ಬುಧವಾರ, ಮಾರ್ಚ್ 29, 2023
23 °C

ಅನಿತಾ ತಾಕೊಡೆ ಅವರ ಕವಿತೆ- ‘ಹೆಜ್ಜೆಗಳು’

ಅನಿತಾ ಪಿ. ತಾಕೊಡೆ Updated:

ಅಕ್ಷರ ಗಾತ್ರ : | |

Prajavani

ಯಾರ ಆಸರೆಯೂ ಇಲ್ಲದೆ
ಮುಂದಡಿಯಿಡಲು ಹಂಬಲಿಸುತ್ತಿರುವಾಗ
ಅದೆಷ್ಟೋ ಬಾರಿ ಎಲ್ಲೆಂದರಲ್ಲಿ ಬಿದ್ದೆದ್ದು
ಗಟ್ಟಿಯಾಗಿ ಪಾದವೂರಿ ಹೆಜ್ಜೆಯಿಡಲಾರಂಭಿಸಿದ ಮೇಲೆ
ಎಂದೂ ನಿಂತಿದ್ದೇ ಇಲ್ಲ.

ಬಾಲ್ಯ ಬೆಳೆಯುತ್ತಿದ್ದಂತೆ ಹರೆಯ ಕರೆಯುತ್ತಿದ್ದಂತೆ
ತುಂಟಾಟದಲಿ ಒಡಮೂಡಿದ ಹೆಜ್ಜೆಗಳು
ಬಯಕೆಯೊಳತೆಕ್ಕೆಗೆ ಬಿದ್ದು ಹಾತೊರೆಯುತ್ತಲೇ
ಭರವಸೆಯ ಪುಟದೊಳಗೆ ಅಚ್ಚಾದವು ಕೆಲವು

ಬಾಳ ಪಯಣದ ಕವಲು ದಾರಿಯಲ್ಲಿ
ಹೆಜ್ಜೆಗಳು ಪರಿಪಕ್ವತೆಯೆಡೆಗೆ ಹೊರಳುತ್ತಿರುವಾಗ
ಘನ ಹಗುರವಾಗಿ ತಕ್ಕಡಿಯಲ್ಲಿ ತೂಗಿರಬಹುದು
ಹಸಿಬಿಸಿ ತಂಗಾಳಿಯೊಡಲಲ್ಲಿ ಜೀಕಿರಬಹುದು
ಅಲೆಗಳ ಏರಿಳಿತದೊಳಗೆ ಮುಳುಗೇಳಿರಬಹುದು
ಇನ್ನೇನು ನಿಂತೇ ಬಿಡುತ್ತವೋ ಎನ್ನುವಷ್ಟರಲ್ಲಿ
ಮತ್ತೆದ್ದು ಹಟಮಾರಿಯಾಗಿರಬಹುದು

ಹಿಂತಿರುಗಲೂ ಆಗದೆ, ನಿಲ್ಲಲೂ ಒಗ್ಗದೆ
ಕ್ಷಣ ದಿನ ವರುಷ ದಶಕಗಳಾಗಿ ಶತಮಾನದತ್ತ ತಿರುಗಿ
ಹೆಜ್ಜೆಗಳು ಸಾಗುತ್ತಲೇ ಇವೆ.
ಭಾವ ಅನುಭಾವಗಳ ಹಾದಿ ಬೆಳೆಯುತ್ತಲೇ ಇವೆ

ಸಹಸ್ರಾರು ಹೆಜ್ಜೆಗಳ ಆಗರದೊಳಗೆ
ಜೊತೆ ನಡೆದವುಗಳೆಷ್ಟೋ...!
ಅರ್ಧದಲ್ಲೇ ಕಳಚಿಕೊಂಡವುಗಳೆಷ್ಟೋ..!
ರಂಗಿನೊಡಗೂಡಿ ಗಾಢವಾದವುಗಳೆಷ್ಟೋ...!

ಹೊತ್ತಿರುವ ಕಾಯ ತೀರ ಸೇರುವ ಭರದಲ್ಲಿ
ಸವೆದಿವೆ ಕಾಲ್ಬೆರಳ ತುದಿಯಲ್ಲಿ ಜನ್ಮದಿಂದ ದತ್ತವಾದ
ಶಂಖ ಚಕ್ರಗಳ ಕುರುಹು

ಜೀವನಯಾನಕೆ ದಾನವಾಗಿ ದಕ್ಕಿದ ದೇಹವನೂ
ಎಂದಾದರೊಂದು ದಿನ ತೊರೆದು
ಮುನ್ನಡೆಯಬೇಕು ಬೇರೊಂದು ಗರ್ಭದೊಳಗೆ
ಹೊಸದೊಂದು ಲೋಕದ ಹೊಸದಾದ ಬೆಳಕಿಗೆ
ಮತ್ತೆ ಮೊದಲಿನಿಂದಲೇ ಅನುವಾಗಬೇಕು
ಹೆಜ್ಜೆಗಳ ಮೊಹರಾಗಬೇಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು