ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರೇಶ್ವರ ದೇಗುಲಕ್ಕೆ 800 ವರ್ಷ

ಎಚ್‌.ಎಸ್‌. ಹರಿಶಂಕರ್‌
Published 24 ಫೆಬ್ರುವರಿ 2024, 23:30 IST
Last Updated 24 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ದಾವಣಗೆರೆ ಜಿಲ್ಲೆಯ ಹರಿಹರ ಪ್ರಾಚೀನ ಕಾಲದ ಊರು ಹಾಗೂ ಯಾತ್ರಾಸ್ಥಳ. ಈ ಊರನ್ನು ‘ಹರೀಶಪುರ’, ‘ಗುಹಾರಣ್ಯ ಕ್ಷೇತ್ರ’, ‘ಕೂಡಲೂರು’, ‘ಕೂಡೂರು’ ಎಂದು ಶಾಸನದಲ್ಲಿ ಬಗೆ ಬಗೆಯಾಗಿ ಕರೆದಿದೆ. ಹರಿ ಮತ್ತು ಹರರು ಕೂಡಿ ಹರಿಹರೇಶ್ವರ ಆಗಿರುವುದರಿಂದ ಈ ಊರಿಗೆ ಹರಿಹರ ಎಂಬ ಹೆಸರೂ ಬಂದಿದೆ. ಹರಿಹರರು ಒಂದಾಗಿರುವ ಊರು ಹರೀಶಪುರ. ಗುಹಾಸುರನಿದ್ದ ಪ್ರದೇಶ ಗುಹಾರಣ್ಯ ಕ್ಷೇತ್ರ. ಹರಿಹರರು ಒಂದಾಗಿ ಗುಹಾಸುರ ಎಂಬ ರಾಕ್ಷಸನನ್ನು ಮೆಟ್ಟಿ ಪಾತಾಳಕ್ಕೆ ಕಳುಹಿಸಿದ ಸ್ಥಳ. ಕೂಡಲೂರು ಮತ್ತು ಕೂಡೂರು ಹರಿಹರರ ಸಮನ್ವಯವನ್ನು ಸೂಚಿಸುತ್ತದೆ. ಇಲ್ಲಿ ಹರಿಯುವ ತುಂಗಭದ್ರಾ ನದಿಗೆ ಸಮೀಪದ ಮತ್ತೊಂದು ಕಿರುಹಳ್ಳ ಹರಿದ್ರಾ ನದಿ ಸೇರುವುದರಿಂದಲೂ, ಕೂಡಲೂರು ಹೆಸರು ಬಂದಿರಬಹುದು. ಈ ಊರಿಗೆ ಸುಮಾರು ಸಾವಿರದ ಐನೂರು ವರ್ಷಗಳಿಗೂ ಮಿಕ್ಕ ಇತಿಹಾಸವಿದೆ. ದೇವಾಲಯದ ಹೊರಗಡೆ, ಹರಿಹರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಐವತ್ತಕ್ಕೂ ಹೆಚ್ಚಿನ ಶಾಸನಗಳು ದೊರೆತಿವೆ. ಈ ಶಾಸನಗಳಲ್ಲಿ ಕೆಲವಂತೂ ಪ್ರಸಿದ್ಧವಾಗಿದ್ದು ಚಾಳುಕ್ಯರ ಕಾಲದಿಂದ ಹಿಡಿದು ವಿಜಯನಗರದ ಅರಸರ ಕಾಲದವರೆಗೂ ವ್ಯಾಪಿಸಿವೆ.

ಹರಿಹರೇಶ್ವರ ಮೂರ್ತಿ: ಸ್ವಯಂಭು ಮೂರ್ತಿ. ಕ್ರಿ.ಶ. 694ನೆಯ ಇಮ್ಮಡಿ ಪುಲಿಕೇಶಿಯ ಮೊಮ್ಮಗ ವಿನಾಯಾದಿತ್ಯ ಶಾಸನವು ಈ ಮೂರ್ತಿಯನ್ನು ಹೆಸರಿಸುತ್ತದೆ. ಮುಂದೆ ಐದು ಶತಮಾನಗಳ ಕಾಲ ಹರಿಹರನ ಬಗೆಗಾಗಲಿ ಅಥವಾ ಶ್ರೀ ದೇವರ ಬಗ್ಗೆಯಾಗಲಿ ಯಾವ ಸಂಗತಿಗಳೂ ಕಾಣಬರುವುದಿಲ್ಲ. ಬಹುಶಃ ಆ ಕಾಲದ ರಾಜಕೀಯ ಕ್ಷೋಭೆಗಳಿಂದಾಗಿ ಈ ಗತಿ ಒದಗಿ ಬಂದಿರಬೇಕು. ದೇವರಿಗೆ ಒಂದು ಸರಿಯಾದ ಗುಡಿ ಇದ್ದಿರಲಾರದು ಎಂಬ ಅಂಶ ಶಾಸನಗಳಲ್ಲಿ ಕಂಡು ಬರುತ್ತದೆ.

ಹರಿಹರದ ಹರಿಹರೇಶ್ವರ ದೇವರಿಗೆ ಒಂದು ಸುಂದರವಾದ ನೆಲೆ ಮಾಡಿಸುವ ಸಂಕಲ್ಪ ಬಂದದ್ದು ಪೋಲಾಳ್ವ ದಂಡನಾಯಕ ಎಂಬ ದಂಡಾಧಿಪತಿಗೆ. ಇವನು ಆಂಧ್ರಪ್ರದೇಶದವನು. ಈತನ ಊರು ನಾರಣಪುರ. ಈತನು ಹೊಯ್ಸಳ ಸಾಮ್ರಾಜ್ಯದ ವೀರಬಲ್ಲಾಳನಿಗೂ, ಅವನ ಮಗ ವೀರ ನಾರಸಿಂಹನಿಗೂ ಮತ್ತು ವೀರಬಲ್ಲಾಳನ ಮೊಮ್ಮಗ ವೀರ ಸೋಮೇಶ್ವರನಿಗೂ ದಂಡಾಧಿಪತಿಯಾಗಿದ್ದ ಎಂದ ಮೇಲೆ ಈತನ ಸಾಮರ್ಥ್ಯವನ್ನು ಏನು ಹೇಳುವುದು? ಲೋಕವನ್ನು ಬೆಳಗತಕ್ಕ ಕೀರ್ತಿ, ಮುಗಿಲನ್ನು ಮುಟ್ಟುವ ಹಿರಿಮೆ, ಸಮುದ್ರಕ್ಕೆ ಸ್ಪರ್ಧಿಯಾದ ಗಾಂಭೀರ್ಯ, ಐಶ್ವರ್ಯವನ್ನು ಲೋಕಕ್ಕೆ ನೀಡುವ ಉದಾರ ನೀತಿ ಮತ್ತು ಪ್ರೀತಿಗಳು ಇವನಲ್ಲಿ ಸಂಗಮಿಸಿದ್ದುವು ಎಂದು ದಾವಣಗೆರೆಯ 24ನೆಯ ಶಾಸನ ಇವನನ್ನು ವರ್ಣಿಸುತ್ತದೆ.

ಈಗಿರುವ ದೇವಸ್ಥಾನವನ್ನು ಹೊಯ್ಸಳ ದಂಡಾಧಿಪತಿ ಪೋಲಾಳ್ವ ದಂಡನಾಥನು ಶಕಾಭ್ಯುದನ ಶಕವರ್ಷ 1145 ಸ್ವಭಾನು ಸಂವತ್ಸರದ ಮಾಘ ಶುದ್ಧ ಏಕಾದಶಿ ಬೃಹಸ್ಫತಿವಾರದಂದು (1224 ಫೆಬ್ರುವರಿ 8 ರಂದು) ನೂರ ಹದಿನೈದು ಚಿನ್ನದ ಕಲಶಗಳಿಂದ ಮೆರೆಯುವಂತೆ ಮಾಡಿಸಿ ಅದನ್ನು ಶ್ರೀ ದೇವರಿಗೆ ಅರ್ಪಿಸಿದನು. ಈ ಉತ್ಸವಕ್ಕೆ ಈ ದಂಡನಾಯಕನ ಗುಣಗಳಿಂದ ಆಕರ್ಷಿತರಾದ ಇತರ ಪ್ರಧಾನಿಗಳೂ ಕವಿಗಳೂ ವಿದ್ವಾಂಸರು ಆಗಮಿಸಿದ್ದು ಅದರಲ್ಲಿ ಭಾಗವಹಿಸಿರಬೇಕು.

ಶ್ರೀ ಹರಿಹರೇಶ್ವರ ದೇವಾಲಯ ಸುಮಾರು ದೊಡ್ಡದಾಗಿದೆಯೆಂದೇ ಹೇಳಬೇಕು. ಇಂಥದೊಂದು ದೇವಾಲಯವನ್ನು ಕಟ್ಟಿಸಿ, ಅದನ್ನು ನೂರಾರು ಚಿನ್ನದ ಕಳಸಗಳಿಂದ ಅಲಂಕರಿಸಬೇಕಾದರೆ ಪೋಲಾಳ್ವನ ಐಶ್ವರ್ಯ, ಅದನ್ನು ಸರಿಗಟ್ಟುವ ಅವನ ಧರ್ಮಶ್ರದ್ಧೆ ಅನನ್ಯವಾದದ್ದು. ಕಲಾವೈಭವದಿಂದ ಕೂಡಿದ ಈ ದೇವಸ್ಥಾನವನ್ನು ಶಾಸನಕವಿ ಮನೋಹರವಾಗಿ ಬಣ್ಣಿಸಿದ್ದಾನೆ.

ಗರ್ಭಗುಡಿಯಲ್ಲಿ ಶ್ರೀ ಹರಿಹರೇಶ್ವರ ಸ್ವಾಮಿಯ ಭಿನ್ನವಾದ ಮೂರ್ತಿಯಿದೆ, ಇತ್ತೀಚೆಗೆ ಶ್ರೀಮೂರ್ತಿಗೆ ವಜ್ರಲೇಪನ ಮಾಡಿ ಮತ್ತೆ ಪೂಜೆಗೆ ಅನುವು ಮಾಡಿಕೊಟ್ಟಿದ್ದಾರೆ. ಈ ದೇವಸ್ಥಾನದ ನವರಂಗದ ಎರಡು ಪಕ್ಕಗಳಲ್ಲಿ - ಉತ್ತರ ದಕ್ಷಿಣ ದಿಕ್ಕುಗಳಲ್ಲಿ ಎರಡು ದ್ವಾರಗಳಿವೆ. ಇದು ಬಹಳ ಅಪರೂಪ. ದೇವಸ್ಥಾನದ ರಂಗಮಂಟಪದಲ್ಲಿ ಬಹು ಸೊಗಸಾದ ಅರವತ್ತೆಂಟು ಕಂಬಗಳ ಸಾಲೇ ಇದೆ. ಈ ಕಂಬಗಳು ಎಷ್ಟು ನುಣುಪಾಗಿ ಸೌಂದರ್ಯಯುತವಾಗಿವೆಯೆಂದರೆ, ಆಧುನಿಕ ಯಂತ್ರಗಳ ಸೌಕರ್ಯವಿಲ್ಲದಿರುವಾಗಲೂ, ಇಂಥ ಕಂಬಗಳನ್ನು ಮಾಡಿರುವುದು ಶಿಲ್ಪಿಗಳ ಕೈಚಳಕವನ್ನು ತೋರಿಸುತ್ತದೆ. ಈ ರಂಗಮಂಟಪ ಎಷ್ಟೊಂದು ವಿಸ್ತಾರವಾಗಿದೆಯೆಂದರೆ ಇದರಲ್ಲಿ ನೂರಾರು ಮಂದಿ ಮಲಗಬಹುದಾಗಿದೆ. ಹೊಯ್ಸಳರ ವಾಸ್ತುಶಿಲ್ಪಕ್ಕೆ ಇದೊಂದು ಮಾದರಿಯಾಗಿದೆ.

ಹರಿಹರರ ಸಮನ್ವಯವನ್ನು ಕುರಿತಂತೆ ದಾವಣಗೆರೆ 25ನೆಯ ಶಾಸನ ಹೀಗೆ ಹೇಳುತ್ತದೆ : ಹರಿಯನ್ನು ಬಿಟ್ಟರೆ ಬೇರೆ ಇನ್ನು ಯಾವ ದೈವ ಇಲ್ಲವೆಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಹರನನ್ನು ಬಿಟ್ಟು ಅನ್ಯದ್ಯೆವವಿಲ್ಲೆಂದು ಹೇಳುತ್ತಾರೆ. ಈ ಜನರ ಸಂದೇಹವನ್ನು ಹೋಗಲಾಡಿಸುವ ಸಲುವಾಗಿ ಹರಿಹರರು ಈ ಕೂಡಲೂರಿನಲ್ಲಿ (ಹರಿಹರದಲ್ಲಿ) ನೆಲೆ ನಿಂತಿದ್ದಾರೆ. ಇವರು ನಮ್ಮನ್ನು ರಕ್ಷಿಸಲಿ.

ಹರಿಹರೇಶ್ವರ ದೇವಾಲಯವನ್ನು ಕಟ್ಟಿ ಎಂಟುನೂರು ವರ್ಷಗಳು ಸಂದಿವೆ. ಪರಕೀಯರ ದಾಳಿಗೆ ಸಿಕ್ಕು ಅಲ್ಲಲ್ಲಿ ದೇವಾಲಯದ ಹೊರಗೋಡೆಯ ಶಿಲ್ಪಗಳು ಭಿನ್ನಗೊಂಡಿದ್ದರೂ ಒಟ್ಟು ದೇವಾಲಯದ ನೋಟ ಚೆನ್ನಾಗಿದೆ. ನಮ್ಮ ಮುಂದಿನ ಪೀಳಿಗೆ ಈ ದೇವಾಲಯ ನಿರ್ಮಾಣಗೊಂಡ ಸಾವಿರ ವರ್ಷಗಳನ್ನು ಕಾಣುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT