂದಿಗೆ ಆಳವಾಗಿ ಚರ್ಚಿಸಿದರು. ಸಾಫ್ಟ್‌ವೇರ್ ಎಂಜನಿಯರ್ ಆಗಿರುವ ಮಗ ಅಮರೇಶ, ನಾಸಾ ವಿಜ್ಞಾನಿಯಾಗಿರುವ ಅಳಿಯ ಚಂದ್ರಶೇಖರ ಪೂರಕ ಮಾಹಿತಿ ಒದಗಿಸುವುದರೊಂದಿಗೆ ನೈತಿಕ ಬಲ ನೀಡಿದರು. ಅಂತರ್ಜಾಲದಲ್ಲಿ ಮಾಹಿತಿ ಸಂಗ್ರಹಿಸಿದರು.

ಇದೇ ಸಂದರ್ಭದಲ್ಲಿ `ಬಳ್ಳಾರಿ ಜಾಲಿ ಬೆಳೆದ ಸಾವಿರಾರು ರೂಪಾಯಿ ಗಳಸವ್ರ ಅದಾರ ತೇಗದಾಗ ಲಾಭ ಇಲ್ಲಂದ್ರ ಹ್ಯಾಂಗ್ರಿ? ಎಂಬ ನಂದಿಬೆಟ್ಟದ ತೇಗ ಬೆಳೆಯುವ ಪ್ರಗತಿಪರ ರೈತ ಕುಮಾರರ ಭರವಸೆಯ ಮಾತಿನಿಂದ ಪ್ರೇರೇಪಿತರಾಗಿ ಅಂತಿಮವಾಗಿ ಅರಣ್ಯ ತೋಟಗಾರಿಕೆ ಕೃಷಿಯನ್ನು ಆಯ್ಕೆ ಮಾಡಿಕೊಂಡು ತಮ್ಮ ಜಮೀನಿನಲ್ಲಿ ಬಹುವಾರ್ಷಿಕ ಬೆಳೆಗಳಾದ ತೇಗ, ಶ್ರಿಗಂಧ ಬೆಳೆಯುವ ನಿರ್ಧಾರ ಮಾಡಿದರು.
 
ಕುಷ್ಟಗಿ ಸಮೀಪದ ಜಮೀನಿನಲ್ಲಿ 2006ರಲ್ಲಿ ಆಲಮಟ್ಟಿಯ ಸುಬ್ಬಾರಡ್ಡಿ ಎಂಬುವವರಿಂದ ಖರೀದಿಸಿದ ಅಂಗಾಂಶ ಕಸಿ ಮಾಡಿದ 4,500 ಸಾಗವಾಣಿ 1,200 ಶ್ರಿಗಂಧ, ತಾವರಗೇರೆ ಸಮೀಪದ ಹಾಗಲಹಾಳ ಮತ್ತು ರಾವಣಕಿಯಲ್ಲಿ 2008ರಲ್ಲಿ 9,000 ಸಾಗವಾಣಿ ನಾಟಿ ಮಾಡಿದರು. ನಿರ್ವಹಣೆಗೆ ಒಂದು ಕುಟುಂಬವೇ ಅಲ್ಲಿವೆ. ಸಹಜ ಕೃಷಿ ಮೂಲಕವೇ ಈ ಎಲ್ಲ ಸಸಿಗಳು ಬೆಳೆದು ಇಂದು ಗಿಡಗಳಾಗಿವೆ. ಆರಂಭದ ಒಂದೆರಡು ವರ್ಷ ನಿರ್ವಹಣೆ ಕಷ್ಟವೆನಿಸಿದರೂ ಮಲ್ಚಿಂಗ್ ವಿಧಾನ ಅನುಸರಿಸಿರುವುದರಿಂದ ಗೊಬ್ಬರ ಹಾಕಬೇಕೆನ್ನುವ ಸಮಸ್ಯೆ, ಸಣ್ಣಪುಟ್ಟ ರೋಗಗಳಿಂದ ಮುಕ್ತರಾಗಿದ್ದಾರೆ.

ಮನೋಲ್ಲಾಸದ ತಾಣ
ರಾಷ್ಟ್ರೀಯ ಹೆದ್ದಾರಿ 13ಕ್ಕೆ ಹೊಂದಿಕೊಂಡಂತೆ ಕುಷ್ಟಗಿ ಇಳಕಲ್ ಮಧ್ಯೆ ಇರುವ 6 ಎಕರೆ ಹಸಿರಿನಿಂದ ಕಂಗೊಳಿಸುವ ಇವರ ತೋಟ ದೂರದಿಂದಲೇ ಗಮನಸೆಳೆಯುತ್ತದೆ.  ಒಳಹೊಕ್ಕರೆ ಯಾವದೋ ದಟ್ಟ ಕಾಡು ಇಲ್ಲವೇ ಮಲೆನಾಡಿನಲ್ಲಿ ಇದ್ದೇವೆಂಬ ಅನುಭವವಾಗುತ್ತದೆ. ಮುಗಿಲೆತ್ತರಕ್ಕೆ ಬೆಳೆದು ನಿಂತ ಗಿಡಗಳ ನೆರಳು, ತಂಪಾದ ವಾತಾರಣ, ಹಕ್ಕಿಗಳ ಕಲರವದಿಂದ ನಮ್ಮನ್ನೇ ನಾವು ಮೈಮರೆಯುತ್ತೇವೆ. ಹೊರಬರುವಾಗ ಮನಸ್ಸು ಭಾರವಾಗುತ್ತದೆ.

ಸಸಿ ನಾಟಿ ಮಾಡಿ ಸ್ವತಂತ್ರವಾಗಿ ಬೆಳೆಯಲಾರಂಭಿಸಿದಂದಿನಿಂದ ಎಲ್ಲವನ್ನೂ ಸಹಜ ಕೃಷಿ ಮೂಲಕ ನಿರ್ವಹಣೆ ಮಾಡುತ್ತಿರುವುದರಿಂದ ಮಲ್ಚಿಂಗ್ ಮೂಲಕ ಉದುರಿದ ಎಲೆಗಳ ಗೊಬ್ಬರವೇ ಗಿಡಗಳಿಗೆ ಸಾಕಾಗುತ್ತದೆ. ಇಲಿ, ಹಾವು, ಕಪ್ಪೆ, ಮುಂಗುಸಿ, ಎರೆಹುಳು, ವಿವಿಧ ಜಾತಿಯ ಕೀಟ, ಪಕ್ಷಿಸಂಕುಲಕ್ಕೆ ಈ ತೋಟ ಅಭಯ ನೀಡುವ ಅಭಯಾರಣ್ಯದಂತಿದೆ. ಆಹಾರ ಸರಪಳಿಯ ಪ್ರತ್ಯಕ್ಷ ದರ್ಶನವನ್ನಿಲ್ಲಿ ಕಾಣಬಹುದು.

ಪ್ರತಿಫಲ ನಿರೀಕ್ಷೆ
ಬಹುರ್ವಾಕ ಕೃಷಿ ಇದಾಗಿರುವುದರಿಂದ ಸಸಿ ನಾಟಿ ಮಾಡಿದ 12-14 ವರ್ಷಕ್ಕೆ ಆದಾಯವನ್ನು ನಿರೀಕ್ಷಿಸಬಹುದು. ನಿರೀಕ್ಷೆಯಂತೆ ಬೆಲೆ ಸಿಗಬಹುದಾದರೂ ಮುಂಬರುವ ದಿನಗಳಲ್ಲಿ ಅದರ ನಿರ್ವಹಣೆಗಿಂತ ರಕ್ಷಣೆಗೆ ಹೆಚ್ಚು ಖರ್ಚಾಗುತ್ತದೆ. ಥಿನ್ನಿಂಗ್ ಪದ್ಧತಿಯಂತೆ ಕೆಲ ಗಿಡಗಳನ್ನು (ಅರ್ಧದಷ್ಟು) ಕಡಿದರೂ ಮುಂದಿನ 6-7 ವರ್ಷಗಳಲ್ಲಿ ಪ್ರತಿ ಸಾಗವಾಣಿಗೆ 15-20 ಸಾವಿರ ಪ್ರತಿ ಶ್ರಿಗಂಧಕ್ಕೆ 60-70 ಸಾವಿರ ಬೆಲೆ ಸಿಗಬಹುದು. `ಮಾಡಿದ್ರ ಎಲ್ಲಾದ್ರಾಗೂ ಲಾಭ ಐತೆ ಆದ್ರ ಸಾಗವಾಣಿ ಮತ್ತ ಶ್ರಿಗಂಧ ಬೆಳಿಯೂದ ಅಂದ್ರ ತಪಸ್ಸ ಇದ್ದಂಗ' ಎಂದೆನ್ನುವ ಇವರು ಕಡಿಮೆ ನೀರಿದ್ದರೂ ಕೊನೆಗೆ ಒಂದೆರಡು ವರ್ಷ ನೀರು ಹುತ್ತು ಹಾಕಿಯಾದರೂ ಗಿಡ ಬೆಳೆಸಿದರೆ ಮುಂದೊಂದು ದಿನ ಆದಾಯ ಖಚಿತ ಎನ್ನುತ್ತಾರೆ. ಪ್ರಾಧ್ಯಾಪಕ ಶಿವಸಂಗಪ್ಪ ಅವರ ಸಂಪರ್ಕ ಸಂಖ್ಯೆ: 94483 35597.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT