ಪಶ್ಚಿಮ ಘಟ್ಟ: ಅಳಿವಿನಂಚಿನಲ್ಲಿ ಶೇ 10 ಸಸ್ಯ ಪ್ರಭೇದ

7

ಪಶ್ಚಿಮ ಘಟ್ಟ: ಅಳಿವಿನಂಚಿನಲ್ಲಿ ಶೇ 10 ಸಸ್ಯ ಪ್ರಭೇದ

Published:
Updated:

ಮಂಗಳೂರು: ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಸಸ್ಯಗಳಲ್ಲಿ ಶೇ. 10ರಷ್ಟು ಪ್ರಭೇದದ ಸಸ್ಯಗಳು ಅಳಿವಿನಂಚಿನಲ್ಲಿವೆ ಎಂಬ ಆಘಾತಕಾರಿ ಅಂಶ ಇತ್ತೀಚಿನ ಅಧ್ಯಯನದಿಂದ ಬೆಳಕಿಗೆ ಬಂದಿದೆ.`ನವದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬಯೋಟೆಕ್ನಾಲಜಿ ವಿಭಾಗದ (ಡಿಬಿಟಿ) ಪ್ರಾಯೋಜಕತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಪಶ್ಚಿಮ ಘಟ್ಟ ಕಾರ್ಯಪಡೆ ಸಹಕಾರದಲ್ಲಿ ಐದು ವರ್ಷಗಳಿಂದ ನಡೆಸಿದ ಸಂಶೋಧನಾ ಯೋಜನೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.ಪಶ್ಚಿಮ ಘಟ್ಟದಲ್ಲಿ 45 ಸಾವಿರ ಸಸ್ಯ ಪ್ರಭೇದಗಳಿದ್ದು, ಇದರಲ್ಲಿ ಶೇ. 10ರಷ್ಟು ಅಳಿವಿನಂಚಿನಲ್ಲಿ ಸಾಗುತ್ತಿವೆ. ಇದರಲ್ಲಿ ಕೆಲವು ಅತೀ ಅಮೂಲ್ಯವಾದವು ಹಾಗೂ ಬೇರೆಲ್ಲೂ ಕಾಣಸಿಗದವು. ಇದರಿಂದಾಗಿ ಜೀವವೈವಿಧ್ಯ ಸರಪಳಿ ನಾಶವಾಗಿ ಗಂಭೀರ ಪರಿಣಾಮ ಆಗುತ್ತಿದೆ~ ಎಂದು ಶಿರಸಿ ಅರಣ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ, ಪಶ್ಚಿಮ ಘಟ್ಟ ಕಾರ್ಯಪಡೆ ಸದಸ್ಯ ಡಾ. ವಾಸುದೇವ್ `ಪ್ರಜಾವಾಣಿ~ಗೆ ಗುರುವಾರ ತಿಳಿಸಿದರು.`ಪಶ್ಚಿಮ ಘಟ್ಟ ಕಾಡುಗಳಲ್ಲಿ ಎಷ್ಟು ಬಗೆಯ ಸಸ್ಯ ಸಂಪನ್ಮೂಲಗಳಿವೆ. ಅವುಗಳ ಪ್ರಮಾಣ ಎಷ್ಟಿದೆ, ಅವುಗಳು ಎಲ್ಲೆಲ್ಲಿ ಹರಡಿಕೊಂಡಿವೆ. ಅವುಗಳ ಆರೋಗ್ಯ ಹೇಗಿದೆ ಎಂಬುದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು 12 ಮಂದಿ ತಜ್ಞರ ಸಮಿತಿ ಐದು ವರ್ಷಗಳಲ್ಲಿ ಪ್ರಾಥಮಿಕ ದತ್ತಾಂಶ ಸಂಗ್ರಹ ಮಾಡಿದೆ.ಈ ದತ್ತಾಂಶಗಳ ಆಧಾರದಲ್ಲಿ ಪ್ರಭೇದಗಳನ್ನು ಸಂರಕ್ಷಣೆ ಹೇಗೆ ಮಾಡಬಹುದು ಎಂಬ ಬಗ್ಗೆಯೂ ಅಧ್ಯಯನ ಮಾಡಲಾಗಿದೆ. ದೇಶಕ್ಕೆ ಮಾದರಿಯಾಗುವಂತೆ ಸಸ್ಯ ಸಂರಕ್ಷಣೆಯ ಸ್ಥಾನೀಯ ನೀತಿ ರೂಪಿಸುವುದು ಇದರ ಉದ್ದೇಶ~ ಎಂದು ಅವರು ವಿವರಿಸಿದರು.ಕೊಡಸಗ ಎಂದು ಕರೆಯಲ್ಪಡುವ ದುರ್ವಾಸನೆ ಮರ (ಮ್ಯಾಪಿಯಾ ಪೊಟಿಡಾ) ಹೆಚ್ಚು ಅಪಾಯದಲ್ಲಿದೆ. ಶೇ. 40ರಷ್ಟು ಪ್ರಮಾಣ ಈಗಾಗಲೇ ನಾಶವಾಗಿದೆ. ಇದರಲ್ಲಿರುವ ಕ್ಯಾಂಪ್ಟೋಥೀಸಿನ್ ಎಂಬ ರಾಸಾಯನಿಕ ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ಅತ್ಯುತ್ತಮವಾದುದು. ದೊಡ್ಡ ಪ್ರಮಾಣದಲ್ಲಿ ಕಳ್ಳ ಸಾಗಣೆ ಆಗುತ್ತಿದೆ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.`ವಿನಾಶದ ಅಂಚಿನಲ್ಲಿರುವ ಸೀತೆ ಅಶೋಕ ಮರದ ತೊಗಟೆಯನ್ನು 100 ಬಗೆಯ ವಿವಿಧ ಔಷಧಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಪ್ರತಿವರ್ಷ ಐದು ಸಾವಿರ ಟನ್ ತೊಗಟೆಗೆ ಬೇಡಿಕೆ ಇದೆ. ಇದನ್ನು ಕಾಡಿನಿಂದ ಪಡೆಯುತ್ತಿದ್ದೇವೆಯೇ ಹೊರತು ಸಂರಕ್ಷಿಸುವ ಕೆಲಸ ಮಾಡುತ್ತಿಲ್ಲ.ಅಳಿವಿನಂಚಿನಲ್ಲಿರುವ ಮತ್ತೊಂದು ಏಕನಾಯಕನ ಬಳ್ಳಿ (ಸಲೇಶಿಯಾ) ಬೊಜ್ಜು ಕರಗಿಸಲು, ಮಧುಮೇಹಕ್ಕೆ ಔಷಧಿ. ಉತ್ತರ ಕನ್ನಡ, ಉಡುಪಿ ಜಿಲ್ಲೆಯ ಹೆಬ್ರಿ, ಕೊಡಗಿನಲ್ಲಿ ಮಾತ್ರ `ಮರದ ಅರಶಿನ~ ಪ್ರಭೇದ ಕಂಡು ಬರುತ್ತದೆ. ಇದರ ಕಳ್ಳ ಸಾಗಣೆಯೂ ವ್ಯಾಪಕವಾಗಿದೆ. `ದಾಲ್ಚಿನಿ~, `ಸುರಹೊನ್ನೆ~, `ಸರ್ಪಗಂಧ~, `ಮರದ ಅರಶಿನ~ ಸೇರಿದಂತೆ 43 ಸಸ್ಯ ಪ್ರಭೇದಗಳನ್ನು ಗುರುತಿಸಿ ಆದ್ಯತಾ ಪಟ್ಟಿ ತಯಾರಿಸಲಾಗಿದೆ~ ಎಂದು ಅವರು ತಿಳಿಸಿದರು.ಸಂರಕ್ಷಣೆಗೆ ಕಾರಿಡಾರ್: ಹುಲಿ ಕಾರಿಡಾರ್ ಮಾಡಿದಂತೆ ಸಸ್ಯ ಪ್ರಬೇಧಗಳ ಸಂರಕ್ಷಣೆಗೂ ಕಾರಿಡಾರ್ ಅಗತ್ಯ. ವಿಶೇಷ ಕಾನೂನು ರೂಪಿಸಿ ಕೊಲ್ಲೂರು ಕಾಡು, ಆಗುಂಬೆ ಕಾಡು, ಬಿಸಿಲೆ, ಚಾರ್ಮಾಡಿ ಘಾಟಿಯಲ್ಲಿ  ಸಸ್ಯ ಸಂರಕ್ಷಣೆ ಕಾರ್ಯ ಕೈಗೆತ್ತಿಕೊಳ್ಳಬೇಕು. ಪಶ್ಚಿಮ ಘಟ್ಟ ಕಾರ್ಯಪಡೆ ವೈದ್ಯಕೀಯ ಅಮೂಲ್ಯ ಸಸ್ಯಗಳನ್ನು ಗುರುತಿಸಿ ಸಂರಕ್ಷಿತ ಪ್ರದೇಶವನ್ನಾಗಿ ಮಾಡಲು ಮುಂದಾಗಿದೆ~ ಎಂದು ಅವರು ಮಾಹಿತಿ ನೀಡಿದರು.ಸಾಗುವಾನಿಗೆ ಅಗ್ರಪಟ್ಟ

ಪಶ್ಚಿಮ ಘಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮರ ಪ್ರಭೇದದಲ್ಲಿ ಸಾಗುವಾನಿಗೆ ಅಗ್ರಪಟ್ಟ ದೊರಕಿದೆ. ಇದರ ಪ್ರಮಾಣ ಶೇ. 5 ಮಾತ್ರ. ನಂತರದ ಸ್ಥಾನದಲ್ಲಿ ಮತ್ತಿ, ನೇರಳೆ, ಮೆಮಸಿಲೋನ್ ಇವೆ.ಅಗ್ರ 20ರ ಪಟ್ಟಿಯಲ್ಲಿ ಗೇರು, ಸಿಲ್ವರ್ ಓಕ್, ಅಕೇಶಿಯಾ ಇವೆ. ಇವುಗಳ ಪ್ರಮಾಣ ಶೇ. 9ರಷ್ಟಿದೆ. ಇವು ಪಶ್ಚಿಮ ಘಟ್ಟದ ಸ್ಥಾನೀಯ ಪ್ರಭೇದಗಳಲ್ಲ. ನೈಸರ್ಗಿಕ ಮರ ಬಿಟ್ಟು ನಾವು ವಿದೇಶಿ ಮರಗಳತ್ತ ವಾಲುತ್ತಿದ್ದೇವೆ. ಇವುಗಳು ಪರಿಸರ ಸಮತೋಲನದ ಮೇಲೆ ದುಷ್ಪರಿಣಾಮ ಬೀರುತ್ತವೆ~ ಎಂಬುದು ಡಾ. ವಾಸುದೇವ್ ಅವರ ಸ್ಪಷ್ಟ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry