ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಹೊಲದಲ್ಲಿ 104 ಭತ್ತದ ತಳಿ

Last Updated 21 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಬಂಗಾರ ಸಣ್ಣ, ರತ್ನ ಚೂಡಿ, ರಾಜ ಮುಡಿ, ಗಂಧ ಸಾಲೆ, ಚಿನ್ನ ಪೊನ್ನಿ, ಅಂಕೂರ್ ಸಣ್ಣ, ಕರಿಸಾಲಿ, ನವರ, ಮುಂಡುಗ, ದೊಡ್ಡ ಬೈರು, ಕುಂಕುಮ ಸಾಲೆ, ಕಣತುಂಬ, ಮೈಸೂರು ಸಣ್ಣ, ಕರಿಗಿಜವಿಲಿ, ಬಾಳೆ ಸುಳಿ, ಕೊತ್ತಂಬರಿ ಸಾಲಿ, ಕೃಷ್ಣ ಕುಮುದ ಹೀಗೆ ಹೇಳ್ತಾ ಹೋಗಬಹುದು. ಇವೆಲ್ಲಾ ಸ್ವದೇಶಿ ಭತ್ತದ ತಳಿಗಳು. ಇವೂ ಸೇರಿ ಒಟ್ಟು ನೂರ ನಾಲ್ಕು ದೇಶಿ ಭತ್ತದ ತಳಿಗಳನ್ನು ಒಂದರ ಪಕ್ಕ ಒಂದನ್ನು ಬೆಳೆಯಲಾಗಿದೆ. ಈಗ ಇವು ತೆನೆಯೊಡೆದು ನಿಂತಿವೆ. ನೋಡುಗರಲ್ಲಿ ಕುತೂಹಲ ಹುಟ್ಟಿಸುವಂತಿವೆ.

ಇದು ಕನಕಪುರ ತಾಲೂಕಿನ ಕುಲುಮೆದೊಡ್ಡಿ ಗ್ರಾಮದಲ್ಲಿ ದೇಶಿ ಭತ್ತದ ತಳಿಗಳ ಕ್ಷೇತ್ರೋತ್ಸವದ ದೃಶ್ಯ. ಬೆಂಗಳೂರಿನ ಗ್ರೀನ್ ಫೌಂಡೇಷನ್ ಸಂಸ್ಥೆಯವರು ಇಲ್ಲಿ ರಮಾಕಾಂತ್ ಅವರ ಗದ್ದೆಯಲ್ಲಿ ಈ ತಳಿಗಳನ್ನು ಬೆಳೆಸಿದ್ದಾರೆ. ಇದನ್ನು ಕಣ್ಣಾರೆ ನೋಡಲು ಸುತ್ತ ಮುತ್ತಲಿನ  ಮರಳವಾಡಿ, ದೇವರ ಹಳ್ಳಿ. ಹೊಸದೊಡ್ಡಿ, ಕೊಳಾಲುಗುಂದಿ, ತಟ್ಟೆಕೆರೆ, ಭೀಮೇಗೌಡನ ದೊಡ್ಡಿ, ಹುಣಸನ ಹಳ್ಳಿ, ತೇರುಬೀದಿ, ಹೇರಂದಪ್ಪನ ಹಳ್ಳಿ ಮುಂತಾದ ಊರಿನ ನೂರಾರು ರೈತರು ಬಂದಿದ್ದರು.

`ನಾಟಿ ತಳಿ ಬಗ್ಗೆ ಉದಾಸೀನ ಬೇಡ. ಇವುಗಳು ನಾವು ಹಿಂದೆ ಬೆಳೆಯುತ್ತಿದ್ದ ಭತ್ತಗಳೇ. ನಾವೇ ಬೀಜಗಳನ್ನು ಕಾಪಾಡಿ ಹಂಚಿಕೊಂಡು ಬಿತ್ತುತ್ತಿದ್ದೆವು. ಆದರೆ ಈಗ ಯಾರ ಬಳಿಯೂ ಈ ಭತ್ತ ಇಲ್ಲ. ಬಿತ್ತನೆ ಸಮಯ ಬಂತೆಂದರೆ ಕೃಷಿ ಇಲಾಖೆಯ ಮುಂದೆ ಬೀಜ, ಗೊಬ್ಬರ, ಔಷಧಿಗಾಗಿ ಕ್ಯೂ ನಿಲ್ಲುವ ಪರಿಸ್ಥಿತಿ ಬಂದು ಬಿಟ್ಟಿದೆ. ನಮಗೆ ಗೊತ್ತೇ ಇಲ್ಲದ ತಳಿಗಳನ್ನು ನಾವು ಬೆಳೆಯುತ್ತಿದ್ದೇವೆ. ನಮ್ಮ ಹವಾಮಾನಕ್ಕೆ ಮತ್ತು ಮಣ್ಣಿಗೆ ಒಗ್ಗದ ಭತ್ತ ಬೆಳೆಯಲು ಲೆಕ್ಕವಿಲ್ಲದಷ್ಟು ಖರ್ಚು ಮಾಡಿ ಕೈ ಸುಟ್ಟುಕೊಳ್ಳುತ್ತಿದ್ದೇವೆ. ಇಲ್ಲಿ ನಿಮಗೆ ಇಷ್ಟವೆನಿಸಿದ ಭತ್ತವನ್ನು ಆಯ್ಕೆ ಮಾಡಿಕೊಂಡು ಬೀಜ ಬ್ಯಾಂಕಿನ ಮೂಲಕ ಪಡೆದುಕೊಳ್ಳಿ~ ಎಂದು ಸಾವಯವ ಕೃಷಿಕ ಲಕ್ಷ್ಮೀನಾರಾಯಣ ಅವರು ಹೇಳುವುದನ್ನು ರೈತರು ಆಸಕ್ತಿಯಿಂದ ಆಲಿಸಿದರು.

`ಕೃಷಿಕ ಸಮುದಾಯ ತಮ್ಮ ಬೀಜ ಸ್ವಾಯತ್ತತೆ ಉಳಿಸಿಕೊಂಡಾಗ ಮಾತ್ರ ರೈತನ ಬದುಕು ಹಸನಾಗಬಹುದು. ಈ ವಿಚಾರದಲ್ಲಿ ಬಾಂಗ್ಲಾದೇಶ ಉತ್ತಮ ಸಾಧನೆ ಮಾಡಿದೆ. ನಮ್ಮಲ್ಲಿದ್ದ ನಾಟಿ ತಳಿಗಳನ್ನು ನಿಮಗೆ ನೆನಪಿಸಿಕೊಡುವುದೇ ಈ ಕಾರ್ಯಕ್ರಮದ ಉದ್ದೇಶ~ ಎಂಬ  ಗ್ರೀನ್ ಫೌಂಡೇಷನ್‌ನ ನಿರ್ದೇಶಕ ಸುರೇಶ್ ನೀಡಿದ ವಿವರಣೆ ರೈತರಿಗೆ ಮನವರಿಕೆ ಆದಂತಿತ್ತು.

ಶ್ರೀ ಪದ್ಧತಿಯಲ್ಲೆೀ ಎಲ್ಲಾ ಜಾತಿಯ ಭತ್ತಗಳನ್ನು ಬೆಳೆದಿದ್ದು ರೈತರ ಪ್ರಶಂಸೆಗೆ ಪಾತ್ರವಾಯಿತು. ನೀರಿನ ಅನುಕೂಲ ಕಡಿಮೆ ಇರುವ ರೈತರು  `ಮುಂಡುಗ~ ಭತ್ತದ ಹಿಂದೆ ಬಿದ್ದಿದ್ದರು. ಕೆಲವರು ಜಾಸ್ತಿ ಹುಲ್ಲು ಕೂಡಾ ಸಿಗುವುದರಿಂದ  `ಬಾಳೆ ಸುಳಿ~  ಭತ್ತದ ಬೀಜಕ್ಕೆ ಬೇಡಿಕೆ ಇಟ್ಟರು. `ಸೋನಾ ಮಸೂರಿ~ಯನ್ನೂ ಮೀರಿಸಬಲ್ಲ `ಚಿನ್ನ ಪೊನ್ನಿ~ ಭತ್ತಕ್ಕೆ ಎಲ್ಲರ ಬೆಂಬಲ ಸಿಕ್ಕಿತು. `ಬಾಸುಮತಿ~ಗೆ ಸಾಥ್ ನೀಡಬಲ್ಲ  `ಗಂಧ ಸಾಲೆ~ಯ ಪರಿಮಳ ಹೇಗಿದೆ ಅಂತ ಬಂದವರಿಗೆಲ್ಲಾ ನೋಡುವ ಕುತೂಹಲ. ಕಪ್ಪು ಬಣ್ಣದ `ಕರಿಸಾಲಿ~ ಭತ್ತಕ್ಕೂ ಬೇಡಿಕೆ ಇಟ್ಟವರು ಇದ್ದರು.

ಈ ಕ್ಷೇತ್ರೋತ್ಸವದ ಇನ್ನೊಂದು ವಿಶೇಷ ಅಂದರೆ ವಿವಿಧ ಸಾವಯವ ಗೊಬ್ಬರಗಳನ್ನು ಬಳಸಿ ಚಿನ್ನ ಪೊನ್ನಿ  ಭತ್ತವನ್ನು ಬೆಳೆದ ತಾಕುಗಳು. ಜೀವಾಮೃತ, ಪಂಚಗವ್ಯ, ಮೀನಿನ ಎಣ್ಣೆ, ಪೂಚಿ ಮರುಂದು, ಬೆಳ್ಳುಳ್ಳಿ ಮತ್ತು ಶುಂಠಿ ಕಷಾಯಗಳನ್ನು ಬೇರೆ ಬೇರೆ ಪ್ರಮಾಣದಲ್ಲಿ ಹಾಕಿ ಬೆಳೆಯಲಾಗಿತ್ತು. ಪಂಚಗವ್ಯ ಮತ್ತು ಜೀವಾಮೃತ ಹಾಕಿ ಬೆಳೆದ ತಾಕು ಸಮೃದ್ಧವಾಗಿ ಎಲ್ಲರ ಗಮನ ಸೆಳೆಯಿತು.

`ಸಾವಯವ ಕೃಷಿಯಲ್ಲಿ ಹತ್ತು ಗುಂಟೆ ನೀರಾವರಿ ಜಮೀನಿದ್ದರೂ ಒಂದು ಕುಟುಂಬಕ್ಕೆ ನಿಶ್ಚಿಂತೆಯಿಂದ ಇರುವಷ್ಟು ವರಮಾನ ಪಡೆಯಬಹುದು~ ಎಂಬ  ಸಾವಯವ ಕೃಷಿಕ ದಾಸಪ್ಪನವರ ಲೆಕ್ಕಾಚಾರದ ಮಾತು ಎಲ್ಲರಿಗೂ ಸ್ಫೂರ್ತಿ ನೀಡಿತು.

`ನಾಟಿ ತಳಿಯನು ಉಳಿಸೋಣ, ಪ್ಯಾಟಿ ತಳಿಯನು ಅಳಿಸೋಣ~ ಎನ್ನುವ ಹಾಡಿಗೆ ಶಾಲಾ ಮಕ್ಕಳು ಹೆಜ್ಜೆ ಹಾಕಿದರು. ರಾಸಾಯನಿಕ ಕೃಷಿಯ ಅವಾಂತರವನ್ನು ನಾಟಕದ ಮೂಲಕ ರೈತರ ಮನಮುಟ್ಟಿಸುವಲ್ಲಿ ಜನಧಾನ್ಯ ಸಮುದಾಯ ಬೀಜ ಬ್ಯಾಂಕಿನ ಕಾರ್ಯಕರ್ತರು  ಸಫಲರಾದರು.

ತಾವು, ತಮ್ಮ ಅಪ್ಪ, ತಾತ, ಮುತ್ತಾತ ಬೆಳೆಯುತ್ತಿದ್ದ ಹಳೆ ಭತ್ತದ ತಳಿಗಳನ್ನು ಮತ್ತೊಮ್ಮೆ ರೈತರಿಗೆ ನೆನಪಿಸಿ ಕೊಡುವಲ್ಲಿ ಈ ಕ್ಷೇತ್ರೋತ್ಸವ ಯಶಸ್ವಿಯಾಯಿತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT