ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಬೆಲ್ಲದುಂಡೆಗಳು

ಮೊದಲ ಓದು
Last Updated 16 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಯು.ಆರ್‌. ಎಂಬ ನೀವು
(ಲಾವ್‌ತ್ಸುವಿನ ‘ದಾವ್‌ ದ ಜಿಂಗ್‌’ ಕನ್ನಡದಲ್ಲಿ ಅನಂತಮೂರ್ತಿಯವರನ್ನು ನೋಡುವ ಪ್ರಯತ್ನ)
ಪುಟ:132 ರೂ.80
ನಮ್ಮ ಕೆಲವೇ ಸಮಾಜವಾದಿ ಲೇಖಕರಲ್ಲಿ ಒಬ್ಬರಾದ ಶೂದ್ರ ಶ್ರೀನಿವಾಸ್‌ ಕೆಲವು ಸಾಹಿತ್ಯ ಪತ್ರಿಕೆಗಳನ್ನು ಪ್ರಕಟಿಸಿ ಜನರನ್ನು ಮುಟ್ಟಲು ಪ್ರಯತ್ನಿಸಿದವರು. ಬಹು ಕಾಲದಿಂದಲೂ ಸಾಹಿತ್ಯ, ಸಾಹಿತಿಗಳ ನಿಕಟ ಒಡನಾಟ ಇರುವ ಶೂದ್ರ ಅವರು ಇದೀಗ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಅವುಗಳಲ್ಲಿ ಮುಖ್ಯವಾದದ್ದು ಸಾಹಿತಿ ಯು.ಆರ್‌. ಅನಂತಮೂರ್ತಿ ಅವರ ಕುರಿತಾದ ‘ಯು.ಆರ್‌. ಎಂಬ ನೀವು’. ಈ ಪುಸ್ತಕದಲ್ಲಿ ಅನಂತಮೂರ್ತಿ ಅವರ ಬದುಕು, ಚಿಂತನೆ, ಸಾಹಿತ್ಯವನ್ನು ಚೀನಾದ ದಾರ್ಶನಿಕ ಲಾವ್‌ತ್ಸುವಿನ ಚಿಂತನೆಗಳ ಬೆಳಕಿನಲ್ಲಿ ನೋಡುವ ಪ್ರಯತ್ನ ಮಾಡಲಾಗಿದೆ. ಸಾರ್ವಜನಿಕವಾದ ಚಿಂತನೆ, ವ್ಯಕ್ತಿತ್ವ ಇದ್ದ ಕನ್ನಡದ ಕೊನೆಯ ಸಾಹಿತಿ ಯು.ಆರ್‌. ಅನಂತಮೂರ್ತಿ. ಅವರು ಶೂದ್ರರ ಇಬ್ಬರು ಗುರುಗಳಲ್ಲಿ ಒಬ್ಬರು. (ಇನ್ನೊಬ್ಬರು ಲೇಖಕ, ಪತ್ರಕರ್ತ ಪಿ. ಲಂಕೇಶ್‌).

ಈ ಕೃತಿ ಒಂದು ರೀತಿಯಲ್ಲಿ ಅವರ ಗುರುದಕ್ಷಿಣೆಯಾಗಿಯೂ ಬರೆಸಿಕೊಂಡಿದೆ. ಯು.ಆರ್‌.ಎ. ಅವರೊಂದಿಗೆ ದಶಕಗಳ ಒಡನಾಟ ಇದ್ದ ಶೂದ್ರ ಇಲ್ಲಿ ಅವರ ವ್ಯಕ್ತಿತ್ವದ ಹಲವು ಸೆಳಕು, ಸ್ತರಗಳನ್ನು ಇಲ್ಲಿ ಹಿಡಿಯಲು ಪ್ರಯತ್ನಿಸಿದ್ದಾರೆ.

ಇಲ್ಲಿನ ಬರಹದ ವೈಶಿಷ್ಟ್ಯವೆಂದರೆ ಅದು ನೆನಪುಗಳ ಓಣಿಯಲ್ಲಿ ಹೋಗುತ್ತಲೇ ಹಲವುದಿಕ್ಕುಗಳ ಪರಿಚಯ ಮಾಡಿಕೊಡುವುದಾಗಿದೆ. ಇಲ್ಲಿ ಯು.ಆರ್‌.ಎ. ಅವರ ವ್ಯಕ್ತಿತ್ವದ ದರ್ಶನ ಶೂದ್ರ ಅವರ ನಿಲುಕಿಗೆ ಸಿಕ್ಕಷ್ಟು ದಾಖಲಾಗಿದೆ. ಅದರ ಜೊತೆಗೆ ಕನ್ನಡದ ಸಾಹಿತ್ಯ, ಸಾಹಿತಿಗಳ ಇನ್ನಿತರ ಸಂಗತಿಗಳೂ ಇಲ್ಲಿ ದಾಖಲಾಗಿವೆ. ಅದರಲ್ಲೂ ಮುಖ್ಯವಾಗಿ ಲಂಕೇಶ್‌ರ ಉಲ್ಲೇಖ ಆಗಾಗ ಬಂದುಹೋಗುತ್ತದೆ.

ಇದು ಕೂಡ ಅರ್ಥಪೂರ್ಣವೇ ಆಗಿದೆ. ‘ಕನ್ನಡ ಸಾಹಿತ್ಯದ ಇಬ್ಬರು ಸವತಿಯರು’ ಎಂದು ಕತೆಗಾರ ದೇವನೂರ ಮಹಾದೇವರಿಂದ ಕರೆಸಿಕೊಂಡ ಇವರಿಬ್ಬರ ವ್ಯಕ್ತಿತ್ವನ್ನೂ ಶೂದ್ರ ಹಿಡಿದಿಡಲು ಪ್ರಯತ್ನಿಸಿದ್ದಾರೆ. ಈ ಇಬ್ಬರು ಪ್ರತಿಭಾವಂತರ ಪ್ರಖರ ಚಿಂತನೆ, ವ್ಯಕ್ತಿತ್ವ ಶೂದ್ರ ಅವರ ಅಂತಃಕರಣದಲ್ಲಿ ಅದ್ದಿಕೊಂಡು ಬೇರೆಯದೇ ರೂಪವನ್ನು ಇಲ್ಲಿ ಪಡೆದುಕೊಂಡಿದೆ.

ಈ ಲೇಖಕರನ್ನು ಹೊರತುಪಡಿಸಿ ಡಿ.ಆರ್‌. ನಾಗರಾಜ, ಗೋಪಾಲಕೃಷ್ಣ ಅಡಿಗ, ಸಿದ್ಧಲಿಂಗಯ್ಯ, ತೇಜಸ್ವಿ ಮತ್ತಿತರ ಲೇಖಕರು ಇಲ್ಲಿ ಬಂದುಹೋಗುತ್ತಾರೆ. ಇಲ್ಲಿನ ಮುನ್ನುಡಿ, ಹಿನ್ನುಡಿ, ಪ್ರವೇಶಗಳು ಸಹ ಯು.ಆರ್‌.ಎ. ಎಂಬ ಬೆಲ್ಲದುಂಡೆಯ ಸಿಹಿಯನ್ನು ಒಂದೊಂದು ದಿಕ್ಕಿನಿಂದ ಸವಿದ ಬರಹಗಳೇ ಆಗಿವೆ.

***
‘ಪಾಕಿಸ್ತಾನದ ನೆಲದಲ್ಲಿ ಸಂಬಂಧಗಳ ಹುಡುಕಾಟ’
ಮೇಲಿನ ಎರಡು ಪುಸ್ತಕಗಳ
ಲೇ: ಶೂದ್ರ ಶ್ರೀನಿವಾಸ್‌
ಪ್ರ:
ಲಡಾಯಿ ಪ್ರಕಾಶನ, ನಂ. 21, ಪ್ರಸಾದ ಹಾಸ್ಟೆಲ್‌,ಗದಗ– 582 101

‘ಪಾಕಿಸ್ತಾನದ ನೆಲದಲ್ಲಿ ಸಂಬಂಧಗಳ ಹುಡುಕಾಟ’ ಶೂದ್ರರ ಪಾಕ್‌ ಭೇಟಿಯ ಅನುಭವಗಳ ನಿರೂಪಣೆಯಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಲಾಹೋರಿನಲ್ಲಿ ನಡೆದ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಿದ ಅವರ ಅನುಭವದ ನಿರೂಪಣೆ ಇದು. ಇಲ್ಲಿಯೂ ಅವರ ಮಾನವೀಯತೆಯ ಹುಡುಕಾಟ ನಡೆದಿರುವುದನ್ನು ಕಾಣಬಹುದು.

ಪಾಕಿಸ್ತಾನದಲ್ಲಿ ಲೇಖಕರು ಶಾಂತಿ ಸಮ್ಮೇಳನದಲ್ಲಿ ಭಾಗವಹಿಸುವ ಉತ್ಸಾಹವನ್ನಷ್ಟೆ ತೋರುವುದಿಲ್ಲ; ಅಲ್ಲಿನ ಜನಜೀವನವನ್ನು ಅರಿಯುವ, ಜನರಲ್ಲಿ ಬೆರೆಯುವ ಕೆಲಸವನ್ನು ಮಾಡುತ್ತಾರೆ. ಅಲ್ಲೂ ಹಿಂದೂ ಮುಸ್ಲಿಂ ಸೌಹಾರ್ದತೆಯ ಕುರಿತು ದುಡಿಯುತ್ತಿರುವವರ ಬಗ್ಗೆ, ಅಲ್ಲಿನ ಸಾಂಸ್ಕೃತಿಕವಾಗಿಯೂ ಮುಕ್ತವಾಗಿರುವ ವಾತಾವರಣದ ಬಗ್ಗೆ ಶೂದ್ರ ತಮ್ಮ ಎಂದಿನ ಕಳಕಳಿಯಿಂದಲೇ ಬರೆದಿದ್ದಾರೆ.

ಇದರ ಹೊರತಾಗಿ ಲೇಖಕರು ಪಾಕಿಸ್ತಾನದ ಕವಿ ಇಕ್ಬಾಲರ ಸಮಾಧಿಗೆ ನೀಡುವ ಭೇಟಿ, ಉರ್ದು ಕತೆಗಾರ ಸಾದತ್‌ ಹಸನ್‌ ಮಾಂಟೋ ಅವರ ಕುರಿತು ನೀಡುವ ವಿವರಗಳು ಕುತೂಹಲಕಾರಿಯಾಗಿವೆ. ರಾಜಕಾರಣಿ ರಾಮಮನೋಹರ ಲೋಹಿಯಾ ಅವರನ್ನು ಇಟ್ಟಿದ್ದ ಲಾಹೋರ್ ಜೈಲಿಗೆ ನೀಡಿದ ಭೇಟಿ, ‘ನ್ಯಾಷನಲ್‌ ಮ್ಯೂಸಿಯಂ ಆಫ್‌ ಪಾಕಿಸ್ತಾನ’ವನ್ನು ನೋಡಿದ್ದರ ವಿವರಗಳು ಇಲ್ಲಿವೆ.

ಬುದ್ಧನ ವಿಚಾರಗಳನ್ನು ಪಸರಿಸುವ ಅಲ್ಲಿನ ‘ಗೌತಮ ಪಬ್ಲಿಕೇಷನ್ಸ್‌’ ಬಗ್ಗೆ ಲೇಖಕರು ಇಲ್ಲಿ ಉಲ್ಲೇಖಿಸಿದ್ದಾರೆ. ಹಾಗೆನೋಡಿದರೆ ಪಾಕಿಸ್ತಾನದಲ್ಲೂ ಅವರು ನೋಡುವುದು ಭಾರತದ ಬೇರುಗಳನ್ನು, ನೆನಪುಗಳನ್ನು, ಸೌಹಾರ್ದತೆಯನ್ನು; ಅಲ್ಲಿನ ಜನರು ನಮಗೂ ಸಂಬಂಧಪಟ್ಟವರು ಎಂಬುದನ್ನು.

ಲೇಖಕರ ಬರವಣಿಗೆಯ ಹಿಂದೆ ಇರುವುದು ಗಾಂಧೀಜಿ, ಲೋಹಿಯಾ ಅವರ ಮಾನವೀಯ ಚಿಂತನೆಗಳು ಎಂಬುದು ಇಲ್ಲಿ ಉಲ್ಲೇಖಕ್ಕೆ ಅರ್ಹವಾದ ಸಂಗತಿಯಾಗಿದೆ. ಅವರ ಪಾಕಿಸ್ತಾನದ ಭೇಟಿಯ ವಿವರಗಳು ಕೊಂಚ ತಡವಾಗಿ ನಮೂದುಗೊಂಡು ಪ್ರಕಟವಾಗಿವೆ. ಆದರೂ ಇದು ಈ ಕಾಲಕ್ಕೆ ತುರ್ತಾಗಿ ಬೇಕಾದ ಪುಸ್ತಕವಾಗಿ ಓದುಗರ ಎದುರಿಗೆ ಬಂದಿದೆ ಎಂಬುದು ಅದರ ಮಹತ್ವವನ್ನು ಮನಗಾಣಿಸಬಲ್ಲುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT