ಶುಕ್ರವಾರ, ಮೇ 27, 2022
21 °C

ಜಾಕಿ ಭಾವದೀಟಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಕಿ ಭಾವದೀಟಿ!

ಶಿವರಾಜ್ ಕುಮಾರ್ ಕಣ್ಣಂಚಿನಲ್ಲಿ ನೀರು. ಪಾರ್ವತಮ್ಮನವರ ಮುಖದಲ್ಲಿ ಭಾವತೀವ್ರತೆ. ನಿರ್ದೇಶಕ ಸೂರಿ ಅವರ ಗಂಟಲಲ್ಲಿ ದುಃಖ.

ಶಿವರಾಜ್‌ಕುಮಾರ್ ಚಿತ್ರರಂಗಕ್ಕೆ ಬಂದು 25 ವರ್ಷ. ಅವರ ನಟನೆಯ ನೂರನೇ ಚಿತ್ರ ಈ ವರ್ಷ ಸಿದ್ಧವಾಗುತ್ತಿದೆ. ಗೀತಾ ಅವರನ್ನು ಶಿವರಾಜ್‌ಕುಮಾರ್ ವರಿಸಿ 25 ವರ್ಷ ಸಂದಿವೆ. ಇಂಥ ಸಂದರ್ಭದಲ್ಲೇ ‘ಜಾಕಿ’ ಚಿತ್ರ ನೂರು ದಿನ ಓಡಿದೆ. ಈ ಎಲ್ಲಾ ಸಂಭ್ರಮಗಳೂ ಒಂದೇ ವೇದಿಕೆಯಲ್ಲಿ ಸಂಧಿಸಿದ್ದು ಕಾಕತಾಳೀಯ.ಡಾ. ರಾಜ್ ಕುಟುಂಬದ ಆತ್ಮೀಯ ಕ್ಷಣಗಳನ್ನು ಕಂಡು ‘ಜಾಕಿ’ ಚಿತ್ರದ ನಿರ್ದೇಶಕ ಸೂರಿ  ಗದ್ಗದಿತರಾದರು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟರಾದ ಜಗ್ಗೇಶ್, ಕೋಮಲ್, ದಿಗಂತ್,  ವಿಜಯ್, ಅಜಯ್, ರಾಮ್‌ಕುಮಾರ್, ಶ್ರೀನಗರ ಕಿಟ್ಟಿ, ನಿರ್ದೇಶಕ ಯೋಗರಾಜ ಭಟ್, ರಮೇಶ್ ಅರವಿಂದ್, ಉಪೇಂದ್ರ, ತರುಣ ಚಂದ್ರ, ಬಸಂತಕುಮಾರ್ ಪಾಟೀಲ್, ಮುರುಳಿ, ಯೋಗೇಶ್, ಬರಗೂರು ರಾಮಚಂದ್ರಪ್ಪ, ಶ್ರೀನಾಥ್, ನಟಿಯರಾದ ಸಂಜನಾ, ಜಯಂತಿ ಮೊದಲಾದ ಹಿರಿಯ ಹಾಗೂ ಕಿರಿಯ ಕಲಾವಿದರು ಅಪರೂಪದ ಕ್ಷಣಗಳಿಗೆ ಸಾಕ್ಷಿಯಾದರು. ‘ಜಾಕಿ’ ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬರಿಗೂ ಫಲಕ ಮತ್ತು ಬೆಳ್ಳಿಲೋಟ ನೀಡಿ ಗೌರವಿಸಲಾಯಿತು.‘ಕನ್ನಡ ಚಿತ್ರರಂಗಕ್ಕೆ ರಾಜ್ ಕುಟುಂಬ ಒಂದು ದೊಡ್ಡ ಆಲದಮರ ಇದ್ದಂತೆ. ಈಗಿನ ಪರಿಸ್ಥಿತಿಯಲ್ಲಿ ‘ಜಾಕಿ’ ಚಿತ್ರ 120 ದಿನ ಪ್ರದರ್ಶನ ಕಂಡಿದೆಯೆಂದರೆ ಅದಕ್ಕೆ ವಜ್ರೇಶ್ವರಿ ಸಂಸ್ಥೆಯೇ ಕಾರಣ. ಜನ ರಾಜ್ ಕುಟುಂಬದ ಮೇಲಿಟ್ಟಿರುವ ವಿಶ್ವಾಸವೂ ಕಾರಣ. ಪುನೀತ್, ಯೋಗರಾಜ ಭಟ್, ಸೂರಿ ಹೀಗೆ ಒಂದು ಉತ್ತಮ ತಂಡ ಸೇರಿದಾಗ ಉತ್ತಮ ಚಿತ್ರ ನಿರ್ಮಾಣವಾಗುತ್ತದೆ ಎಂಬುದಕ್ಕೆ ಜಾಕಿ ಉದಾಹರಣೆ’ ಎಂದರು ರಾಕ್‌ಲೈನ್ ವೆಂಕಟೇಶ್.‘ರಾಜ್‌ಕುಮಾರ್ ಖಂಡಿತ ನಮ್ಮನ್ನು ಬಿಟ್ಟು ಹೋಗಿಲ್ಲ. ನಮ್ಮ ನಡುವೆ ಇದ್ದಾರೆ. ಜೊತೆಗೆ ಮೂವರು ಕುಮಾರರನ್ನೂ ನಮಗೆ ಕೊಟ್ಟಿದ್ದಾರೆ. ಅಣ್ಣಾವ್ರ ಕುಟುಂಬ ಇರುವವರೆಗೂ ಇಂಥ ಶತದಿನ ಸಮಾರಂಭ ನಿರಂತರವಾಗಿ ನಡೆಯಲಿ’ ಎಂದು ಹಾರೈಸಿದವರು ನಟ ಉಪೇಂದ್ರ.

ನಟ ರಮೇಶ್ ಅರವಿಂದ್ ಪ್ರಕಾರ ರಾಘವೇಂದ್ರ ರಾಜ್‌ಕುಮಾರ್ ಮುಟ್ಟಿದ್ದೆಲ್ಲ ಚಿನ್ನ. ಪುನೀತ್, ಸೂರಿ ಜೊತೆ ಜಾಕಿ ದೊಡ್ಡ ಹಿಟ್ ಆಗಲು ಹರಿಕೃಷ್ಣ ಅವರೂ ಕಾರಣ ಎಂದ ಅವರು ಎಲ್ಲರೊಳಗೆ ಒಂದಾದರು.ಕೊನೆಯಲ್ಲಿ ನಿರ್ದೇಶಕ ನಾಗಾಭರಣ ರೂಪಿಸಿದ್ದ ಏಳು ನಿಮಿಷಗಳ ಶಿವಣ್ಣ ಅಭಿನಯದ ನೂರು ಚಿತ್ರಗಳ ಸ್ಥಿರ ಚಿತ್ರಗಳನ್ನು ಪ್ರದರ್ಶಿಸಲಾಯಿತು. ನೆರೆದಿದ್ದ ಚಿತ್ರಕುಟುಂಬ ಪದೇಪದೇ ಕಣ್ಣರಳಿಸಲು ಇಂಥ ಸಾಕಷ್ಟು ಕಾರಣಗಳು ಅಲ್ಲಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.