ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಹಿತ್ಯ: ಪ್ರಗತಿಪರ ಚಿಂತನೆಯ ಕಥೆಗಾರ್ತಿ ದೇವಕಿ

ಕೆ. ಉಷಾ ಪಿ ರೈ
Published 1 ಜೂನ್ 2024, 23:30 IST
Last Updated 1 ಜೂನ್ 2024, 23:30 IST
ಅಕ್ಷರ ಗಾತ್ರ
ಸ್ವಾಂತಂತ್ರ್ಯಪೂರ್ವದಲ್ಲೇ ಪುರೋಗಾಮಿ ಚಿಂತನೆ ಮೂಲಕ ಕಥೆಗಳು, ನಗೆಬರಹಗಳಿಂದ ಹೆಸರಾಗಿದ್ದ ಕೆದಂಬಾಡಿ ದೇವಕಿ ಎಂ.ಶೆಟ್ಟಿ ತಮ್ಮ 97 ವಯಸ್ಸಿನಲ್ಲಿ ಮೇ 23 ರಂದು ಮಂಗಳೂರಿನಲ್ಲಿ ನಿಧನರಾದರು.

ಮಹಿಳಾ ಸಾಹಿತ್ಯವನ್ನು ಸ೦ಪೂರ್ಣ ಕಡೆಗಣಿಸಿದ್ದ ಕಾಲದಲ್ಲಿ ಹೆಚ್ಚಿನ ಪ್ರೋತ್ಸಾಹದ ನಿರೀಕ್ಷೆಯೂ ಸಾಧ್ಯವಿರಲಿಲ್ಲ. ಕಳೆದ ಶತಮಾನದ ನಾಲ್ಕು, ಐದರ ದಶಕದಲ್ಲಿ ಮಹಿಳೆಯರು ಬರೆಯುತ್ತಿದ್ದುದೇ ಅಪರೂಪ. ಆಗ ಬಂಟರಲ್ಲಿ ಬರೆಯುತ್ತಿದ್ದವರು ಚಂದ್ರಭಾಗಿ ರೈ ಮತ್ತು ದೇವಕಿ ಎಂ.ಶೆಟ್ಟಿ ಇಬ್ಬರೇ ಎಂದು ಹೇಳಬಹುದು. ಆಗಿನ ಸಾಹಿತ್ಯವನ್ನು ಈಗಿನ೦ತೆ ವರ್ಗೀಕರಣ ಮಾಡುವುದಾದರೆ ದೇವಕಿಯವರು ಬರೆದದ್ದನ್ನು ದಲಿತ-ಬಂಡಾಯ ಸಾಹಿತ್ಯವೆ೦ದು ಪರಿಗಣಿಸಬಹುದು. ಕೆಳವರ್ಗದ ಜನರ ಜೀವನವನ್ನೂ ಅವರು ಹತ್ತಿರದಿಂದ ನೋಡಿದ್ದರಿಂದ ಅದನ್ನೇ ಅವರು ತಮ್ಮ ಸಾಹಿತ್ಯದಲ್ಲಿ ಬಿಂಬಿಸಿದ್ದಾರೆ.

20ನೇ ಶತಮಾನದ ಪ್ರಾರಂಭದಲ್ಲಿ ಹುಟ್ಟಿ ಎರಡು ಮಹಾಯುದ್ಧಗಳ ಬೇಗೆಯಲ್ಲಿ ಬೆಂದು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುತ್ತಿದ್ದ ದೇಶಭಕ್ತರ ಮಧ್ಯೆ ಬೆಳೆದು, ಸಾತಂತ್ರ್ಯ ಸಿಕ್ಕಿದ ಸಂಭ್ರಮವನ್ನು ಅನುಭವಿಸಿ, ಮನೆಯಲ್ಲಿದ್ದುಕೊಂಡೇ ಗಾಂಧಿತತ್ವಗಳಿಗೆ ಮನಸೋತು ಅವರ ಆದರ್ಶಗಳಲ್ಲಿ ಬದುಕುವ ಪಣತೊಟ್ಟ ಹುಡುಗಿ ಲೇಖನಿ ಹಿಡಿದಾಗ ಹರಿದು ಬಂದದ್ದು ಅಂದಿನ ಬದುಕಿನ ಚಿತ್ರಣಗಳೇ.

ಬಾಲ್ಯದಲ್ಲಿ ದೇವಕಿಯವರನ್ನು ಕಾಡಿದ್ದು ಸಾಮಾಜಿಕ ಅವ್ಯವಸ್ಥೆ, ಜಾತಿ ವ್ಯವಸ್ಥೆ, ದೇಶಭಕ್ತಿ, ಪಾಕಿಸ್ತಾನದ ವಿಭಜನೆ ಇತ್ಯಾದಿ... ಅವರ ಕಥೆಗಳಲ್ಲಿ ನಿರೂಪಿತವಾದದ್ದು ಜನರನ್ನು ಕಾಡುತ್ತಿದ್ದ ಮೂಢನಂಬಿಕೆಗಳು, ಅಸ್ಪೃಶ್ಯತಾ ನಿವಾರಣೆ, ಜಾತಿ ಪದ್ಧತಿಯ ನಿರಾಕರಣೆ, ಪಾಕಿಸ್ತಾನ ವಿಭಜನೆಯಿಂದ ಜನರು ಅನುಭವಿಸಿದ ನೋವು.

ಚಿಕ್ಕಂದಿನಿಂದಲೂ ಧೈರ್ಯವಂತೆ. ಅನ್ಯಾಯ ಕಂಡರೆ ಸಿಟ್ಟಾಗುತ್ತಿದ್ದರು. ಹೆಣ್ಣು ಮಕ್ಕಳಿಗೆ ವಿದ್ಯೆ ಬೇಡ ಎನ್ನುವ ಕಾಲದಲ್ಲೂ ಮೆಟ್ರಿಕ್ಯುಲೆಶನ್ ವರೆಗೆ ಓದಿದ್ದರು. ಅಕ್ಷರ ಕಲಿತ ಹುಡುಗಿ ಮೇಲೆ ಗಾಂಧೀಜಿಯ ಸಮಾಜ ಸುಧಾರಣಾ ಕೆಲಸಗಳು ಪ್ರಭಾವ ಬೀರಿದ್ದವು.  ಜಾತಿ ತಾರತಮ್ಯವನ್ನು ನೋಡುತ್ತಲೇ  ಬೆಳೆದಿದ್ದರು. ಹಾಗಾಗಿ ಅವರು ಬರೆಯಲು ಆರಿಸಿಕೊಂಡದ್ದು ಅವರ ಕಾಲದಲ್ಲಿ ದಲಿತರಿಗಾಗುತ್ತಿದ್ದ ಅನ್ಯಾಯದ ವಸ್ತುಗಳು.     

ಅವರು ಬರೆದ ಕಥೆಗಳು, ನಗೆ ಬರಹಗಳನ್ನು ನವಯುಗ, ಅಂತರಂಗ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಬೇಸರದ ಸಂಗತಿಯೆಂದರೆ ಈಗ ಅವೆಲ್ಲೂ ಲಭ್ಯವಿಲ್ಲ.

ದೇವಕಿಯವರ ಸಾಹಿತ್ಯ ರಚನೆ ಆದದ್ದು ಸುಮಾರು 1945 ರಿಂದ 1960 ರ ವರೆಗೆ. ಆ ಮೇಲೆ ಅವರ ಜೀವನದಲ್ಲಿ ಎದ್ದ ಬಿರುಗಾಳಿ ಅವರ ಸಾಹಿತ್ಯ ಸಾಧನೆಗೆ ಮಾರಕವಾಯಿತು. ಅಲ್ಲದೇ ಮನೆಯಲ್ಲಿ ಅವರ ಬರಹಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಲಿಲ್ಲ. ಅಕ್ಕನ ಹಾಗೂ ಭಾವನವರ ಪ್ರೋತ್ಸಾಹದಿಂದ ಬರವಣಿಗೆ ಸಾಗಿದ್ದರೂ ಮಕ್ಕಳ ಆರೈಕೆ, ಅವರ ಕೆಲಸಗಳೇ ಕೈತುಂಬಾ ಇರುವಾಗ ಬರೆಯುವ ಸಮಯವಾಗಲಿ, ನೆಮ್ಮದಿಯಾಗಲಿ ಇರಲಿಲ್ಲ. ಜನರು ಅವರ ಕಥೆಗಳನ್ನು ಮೆಚ್ಚುವುದು, ಹೊಗಳುವುದು, ಪತ್ರ ಬರುವುದು ಹಿರಿಯರಿಗೆ ಮೆಚ್ಚುಗೆಯಾಗುತ್ತಿರಲಿಲ್ಲ. ಇದರಿಂದ ದೇವಕಿಯವರ ಬರೆಯುವ ಹುಮ್ಮಸ್ಸು ಇಳಿದುದರಲ್ಲಿ ಅಚ್ಚರಿಯಿಲ್ಲ. ಬರೆಯಬೇಕೆನ್ನುವ ತುಡಿತ ತೀವ್ರವಾಗಿದ್ದರೂ ಮನೆಯ ಪ್ರತಿಕೂಲ ವಾತಾವರಣ ಅವರನ್ನು ಬರವಣಿಗೆಯಿಂದ ದೂರ ಇಟ್ಟಿತ್ತು. ಅವರ ಬರವಣಿಗೆಗೆ ಮನಪೂರ್ವಕ ಪ್ರೋತ್ಸಾಹ ಸಿಕ್ಕಿದ್ದು ನವಯುಗದ ಸಂಪಾದಕರಾಗಿದ್ದ ಕೆ.ಹೊನ್ನಯ್ಯ ಶೆಟ್ಟಿಯವರಿಂದ. 

ದೇವಕಿಯವರು ಮೊದಲ ಕಥೆ ಬರೆದದ್ದು ಅವರು 9ನೇ ತರಗತಿಯಲ್ಲಿರುವಾಗ. ಅದು ‘ಜಾತಿ ಭೂತಕ್ಕೆ ಬಲಿ’. ತಾಯಿಮನೆಗೆ ಬಂದಿದ್ದ ಅಕ್ಕ ಪದ್ಮ ಈ ಕಥೆಯನ್ನು ಓದಿ ಅಭಿಮಾನದಿಂದ ತಂದು ಗಂಡನ ಕೈಯಲ್ಲಿಟ್ಟಿದ್ದರು. ಅದನ್ನು ಭಾವ ಓದಿ ಖುಷಿ ಪಟ್ಟು ತಾವು ಪ್ರಕಟಿಸುತ್ತಿದ್ದ ಅಂದಿನ ಕಥೆಗಳಿಗೆಂದೇ ಮೀಸಲಾಗಿದ್ದ ಜನಪ್ರಿಯ ಮಾಸಿಕ ಅ೦ತರಂಗದಲ್ಲಿ ಪ್ರಕಟಿಸಿದ್ದರು. ಮತ್ತೆ ಅದು ಅವರೇ ಪ್ರಕಟಿಸಿದ ‘ಕಥಾವಳಿ’ ಕಥಾ ಸಂಕಲನದಲ್ಲಿ ಪ್ರಕಟವಾಗಿ ನಾಲ್ಕು ಮರುಮುದ್ರಣಗಳನ್ನು ಕಂಡಿತ್ತು. ಆದರೆ ಇವತ್ತು ಅದರ ಪ್ರತಿಗಳು ಲಭ್ಯವಿಲ್ಲ. 

ವಿಮರ್ಶಕ ಜಿ.ಎಸ್. ಆಮೂರ ಅವರು ಸುಮಾರು ಎಂಟು ವರ್ಷಗಳ ಹಿಂದೆ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದವರು ಪ್ರಕಟಿಸಿದ್ದ ಪುಸ್ತಕದಲ್ಲಿ ಸ್ವಾತಂತ್ರ್ಯ ಪೂರ್ವ ಲೇಖಕಿಯರ ಕಥೆಗಳನ್ನು ಸಮೀಕ್ಷಿಸುವ ಲೇಖನ ಬರೆದಿದ್ದರು. ಅದರಲ್ಲಿ ಆಗಿನ ಕಾಲದ ಲೇಖಕಿಯರಿಗಿಂತ ಭಿನ್ನವಾಗಿ ಬರೆದ ದಕ್ಷಿಣ ಕನ್ನಡದ ಕೆ.ದೇವಕಿಯವರ ‘ಜಾತಿಭೂತಕ್ಕೆ ಬಲಿ’ ಕಥೆಯನ್ನು ಗುರುತಿಸಿದ್ದರು. ಆ ಕಥೆಯಲ್ಲಿನ ಪುರೋಗಾಮಿ ದೃಷ್ಟಿ ಅಚ್ಚರಿ ಹುಟ್ಟಿಸುತ್ತದೆ ಎನ್ನುವ ಮಾತನ್ನು ಬರೆದಿದ್ದರು. ಆಮೂರರಂತಹ ವಿಮರ್ಶಕರಿಂದ ಗುರುತಿಸಲ್ಪಟ್ಟ ಈ ಲೇಖಕಿ ಯಾರ ಗಮನವನ್ನೂ ಸೆಳೆದಿರದಿರುವುದು ಅಚ್ಚರಿಯೇ.

1950 ರಲ್ಲಿ ನವಭಾರತ ಪುಸ್ತಕ ಪ್ರಕಾಶನದಲ್ಲಿ ಪುಸ್ತಕರೂಪದಲ್ಲಿ ‘ಯಮನ ಸೋಲು ಮತ್ತು ಇತರ ಕಥೆಗಳು’ ಹೆಸರಿನಲ್ಲಿ ಪ್ರಕಟವಾಗಿತ್ತು. ಇದರಲ್ಲಿ ಒಟ್ಟು ಆರು ಕಥೆಗಳಿವೆ. ಯಮನಸೋಲು, ನಕ್ಕರೂ ನಗಬಹುದು, ಅಬ್ಬಾ...  ಕುಲೆ, ಕರುಳಿನ ಭೇದ, ಇತ್ಯಾದಿ. ‘ನಕ್ಕರೂ ನಗಬಹುದು’ ಕೃತಿಚೌರ್ಯವನ್ನು ಗೇಲಿ ಮಾಡಿ ಬರೆದ ಕಥಾರೂಪದ ನಗೆಬರಹ. ಓದುಗರಿಗೆ ಕಚಗುಳಿ ಇಡುತ್ತಲೇ ಸಾಗುವ ಕಥೆ ಒಂದು ಹಾಸ್ಯಕಥೆಯಾಗಿ ಮೂಡಿ ಬಂದಿರುವುದು ಲೇಖಕಿಯ ಕಥೆ ಹೇಳುವ ಜಾಣ್ಮೆಗೆ ನಿದರ್ಶನವಾಗಿದೆ. “ಅಬ್ಬಾ.. . . ಕುಲೆ ’  ಭೂತಗಳ ಮೇಲಿನ ಅಂದಿನ ಮೂಢನಂಬಿಕೆಯನ್ನೇ ಬಂಡವಾಳವಾಗಿಟ್ಟುಕೊಂಡು ಬರೆದ ಕಥೆ. ‘ಕರುಳಿನ ಭೇದ’ ಮನಮಿಡಿಯುವ ಕಥೆ. ಎಲ್ಲರೂ ಒಂದೇ ಎನ್ನುವ ಭಾವವಿದ್ದ ಲೇಖಕಿ ತಾಯಿಯೇ ತೋರಿಸುವ ಭೇದಕ್ಕೆ ತೋರಿಸಿದ ಪ್ರತಿಭಟನೆ ಇಲ್ಲಿ ವ್ಯಕ್ತವಾಗಿದೆ.

1956ರಲ್ಲಿ ‘ಆ ಹೆಂಗಸು’ ಎನ್ನುವ ನೀಳ್ಗತೆ ಧಾರಾವಾಹಿಯಾಗಿ ಮತ್ತು ‘ಭಿಕ್ಷುಕ ನೀಡಿದ ಪಾಠ ’ ನವಯುಗದಲ್ಲಿ ಪ್ರಕಟವಾಗಿತ್ತು. ‘ಆ ಹೆಂಗಸು’ ಪಾಕಿಸ್ತಾನ ವಿಭಜನೆಯಲ್ಲಿ ಭಾರತಕ್ಕೆ ಬಂದು ಸೇರಿದ ಹೆಂಗಸೊಬ್ಬಳ ಕಥೆ. ಭಾರತಕ್ಕೆ ಬಂದಾಗ ಅವಳು ಅನುಭವಿಸಿದ ನೋವುಗಳ ಚಿತ್ರಣ ಇಲ್ಲಿದೆ.

ಕೊನೆಯದಾಗಿ ಅವರು ಮಾಡಿದ ಸಾಹಿತ್ಯಿಕ ಕೆಲಸ ಅವರ ಮಗಳು ಗೌತಮಿ ಕಾಲೇಜಿಗೆ ಹೋಗುತ್ತಿರುವಾಗ ಸಂಗ್ರಹಿಸಿಟ್ಟಿದ್ದ ಚಾರಿತ್ರಿಕವಾದ ಕೊಹಿನೂರು ವಜ್ರದ ಕಥೆಯನ್ನು ಒಟ್ಟು ಸೇರಿಸಿ ‘ಕೊಹಿನೂರ ದುರಂತ’ ಎನ್ನುವ ಚಾರಿತ್ರಿಕ ಕಾದಂಬರಿಯನ್ನು ಪ್ರಕಟಿಸಿದ್ದರು.

ಕನ್ನಡ ಸಾಹಿತ್ಯದಲ್ಲಿ 90-100 ವರ್ಷಗಳ ಹಿಂದಿನಿಂದ ಮಹಿಳೆಯರು ಬರೆದಿರುವ ಸಾಹಿತ್ಯಿಕ ಇತಿಹಾಸವಿದೆ. ಲೇಖಕಿಯರನೇಕರು ಈ ಇತಿಹಾಸದಲ್ಲಿ ಹೆಜ್ಜೆ ಮೂಡಿಸಿ ಹೋಗಿದ್ದಾರೆ. ಕೆಲವರು ದಾಖಲಾಗಿದ್ದಾರೆ, ಕೆಲವರು ಎಲ್ಲೂ ದಾಖಲಾಗಿಲ್ಲ ಎನ್ನುವುದೂ ಸತ್ಯ. ಅವರೆಲ್ಲರ ಜೀವನವೂ ಒಂದೊಂದು ಯಶೋಗಾಥೆಯೇ. ಕೆದಂಬಾಡಿ ದೇವಕಿ ಎಂ.ಶೆಟ್ಟಿಯವರು ಸಣ್ಣ ಕಥೆಗಾರ್ತಿಯಾಗಿ ಕೆಲವು ಉತ್ತಮ ಕಥೆಗಳನ್ನು ಬರೆದಿದ್ದರೂ ಅವರ ಪುಸ್ತಕಗಳು ಈಗ ಓದಲು ಸಿಗದಿರುವುದು ನಿಜಕ್ಕೂ ನೋವಿನ ಸಂಗತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT