ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿ ವೇಗವೋ ಅಥವಾ ಅಜಾಗರೂಕತೆಯೋ?

Last Updated 22 ಫೆಬ್ರುವರಿ 2011, 19:20 IST
ಅಕ್ಷರ ಗಾತ್ರ

ವಿಮಾನ ನಿಲ್ದಾಣಕ್ಕೆ ವೇಗದ ಮತ್ತು ಎಲ್ಲರಿಗೂ ಅನುಕೂಲವಾದ ಸಂಪರ್ಕ ಅತ್ಯಗತ್ಯ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಮೂಲಸೌಕರ್ಯ ಇಲಾಖೆ ಪ್ರಸ್ತಾಪಿಸುತ್ತಿರುವ ಅತಿ ವೇಗದ ರೈಲು ಸಂಪರ್ಕ (ಎಚ್‌ಎಸ್‌ಆರ್‌ಎಲ್) ಇದಕ್ಕೆ ಉತ್ತರವೇ? ಅಥವಾ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಮೆಟ್ರೊ ರೈಲನ್ನೇ ವಿಸ್ತರಿಸಬೇಕೇ? ಇದೊಂದು ಚರ್ಚೆ ನಡೆಸಲೇಬೇಕಾದ ಪ್ರಶ್ನೆ.

ನಾವಿಂದು ಬೆಂಗಳೂರಿನಲ್ಲಿ ಮೆಟ್ರೊ ಜಾಲವನ್ನು ವಿಸ್ತ್ರತವಾಗಿ ಅಭಿವೃದ್ಧಿ ಪಡಿಸುವ ಪ್ರಕ್ರಿಯೆಯಲ್ಲಿ ಇದ್ದೇವೆ. ಸಾಮಾನ್ಯ ಜ್ಞಾನ ಇರುವ ಯಾರು ಬೇಕಾದರೂ ವಿಮಾನನಿಲ್ದಾಣಕ್ಕೆ ಮೆಟ್ರೊ ರೈಲನ್ನೇ ವಿಸ್ತರಿಸಬೇಕು ಎಂಬ ಸಲಹೆಯನ್ನು ಕೊಡುತ್ತಾರೆ. ನಗರದ ಯಾವುದೇ ಭಾಗದಲ್ಲಿರುವ ಜನರು, ವಿವಿಧ ಸಾರಿಗೆ ಮಾದರಿಯನ್ನು ಬಳಸಿಕೊಳ್ಳದೇ ಕೇವಲ ಮೆಟ್ರೊ ರೈಲು ಬಳಸಿ ನೇರವಾಗಿ ವಿಮಾನನಿಲ್ದಾಣಕ್ಕೆ ತಲುಪುವುದು ಈ ವ್ಯವಸ್ಥೆಯಿಂದ ಸಾಧ್ಯವಾಗುತ್ತದೆ.

ಅಲ್ಲದೇ ವಿಮಾನನಿಲ್ದಾಣಕ್ಕೆ ಮೆಟ್ರೊ ಸೇವೆಯನ್ನು ವಿಸ್ತರಿಸಿದರೆ, ಮೆಟ್ರೊ ಅಚ್ಚುಕಟ್ಟು ಪ್ರದೇಶವೂ ವಿಸ್ತಾರವಾಗುತ್ತದೆ ಹಾಗೂ ಈ ಸೇವೆ ಆರ್ಥಿಕವಾಗಿ ಅತ್ಯಂತ ಕಾರ್ಯಸಾಧುವಾಗುತ್ತದೆ. ದುರದೃಷ್ಟವಶಾತ್ ಎರಡೂ ಪ್ರಸ್ತಾವನೆಗಳ ನಡುವೆ (ಮೆಟ್ರೊ ಮತ್ತು ಎಚ್‌ಎಸ್‌ಆರ್‌ಎಲ್) ನೇರ ತುಲನೆಯನ್ನು ಯಾರೂ ಮಾಡುತ್ತಿಲ್ಲ. ಎರಡನ್ನೂ ಜೊತೆಗಿಟ್ಟು ನಿರ್ಧಾರ ಕೈಗೊಳ್ಳುವ ಸ್ಪಷ್ಟ ಮಾನದಂಡವೂ ಇಲ್ಲ. ಆದರೆ ಹೊಸ ಯೋಜನೆಗಾಗಿ ಕೋಟ್ಯಂತರ ರೂಪಾಯಿ ವ್ಯಯಿಸುವ ಮೊದಲು ಈ ಹಂತದಲ್ಲಾದರೂ ನಾವು ಎರಡೂ ಯೋಜನೆಗಳನ್ನು ಬಹುಮುಖ ದೃಷ್ಟಿಕೋನದಿಂದ ಪರಿಶೀಲನೆ ಮಾಡಬೇಕು.

ಈ ಎರಡು ಪ್ರಸ್ತಾವನೆಗಳನ್ನು ತುಲನೆ ಮಾಡಲು ನಾವು ಪರಿಗಣಿಸಬೇಕಾದ ಪ್ರಮುಖ ಅಂಶಗಳೇನು? ಪ್ರಯಾಣಿಕರ ಅನುಕೂಲತೆ ಮತ್ತು ಬೊಕ್ಕಸದ ಮೇಲೆ ಇದರಿಂದ ಬೀಳುವ ಹೊರೆ. ಅನುಕೂಲತೆಯ ದೃಷ್ಟಿಯಿಂದ ನಗರದ ಎಲ್ಲ ಭಾಗದ ಜನರೂ ವಿಮಾನನಿಲ್ದಾಣವನ್ನು ಸುಲಭವಾಗಿ ತಲುಪುವಂತಾಗಲೂ ಮೆಟ್ರೊ ವ್ಯವಸ್ಥೆಯೊಳಗೇ ಅದನ್ನು ತರುವುದು ಸೂಕ್ತ. ಇನ್ನೊಂದೆಡೆ ವೆಚ್ಚದ ವಿಷಯದಲ್ಲೂ ಎಚ್‌ಎಸ್‌ಆರ್‌ಎಲ್ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ.

ಒಂದೊಮೆ ಎಚ್‌ಎಸ್‌ಆರ್‌ಎಲ್ ವ್ಯವಸ್ಥೆಯನ್ನು ಪ್ರವರ್ತಕರೇ ತಮದೇ ವೆಚ್ಚದಲ್ಲಿ ನಿರ್ಮಿಸಿದರೆ ಹಾಕಿದ ಹಣವನ್ನು ಅವರು ಪ್ರಯಾಣ ದರದ ಮೂಲಕವೇ ವಸೂಲಿ ಮಾಡಿದರೆ ಅದರಲಿ ಸಮಸ್ಯೆ ಇಲ್ಲ. ಆದರೆ ಹಾಲಿ ಇರುವ ಪ್ರಸ್ತಾವನೆ ಹಾಗಿಲ್ಲ. ಬದಲಾಗಿ ಯೋಜನೆಯಲ್ಲಿ ಪ್ರವರ್ತಕರು ಅಪಾರ ಪ್ರಮಾಣದ ಸಹಾಯಧನವನ್ನು (ಇದಕ್ಕೆ ಕಾರ್ಯಸಾಧು ಅಂತರದ ಅನುದಾನ ಅಂದರೆ ವಯಬಿಲಿಟಿ ಗ್ಯಾಪ್ ಫಂಡಿಂಗ್) ಸರ್ಕಾರದಿಂದ ನಿರೀಕ್ಷಿಸುತ್ತಿದ್ದಾರೆ. ಅದು ನಿಜ

ವಾದರೆ ನಮಗೆ ಪ್ರಶ್ನಿಸಲು ಅವಕಾಶ ಇದೆ. ಸರ್ಕಾರಿ ಸ್ವಾಮ್ಯದ ಮೆಟ್ರೋ ವ್ಯವಸ್ಥೆಯೇ ಹೊಸ ಅಗತ್ಯತೆಯನ್ನು ಪೂರೆ ಸಲು ಯೋಗ್ಯವಾಗಿರುವಾಗ ಇನ್ನೊಂದು ಬೃಹತ್ ಯೋಜನೆಗೆ ಅನುದಾನ ನೀಡುವ ಅಗತ್ಯ ಏನಿದೆ? ಎಚ್‌ಎಸ್‌ಆರ್‌ಎಲ್‌ಗಾಗಿ ಖಾಸಗಿ ಕ್ಷೇತ್ರಕ್ಕೆ ನಾವೇಕೆ ಆಹ್ವಾನ ನೀಡಬೇಕು? ಮತ್ತು ಖಾಸಗಿ ಕ್ಷೇತ್ರಕ್ಕೆ ಸಾರ್ವಜನಿಕರ ಹಣವನ್ನು ನಾವೇಕೆ ವರ್ಗಾಯಿಸಬೇಕು?

ಇಲ್ಲಿ ನಮೂದಿಸಬೇಕಾದ ಇನ್ನೊಂದು ಮಹತ್ವದ ವಿಷಯವೆಂದರೆ ಎಚ್‌ಎಸ್‌ಆರ್‌ಎಲ್ ಎನ್ನುವುದು ಅತ್ಯಂತ ವೇಗದ ರೈಲು ಸಂಪರ್ಕವೇ ಅಲ್ಲ. ನಗರದ ಕೇಂದ್ರಸ್ಥಾನದಿಂದ ನೇರವಾಗಿ ವಿಮಾನನಿಲ್ದಾಣಕ್ಕೆ ಮಾತ್ರ ಹೋಗುವ ಯಾವುದೇ ಸೇವೆ ಸಾಕಷ್ಟು ಹಣ ಮಾಡುವುದು ಸಾಧ್ಯವೇ ಇಲ್ಲ.  ಇನ್ನೊಂದೆಡೆ ಎಚ್‌ಎಸ್‌ಆರ್‌ಎಲ್ ವಿಮಾನನಿಲ್ದಾಣಕ್ಕೆ ಹಾದು ಹೋಗುವ ಮಾರ್ಗದಲ್ಲಿ ಹಲವು ತಾಣಗಳಲ್ಲಿ ನಿಲುಗಡೆ ನೀಡಿದರೆ ಅದು ಅತಿ ವೇಗದ ರೈಲು ಎನಿಸಿಕೊಳ್ಳುವುದೇ ಇಲ್ಲ. ಅಲ್ಲದೇ ಅನೇಕ ಭಾಗಗಳಲ್ಲಿ ಅಂತಹ ಸೇವೆ ಪ್ರಯೋಜನಕಾರಿ ಎನಿಸುವುದೇ ಇಲ್ಲ. ವೈಟ್‌ಫೀಲ್ಡ್ ಅಥವಾ ಮಾಗಡಿ ರಸ್ತೆಯಲ್ಲಿರುವ ಯಾರೂ ಎಂ.ಜಿ ರಸ್ತೆಗೆ ಬಂದು ಸಾಮಾನ್ಯ ವೇಗದ ವಿಮಾನನಿಲ್ದಾಣ ಸಂಪರ್ಕ ರೈಲನ್ನು ಹಿಡಿಯುವುದೇ ಇಲ್ಲ. ಬದಲಾಗಿ ತಾವೇ ಸ್ವತಃ ವಿಮಾನನಿಲ್ದಾಣಕ್ಕೆ ನೇರವಾಗಿ ಹೋಗುವ ಪರ್ಯಾಯ ವ್ಯವಸ್ಥೆ ನೆಚ್ಚಿಕೊಳ್ಳುತ್ತಾರೆ.

ವಿಮಾನನಿಲ್ದಾಣಕ್ಕೆ ಈಗಿರುವ ರಸ್ತೆ ಮಾರ್ಗವನ್ನೇ ಇನ್ನಷ್ಟು ಬಲಯುತಗೊಳಿಸಲು ಅವಕಾಶ ಇರುವಾಗ ಎಚ್‌ಎಸ್‌ಆರ್‌ಎಲ್ ಮೇಲೆ ಹಣ ವಿನಿಯೋಗಿಸುವ ನಿಟ್ಟಿನಲ್ಲಿ ಸರ್ಕಾರ ತೋರುತ್ತಿರುವ ಧಾವಂತವೇ ಅನುಮಾನಾಸ್ಪದವಾಗಿದೆ. ಬಳ್ಳಾರಿ ರಸ್ತೆಯಲ್ಲಿ ಕೇಂದ್ರ ಸರ್ಕಾರದ ಎಕ್ಸ್‌ಪ್ರೆಸ್ ಹೆದ್ದಾರಿ ಯೋಜನೆ ಈಗಾಗಲೇ ಪ್ರಕ್ರಿಯೆಯಲ್ಲಿದೆ. ವೈಟ್‌ಫೀಲ್ಡ್ ಮತ್ತು ಕೆ.ಆರ್.ಪುರಂನಿಂದ ಬರುವ ರಸ್ತೆಗಳನ್ನು ವಿಸ್ತರಿಸಿದರೆ ನಗರದ ಪೂರ್ವಭಾಗದಿಂದ ವಿಮಾನನಿಲ್ದಾಣಕ್ಕೆ ಬರುವುದೂ ಸುಲಭವಾಗುತ್ತದೆ.ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆಯವರೆಗೆ ನೈಸ್ ಕಾರಿಡಾರ್ ರಸ್ತೆಯನ್ನು ವಿಸ್ತರಿಸುವುದು, ಮತ್ತು ಬಹು ಸಮಯದಿಂದ ವಿಳಂಬವಾಗುತ್ತಿರುವ ಬಿಡಿಎಯ ಪೆರಿಫೆರಲ್ ರಸ್ತೆಯನ್ನು ನಿರ್ಮಿಸುವುದರಿಂದ ಈ ದೃಷ್ಟಿಕೋನವನ್ನು ಇನ್ನಷ್ಟು ಬಲಪಡಿಸಬೇಕು.

ಎಚ್‌ಎಸ್‌ಆರ್‌ಎಲ್‌ಗೆ ಪರ್ಯಾಯವಾಗಿರುವ ಈ ಎಲ್ಲ ಅವಕಾಶಗಳು ಅತ್ಯಂತ ಅಗ್ಗ ಮತ್ತು ನಗರದ ಸಾರಿಗೆ ಜಾಲವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಎನಿಸುತ್ತಿವೆ. ಎಚ್‌ಎಸ್‌ಆರ್‌ಎಲ್‌ಗೆ ನೀಡುವ ಅಪಾರ ಪ್ರಮಾಣದ ಸಹಾಯಧನವನ್ನು ಈ ಪರ್ಯಾಯ ಅವಕಾಶಗಳಿಗೆ ನೀಡಬೇಕು. ಇಲ್ಲದಿದ್ದಲ್ಲಿ ದೀರ್ಘಾವಧಿಗೆ ನಮ್ಮ ನಗರ ಇನ್ನಷ್ಟು ಸಂಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ನಾಳಿನ ಸಂಚಿಕೆ: ‘ಬಿಎಟಿಎಫ್’ನ ಮಾಜಿ ಸದಸ್ಯರ ಪ್ರತಿಕ್ರಿಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT