ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆಯ ಕಲಹ

ಕವಿತೆ
Last Updated 15 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಇದ್ದಕ್ಕಿದ್ದಂತೆ ನನ್ನದೊಂದು ಕವಿತೆ ಅಳತೊಡಗಿತು
ದುಃಖ ಆಳದ್ದೆನಿಸಿತು...
ಕಣ್ಣ ತೇವವ ಕೆನ್ನೆ ಆಚೀಚೆ ಮೆಲ್ಲಗೆ ಒರೆಸಿ,
ಸುಮ್ನಿರು ಪುಟ್ಟೀ ಚೆಂದ ಪುಟ್ಟಿ ಅಂದೆ ನೋಡಿ
ಮುಖ ತಿರುಗಿಸಿ

ಚೆಂದಗೊಳಿಸುವದ ಬಿಡು
ಮುದ್ದು ಮಾಡಿದರೆ ನಾನು ನಾನಾಗುವದಿಲ್ಲ...
ಊಳಿಟ್ಟಿತು
ನೀನು ನನ್ನ ಸರಿಯಾಗಿ ಪೊರೆದಿಲ್ಲ ಅಂತ ಗೋಳಿಟ್ಟಿತು

ಬಾಯ್ಮುಚ್ಚು, ಮಾತಾಡದಿರು ಹುಚ್ಚುಚ್ಚು
ಪೊರೆಯುವುದೆಂದರೇನೇ? ನನ್ನದೆಲ್ಲ ಬಸಿದಿದ್ದೇನೆ...

ಮಾತು ಮುಗಿದಿರಲೂ ಇಲ್ಲ,
ಶಬ್ದ ಬಸಿದೆ ಇನ್ನೇನು ಕಿಸಿದೆ? ಅಂತ ಹಂಗಿಸಿತು
ಹಸಿಯದೇ ಉಣ್ಣುವುದ ಬಿಡು ನೀನು ಅಂತು
ಮೊಗ್ಗು ಹೂವಾಗಿ ಅರಳಲು ಬಿಡು ನೀ ಅಂತಲೂ ಅಂತು

ಎಲಾ ಮುಂಡೆ, ಎಷ್ಟೇ ಸೊಕ್ಕು ನಿನಗೆ? ಅಂತ ಬಿಕ್ಕತೊಡಗಿದೆ,
ತಾನೇ ಇದ್ದುಬಿದ್ದ ತನ್ನ ಕಣ್ಣೀರೊರೆಸಿಕೊಂಡು
ಎದೆ ಸೆಟೆಸಿ ನಿಂತು

ಇದೇ ಆಯ್ತು
ಬಾಯಿ ಮುಚ್ಚು! ತೆಪ್ಪಗಿರು!
ಕಟ್ಟುಪಾಡು ಕಟ್ಟುಪಾಡು..!
ಸೊಕ್ಕಿ ಬೆಳೆಯಬಿಡದೇ ನನ್ನ
ಬಿಕ್ಕಿ ಅಳುತ ಕೂತೆ ನೋಡು ಅಲ್ಲಿ ಕೆಟ್ಟೆ ನಾನು
ನನ್ನ ಕತ್ತು ಹಿಸುಕುವುದ ಬಿಡು ನೀನು ಅಂತು

ಹಲ್ಲು ಗಿಂಜಿ ನಿಂತೆ ನೀನು ಅಂದು ಅಲ್ಲಿ ಆಮೇಲೆ ಎಲ್ಲೆಲ್ಲೂ
ಪ್ರಖರ ಬೆಳಕು ಮೈಕು
ಹಣದ ಥೈಲಿ ಥಳಕು
ಕೊರಳ ಉರುಳಾಗಿ ನನಗೆ
ನಿನಗೆ ಕೇಳುವಂತೇ ಬಿಕ್ಕಿದರೂ
ಕೇಳಿಸಲಿಲ್ಲ ನಿನಗೆ...

ಮತ್ತೆ ಅಳತೊಡಗಿದ ನನ್ನ ಕವಿತೆಯ ತಬ್ಬಿಕೊಂಡು ಅತ್ತೆ
ಅದೂ ಮತ್ತೂ ಅತ್ತಿತು

ಹಗುರಾದೆಯಾ? ಅಂತು
ಇಲ್ಲ ಚಿನ್ನು ಅಂದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT