ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿಗಾರಿಕೆ, ಫಿಲ್ಟರ್‌ ಮರಳು ದಂಧೆ ಅವ್ಯಾಹತ

ಸಮನ್ವಯ ಕೊರತೆ: ಅಧಿಕಾರಿಗಳಿಗೆ ಉಪಲೋಕಾಯುಕ್ತರಿಂದ ತರಾಟೆ
Last Updated 21 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಲ್ಲು ಹಾಗೂ ಮರಳು ಗಣಿಗಾ­ರಿಕೆಗೆ ಕಡಿವಾಣ ಹಾಕಲು ಜಿಲ್ಲೆಯಲ್ಲಿ ಒಂದೇ ಒಂದು ಚೆಕ್‌ಪೋಸ್ಟ್ ಇಲ್ಲ. ಇದಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡುತ್ತಿಲ್ಲ’ ಎಂದು ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ಕಿಡಿ ಕಾರಿದರು.

ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ದೂರು ಗಳ ವಿಲೇವಾರಿ ಸಂಬಂಧ ಬೆಂಗಳೂರು ಗ್ರಾಮಾಂ­ತರ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಜಿಲ್ಲೆಯಲ್ಲಿ ಈ ವರೆಗೆ ಎಷ್ಟು ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳನ್ನು ನಿಲ್ಲಿಸಲಾಗಿದೆ’ ಎಂಬ ಬಗ್ಗೆ ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರನ್ನು ಪ್ರಶ್ನಿಸಿದರು. ಇದಕ್ಕೆ ಸಮರ್ಪಕ ಉತ್ತರ ನೀಡಲಿಲ್ಲ. ‘ಎರಡು ಪ್ರಕರಣ­ಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಈ ಹಿಂದೆ ನಾನೇ ಸೂಚಿಸಿದ್ದೆ. ಆದರೂ, ನೀವು ಕ್ರಮ ಕೈಗೊಂಡಿಲ್ಲ. ಗ್ರಾಮಾಂತರ ಜಿಲ್ಲೆಯಲ್ಲಿ ಗಣಿಗಾರಿಕೆ ಹಾಗೂ ಭೂ ಕಬಳಿಕೆ ಹೆಚ್ಚುತ್ತಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಗಣಿ ಇಲಾಖೆ, ಲೋಕೋಪಯೋಗಿ, ಸಾರಿಗೆ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯವರು ಸಮನ್ವಯದಿಂದ ಕೆಲಸ ಮಾಡುತ್ತಿಲ್ಲ. ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಾರೆ. ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಮಂಗಲದಲ್ಲಿ ಅಕ್ರಮ ಗಣಿ ಹಾಗೂ ಮರಳು ದಂಧೆ ಚಟುವಟಿಕೆಗಳು ಹೆಚ್ಚಿವೆ. ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಜತೆಗೂಡಿ ಕೆಲಸ ಮಾಡಬೇಕು. ಅಕ್ರಮ ಎಸಗುವವರ ಪರವಾನಗಿಯನ್ನು ರದ್ದುಪಡಿಸಬೇಕು’ ಎಂದು ಅವರು ಸೂಚಿಸಿದರು.

‘ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ಸಾಕಷ್ಟು ಲೋಪಗಳು ಆಗಿವೆ ಎಂಬ ದೂರುಗಳು ಬಂದಿವೆ. ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮ ಎಸಲಾಗುತ್ತಿದೆ. ಒಂದೇ ಕುಟುಂಬದ ಸದಸ್ಯರಿಗೆ ಬೇರೆ ಬೇರೆ ಹೆಸರಿನಲ್ಲಿ ಹಣ ಪಾವತಿ ಮಾಡಲಾಗುತ್ತಿದೆ. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಶೈಲಿಯೂ ಸರಿಯಿಲ್ಲ ಎಂಬ ದೂರು ಇದೆ’ ಎಂದರು.

ಜಿಲ್ಲಾಧಿಕಾರಿ ವಿ.ಶಂಕರ್‌ ಮಾತನಾಡಿ, ‘ಜಿಲ್ಲೆಯಲ್ಲಿ ಮರಳು ನೀತಿಯನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ. ಎಂಟು ಕಡೆಗಳಲ್ಲಿ ತನಿಖಾ ಠಾಣೆಗಳನ್ನು ನಿರ್ಮಿಸಲು ಜಾಗ ಗುರುತಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಮರಳು ದಂಧೆ ಹಾಗೂ ಭೂ ಕಬಳಿಕೆ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ಅಂಗನವಾಡಿಗೆ ಒತ್ತು: ಅಂಗನವಾಡಿ ಶಿಕ್ಷಕರಿಗೆ ಯಾವ ರೀತಿಯ ತರಬೇತಿ ನೀಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರನ್ನು ಅಡಿ ಪ್ರಶ್ನಿಸಿದರು. ‘ಶಿಕ್ಷಕಿಯರಿಗೆ ಪುನಶ್ಚೇತನ, ಉದ್ಯೋಗ ಆಧಾರಿತ ತರಬೇತಿ ನೀಡಲಾಗುತ್ತಿದೆ’ ಎಂದು ಅವರು ಉತ್ತರಿಸಿದರು. ‘ಮಕ್ಕಳಿಗೆ ಸುಟ್ಟ ಗಾಯಗಳು ಆದಾಗ ಪ್ರಥಮ ಚಿಕಿತ್ಸೆ ನೀಡಬೇಕು. ಇದಕ್ಕೆ ಬೇಕಾದ ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳನ್ನು ಅಂಗನವಾಡಿಗಳಲ್ಲಿ ಇಟ್ಟುಕೊಳ್ಳಬೇಕು. ಸ್ಥಳೀಯ ವೈದ್ಯಾಧಿಕಾರಿಯ ದೂರವಾಣಿ ಸಂಖ್ಯೆಯೂ ಅಂಗನವಾಡಿಯಲ್ಲಿರಬೇಕು’ ಎಂದು ಅವರು ಸೂಚಿಸಿದರು.

‘ಡಿಸೆಂಬರ್ 1ರಿಂದ ಸಾರ್ವಜನಿಕ ದೂರುಗಳ ಇತ್ಯರ್ಥ’ : ‘ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಕಾರ್ಯವೈಖರಿ, ಗಣಿಗಾರಿಕೆ, ಭೂ ಒತ್ತುವರಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಲೋಕಾಯುಕ್ತಕ್ಕೆ 235 ದೂರುಗಳು ಬಂದಿವೆ’ ಎಂದು ಸುಭಾಷ್‌ ಬಿ.ಅಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT