ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಸೃಷ್ಟಿಗೆ ಆಯುಸ್ಸು ಕಡಿಮೆ!

Last Updated 26 ಮೇ 2012, 19:30 IST
ಅಕ್ಷರ ಗಾತ್ರ

ಗ್ರಾಫಿಕ್ ಚಿತ್ರಕಲೆಯಲ್ಲಿ ಸಿ.ಚಂದ್ರಶೇಖರ್ ಅವರದ್ದು ಬಹುದೊಡ್ಡ ಹೆಸರು. ಮುರಿದುಹೋದ ಸಂಬಂಧಗಳಿಗೆ ಅವರ ಕಲಾಕೃತಿಗಳು ಹೊಲಿಗೆ (ಸ್ಟಿಚ್ಚ) ಹಾಕುತ್ತವೆ. ಹಾಗಾಗಿ `ಸ್ಟಿಚ್ ಚಂದ್ರಶೇಖರ್~ ಎಂದೇ ಅವರು ಖ್ಯಾತರು.

ವಿಶ್ವಪ್ರಸಿದ್ಧ ಗ್ರಾಫಿಕ್ ಕಲಾವಿದ ಪೋಲ್ ಲಿಂಗ್ರನ್ ಅಮೆರಿಕಾದಲ್ಲಿ 1986ರಲ್ಲಿ ಏರ್ಪಡಿಸಿದ್ದ ಕಲಾಪ್ರದರ್ಶನದಲ್ಲಿ ಭಾರತದಿಂದ ಆಯ್ಕೆಮಾಡಿಕೊಂಡಿದ್ದ ಕೆಲವೇ ಕಲಾವಿದರ ಪೈಕಿ ಚಂದ್ರಶೇಖರ್ ಒಬ್ಬರು.

ಕ್ಯೂಬಾದಲ್ಲಿ ನಡೆದ ಅಂತರರಾಷ್ಟ್ರೀಯ ಕಲಾ ಪ್ರದರ್ಶನದಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು. ಭೂಪಾಲ್‌ನಲ್ಲಿ ಜರುಗಿದ ಪ್ರಥಮ ಅಂತರರಾಷ್ಟ್ರೀಯ ಗ್ರಾಫಿಕ್ ಪ್ರಿಂಟ್ ಬೈನಾಲೆ ಕಲಾಪ್ರದರ್ಶನಕ್ಕೆ ಎರಡು ಬಾರಿ (1989, 2011) ಮತ್ತು ನವದೆಹಲಿಯಲ್ಲಿ ನಡೆದ ಪ್ರಥಮ ಡಿಜಿಟಲ್ ಗ್ರಾಫಿಕ್ ಕಲಾ ಪ್ರದರ್ಶನಕ್ಕೆ (2011) ಚಂದ್ರಶೇಖರ್ ಕಲಾಕೃತಿ ಆಯ್ಕೆಯಾಗಿದ್ದು ಅವರ ಹೆಗ್ಗಳಿಕೆ.

ಚಿತ್ರಕಲೆಯನ್ನು ಸಮಕಾಲೀನ ಸಾಂಸ್ಕೃತಿಕ ಚಳವಳಿಯ ಭಾಗವಾಗಿಸಿದವರಲ್ಲಿ ಚಂದ್ರಶೇಖರ್ ಪ್ರಮುಖರು. 1970-80ರ ದಶಕಗಳ ಕರ್ನಾಟಕ ಕಲಾಮೇಳ, ಕರ್ನಾಟಕ ಕಲಾಯಾತ್ರೆ ಸಂಘಟಿಸುವಲ್ಲಿ ಅವರ ಪಾತ್ರ ಹಿರಿದಾದುದು.

ಬೆಂಗಳೂರೆಂಬ ಮಹಾನಗರಿ ತನ್ನ ಹೊಟ್ಟೆಯೊಳಗೆ ಹತ್ತಾರು ಹಳ್ಳಿಗಳನ್ನು ಇಟ್ಟುಕೊಂಡಿದೆ. ಅಂತಹದೊಂದು ಹಳ್ಳಿ ಗೋಪಾಲಪುರ. ಅಲ್ಲಿನ ಜನಪದ ಸಂಸ್ಕೃತಿಯ ಪರಿಸರದಲ್ಲಿ ವಿ. ಚಿಕ್ಕ ಎಲ್ಲಪ್ಪ ಮತ್ತು ಚೌಡಮ್ಮ ದಂಪತಿಗೆ 1947ರ ಮಾರ್ಚ್ 10ರಂದು ಜನಿಸಿದ ಚಂದ್ರಶೇಖರ್ ಬಾಲ್ಯದಿಂದಲೇ ಚಿತ್ರಕಲೆಯ ಸೆಳೆತಕ್ಕೆ ಒಳಗಾಗಿ, ಚಿತ್ರಕಲೆಯ ದಂತಕತೆ ಎನಿಸಿರುವ ಆರ್.ಎಂ. ಹಡಪದರ ಗರಡಿಯಲ್ಲಿ ಪಳಗಿದರು.
 
ಕೊಲ್ಕತ್ತಾದ ಶಾಂತಿನಿಕೇತನದಲ್ಲಿ ಗ್ರಾಫಿಕ್ ಮುದ್ರಣ ಕಲೆಯ ಉನ್ನತ ವ್ಯಾಸಂಗ ಮಾಡಿದ ಮೊದಲ ಕನ್ನಡಿಗ ಅವರು. ವಿಸ್ತಾರವಾದ ಓದು ಹಾಗೂ ಚಳವಳಿಗಳಲ್ಲಿ ಪಾಲ್ಗೊಳ್ಳುವಿಕೆ ಅವರ ಕಲಾವಂತಿಕೆಗೆ ಹೊಸ ಆಯಾಮ ನೀಡಿವೆ.

ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ, ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ ಕಾಲೇಜಿನ ಡೀನ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಗೂ ಸೆನೆಟ್ ಸದಸ್ಯ, ದಕ್ಷಿಣ ವಲಯ ಮತ್ತು ದಕ್ಷಿಣ ಕೇಂದ್ರ ವಲಯ ಸಾಂಸ್ಕೃತಿಕ ಸಂಸ್ಥೆಗಳ ಸದಸ್ಯ, ವಿಶ್ವವಿದ್ಯಾಲಯಗಳ ಅಧ್ಯಯನ ಮಂಡಳಿ ಸದಸ್ಯ- ಹೀಗೆ ಅಕಾಡೆಮಿಕ್ ವಲಯದಲ್ಲಿ ಅವರ ಸೇವೆ ಸುದೀರ್ಘವಾದುದು.

ಕಲಾಲೋಕಕ್ಕೆ ಚಂದ್ರಶೇಖರ್ ನೀಡಿರುವ ಕೊಡುಗೆಯನ್ನು ಗೌರವಿಸಿ ರಾಜ್ಯೋತ್ಸವ, ಕರ್ನಾಟಕ ಲಲಿತ ಕಲಾ ಅಕಾಡೆಮಿ, ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ನೀಡಲಾಗಿದೆ. ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೂ ಅವರು ಇತ್ತೀಚೆಗೆ ಭಾಜನರಾಗಿದ್ದಾರೆ.

ಚಿತ್ರಕಲೆ ಭಾಷೆಯ ಕುರಿತ ಮಾತುಗಳು ಆಗಾಗ ಕೇಳಿಬರುತ್ತವಲ್ಲ?
ಕಥೆ, ಕವಿತೆ, ವಿಮರ್ಶೆಯಂತಹ ಸಾಹಿತ್ಯ ಪ್ರಕಾರಗಳನ್ನು ಕ್ರಮಬದ್ಧವಾಗಿ ಓದುತ್ತೇವೆ. ಅವಕ್ಕೆ ಎಲ್ಲಿಂದಲೋ ಒಳಪ್ರವೇಶ ಇರೋದಿಲ್ಲ. ಚಿತ್ರಕಲೆ ಹಾಗಲ್ಲ. ಎಲ್ಲಿಂದಲಾದರೂ ಒಳಹೋಗಬಹುದು. ಚಿತ್ರಕಲೆಯನ್ನು ಒಂದು ಕಡೆಯಿಂದ ಹೀಗೇ ನೋಡಬೇಕು ಎಂದಿಲ್ಲ.

ಅಮೂರ್ತ ಕಲೆ ಮಾತ್ರವಲ್ಲ, ರಿಯಲಿಸ್ಟಿಕ್ ಕಲೆಗೂ ಈ ಮಾತು ಅನ್ವಯಿಸುತ್ತದೆ. ಯಾವುದೇ ದೃಷ್ಟಿಕೋನದಿಂದ ನೋಡುಗನನ್ನು ಆಕರ್ಷಿಸುವ ಗುಣ ಅದಕ್ಕಿರಬೇಕು. ಅದು ರೇಖೆಯಿಂದ ಆಗಬಹುದು, ಬಣ್ಣದಿಂದ ಆಗಬಹುದು, ಆಕಾರದಿಂದ ಆಗಬಹುದು. ಇದೇ ಚಿತ್ರಕಲೆಯ ಭಾಷೆ.

ಚಿತ್ರಕಲೆಯನ್ನು ಅರ್ಥೈಸುವುದು ಸಾಧ್ಯವಿಲ್ಲವೇ?
ಚಿತ್ರಕಲೆಗೆ ಅರ್ಥೈಸುವಿಕೆ ಅಂತ ಇಲ್ಲ. ಇರುವುದು ಅನುಭವ ಮಾತ್ರ. ವೀಕ್ಷಕರ ವೈಯಕ್ತಿಕ ಬದುಕಿನ ಅನುಭವದ ಆಧಾರದ ಮೇಲೆ ಕಲಾಕೃತಿ ಒಳಗಿನ ಮೌಲ್ಯ, ಸೌಂದರ್ಯ ಮನಸ್ಸಿಗೆ ಹೃದಯಕ್ಕೆ ತಟ್ಟುತ್ತದೆ. ಅನುಭವಿಸುವಿಕೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆ ಆಗುತ್ತದೆ. ಪ್ರತಿ ಕಲಾಕೃತಿ ಹೊಸದಾದ ಅನುಭವ ಕಟ್ಟಿಕೊಡಬೇಕು.

ಕಲಾಕೃತಿಯ ಆಕಾರಗಳಲ್ಲಿ ರೂಢಿಗತ ಇದೆ, ಕಾಲ್ಪನಿಕ ಇದೆ. ಯಾವುದೇ ಆಕಾರದ ಮೇಲೆ ಹೆಚ್ಚಿನ ಪ್ರಯೋಗ ಮಾಡುತ್ತಾ ಹೋದರೆ ಹೊಸ ಆಕಾರ ಸೃಷ್ಟಿಯಾಗುತ್ತದೆ. ಮುರಿದು ಕಟ್ಟಿದಾಗ ಹೊಸ ಆಕಾರವೇ ಜನ್ಮತಾಳುತ್ತದೆ. ಆದರೆ ಹೀಗೆ ಮುರಿದು ಕಟ್ಟುವಾಗ ಕಲೆಯ ವ್ಯಾಕರಣ, ಇತಿಹಾಸ, ತರ್ಕದ ಸಂಪೂರ್ಣ ಅರಿವಿರಬೇಕು.

ಹೊಸದನ್ನು ಕಟ್ಟುವವನಿಗೆ ಅನುಭವ, ಕೃಷಿ, ಅರಿವು ಬಹಳ ಮುಖ್ಯ. ಕಲೆಯ ವ್ಯಾಕರಣವೇ ಗೊತ್ತಿರದೆ ಮುರಿದು ಕಟ್ಟಲು ತೋರುವ ಉತ್ಸಾಹ ಹುಸಿಯಾಗಿಬಿಡುತ್ತದೆ.
ಕಲಾವಿದ ಕೇವಲ ಕನಸು ಕಾಣುವ ಕಲಾವಿದ ಅಲ್ಲ, ಚಿಂತಕನೂ ಹೌದು.

ಸಮಾಜದ ಆಗುಹೋಗುಗಳಿಗೆ ಅವನು ಪ್ರತಿಕ್ರಿಯಿಸುತ್ತಾನೆ. ಅಂತಹ ಚಿಂತಕನ ಕಲಾಕೃತಿಗಳು ತನ್ನ ಕಾಲದ ಚಿತ್ರವನ್ನು ಸೆರೆಹಿಡಿಯುತ್ತವೆ. ಅವೇನು ಮಾರಾಟದ ಚಿಂತನೆಗೆ ಪೂರಕವಾಗಿರುವುದಿಲ್ಲ.

ಕಲಾಕೃತಿಯ ಜನಪ್ರಿಯತೆ ಮುಖ್ಯ ಅಲ್ಲವೇ?
ಒಂದು ಕೃತಿಯ ಮೌಲ್ಯ ಜನರನ್ನು ಸೆಳೆದರೆ ಅದು ಜನಪ್ರಿಯ ಆಗುತ್ತದೆ. ಆದರೆ ಜನಪ್ರಿಯತೆಯ ಹಿಂದೆ ಬಿದ್ದರೆ ಕಲಾಕಾರ ಬೆಳೆಯೋದಿಲ್ಲ. ಭಾಷೆ ಹೇಳೋಕಾಗದೇ ಇರೋದನ್ನ ಚಿತ್ರ ಹೇಳುತ್ತದೆ. ಎಲ್ಲಿ ಶಬ್ದ ಮುಕ್ತಾಯವಾಗುತ್ತದೋ ಅಲ್ಲಿ ವಿನ್ಯಾಸ ಆರಂಭವಾಗುತ್ತೆ. ವಿನ್ಯಾಸ ಕೊನೆಯಾದಾಗ ಮತ್ತೆ ಶಬ್ದಗಳು ಹುಟ್ಟಿಕೊಳ್ಳುತ್ತವೆ.
ಜಾಗತೀಕರಣದ ಭರಾಟೆಯಲ್ಲಿ ಐಟಿ - ಬಿಟಿ ಕ್ರಾಂತಿಯಾದಾಗ ಕಲಾಕೃತಿಯ ಬೆಲೆ

ಒಮ್ಮೆಲೇ ಗಗನಕ್ಕೇರಿತಲ್ಲ, ಏನಿದರ ಹಕೀಕತ್ತು?
ಕಲಾಕೃತಿಗೆ ಬೆಲೆಯನ್ನು ಕೃತಕವಾಗಿ ಕಟ್ಟಲಾಯಿತು. ಇದರಿಂದ ಕಲಾವಿದನ ಕೃತಿ `ಕೊಳ್ಳುಗ~ನನ್ನು ತಲುಪಿತು. ಇಲ್ಲಿ `ಕೊಳ್ಳುಗ~ ಎಂದರೆ ಹಣವಂತ. ಆ ಕಲೆ ಜನಸಾಮಾನ್ಯನಿಗೆ ತಲುಪಿತೆ, ಕಲೆಯ ಸೌಂದರ್ಯ ಅರ್ಥಮಾಡಿಕೊಳ್ಳುವ ಸಹೃದಯನಿಗೆ ತಲುಪಿತೆ ಎನ್ನುವುದು ಮುಖ್ಯ.

ಕೃತಕವಾಗಿ ಸೃಷ್ಟಿಯಾದದ್ದಕ್ಕೆ ಆಯಸ್ಸೂ ಕಡಿಮೆ. ಈಗ ಎಲ್ಲವೂ ತಣ್ಣಗಾಗಿದೆ. ತಮ್ಮ ಕಲಾಕೃತಿಗೆ ಭಾರೀ ಬೆಲೆ ಸಿಗಬಹುದು ಎಂದು ನಿರೀಕ್ಷಿಸಿ ಬಂಡವಾಳ ತೊಡಗಿಸಿದ್ದ ಕಲಾಕಾರರು ಇಂದು ನಿರಾಶರಾಗಿದ್ದಾರೆ.

ಗ್ರಾಫಿಕ್ ಕಲೆಯ ಭವಿಷ್ಯ ಹೇಗಿದೆ? ಯುವಕರು ಅಷ್ಟಾಗಿ ಈ ಕಲೆಗೆ ಆಕರ್ಷಿತರಾಗುತ್ತಿಲ್ಲ, ಅಲ್ಲವೇ?
ಗ್ರಾಫಿಕ್ ಕಲೆಯ ನೈಪುಣ್ಯಕ್ಕೆ ಬೇಕಾದ ಯಂತ್ರಗಳನ್ನು ಅವರಿಗೆ ಇಟ್ಟುಕೊಳ್ಳಲಾಗುತ್ತಾ ಇಲ್ಲ. ಇಂದು ಎಷ್ಟೋ ಗ್ರಾಫಿಕ್ ಮುದ್ರಣ ಕಲಾವಿದರೂ ಪೇಂಟಿಂಗ್‌ಗೆ ಇಳಿದಿದ್ದಾರೆ. ಭಾರತ ದೇಶದಲ್ಲಿ ಮುದ್ರಣ ಸಂಸ್ಕೃತಿ ಸರಿಯಾಗಿ ಸ್ಥಾಪಿತವಾಗದ ಕಾರಣ ಇನ್ನೂ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಯುರೋಪ್ ದೇಶಗಳಲ್ಲಿ ಹಾಗಾಗಲಿಲ್ಲ.

ಅಲ್ಲಿ 17ನೇ ಶತಮಾನದ್ಲ್ಲಲೇ ಪ್ರಚಲಿತವಿದ್ದ ಗ್ರಾಫಿಕ್ ಮುದ್ರಣ ಕಲೆಯ ಮಾಧ್ಯಮದಲ್ಲಿ ಕಲಾವಿದರು ಹೊಸ ಪ್ರಯೋಗಗಳ ಮೂಲಕ ಅದ್ಭುತ ಕಲಾಕೃತಿಗಳನ್ನು ರಚಿಸಿದರು. ಈಗಲೂ ಯುರೋಪ್ ದೇಶಗಳಲ್ಲಿ ಗ್ರಾಫಿಕ್ ಕಲೆಗೆ ಹೆಚ್ಚಿನ ಮಹತ್ವ ಇದೆ.

ಒಟ್ಟು ದೃಶ್ಯಕಲೆಯ ಮಾಧ್ಯಮದಲ್ಲಿ ವರ್ಣ ಚಿತ್ರಕಲೆ, ಶಿಲ್ಪಕಲೆಯ ಹಾಗೆಯೇ ಗ್ರಾಫಿಕ್ ಚಿತ್ರಕಲೆಯೂ ಒಂದು. ಆದರೆ ವಾಣಿಜ್ಯ ಉದ್ದೇಶದ ಗ್ರಾಫಿಕ್ ಕಲೆ ಕ್ಷಣಿಕವಾದುದು.

ತುಸು ಕ್ಲಿಷ್ಟಕರವಾದ ಗ್ರಾಫಿಕ್ ಕಲೆಯ ಉಳಿವಿಗೆ ಏನಾಗಬೇಕು?
ಗ್ರಾಫಿಕ್ ಕಲೆಯ ಕಾರ್ಯಾಗಾರಗಳು ಹೆಚ್ಚು ನಡೆಯಬೇಕು. ಯುವ ಕಲಾವಿದರಿಗೆ ಸರಿಯಾದ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಗ್ರಾಫಿಕ್ ಮುದ್ರಣ ಕಲೆಯ ಭವಿಷ್ಯವನ್ನು ಉಜ್ವಲವಾಗಿಸಬಹುದು.

ನಾನು ಅಕಾಡೆಮಿ ಅಧ್ಯಕ್ಷನಾಗಿದ್ದಾಗ ಸ್ಟೈಫಂಡ್ ಕೊಡುವ ಯೋಜನೆ ಆರಂಭಿಸಿದ್ದೆ. ಈಗಲೂ ಅದು ನಡೆದುಕೊಂಡು ಬರುತ್ತಿದೆ.

ಕಂಪ್ಯೂಟರ್ ಆವಿಷ್ಕಾರದ ನಂತರ ಚಿತ್ರಕಲೆಯ ಭವಿಷ್ಯ ಹೇಗಿದೆ?
ಇಂದು ಕಲಾವಿದ ಹೊಸ ತಂತ್ರಾಂಶಗಳ ಜತೆ ಮುಖಾಮುಖಿಯಾಗಿದ್ದಾನೆ. ಕ್ಯಾಮೆರಾದ ಅನ್ವೇಷಣೆಯಾದಾಗಲೂ ಚಿತ್ರಕಲಾವಿದ ಆ ತಂತ್ರಗಾರಿಕೆಯನ್ನು ತನ್ನದಾಗಿಸಿಕೊಂಡು ಹೊಸತನ್ನು ಸೃಷ್ಟಿಮಾಡಿದ. ಇಂದು ಕಂಪ್ಯೂಟರ್ ಬಳಸಿಕೊಂಡು ಕಲಾವಿದ ತನ್ನ ದೃಷ್ಟಿಗನುಗುಣವಾಗಿ ಬಣ್ಣ ಆಕಾರಗಳನ್ನು ಸೃಷ್ಟಿಸಿ ಕಲಾಕೃತಿಯನ್ನು ಮೂಡಿಸುತ್ತಾನೆ.

ಅಕಾಡೆಮಿಗಳು ಹಾಗೂ ಸಂಸ್ಕೃತಿ ಇಲಾಖೆ ಚಿತ್ರಕಲೆ ಬಗ್ಗೆ ಮಾಡಬೇಕಾದ ಕೆಲಸ ಕಾರ್ಯಗಳು ಏನು?
ಕಲಾಕೃತಿಯನ್ನು ಮಾರಾಟ ಮಾಡುವ ವ್ಯವಸ್ಥೆಯನ್ನು ಸರ್ಕಾರ ವಹಿಸಿಕೊಳ್ಳುವುದು ಉಚಿತ - ಪುಸ್ತಕ ಪ್ರಾಧಿಕಾರದ ಪುಸ್ತಕ ವ್ಯಾಪಾರದಂತೆ. ಕನ್ನಡ ಭವನ ಹಾಗೂ ಜಿಲ್ಲಾ ರಂಗಮಂದಿರಗಳ ಆವರಣಗಳಲ್ಲಿ ಪುಸ್ತಕ ಪ್ರದರ್ಶನದ ರೀತಿಯಲ್ಲಿ ಚಿತ್ರಕಲಾ ಪ್ರದರ್ಶನಗಳು ಇರಬೇಕು.

ಕತ್ತಲು ಕೋಣೆಗಳಲ್ಲಿ ಚಿತ್ರಗಳನ್ನು ರಕ್ಷಿಸಿಡುವ ಬದಲು ನೋಡುಗನಿಗೆ ಕಾಣುವ ರೀತಿಯಲ್ಲಿ ಚಿತ್ರಗಳನ್ನು ಇಡಬೇಕು. ನೋಡುಗರನ್ನು ಹಾಗೂ ಅದರ ಸರಿಯಾದ ಬೆಲೆ ನಿಗದಿ ಮಾಡಿ ಕೊಳ್ಳುವವರನ್ನು ಬೆಳೆಸುವುದು ಅಕಾಡೆಮಿಗಳಿಗೆ ಮುಖ್ಯ. ಇಂದು ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಹಾಗಾಗಿ ನಗರಗಳಲ್ಲಿ ಮಾತ್ರವಲ್ಲದೆ, ತಾಲ್ಲೂಕು ಜಿಲ್ಲಾಮಟ್ಟದಲ್ಲೂ ಕಲಾಕೃತಿಗಳನ್ನು ಪ್ರದರ್ಶಿಸಿ ಅದಕ್ಕೆ ಒಡೆಯನಾಗುವುದು ಎಷ್ಟು ಮಹತ್ವದ್ದು ಎಂಬುದರ ಕಾರಣಗಳನ್ನು ತಿಳಿಸುವ ಕೆಲಸ ಆಗಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT