ಗುಲ್ಬರ್ಗದ ಪರೇಡು ಮೈದಾನಗಳಲ್ಲಿ ಕವಾಯತು ಮಾಡುವುದು ನಿಜಕ್ಕೂ ಸಾಹಸದ ಕೆಲಸ. ಮೊದಲೇ ರಣಬಿಸಿಲ ದಿನಗಳು. ರಾತ್ರಿ ದಿಂಬಿನ ಮೇಲೆ ತಲೆ ಇರಿಸಿ ಮಲಗಿದ್ದೇ ಗೊತ್ತು. ಏಳುವುದರೊಳಗೆ ತಲೆದಿಂಬು ನಮ್ಮದೇ ಬೆವರಿನಿಂದ ತೊಯ್ದು ಕರೆಗಟ್ಟಿಹೋಗುತ್ತಿತ್ತು. ಅಂತಹ ಸೆಕೆಯಲ್ಲೂ ನಿಷ್ಪಾಪಿ ನಿದ್ದೆ ಅದು ಹೇಗೆ ಒತ್ತರಿಸಿಕೊಂಡು ಬರುತ್ತಿತ್ತೋ..? ಅದ್ಯಾವ ಮಾಯದಲ್ಲಿ ನಮ್ಮದೇ ದೇಹ ಆ ಪರಿ ಬೆವರು ಬಸಿಯುತ್ತಿತ್ತೋ..? ಒಟ್ಟಿನಲ್ಲಿ ದಿಂಬಿನ ಮೇಲೆ ಬೆವರು ಕಲೆಯ ಚಿತ್ರವಿಚಿತ್ರ ನಕಾಶೆಗಳು ಮೂಡಿರುತ್ತಿದ್ದವು.

ಮೈಮೇಲೆ ಎರಡು ಮೂರು ಬಿಂದಿಗೆಯಷ್ಟು ನೀರು ಸುರಿದುಕೊಂಡರೂ ಸ್ನಾನ ಮುಗಿಸಿ ಹೊರಬರುವಷ್ಟರಲ್ಲಿ ದೇಹದ ಮೇಲೆಲ್ಲಾ ನೀರಿನ ಜೊತೆಜೊತೆಗೆ ಬೆವರಿನ ಬಿಂದುಗಳೂ ಒಡಮೂಡಿ ಸ್ನಾನದ ಆಹ್ಲಾದಕತೆಯನ್ನೇ ನುಂಗಿ ಹಾಕಿಬಿಡುತ್ತಿದ್ದವು. ಅಂತಹ ಪರಿಸ್ಥಿತಿಯಲ್ಲಿ ಮೈದಣಿಯುವಂತೆ ಕವಾಯತು ಮಾಡುವುದನ್ನು ಒಮ್ಮೆ ಊಹಿಸಿಕೊಳ್ಳಿ. ನಾವು ಹಾಕಿಕೊಂಡಿರುತ್ತಿದ್ದ ಖಾಕಿ ಸಮವಸ್ತ್ರ ಮೈಗಂಟಿಕೊಂಡು ಬೆವರಲ್ಲಿನ ಉಪ್ಪಿನಂಶವು ಎಲ್ಲೆಂದರಲ್ಲಿ ಬಿಳಿ ಬಣ್ಣದ ಪ್ಯಾಚುಗಳನ್ನು ಮೂಡಿಸುತ್ತಿದುದಲ್ಲದೆ ಬ್ಯಾಚುಲರುಗಳಾಗಿದ್ದ ನಮಗೆ ದಿನವೂ ಬಟ್ಟೆ ಒಗೆದುಕೊಳ್ಳುವ ಶಿಕ್ಷೆಯು ತಪ್ಪದೆ ಪ್ರಾಪ್ತಿಯಾಗುತ್ತಿತ್ತು.

ಠಾಣಾ ದಾಖಲೆಗಳಲ್ಲಿರುವ ನಗರದ ಎಲ್ಲ ಕಳ್ಳಕಾಕರು ರೌಡಿಜನರು ಪರೇಡಿಗೆ ಬಂದು ಹಾಜರಿ ಹಾಕಬೇಕೆಂದು ನಮ್ಮ ದೊಡ್ಡ ಸಾಹೇಬರು ಫರ್ಮಾನು ಹೊರಡಿಸಿದ್ದರ ಪರಿಣಾಮ ಸಣ್ಣ ಪುಟ್ಟ ಕಳ್ಳರು, ವಯಸ್ಸಾದ ಮಾಜಿ ರೌಡಿಗಳು, ಈಗ ತಾನೇ ಚಿಗುರುತ್ತಿರುವ ಚಿಲ್ಟೂ ಪಿಲ್ಟೂಗಳು ಎಲ್ಲರೂ ಬಂದು ಮುಖ ತೋರಿ ಹೋಗುತ್ತಿದ್ದರು. ಬರದಿದ್ದರೆ ಎಲ್ಲಿ ರಾತ್ರಿ ಸರಿಹೊತ್ತಿನಲ್ಲಿ ಮನೆಗೆ ಬಂದು ಚೆಕ್ಕು ಮಾಡುತ್ತಾರೋ ಎಂಬ ಭಯವೂ ಇರಬಹುದು.

ಅಥವಾ ತಾವು ತಮ್ಮ ‘ವಂಶ ಪಾರಂಪರ್ಯ’ವಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿರಬಹುದೆಂಬ ಅನುಮಾನ ಪೊಲೀಸರಿಗೆ ಬಂದು ತಮ್ಮ ಬೆನ್ನು ಹತ್ತಬಹುದೆಂಬ ದಿಗಿಲೂ ಇರಬಹುದು. ಒಟ್ಟಿನಲ್ಲಿ ಇಷ್ಟವೋ ಕಷ್ಟವೋ ಅಂತೂ ಬರುತ್ತಿದ್ದರು. ಹಾಗೆ ಬಂದವರು ಸಾಹೇಬರ ಕ್ವಶ್ಚನೇರುಗಳನ್ನು ಎದುರಿಸಬೇಕಾಗುತ್ತಿತ್ತು. ತಮ್ಮ ಕುಲಕಸುಬಾದ ತುಡುಗು ಮನೆಕಳುವು ಅಂತಹವುಗಳನ್ನು ಬೇರೇನು ನಿಯತ್ತಿನ ಉದ್ಯೋಗ ಹುಡುಕಿಕೊಂಡಿದ್ದೇವೆಂದು ತಿಳಿಸಬೇಕಿತ್ತು. ಕೊಂಚ ಬ್ಬೆಬ್ಬೆಬ್ಬೆ ಅಂದರೂ ಸಾಹೇಬರು ಆಯಾ ವ್ಯಾಪ್ತಿಯ ಠಾಣಾಧಿಕಾರಿಯನ್ನು ಕರೆದು ‘ಈತನನ್ನು ಸ್ಟೇಷನ್ನಿಗೆ ಕರೆಸಿ ಸ್ವಲ್ಪ ಡೀಟೈಲಾಗಿ ವಿಚಾರಣೆ ಮಾಡ್ರೀ..’ ಎಂದು ಆದೇಶಿಸುತ್ತಿದ್ದರು.

ಇಂತಹ ಖಡಕ್ಕು ಆಫೀಸರನ್ನು ನಗರ ಕಂಡು ಎಷ್ಟೋ ದಿನಗಳಾಗಿದ್ದವು. ‘ಪೋಲೀಸರ ಬಳಿ ಹೀಗೂ ಒಂದು ಮಂತ್ರದಂಡ ಇದೆಯಾ?’ ಎಂದು ಫೀಲ್ಡಿಗೆ ಮರಳಲಿಚ್ಛಿಸುತ್ತಿದ್ದ ಮಾಜಿ ರೌಡಿಗಳು ಹಿಂದೇಟು ಹಾಕುತ್ತಿದ್ದರೆ, ‘ತಮಗೆ ತಲೆನೋವಾಗಿರುವ ದುಷ್ಟಕೂಟವನ್ನು ಹೀಗೂ ನಿಗ್ರಹಿಸಬಹುದಲ್ಲವೆ’ ಎಂದು ತನಿಖಾಧಿಕಾರಿಗಳು ಪುಳಕಗೊಳ್ಳತೊಡಗಿದ್ದರು. ಪ್ರತಿ ಶುಕ್ರವಾರ ಬಂತೆಂದರೆ ಆರೋಪಿ ಅನ್ನಿಸಿಕೊಂಡವರ ಕೈಕಾಲು ಕಟ್ಟಿಹಾಕಿದಂತಾಗುತ್ತಿತ್ತು. ಪರೇಡಿಗೆ ಹಾಜರಾಗದವನು ತನಗೆ ಯಾಕೆ ಬರಲಾಗಲಿಲ್ಲ? ಆ ವೇಳೆಯಲ್ಲಿ ತಾನು ಎಲ್ಲಿದ್ದೆ? ಅಂಥಾ ಘನಂದಾರೀ ಕೆಲಸ ತನಗೇನಿತ್ತು? ಎಂಬುದರ ವಿವರಣೆಯನ್ನು ಅದೇ ದಿನ ಠಾಣೆಗೆ ಹಾಜರಾಗಿ ಅಧಿಕಾರಿಯ ಮುಂದೆ ನೀಡಬೇಕಿತ್ತು. ಹುಷಾರಿಲ್ಲದೆ ಹೋದಲ್ಲಿ ತಾನು ತೋರಿಸಿಕೊಂಡ ಆಸ್ಪತ್ರೆ, ತೆಗದುಕೊಂಡ ಮಾತ್ರೆ, ಚುಚ್ಚಿಸಿಕೊಂಡ ಇಂಜಕ್ಷನ್ನು ಇತ್ಯಾದಿಗಳ ಚೀಟಿಯನ್ನು ತೋರಿಸಬೇಕಾಗುತ್ತಿತ್ತು. ಆದ್ದರಿಂದಲೇ ಬಹುತೇಕ ಮಂದಿ ಇದೆಲ್ಲಾ ಉಸಾಬ್ರಿ ಯಾವ್ನಿಗೆ ಬೇಕು... ಸುಮ್ನೆ ಪರೇಡಿಗೋಗಿ ಒಂದು ಗಂಟೆ ನಿಂತು ಬಂದುಬಿಡೋಣ ನಡೀಲಾ ಅತ್ಲಾಗೆ... ಎಂದು ತಮ್ಮೊಳಗೇ ಮಾತಾಡಿಕೊಂಡು, ಏನೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಾದೀತೋ ಎನ್ನುವ ಅಳುಕಿನಿಂದಲೇ ಬಂದು ನಿಲ್ಲುತ್ತಿದ್ದರು.

ಇಂಥಾ ಕಠಿಣವಾದ ಸರ್ವೆಲೆನ್ಸ್ ಅನ್ನು ಸಾಹೇಬರು ಪಾಲಿಸಿಕೊಂಡು ಬರುತ್ತಿದ್ದ ಪರಿಣಾಮವಾಗಿಯೇ ನಗರವು ನೆಮ್ಮದಿಯಿಂದ ಉಸಿರಾಡುತ್ತಿದ್ದುದಲ್ಲದೆ ಚಿಗುರೊಡೆಯುತ್ತಿದ್ದ ಪುಡಿ ರೌಡಿಗಳು ತಮ್ಮ ಕಾರ್ಯ ಕಲಾಪಗಳಿಗೆ ಇದು ಸರಿಯಾದ ಸಮಯ ಅಲ್ಲವೆಂದು ನಿರ್ಧರಿಸಿ ಮೂರು ಮತ್ತೊಂದನ್ನು ಮುಚ್ಚಿಕೊಂಡು ಮೆಲ್ಲಗೆ ತೆರೆಮರೆಗೆ ಸರಿದಿದ್ದರು.
ಆಗಷ್ಟೇ ಇಲಾಖೆಯಲ್ಲಿ ಅಂಬೆಗಾಲಿಡುತ್ತಿದ್ದ ನಮಗೆ ಇದೆಲ್ಲಾ ಹೊಸತು. ಅಲ್ಲಿಯವರೆಗೆ ಪಿಕ್ಚರುಗಳಲ್ಲಿ ಬೆಳ್ಳಿಪರದೆಯ ಮೇಲೆ ತರಹೇವಾರಿ ರೀತಿಯಲ್ಲಿ ವಿಜೃಂಭಿಸುತ್ತಿದ್ದ, ಮಚ್ಚು ಲಾಂಗುಗಳನ್ನು ಹಿಡಿದು ಎಲ್ಲರನ್ನು ತರಗುಟ್ಟಿಸುತ್ತಿದ್ದ ರೌಡಿಗಳನ್ನಷ್ಟೆ ಕಂಡಿದ್ದ ನಾವು ಅವರೆಲ್ಲಾ ಇಂತಹವರೇನಾ... ಎಂದು ಅಚ್ಚರಿಗೊಳ್ಳುತ್ತಲೇ ವಾಸ್ತವತೆಯೆಡೆಗೆ ಅರಿವು ವಿಸ್ತರಿಸಿಕೊಳ್ಳತೊಡಗಿದ್ದೆವು. ಜನಪ್ರಿಯ ಹೀರೋಗಳಿಗೆಲ್ಲಾ ರೌಡಿ ಪಟ್ಟ ಕೊಡಿಸಿ ಅವರಿಂದ ವಿಧವಿಧದ ‘ಆಯುಧ’ ಹಿಡಿಸಿ ಖುಷಿಪಡುವ ಮಂದಿ ಏನಾದರೂ ಲಾಭ ಮಾಡಿಕೊಳ್ಳಲಿ.

ಆದರೆ ಕೆಲವು ಮುಗ್ಧ ಮನಸ್ಸುಗಳು ಇಂತಹವುಗಳಿಂದ ದಾರಿ ತಪ್ಪುವ ಸಾಧ್ಯತೆ ಇದೆಯಲ್ಲವಾ..? ಎನ್ನುವ ಯೋಚನೆ ಕೆಲವು ಬಾರಿ ನನ್ನನ್ನು ಆತಂಕಕ್ಕೆ ದೂಡಿರುವುದು ಉಂಟು. ಯಾರಾದರೂ ಇರಲಿ, ಇಂತಹ ವಿಷಯಗಳಲ್ಲಿ ಕೊಂಚ ಸಮಾಜಮುಖಿ ಬದ್ಧತೆಗಳನ್ನು ತೋರಲಿ ಎಂದು ಆಶಿಸುತ್ತಾ ಮತ್ತೆ ನಮ್ಮ ವಿಚಾರಕ್ಕೆ ಹೊರಳಿಕೊಳ್ಳೋಣ ಬನ್ನಿ...

ಹಾಗೆ ಪರೇಡಿಗೆ ಬಂದು ಹಾಜರಾಗುತ್ತಿದ್ದ ಎಷ್ಟೋ ಮಂದಿ ತಮ್ಮ ಮುಖಗಳನ್ನೇ ತೊಳೆದಿರುತ್ತಿರಲಿಲ್ಲ. ಹುಲುಸಾಗಿ ಬೆಳೆದಿರುತ್ತಿದ್ದ ಕೂದಲು ಗಡ್ಡಗಳು, ಧರಿಸುತ್ತಿದ್ದ ಕೊಳೆ ಬಟ್ಟೆಗಳು ಅವರ ಅಸ್ತವ್ಯಸ್ತ ಜೀವನ ಶೈಲಿಯನ್ನು ತೋರುತ್ತಿದ್ದವು. ಸ್ಟೇಷನ್ನು ದಾಖಲೆಗಳಲ್ಲಿ ತಮ್ಮ ಹೆಸರು ಅದ್ಯಾವ ರಾಹುಕಾಲದಲ್ಲಿ ಸೇರ್ಪಡೆಯಾಯಿತೋ ಏನೋ ಎಂಬ ಚಿಂತೆಯೂ, ತಮ್ಮ ಈ ದೌರ್ಭಾಗ್ಯ ಅದೆಂದಿಗೆ ಕೊನೆಯಾದೀತೋ ಅನ್ನುವ ನಿರೀಕ್ಷೆಯೂ ಸಮಪ್ರಮಾಣದಲ್ಲಿ ಅವರ ಮುಖಾರವಿಂದಗಳಿಂದ ವ್ಯಕ್ತವಾಗುತ್ತಿತ್ತು. ಇದಕ್ಕೆ ಅಪವಾದವೆನ್ನುವಂತೆ ಕೆಲವು ಮಂದಿ ಇದ್ದುದರಲ್ಲೇ ಸ್ವಚ್ಛ ದಿರಿಸು ಧರಿಸಿ, ಕೂದಲುಗಳಿಗೆ ಕತ್ತರಿ ಆಡಿಸಿ ಚೆಂದವಾಗಿ ಕಾಣಿಸಿಕೊಳ್ಳುತ್ತಿದ್ದರು ಮತ್ತು ಪರೇಡು ಮುಗಿಯುವ ಸಮಯದಲ್ಲಿ ಅಧಿಕಾರಿಗಳ ಹತ್ತಿರಕ್ಕೆ ಬಂದು ‘ದೇವ್ರಾಣೇಗೂ ನಾನು ಇಂಥಿಂಥೋರ ಹತ್ರ ಕೆಲಸ ಮಾಡ್ಕೊಂಡು ಸಂಬಳದ ದುಡ್ಡಲ್ಲಿ ಜೀವ್ನ ಮಾಡ್ತಿದೀನಿ ಸಾರ್... ಹಳೇ ಹಲ್ಕಾ ಕೆಲಸಗಳನ್ನ ಮಾಡೋದಿರಲಿ, ಯೋಚ್ನೇನೂ ಮಾಡಂಗಿಲ್ಲಾ... ಎಂಗಾದ್ರೂ ನನ್ನ ರೌಡಿ ಷೀಟನ್ನು ಸಾಹೇಬರಿಗೆ ಹೇಳಿ ತೆಗೆಸ್ಬಿಡಿ ಸಾರ್... ದಮ್ಮಯ್ಯ ಅಂತೀನಿ...’ ಅಂತ ತಮ್ಮದೇ ರೀತಿಯಲ್ಲಿ ರಿಕ್ವೆಸ್ಟು ಮಾಡುತ್ತಾ ನಂಬಿಸಲು ಪ್ರಯತ್ನಿಸುತ್ತಿದ್ದರು.

ದಿನ ನಿತ್ಯದ ಕರ್ತವ್ಯಗಳಲ್ಲಿ ನಾವು ಪಳಗುತ್ತಾ ಹೋದಂತೆ ಇವರ ಬಗೆಗೆ ಆಸಕ್ತಿ ಹುಟ್ಟಿಸುವಂತಹ ವಿಷಯಗಳು ತಿಳಿಯುತ್ತಾ ಹೋದವು. ಮೊದನೆಯದಾಗಿ ಅಪರಾಧಿಗಳ ಕೌಟುಂಬಿಕ ಹಿನ್ನೆಲೆ ಸರಿ ಇರುತ್ತಿರಲಿಲ್ಲ. ಹೆಂಡತಿ ಇನ್ನೊಬ್ಬನೊಂದಿಗೆ ಓಡಿಹೋದುದೋ ಮಕ್ಕಳು ಅಂಗವಿಕಲರಾದುದೋ ಅಥವಾ ಇನ್ನಾವುದೋ ಕರುಳು ಕಿವುಚುವಂತಹ ಕಥೆಗಳನ್ನು ಹೊಂದಿರುತ್ತಿದ್ದರು. ಕೆಲವು ವಿಧಿಯಾಟದಿಂದ ಸಂಭವಿಸಿದವುಗಳಾಗಿದ್ದರೆ ಇನ್ನು ಕೆಲವು ಇವರ ಸ್ವಯಂಕೃತಾಪರಾಧ ಆಗಿರುತ್ತಿದ್ದವು. ಸಾಂಸಾರಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರಿಂದ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ಕೊಡಿಸುತ್ತಿರಲಿಲ್ಲ. ಇವರೇ ಹೆಬ್ಬೆಟ್ಟು ಹಚ್ಚಿದ ಮೇಲೆ ಮಕ್ಕಳು ತಾನೇ ಏನು ಮಾಡಿಯಾವು? ಅವು ಅಲ್ಲಿ ಇಲ್ಲಿ ಪುಂಡು ಪೋಕರಿಗಳಂತೆ ಅಲೆಯುತ್ತಾ ತಂದೆಯ ಹಾದಿಯನ್ನೇ ತುಳಿಯಲು ಸಿದ್ಧಗೊಂಡಂತಿರುತ್ತಿದ್ದವು. ಎಷ್ಟೋ ಠಾಣಾಧಿಕಾರಿಗಳು ಇದನ್ನು ತಡೆಯಲೆಂದೇ ತಮ್ಮ ಬುದ್ಧಿಯನ್ನೆಲ್ಲಾ ಖರ್ಚು ಮಾಡಿ ಕೊನೆಗೆ ತಾಕೀತು ಮಾಡಿಯಾದರೂ ಕೆಲವು ಮಕ್ಕಳನ್ನಾದರೂ ಶಾಲೆ ಹಾದಿ ತುಳಿಯುವಂತೆ ಮಾಡುತ್ತಿದ್ದರು.

ಪಳನಿ ಅನ್ನುವವನದು ಇಂತಹದ್ದೇ ಸಮಸ್ಯೆ. ಹುಟ್ಟಾ ಕೊಳಕ. ಮನಸ್ಸು ಬಂದಾಗ ಸ್ನಾನ ಮಾಡುತಿದ್ದ. ಸ್ವಂತದ್ದೊಂದು ಜೋಪಡಿ ಇದ್ದರೂ ಮಲಗುತ್ತಿದ್ದುದೆಲ್ಲೋ.. ಏಳುತ್ತಿದ್ದುದೆಲ್ಲೋ...? ಕೈಕಾಲು ಗಟ್ಟಿ ಇದ್ದರೂ ದುಡಿಯಲೊಪ್ಪದ ಸೋಮಾರಿ. ಬೀಡಿ ಗುಟ್ಕಾಗಳಂತಹ ಷೋಕಿಗೇನೂ ಕಡಿಮೆಯಿರಲಿಲ್ಲ. ಅಂತಹವನಿಗೂ ಒಂದು ಮದುವೆ ಅಂತಾಯಿತು. ಮದುವೆಯಾದ ಕೆಲವು ತಿಂಗಳುಗಳಷ್ಟೆ ಹೆಂಡತಿ ಜೊತೆಗಿದ್ದದ್ದು. ಓಡಿ ಹೋಗಿ ತವರುಮನೆ ಸೇರಿಕೊಂಡಿದ್ದಳು. ಅಪ್ಪಿತಪ್ಪಿ ಈ ಕಡೆಗೆ ಬಂದರೂ ಇವನ ಕಣ್ಣಿಗೆ ಬೀಳದಂತೆ ಓಡಾಡಿಕೊಂಡು ಮತ್ತೆ ಊರು ಸೇರುತ್ತಿದ್ದಳು. ಇವನ ಮನೆ ಕಡೆ ತಲೆ ಹಾಕಿಯೂ ನೋಡುತ್ತಿರಲಿಲ್ಲ. ‘ನೋಡಿ ಸಾರ್, ಆಸೆಪಟ್ಟು ಮದುವೆಯಾದೆ.. ಹೆಂಗೆ ಮಾಡಿಬಿಟ್ಳು..’ ಅಂತ ಹಲುಬುತ್ತಿದ್ದ. ಒಂದು ಸಾರಿ ಎಲ್ಲಿಯೋ ಸಿಕ್ಕಾಗ ‘ಏನಮ್ಮಾ..

ಗೌರವವಾಗಿ ಸಂಸಾರ ಮಾಡಿಕೊಂಡಿರೋದು ಬಿಟ್ಟು ಏನು ಸಮಸ್ಯೆ’ ಅಂತ ಕೇಳಿದರೆ– ‘ಅಯ್ಯೋ ಸುಮ್ಕಿರಿ ಸಾರೂ.. ದಿನದ ಇಪ್ಪತ್ನಾಲ್ಕು ಗಂಟೆ ಈಯಪ್ಪಾ ಬಿಡೋ ಬೀಡಿ ಹೊಗೆ, ಸಂಜೆಯಾದ್ರೆ ಬೀಳೋ ಏಟುಗಳನ್ನ ತಿಂದುಕೊಂಡು ಬಿದ್ದಿರಬೇಕಾ.. ದುಡ್ದು ತಂದಾಕ್ತಾನೆ ಅಂದ್ರೆ ಅದೂ ಕೈಲಾಗಲ್ಲ ಮುಂಡೇದಕ್ಕೆ... ನನ್ನ ಅನ್ನ ನಾನು ದುಡ್ಕಂಡು ತಿನ್ನಕ್ಕೆ ಇವನ ಮನೆ ಯಾಕೆ ಬೇಕು’ ಅಂದು ಹೊರಟೇ ಹೋದಳು. ಏನಪ್ಪಾ ಅಂತ ನೋಡಿದರೆ ಇವನಿಗೆ ಮೈ ತುಂಬಾ ಚಟಗಳು. ಸೇದುತ್ತಾನೋ ಬಿಡುತ್ತಾನೋ ಕೈಯಲ್ಲಿ ಯಾವಗಲೂ ಬೀಡಿ ಉರಿಯುತ್ತಿರಲೇಬೇಕು. ಇನ್ನು ಸಂಜೆಯಾದರೆ ಶರಾಬು ಖಾನಾ! ಅದು ಸರಿಯೇ, ಸದಾಕಾಲ ಇವನ ಬೀಡಿಯ ಹೊಗೆ, ಎಣ್ಣೆ ಏಟಿನಲ್ಲಿ ನೀಡುವ ಒದೆಗಳನ್ನು ತಿಂದುಕೊಂಡು ಅವಳಾದರೂ ಯಾಕಿರಬೇಕು?

ಇದು ಪಳನಿಯೊಬ್ಬನ ಕಥೆಯಲ್ಲ, ಎಲ್ಲಾ ಕ್ರಿಮಿನಲ್ ಹಿನ್ನೆಲೆಯುಳ್ಳವರೂ ಚಟಾಧೀಶರೇ! ಕೈಗೆ ನಾಲ್ಕು ಕಾಸು ಬಂತೆಂದರೆ ದುಂದುವೆಚ್ಚ ಮಾಡುವವರೇ, ಖರ್ಚು ಮಾಡಲು ದುಡ್ಡಿಲ್ಲದಿದ್ದರೆ ಅವರಿವರ ಹತ್ತಿರ ಸಾಲಸೋಲಕ್ಕೆ ಕೈಚಾಚುವವರೇ, ಸುಖಾಸುಮ್ಮನೇ ದುಡ್ಡು ಸಿಗುತ್ತದೆಯೆಂದರೆ ಅಂಥಾ ಮನೆಹಾಳು ಕೆಲಸಗಳಿಗೆ ಮತ್ತೆ ಕೈಹಾಕುವವರೇ. ಅದರಲ್ಲಿ ಸಂಶಯವಂತೂ ಇಲ್ಲ. ಅವರ ಚಟಗಳೇ ಅವರ ದೌರ್ಬಲ್ಯ. ಮತ್ತೆ ಮತ್ತೆ ಅವರು ತಪ್ಪು ಹಾದಿ ತುಳಿಯುವುದಕ್ಕೆ ಕಾರಣವೇ ಇದು.

ಹುಟ್ಟಿಸಿದ ಪ್ರತಿ ಜೀವಿಗೂ ತನ್ನ ಜೀವದ ಬಗ್ಗೆ ದೇವರು ಅದೆಂತಹ ಭಯ ಇಟ್ಟು ಕಳುಹಿಸಿರುತ್ತಾನೆಂದರೆ ಜಿಂಕೆಯನ್ನು ಬಗೆದು ತಿನ್ನುವ ಸಿಂಹದಂಥಾ ಪ್ರಾಣಿಯೂ ತನ್ನ ಪ್ರಾಣಕ್ಕೆ ಕುತ್ತು ಬರುವ ಸೂಚನೆ ಸಿಕ್ಕಿದೊಡನೆ ಪುಸಕ್ಕನೆ ನುಸುಳಿ ಪರಾರಿಯಾಗಿಬಿಡುತ್ತದೆ.

ಇನ್ನು ಮಾನವನೆಂಬ ಪ್ರಾಣಿಗೆ ಜೀವಭಯ ಎಷ್ಟಿರಬೇಡ? ರೌಡಿಯೆಂಬ ಹಣೆಪಟ್ಟಿ ಸಿಗುತ್ತಿದ್ದಂತೆಯೇ ಆತನ ಕೌಂಟ್‌ಡೌನು ಸದ್ದಿಲ್ಲದೆ ಶುರುವಾಗಿಬಿಟ್ಟಿರುತ್ತದೆ. ಶತ್ರುಗಳು ಹೆಚ್ಚಾದಂತೆಲ್ಲಾ ಆತ ಒಳಗೊಳಗೇ ಕುಗ್ಗುತ್ತಿರುತ್ತಾನೆ. ಪೊಲೀಸರ ಭಯ ಒಂದೆಡೆಯಾದರೆ ತನ್ನಂತೆಯೇ ಪರಾಯಿ ದುಡ್ಡಿನಲ್ಲಿ ಬದುಕುತ್ತಿರುವ ಪರಾವಲಂಬಿಗಳು ತನ್ನನ್ನು ಯಾವಾಗ ಎಲ್ಲಿ ‘ಎತ್ತಿ’ ಬಿಡುತ್ತಾರೋ ಎನ್ನುವ ಚಿಂತೆ ಮತ್ತೊಂದೆಡೆ. ಹೀಗಾಗಿಯೇ ನಾಲ್ಕೈದು ಜನರನ್ನು ತನ್ನ ಜೊತೆಗಿಟ್ಟುಕೊಂಡೇ ಓಡಾಡುವ ಅನಿವಾರ್ಯತೆ ಬೇರೆ. ನೋಡಿದವರೆಲ್ಲಾ ‘ಆಹಾ, ಏನ್ ಮಗಾ.. ಯಾವಾಗ ನೋಡಿದ್ರೂ ಅವನ ಸುತ್ತಾ ಹುಡುಗ್ರು ಇದ್ದೇ ಇರ್ತಾರೆ.. ಭಾರೀ ದೊಡ್ಡ ಗ್ಯಾಂಗು ಅವನ್ದು’ ಅನ್ನುತ್ತ ಸುಳ್ಳೇ ಬಿಲ್ಡಪ್ಪುಗಳನ್ನು ಕೊಡುತ್ತಿದ್ದರೆ ಇವನು ತನ್ನ ಬೆಂಗಾವಲಿಗಿರುವ ಹುಡುಗರಿಗೆ ಕಾಫಿ ತಿಂಡಿ ಕೊಡಿಸಲೂ ಕಾಸಿಲ್ಲದೇ ಪರದಾಡುತ್ತಿರುತ್ತಾನೆ.

ಎದೆಯೊಳಗೆ ಇಣುಕಿಹಾಕಿದರೆ ಮತ್ತದೇ ಜೀವಭಯ ‘ಲಬ್‌ಡಬ್’ ಅನ್ನುತ್ತಿರುತ್ತದೆ. ಇನ್ನು ತನ್ನ ಸುತ್ತಮುತ್ತ ಕಾವಲಿರುವ ಹುಡುಗರೇ ಎಲ್ಲಿ ಎದುರು ಗುಂಪಿನವರ ಆಮಿಷಕ್ಕೆ ಒಳಗಾಗಿಬಿಡುತ್ತಾರೋ ಎನ್ನುವ ಸಂಶಯ ಮೊಳೆತರಂತೂ ಅವನ ಕಥೆ ಮುಗಿದೇ ಹೋಯಿತು. ಕಂಡ ಕಂಡ ಅಧಿಕಾರಿಗಳಿಗೆ ಕೈಮುಗಿದು ‘ದಯವಿಟ್ಟು ಯಾವ್ದಾದ್ರೂ ಕೇಸಿನಲ್ಲಿ ಫಿಟ್ ಮಾಡಿ ಒಂದಷ್ಟು ದಿನ ಒಳಗೆ ಕಳಿಸ್ಬಿಡಿ ಸಾರ್.. ಜೈಲಿನೊಳಗೆ ಹೆಂಗೋ ಬದುಕ್ಕೋತೀನಿ...’ ಎಂದು ಗೋಗರೆಯತೊಡಗುತ್ತಾನೆ.

ಇನ್ನು ರೋಗಗಳ ವಿಷಯಕ್ಕೆ ಬಂದರೆ ಜಗತ್ತಿನಲ್ಲಿರುವ ಅರ್ಧಕ್ಕರ್ಧ ಕಾಯಿಲೆಗಳು ಇವರ ದೇಹದಲ್ಲಿ ವಾಸ ಮಾಡಿಕೊಂಡಿರುತ್ತವೆ. ನೋಡುವುದಕ್ಕೆ ಆರು ಅಡಿ ಎತ್ತರ, ದಿನವೂ ಮಾಂಸದೂಟ ಮಾಡಿ ಕೊಬ್ಬಿದ ಶರೀರ ಅಂತ ಏನೇ ಅಂದುಕೊಂಡರೂ ವ್ಯಾಯಾಮ ಕಾಣದ ಫಾರಂ ಕೋಳಿಯಂತಹ ದೇಹ ನಾಲ್ಕು ಹೆಜ್ಜೆ ಹಾಕಿದೊಡನೆ ದಸದಸನೆ ಬೆವೆತು ನೀರಿಳಿಯತೊಡಗುತ್ತದೆ. ಊಟದಂತೆ ಮಾತ್ರೆಗಳನ್ನು ತಿನ್ನಬೇಕಾದ ಅನಿವಾರ್ಯ ಕರ್ಮದ ಜೊತೆ ಆಗಾಗ ದೊಡ್ಡಾಸ್ಪತ್ರೆಗಳಿಗೆ ಹೋಗಿ ಮೈಕೈ ರಿಪೇರಿ ಮಾಡಿಸಿಕೊಂಡು ಬರುವ ಕಾರ್ಯಕ್ರಮಗಳೂ ಇರುವುದುಂಟು.

ಇಂತಹ ವಿಷಯಗಳಲ್ಲಿ ರೌಡಿಗಳೇ ಪುಣ್ಯ ಮಾಡಿದವರು. ಕನಿಷ್ಠ ಅವರಿಗೆ ಅಲ್ಲಿ ಇಲ್ಲಿ ಕೈಸಾಲವಾದರೂ ಸಿಗುತ್ತದೆ. ಕಳ್ಳಕಾಕರ ಸ್ಥಿತಿ ಇನ್ನೂ ದಯನೀಯ. ಅವರನ್ನು ನೀನು ಯಾವೂರ ದಾಸನೆಂದು ಕೇಳುವವರು ಗತಿಯಿರುವುದಿಲ್ಲ. ಉಂಡೆಯಾ.. ಬಿಟ್ಟೆಯಾ.. ಎಂದು ‘ಸಮಾಚಾರ’ ಕೇಳುವವರಿರುವುದಿಲ್ಲ. ಮನೆಮಂದಿಯೇ ಒದ್ದು ಹೊರಹಾಕಿರುತ್ತಾರಾದ್ದರಿಂದ ಒಂದು ರೀತಿಯಲ್ಲಿ ಸಾರ್ವಜನಿಕವಾಗಿ ತಿರಸ್ಕೃತರಾದ ಮಂದಿ ಅವರು. ಆದರೆ ಅವರು ತರುವ ಕಳ್ಳ ಸಂಪತ್ತಿಗೆ, ಕದ್ದ ಮಾಲುಗಳಿಗೆ ಆಸೆ ಬಿದ್ದು ಕೆಲವು ಮಂದಿ ಅವರನ್ನು ಹತ್ತಿರ ಬಿಟ್ಟುಕೊಳ್ಳುವುದುಂಟು. ‘ಕದ್ದ ವಸ್ತು ಪಾಷಾಣ’ ಅನ್ನುವುದು ಎಷ್ಟು ಸತ್ಯ ನೋಡಿ. ಕಳ್ಳ ಅನ್ನಿಸಿಕೊಂಡವನು ಅದೆಷ್ಟೇ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆಯಲಿ ಅದನ್ನು ಆತ ದಕ್ಕಿಸಿಕೊಳ್ಳಲಾಗುವುದಿಲ್ಲ. ಎಟಿಎಂಗಳನ್ನೇ ಹೊತ್ತುಕೊಂಡು ಹೋದವರುಂಟು.

ಬಂದೋಬಸ್ತು ಇರುವ ಬ್ಯಾಂಕು ತಿಜೋರಿಗಳಿಗೇ ಕನ್ನ ಹಾಕಿದವರುಂಟು. ಒಡವೆ ಅಂಗಡಿಗಳಿಗೆ ನುಗ್ಗಿ ಕೆಜಿಗಟ್ಟಲೆ ಚಿನ್ನ ಬಾಚಿಕೊಂಡವರುಂಟು. ಊಹೂಂ... ಕದ್ದ ಮಾಲು ಯಾರಿಗೂ ಕೈಹಿಡಿದ ಉದಾಹರಣೆಗಳಿಲ್ಲ. ದೇಹಕ್ಕೆ ಹತ್ತಿದ ಕ್ಯಾನ್ಸರು ಮಾರಿಯನ್ನು ಹಾಗೂ ಹೀಗೂ ಗೆದ್ದುಬಿಡಬಹುದು. ಆದರೆ ಮನಸ್ಸಿಗೆ ಮೆತ್ತಿಕೊಂಡ ‘ಕೀಳರಿಮೆ’ ಅನ್ನುವ ಕ್ಯಾನ್ಸರು ಯಾವ ಕಳ್ಳನನ್ನೂ ಚೇತರಿಸಿಕೊಳ್ಳಲು ಬಿಡುವುದಿಲ್ಲ. ಸಾಮಾನ್ಯರಿಗೆ ಗೊತ್ತಿರದ ಸಂಗತಿ ಎಂದರೆ ಕಳ್ಳ ನಿರಂತರವಾದ ಪಾಪಪ್ರಜ್ಞೆಯಿಂದ ನರಳುತ್ತಿರುತ್ತಾನೆ. ಅವನಿಗೆ ತಾನು ಮಾಡುತ್ತಿರುವುದು ಹೀನಕೆಲಸ ಎಂಬುದು ಗೊತ್ತಿರುತ್ತದೆ. ಅದಕ್ಕಾಗಿ ಅವನದೇ ಮನಸ್ಸಾಕ್ಷಿ ಅವನನ್ನು ಪದೇ ಪದೇ ಕೆಳಕ್ಕೆ ಹಾಕಿ ಮೆಟ್ಟುತ್ತಿರುತ್ತದೆ. ಅವನ ಸಹಜ ಸಂತೋಷವನ್ನೇ ಅದು ಕಸಿದುಕೊಂಡುಬಿಟ್ಟಿರುತ್ತದೆ. ಕಳ್ಳರಿಗೆ ಮನಃಪೂರ್ವಕವಾಗಿ ನಗುವುದು ಜೀವಮಾನದಲ್ಲಿ ಒಮ್ಮೆಯೂ ಸಾಧ್ಯವಾಗುವುದಿಲ್ಲ ಎಂದರೆ ನೀವು ನಂಬಲೇಬೇಕು.

ನಂಬುವುದಕ್ಕೆ ಕಷ್ಟವಾದರೆ ನ್ಯಾಯಾಲಯಗಳ ಆವರಣಗಳಿಗೆ ಒಮ್ಮೆ ಹೋಗಿ ನೋಡಿ. ಕೈಗೆ ಆಭರಣಗಳಂತೆ ಬೇಡಿಗಳನ್ನು ಹಾಕಿಕೊಂಡು ಮೂಲೆಯೊಂದರಲ್ಲಿ ನಿಂತಿರುತ್ತಾರೆ. ಸುತ್ತಮುತ್ತಲಿನ ವ್ಯವಹಾರಗಳೆಡೆಗಾಗಲೀ ನ್ಯಾಯಾಲಯದ ಕಲಾಪಗಳಿಗಾಗಲೀ ಅವರ ಕಿವಿ ಕಿವುಡು, ಕಣ್ಣು ಕುರುಡು. ಕೆಲವು ಬಾರಿ ತಮ್ಮ ಮೇಲೆ ನಡೆಯುತ್ತಿರುವ ವಿಚಾರಣೆ ಯಾವ ಪ್ರಕರಣದ್ದು ಎಂಬುದೂ ಅವರಿಗೆ ಗೊತ್ತಿರುವುದಿಲ್ಲ. ಬಂದದ್ದು ಬರಲಿ ಆದದ್ದಾಗಲಿ ಎಂದು ನಿರ್ಧಾರ ಮಾಡಿಕೊಂಡವರಂತಿರುತ್ತಾರೆ. ಜೀವನದಲ್ಲಿ ಯಾವುದೇ ಆಯ್ಕೆಗಳಿರುವುದಿಲ್ಲವಾದ್ದರಿಂದ ಅವರಿಗದು ಅನಿವಾರ್ಯ.

ವಿಚಿತ್ರ ಏನೆಂದರೆ ಅವರಲ್ಲೂ ಬದಲಾಗಬೇಕೆಂದು ಬಯಸುವವರಿದ್ದಾರೆ. ಆದರೆ ಅವರ ಸಂಖ್ಯೆ ಬೆರಳಣಿಕೆಯಷ್ಟು. ‘ಈ ದರಿದ್ರ ಕಸುಬ್‌ನಾ ಬಿಟ್ಬಿಡಾನಾ ಅಂತಿದೀನಿ ಸಾ... ಇನ್ಮೇಲಾದ್ರೂ ಮರ್ಯಾದೆಯಿಂದ ಬದುಕಾನಾ ಅನ್ಸುತ್ತೆ’ ಅಂತ ಹೇಳಿಕೊಂಡವರಿದ್ದಾರೆ. ಆದರೆ ಅವರ ಬದಲಾವಣೆ ಯಾರಿಗೆ ಬೇಕು? ಆತ ಎಷ್ಟೇ ಒಳ್ಳೆಯವನಾದ್ರೂ ‘ಭಾಳಾ ಒಳ್ಳೇ ಕಳ್ಳ’ ಅನ್ನಿಸಿಕೊಂಡಾನೇ ಹೊರತು ‘ಒಳ್ಳೇ ಮನುಷ್ಯ’ ಅನ್ನಿಸಿಕೊಳ್ಳಲಾರ. ಹಾಗೆಂದೇ ಒಮ್ಮೊಮ್ಮೆ ಕಸುಬನ್ನು ಅವರು ಬಿಡಬೇಕೆಂದುಕೊಂಡರೂ ಪರಿಸ್ಥಿತಿ ಅವರನ್ನು ಬಿಡುವುದಿಲ್ಲ. ಕಳ್ಳನನ್ನು ಕರೆದು ಯಾರು ಕೆಲಸ ಕೊಟ್ಟಾರು? ಹಿಂದೆ ಪೊಲೀಸು ಅಧಿಕಾರಿಗಳೇ ಅಂತಹವರಿಗೆ ಶಿಫಾರಸು ಮಾಡಿ ಕೆಲಸ ಕೊಡಿಸುತ್ತಿದ್ದರು, ಹೊಟ್ಟೆಪಾಡಿಗೊಂದು ದಾರಿ ತೋರಿಸುತ್ತಿದ್ದರು. ಈಗೀಗ ಒಳ್ಳೆಯವರು ವಿದ್ಯಾವಂತರೆನಿಸಿಕೊಂಡವರೇ ಐನಾತಿ ಕೆಲಸಗಳಿಗೆ ಕೈಹಾಕುತ್ತಿರುವಾಗ, ನೆರೆಹೊರೆಯವರನ್ನೇ ಸಂಶಯದಿಂದ ನೋಡುವ ಸಂದರ್ಭ ಬಂದಿರುವಾಗ ಇನ್ನು ಅಪರಿಚಿತ ವ್ಯಕ್ತಿಗಳನ್ನು ನಂಬಿ ಮಣೆ ಹಾಕುವವರಾರು?
ಆದರೆ ರೌಡಿಗಳೆಂಬ ಹಣೆಪಟ್ಟಿ ಹಚ್ಚಿಕೊಂಡವರಿಗೆ ಈ ಕಷ್ಟಗಳಿಲ್ಲ. ಅವರು ಯಾವಾಗ ಬೇಕಾದರೂ ತಮ್ಮ ‘ಕೆಲಸ’ದಿಂದ ರಿಟೈರಾಗಿ ಮಾಜಿಗಳಾಗಿಬಿಡಬಹುದು. ಕೆಲವರು ಒಂದಿಷ್ಟು ಆಸ್ತಿ ಪಾಸ್ತಿ ಮಾಡಿಕೊಂಡು ತಮ್ಮ ಚಟುವಟಿಕೆಗಳನ್ನು ನಿಲ್ಲಿಸಿಬಿಡುತ್ತಾರೆ. ಇನ್ನು ಕೆಲವರು ರಾಜಕೀಯ ಕ್ಷೇತ್ರಕ್ಕೆ ಪ್ರಮೋಷನ್ನು ಪಡೆದು ನಾಯಕರುಗಳ ಹಿಂದು ಮುಂದೆ ಸುತ್ತಿಕೊಂಡು ತಮ್ಮ ಇಮೇಜು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಾರೆ. ಶ್ರೀನಿವಾಸನೂ ಅಂತಹುದೇ ಕೆಟಗರಿಯವನು. ಅವನನ್ನು ಒಳ್ಳೆಯವನೆನ್ನಬೇಕೋ ಕೆಟ್ಟವನೆನ್ನಬೇಕೋ ಗೊತ್ತಾಗುತ್ತಿರಲಿಲ್ಲ. ಪೊಲೀಸರೆಂದರೆ ಅತಿಯಾದ ಗೌರವ, ಗೌರವ ಅನ್ನುವುದಕ್ಕಿಂತಲೂ ಭಕ್ತಿ! ಆದರೆ ಮುಂಗೋಪಿ. ರೆಕಾರ್ಡುಗಳಲ್ಲೆಲ್ಲಾ ‘ಕೇಬಲ್ ಸೀನ’ ಅಂತಲೇ ಫೇಮಸ್ಸು. ಯಾವುದಾದರೂ ಪ್ರಮುಖ ಸಂದರ್ಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಯಾರೊಂದಿಗಾದರೂ ಕಾಲು ಕೆರೆದುಕೊಂಡು ಜಗಳ ಮಾಡಿ ಪ್ರಕ್ಷುಬ್ಧ ಸ್ಥಿತಿ ಉಂಟುಮಾಡಿಬಿಡುತ್ತಿದ್ದ.

ಮಾಡುವುದೆಲ್ಲಾ ಮಾಡಿ ಕೆಲದಿನಗಳ ಮಟ್ಟಿಗೆ ಊರು ಬಿಡುತ್ತಿದ್ದುದು ಅವನ ಮತ್ತೊಂದು ಚಾಳಿ. ಇರುವ ಕೆಲಸ ಕಾರ್ಯಗಳನ್ನು ಬಿಟ್ಟು ನಮಗೆ ಇವನ ಬೆನ್ನು ಹತ್ತಿಕೊಂಡು ತಿರುಗುವ ಕೆಲಸ ಶುರುವಾಗುತ್ತಿತ್ತು. ಇದ್ದಕ್ಕಿದ್ದಂತೆ ಒಂದು ದಿನ ಥಟ್ಟನೆ ಪ್ರತ್ಯಕ್ಷನಾಗಿ ಠಾಣೆಗೆ ಬಂದು ಶರಣಾಗಿ ಬಿಡುತ್ತಿದ್ದ. ‘ಅವತ್ತಿನ ದಿನಾ ಏನಾಯ್ತು ಗೊತ್ತಾ ಸಾರ್...’ ಎಂದು ಮೊದಲೇ ತಯಾರಾಗಿ ಬಂದಿದ್ದ ಅತಿ ಸುಂದರ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿ ಪಾಪ, ಇವನದೇನೂ ತಪ್ಪಿಲ್ಲವೇನೋ ಅನ್ನಿಸುವಂತೆ ಮಾಡುತ್ತಿದ್ದ. ಹೀಗೆ ಕೆಟ್ಟು ಕೆರ ಹಿಡಿಯುವ ಬದಲು ಇವನು ಸಿನಿಮಾ ಇಂಡಸ್ಟ್ರಿಯಲ್ಲಿ ಕಥೆಗಾರನಾಗಿದ್ದಿದ್ದರೆ ಖಂಡಿತಾ ಉದ್ಧಾರವಾಗುತ್ತಿದ್ದನೇನೋ ಎಂದು ಎಷ್ಟೋ ಬಾರಿ ನಮಗೇ ಅನಿಸಿದ್ದುಂಟು.

ಮೇಲಾಧಿಕಾರಿಗಳು ಮಾತ್ರ ಯಾವ ಮುಲಾಜು ಇಲ್ಲದೆ ‘ಯಾವನ್ರೀ ಅವನು.. ನಿಮ್ಮ ಮಾವನ ಮಗನೇನ್ರೀ? ತಲೆ ಮೇಲೆ ಕೂರಿಸಿಕೊಂಡಿದ್ದೀರಂತಲ್ಲಾ... ಕಾನೂನು ಏನು ಅಂತ ಸ್ವಲ್ಪ ತೋರಿಸ್ರೀ ಅವ್ನಿಗೆ’ ಅನ್ನುತ್ತಿದ್ದರು.

ಇಂತಹ ಸೀನ ತಿರುಪತಿ, ಧರ್ಮಸ್ಥಳಗಳಂತಹ ಊರುಗಳಿಗೆ ಟೂರು ಹೊರಟನೆಂದರೆ ಒಂಚೂರು ಒಳ್ಳೆ ಗಾಳಿ ಬೀಸಿತೆಂದೇ ಅರ್ಥ. ತಾನಷ್ಟೇ ಪುಣ್ಯ ಕ್ಷೇತ್ರ ದರ್ಶನ ಮಾಡುವುದಲ್ಲದೆ, ತನ್ನ ಹಿಂದೆ ಮುಂದೆ ಕೆಲಸವಿಲ್ಲದೆ ಸುತ್ತುವ ಓಣಿ ಮನೆ ಮಕ್ಕಳನ್ನೂ ಕರೆದುಕೊಂಡು ಹೋಗಿ ಪುಕ್ಕಟೆ ದೇವರ ದರ್ಶನ ಮಾಡಿಸುತ್ತಿದ್ದ. ಇದರಿಂದ ಭಾಳಾ ಪುಣ್ಯ ಸಿಗ್ತದೋ ಸೀನಾ... ಎಂದು ಯಾರೋ ಅವನಿಗೆ ಹೇಳಿದ್ದರಂತೆ. ಇದ್ದು ಬಿದ್ದ ದೇವರ ಸೇವೆಯನ್ನೆಲ್ಲಾ ಮಾಡಿ ಅದಕ್ಕೆಂದೇ ಹುಲುಸಾಗಿ ಬೆಳೆಸಿಕೊಂಡಿರುತ್ತಿದ್ದ ತಲೆ ಕೂದಲನ್ನು ದೇವರಿಗೆ ಅರ್ಪಿಸಿ ನುಣ್ಣಗೆ ಮಿರಮಿರನೆ ಮಿಂಚುತ್ತಿದ್ದ ಬೋಡು ತಲೆಯೊಡನೆ ಕಾಣಿಸಿಕೊಳ್ಳುತ್ತಿದ್ದ. ವಾಪಸ್ಸು ಬಂದ ತಕ್ಷಣ ಯಾರು ಕೇಳುತ್ತಿದ್ದರೋ ಬಿಡುತ್ತಿದ್ದರೋ ಪೋಲೀಸರು ಮಾತ್ರ ಪ್ರವಾಸದ ಬಗ್ಗೆ ತನ್ನನ್ನು ವಿಚಾರಿಸಲಿ ಎಂಬುದು ಸೀನನ ಆಸೆ.

ಅದಕ್ಕಾಗಿಯೇ ಬೇಸಿಗೆಯ ಬಿರುಬಿಸಿಲಿನಲ್ಲೂ ಟೋಪಿ ಹಾಕಿಕೊಳ್ಳದೆ ಸಿಬ್ಬಂದಿಗಳ ಮುಂದೆ ಅಡ್ಡಾಡುತ್ತಿದ್ದ. ಏನಾದರೂ ಪ್ರಶ್ನೆಗಳು ಅವರಿಂದ ತೂರಿ ಬಂದಾವೇನೋ ಎಂದು ಕಾಯುತ್ತಿದ್ದ. ಅವರು ಕೇಳುವವರೆಗೆ ಕಾಯುವ ತಾಳ್ಮೆಯೂ ಅವನಿಗಿರುತ್ತಿರಲಿಲ್ಲ. ‘ಅದೇ ಜೀವ್ನಾ ಬೇಜಾರಾಗಿ ಸಾಕಾಗೋಗಿತ್ತು ಸಾರ್... ಹಂಗೇ ತಿರುಪ್ತಿ ತಿಮ್ಮಪ್ಪನಿಗೆ ಹೋಗಿ ಸೇವೆ ಮಾಡಿ ಕೂದಲು ಕೊಟ್ಬುಟ್ಟು ಬಂದಿದೀನಿ... ಇನ್ಮೇಲಾದ್ರೂ ಹೊಸಾ ಮನ್ಷಾ ಆಗಿ ಯಾವ ತಂಟೆ ತಕರಾರಿಲ್ದೆ ನೆಮ್ದಿಯಾಗಿ ಬದಿಕ್ಕಂಡಿರಾಣಾ ಅಂತಿದ್ದೀನಿ’ ಅನ್ನುತ್ತಿದ್ದ. ಹೊಸ ವರ್ಷದ ಮೊದಲ ದಿನ ಮಾಡುತ್ತೇವಲ್ಲ ಪ್ರತಿಜ್ಞೆಗಳು... ಇದೂ ಥೇಟ್ ಹಾಗೆಯೇ! ಕೆಲವು ದಿನಗಳಷ್ಟೆ ಅದರ ಆಯಸ್ಸು.

ಲೋಕವನ್ನು ನಂಬಿಸಲು ಯಾರು ಏನು ಬೇಕಾದರೂ ಮಾಡಬಹುದು. ಕೆಲವೊಮ್ಮೆ ನಮ್ಮ ಚಾಣಾಕ್ಷತೆಯಿಂದ ಜನರನ್ನು ಯಾಮಾರಿಸಿ ಕರುಣೆ ಅನುಕಂಪವನ್ನೂ ಗಿಟ್ಟಿಸಬಹುದು. ಆದರೆ ನಮ್ಮದೇ ಅಂತರಂಗ ಇರುತ್ತದಲ್ಲ? ಅದು ಈ ಯಾವ ನಾಟಕಗಳಿಗೂ ಮಣಿಯುವುದಿಲ್ಲ. ಅದನ್ನು ವಂಚಿಸುವುದು ದಾರಿ ತಪ್ಪಿಸುವುದು ನಮ್ಮಿಂದಾಗದ ಮಾತು. ಯಾಕೆಂದರೆ ನಾವು ಮಾಡುವ ಪ್ರತಿ ಕೆಲಸದಲ್ಲೂ ಅದು ಜೊತೆಗೇ ಇರುತ್ತದೆ. ನಮ್ಮ ಎಲ್ಲ ಕೃತ್ಯಗಳಿಗೆ ಅದು ಸಾಕ್ಷಿಯಾಗಿರುವುದರಿಂದ ಪ್ರತಿ ತಪ್ಪೂ ನಮ್ಮಲ್ಲೊಂದು ಪಾಪಪ್ರಜ್ಞೆ ಮೂಡಿಸುತ್ತ ಹೋಗುತ್ತದೆ. ಬೆಟ್ಟದಂತ ಆತ್ಮವಿಶ್ವಾಸವನ್ನು ನಮ್ಮಿಂದ ಕಸಿದುಕೊಳ್ಳುತ್ತದೆ.

ಕಳ್ಳನ ಮನಸ್ಸು ‘ಹುಳ್ಳುಳ್ಳಗೆ’ ಅನ್ನುತ್ತಾರಲ್ಲ..? ಅದು ಅಪ್ಪಟ ಸತ್ಯ. ಈ ಹರಕೆ, ಗುಡಿ ಗುಂಡಾರ ಸುತ್ತುವಿಕೆ, ದಾನ ಧರ್ಮ, ಸಮಾಜಸೇವೆ ಎಲ್ಲವೂ ಕೊಳೆಯನ್ನು ತೊಳೆದುಕೊಳ್ಳುವ ಹಪಾಹಪಿಗಳೇ. ಅಪರಾಧಿ ಅಥವಾ ಪಾತಕಿ ಅನ್ನಿಸಿಕೊಂಡವರು ಕಾನೂನಿನ ಕುಣಿಕೆಗೆ ಸಿಗುತ್ತಾರೋ ಬಿಡುತ್ತಾರೋ ಅದು ಬೇರೆ ಮಾತು. ಆದರೆ ತನ್ನದೇ ಮನಸ್ಸಾಕ್ಷಿಯೆದುರು ವ್ಯಕ್ತಿತ್ವಹೀನನಾಗಿ ಉಸಿರಿರುವವರೆಗೂ ಕುಬ್ಜನಂತೆ ಬದುಕಬೇಕಾದ ಕರ್ಮ ಮಾತ್ರ ಕಟ್ಟಿಟ್ಟದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.