ಶುಕ್ರವಾರ, ಏಪ್ರಿಲ್ 23, 2021
31 °C

ಭಾರತೀಯ ಬೇರು ಜಾಗತಿಕ ಮೇರು

ಬಿ. ಅರವಿಂದ Updated:

ಅಕ್ಷರ ಗಾತ್ರ : | |

ಕರ್ನಾಟಕ ರಾಜ್ಯ ಕಾನೂನು  ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ(2009) ಬಂದು ಎರಡು ವರ್ಷಗಳಾಗಿವೆ. ರಾಜ್ಯದ 92 ಕಾನೂನು ಕಾಲೇಜುಗಳು ಈ ವಿ.ವಿ.ಯ ವ್ಯಾಪ್ತಿಗೆ ಬರುತ್ತವೆ. ಇವುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು. ವಿ.ವಿ.ಯ ಕೇಂದ್ರ ಕಚೇರಿ ಇರುವುದು ಹುಬ್ಬಳ್ಳಿ ಧಾರವಾಡ ಮಧ್ಯದ ‘ನವನಗರ’ದಲ್ಲಿ. ಕ್ಯಾಂಪಸ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ 56 ಎಕರೆ ಭೂಮಿ ನೀಡಿದೆ. ಇನ್ನಷ್ಟು ಭೂಮಿ, ಹಣಕಾಸಿನ ನೆರವು ಹಾಗೂ ಇತರ ಸೌಕರ್ಯಗಳ ಅಗತ್ಯವಿದೆ. ಆದರೆ ಸೌಲಭ್ಯಗಳಿಲ್ಲ ಎಂದು ಗೊಣಗುತ್ತ ಕೂರದೆ  ‘ಮಾಹಿತಿ ತಂತ್ರಜ್ಞಾನ’ದ ಸಾಧ್ಯತೆಗಳನ್ನು ಬಳಸಿಕೊಂಡು ಕಾನೂನು ವಿ.ವಿ.ಯನ್ನು ವಿಶ್ವ ದರ್ಜೆಯ ವಿಶ್ವವಿದ್ಯಾಲಯವನ್ನಾಗಿ ರೂಪಿಸುವ ಕೆಲಸ ದಲ್ಲಿ ತೊಡಗಿದ್ದಾರೆ ಅದರ ಕುಲಪತಿ ಡಾ. ಜಯಪ್ರಕಾಶರೆಡ್ಡಿ ಸಣ್ಣಬಸವನಗೌಡ ಪಾಟೀಲ.‘ನಮ್ಮ ವಿಶ್ವವಿದ್ಯಾಲಯ ಕಾನೂನು ವಿದ್ಯಾರ್ಥಿಗಳನ್ನು ರೂಪಿಸುವುದರ ಜತೆಗೆ ನಮ್ಮ ಸುತ್ತಮುತ್ತಲಿನ ಸಾಮಾಜಿಕ ಅನಿಷ್ಟಗಳನ್ನು ನಿವಾರಿಸಿ ಗ್ರಾಮಗಳ ಉದ್ಧಾರ ಮಾಡುವ ಮೂಲಕ ಜನರ ವಿಶ್ವವಿದ್ಯಾಲಯ ಆಗಬೇಕು; ಆಗಲೇ ಕಾನೂನು ವಿವಿ ಎಂಬ ಹೆಸರು ಅನ್ವರ್ಥವಾಗುತ್ತದೆ ಎಂಬುದು ಜಯಪ್ರಕಾಶರೆಡ್ಡಿ ನಿಲುವು. ಅದಕ್ಕಾಗಿ ಈಗಾಗಲೇ ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಸೇರಿದಂತೆ ಅನೇಕ ಜನಪರ ಸಂಸ್ಥೆಗಳೊಡನೆ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗೆ ಕಾನೂನು ವಿಶ್ವವಿದ್ಯಾಲಯ ವಿಭಿನ್ನ ವಿ ವಿ ಆಗುವ ಪ್ರಯತ್ನದಲ್ಲಿ ದೊಡ್ಡ ಹೆಜ್ಜೆಗಳನ್ನಿಟ್ಟಿದೆ. ಜಯಪ್ರಕಾಶ ರೆಡ್ಡಿ ಅವರು ಕಲಿತದ್ದು ಕಾನೂನು. ಆದರೆ ಯಾರೂ ಊಹಿಸದಂತಹ ‘ಕಂಪ್ಯೂಟರ್ ಸ್ಯಾವಿ’ ವ್ಯಕ್ತಿತ್ವ ಅವರದು. ಅವರು ನಿಜವಾದ ಅರ್ಥದಲ್ಲಿ ಕಂಪ್ಯೂಟರ್ ಟೆಕ್ಕಿ. ಕಾನೂನು ಶಾಸ್ತ್ರದಲ್ಲಿ ಎಷ್ಟು ಆಳವಾದ ಜ್ಞಾನವನ್ನು ಹೊಂದಿದ್ದಾರೋ ಅಷ್ಟೇ ಜ್ಞಾನವನ್ನು ಕಂಪ್ಯೂಟರ್‌ನಲ್ಲೂ ಪಡೆದಿದ್ದಾರೆ. ಕಂಪ್ಯೂಟರ್ ಬಳಸಿಕೊಂಡು ಕಾನೂನಿಗೆ ಸಂಬಂಧಿಸಿದ ಎಲ್ಲವನ್ನೂ ಸೆರೆಹಿಡಿದು ವಿಶ್ವವಿದ್ಯಾಲಯದಲ್ಲಿ ಕಟ್ಟಿಹಾಕಿದ್ದಾರೆ. ಐಟಿ ಸಂಸ್ಥೆಗಳಿಗೆ ಸರಿಸಾಟಿಯಾಗಿ ವಿಶ್ವವಿದ್ಯಾಲಯವನ್ನು ರೂಪಿಸಿದ್ದಾರೆ. ಕಾನೂನು ವಿಶ್ವವಿದ್ಯಾಲಯದ ಕುಲಪತಿ; ಬೌದ್ಧಿಕವಾಗಿ ಮತ್ತು ತಾಂತ್ರಿಕವಾಗಿ ತಮ್ಮದೇ ಆದ ಹಿರಿಮೆ ಹೊಂದಿದವರು ಎಂದ ಮೇಲೆ ಸೂಟು, ಟೈ ಧರಿಸಿ ಟಿಪ್-ಟಾಪ್ ಇರಲೇಬೇಕೆಂಬುದು ಸಾಮಾನ್ಯ ನಿರೀಕ್ಷೆ. ಆದರೆ ಪಾಟೀಲರು ಹೀಗಿಲ್ಲ. ಅವರು ಅಪ್ಪಟ ಗಾಂಧಿವಾದಿ. ಅವರು ಧರಿಸುವುದು ಖಾದಿ ಜುಬ್ಬಾ, ಬಿಳಿಯ ಪೈಜಾಮ ಹಾಗೂ ಗಾಂಧಿ ಟೋಪಿ. ಕೆಲ ನಿರ್ದಿಷ್ಟ ಸಂದರ್ಭಗಳಲ್ಲಿ  ಮಾತ್ರ ಸೂಟ್ ಧರಿಸುತ್ತಾರೆ. ದಿನದ ಹದಿನಾರು ಗಂಟೆಗಳ ಕಾಲ ದುಡಿಯುವ ಪಾಟೀಲರಿಗೆ ವಿಶ್ವ ವಿದ್ಯಾಲಯ ಹಾಗೂ ಗಾಂಧಿ ವಿಚಾರಧಾರೆ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ ಎನ್ನುವಷ್ಟು ದುಡಿಮೆಯಲ್ಲಿ ಮಗ್ನರು. ಬಿಡುವಿಲ್ಲದ ಕೆಲಸಗಳ ನಡುವೆಯೇ ಪಾಟೀಲರೊಂದಿಗೆ ‘ಪ್ರಜಾವಾಣಿ’ ನಡೆಸಿದ ಮಾತುಕತೆ ಸಾರಾಂಶ ಇಲ್ಲಿದೆ.* ಕಾನೂನು ವಿವಿ ಉಳಿದ ವಿ.ವಿ.ಗಳಿಗಿಂತ ಹೇಗೆ ಭಿನ್ನ?

 ನಾವು ಅನೇಕ ವಿಷಯಗಳಲ್ಲಿ ಉಳಿದೆಲ್ಲ ವಿ.ವಿ.ಗಳಿಗಿಂತ  ಭಿನ್ನ. ಪರೀಕ್ಷಾ ಪದ್ಧತಿಯಲ್ಲಿ ಎಲ್ಲರೂ ನಮ್ಮ ಕಡೆ ನೋಡುವಂತಹ ಸಾಧನೆ ಮಾಡಿದ್ದೇವೆ. ಕಂಪ್ಯೂಟರ್ ತಂತ್ರಜ್ಞಾನವನ್ನು ಅತ್ಯಂತ ಸಮರ್ಥವಾಗಿ ಬಳಕೆ ಮಾಡಿಕೊಂಡಿರುವ ವಿಶ್ವವಿದ್ಯಾಲಯ ನಮ್ಮದು. ವಿ. ವಿ. ಆರಂಭವಾದ ಮೇಲೆ ಮೂರು ಸೆಮಿಸ್ಟರ್‌ಗಳು ಮುಗಿದಿವೆ. ಮೂರೂ ಸೆಮಿಸ್ಟರ್ ಫಲಿತಾಂಶವನ್ನು ಕನಿಷ್ಠ ಲೋಪಗಳೂ ಇಲ್ಲದಂತೆ ಅಂತರ್ಜಾಲದಲ್ಲಿ ಪ್ರಕಟಿಸಿದ್ದೇವೆ. ಅದಷ್ಟೇ ಅಲ್ಲ. ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಎಲ್ಲ ವಿವರಗಳೂ ನಮ್ಮ ವೆಬ್‌ಸೈಟ್‌ನಲ್ಲಿ ಲಭ್ಯ.* ಅಂತರ್ಜಾಲದ ಬಗ್ಗೆ ತುಂಬಾ ಒತ್ತು ಕೊಡಲು ಏನು ಕಾರಣ?

 ಹೌದು, ನನ್ನ ಟೇಬಲ್ ಮೇಲಿರುವ ಕಂಪ್ಯೂಟರ್ ಮತ್ತು ಅದರೊಳಗಿನ ತಂತ್ರಾಂಶಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಗೊತ್ತಿದ್ದರೆ ಸಾಕು. ಇಡೀ ವಿಶ್ವವೇ ನಮ್ಮ ಕೈಯಲ್ಲಿರುತ್ತದೆ. ಅಂದರೆ ಜ್ಞಾನವನ್ನು ನಾವು ಅತ್ಯಂತ ಕಡಿಮೆ ಜಾಗ ಬಳಸಿ ಬಳಕೆ ಮಾಡಿಕೊಳ್ಳಬಹುದು. ನಾನು ಕುಲಪತಿಯಾದ ತಕ್ಷಣ ಮಾಡಿದ ಮೊದಲ ಕೆಲಸವೆಂದರೆ ಕಂಪ್ಯೂಟರ್ ಜ್ಞಾನವನ್ನು ಅತ್ಯಂತ ಸಮರ್ಪಕವಾಗಿ ಬಳಕೆ ಮಾಡಿಕೊಂಡದ್ದು. ಆದ್ದರಿಂದಲೇ ಬರೀ ವಿವರಗಳಷ್ಟೇ ಅಲ್ಲ, ಸುಮಾರು ಒಂದು ಲಕ್ಷ ಕಾನೂನು ಪುಸ್ತಕಗಳ ಕಂಪ್ಯೂಟರ್ ಲೈಬ್ರರಿ ಸಿದ್ಧವಾಗಿದೆ. ಬೇರೆಲ್ಲೂ ಇಂಥ ಲೈಬ್ರರಿ ಇಲ್ಲ. ನಮ್ಮ  ಲೈಬ್ರರಿ ಸಂಪೂರ್ಣ ಡಿಜಿಟಲ್ ಎನ್ನುವಾಗ ನನಗೆ ಹೆಮ್ಮೆಯಾಗುತ್ತದೆ.ಹಗಲಿರುಳೂ  ಪರಿಶ್ರಮಪಟ್ಟು ದುಡಿದದ್ದು ನೆಮ್ಮದಿ ತಂದಿದೆ. ಆಡಿಯೋ ಪಠ್ಯ ಪುಸ್ತಕಗಳನ್ನು ಸಿದ್ಧಪಡಿಸಿದ್ದೇವೆ. ಆನ್‌ಲೈನ್ ಕಲಿಕೆ ಮತ್ತು ಪ್ರವಚನವನ್ನು ಅತ್ಯಂತ ಸಮರ್ಪಕವಾಗಿ ನಡೆಸುತ್ತಿದ್ದೇವೆ. ಕಂಪ್ಯೂಟರ್ ನೆರವಿನಿಂದ ಏನೆಲ್ಲ ಮಾಡಬಹುದು ಎಂಬುದಕ್ಕೆ ನಮ್ಮ ವಿಶ್ವವಿದ್ಯಾಲಯ ಇಡೀ ದೇಶಕ್ಕೇ ಮಾದರಿ. ಈ ಐಟಿ ಯುಗದಲ್ಲಿ ನಮ್ಮದು ಅತ್ಯಂತ ಹೈಟೆಕ್ ವಿಶ್ವವಿದ್ಯಾಲಯ.* ರಾಜ್ಯದ ಎಲ್ಲ ಕಾನೂನು ಕಾಲೇಜುಗಳಲ್ಲಿ ಏಕರೂಪ ಪಠ್ಯಕ್ರಮ ಜಾರಿಗೆ ಬಂದಿದೆಯೇ ?

 ಎಸ್. ಹಂಡ್ರೆಡ್ ಪರ್ಸೆಂಟ್. ಎಲ್ಲ ಕಾನೂನು ಕಾಲೇಜುಗಳಲ್ಲಿಯೂ ಏಕರೂಪ ಪಠ್ಯಕ್ರಮ ಜಾರಿಗೆ ಬಂದಿದೆ.

* ಪರೀಕ್ಷಾ ಅಕ್ರಮ ತಡೆಯಲು ಏನು ಕ್ರಮ ಕೈಗೊಂಡಿದ್ದೀರಿ?

 ಪರೀಕ್ಷೆಗೆ ಅರ್ಜಿ ತುಂಬುವಾಗಲೇ ವಿದ್ಯಾರ್ಥಿಯ ಹೆಬ್ಬೆರಳಿನ ಗುರುತು ಪಡೆಯುತ್ತೇವೆ. ನಂತರ ಪರೀಕ್ಷೆಯಲ್ಲಿ ಉತ್ತರ ಬರೆಯುವಾಗ ಉತ್ತರ ಪತ್ರಿಕೆಗಳ ಮೇಲೂ ವಿದ್ಯಾರ್ಥಿಯ ಹೆಬ್ಬೆರಳಿನ ಗುರುತು ಪಡೆದು ಟ್ಯಾಲಿ ಮಾಡುತ್ತೇವೆ. ಜೊತೆಗೆ ಉತ್ತರ ಪತ್ರಿಕೆ ತಪಾಸಣೆ ಮಾಡುವವರಿಗೂ ಕೋಡ್ ಇದೆ. ನಮ್ಮ ಪರೀಕ್ಷಾ ಪದ್ಧತಿಯತ್ತ ಯಾರೂ ಕೈತೋರಿಸುವಂತಿಲ್ಲ. ಹೊಸ ವ್ಯವಸ್ಥೆ ಜಾರಿಗೆ ತಂದ ಮೇಲೆ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಒಬ್ಬರ ಹೆಸರಿನಲ್ಲಿ ಇನ್ನೊಬ್ಬರು ಪರೀಕ್ಷೆ ಬರೆಯುವ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಬಿದ್ದಿದೆ. ಈ ವ್ಯವಸ್ಥೆ ಯಾವ ವಿ.ವಿ.ಯಲ್ಲೂ ಇಲ್ಲ.

* ನಿಮ್ಮ ಹೊಸ ಯೋಜನೆಗಳೇನು ?

 ಎಲ್‌ಎಲ್‌ಎಂ ತರಗತಿಗಳಿಗೆ ಕ್ರಿಮಿನಲ್ ಲಾ ಹಾಗೂ ಇಂಟರ್‌ನ್ಯಾಷನಲ್ ಲಾ ಪಠ್ಯ ಜಾರಿಗೆ ಬರಲಿದೆ.  ಪಿಯುಸಿ ನಂತರದ ವಿದ್ಯಾರ್ಥಿಗಳಿಗಾಗಿ ಸಂಪೂರ್ಣ ಕಾನೂನು ತಿಳಿವಳಿಕೆ ಮೂಡಿಸುವ ಸರಳವಾದ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸುತ್ತೇವೆ. ಈ ಸರ್ಟಿಫಿಕೇಟ್ ಕೋರ್ಸ್‌ಗಳ ಪ್ರಯೋಜನವನ್ನು ಪ್ರತಿಯೊಬ್ಬ ಸಾರ್ವಜನಿಕರೂ ಪಡೆಯಬಹುದು. ನಿತ್ಯ ಬದುಕಿನಲ್ಲಿ ಅಗತ್ಯವಿರುವ ಕಾನೂನುಗಳ ತಿಳಿವಳಿಕೆ ಮೂಡಿಸುವುದು, ಸರ್ವರನ್ನೂ ಕಾನೂನು ಸಾಕ್ಷರರನ್ನಾಗಿ ಮಾಡುವುದು ಈ ಕೋರ್ಸ್‌ಗಳ ಉದ್ದೇಶ.*  ವಿ.ವಿ.ಯ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಹೇಳಿ

 ‘ಭಾರತೀಯ ಬೇರು, ಜಾಗತಿಕ ಮೇರು’ (ಇಂಡಿಯನ್ ರೂಟ್ ಅಂಡ್ ಗ್ಲೋಬಲ್ ಹೈಟ್) ಎಂಬುದು ನಮ್ಮ  ಘೋಷವಾಕ್ಯ. ವಿ.ವಿ.ಯಲ್ಲಿ ನಿತ್ಯ ಬೆಳಿಗ್ಗೆ ರಾಷ್ಟ್ರಗೀತೆ ಹಾಡುತ್ತೇವೆ. ಪ್ರಾರ್ಥನಾ ಸಭೆ ನಡೆಸುತ್ತೇವೆ. ನಾನೂ ಖುದ್ದು ಭಾಗವಹಿಸುತ್ತೇನೆ. ಭಾರತೀಯ ಬೇರಿನಲ್ಲೇ ಖಾದಿ ಇದೆ. ಗಾಂಧೀಜಿ ಇದ್ದಾರೆ. ಖಾದಿ ಅಭಿಯಾನವನ್ನೇ  ನಾವು ಶುರು ಮಾಡಿದ್ದೇನೆ.ವಿ ವಿ.ಯಲ್ಲಿ ಪ್ರತಿ ಸೋಮವಾರ ‘ಖಾದಿ ದಿನ’ ಆಚರಿಸುತ್ತೇವೆ. ಅಂದು ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ  ವಿದ್ಯಾರ್ಥಿಗಳೆಲ್ಲ ಖಾದಿ ಉಡುಪು ಹಾಗೂ ಗಾಂಧಿ ಟೋಪಿ ಧರಿಸುವುದು ಕಡ್ಡಾಯ. ಇದು ಕಡ್ಡಾಯವಾದರೂ ವಿದ್ಯಾರ್ಥಿಗಳು ಅತ್ಯಂತ ಪ್ರೀತಿ ಹಾಗೂ ಅಭಿಮಾನದಿಂದ ಖಾದಿ ಉಡುಪು ಧರಿಸುತ್ತಾರೆ. ಗ್ರಾಮೀಣ ಪ್ರದೇಶದಲ್ಲೂ ಪರಿವರ್ತನೆ ತರುವ ಕೆಲಸಕ್ಕೆ ಕೈಹಾಕಿದ್ದೇವೆ. ಎನ್‌ಎಸ್‌ಎಸ್ ಕಾರ್ಯಕರ್ತರ ಸಹಕಾರದೊಂದಿಗೆ ಗಾಂಧೀಜಿ ಕನಸಿನ ಗ್ರಾಮ ಪರಿವರ್ತನೆ ತರಲು ತೀರ್ಮಾನಿಸಿದ್ದೇವೆ. ಇದರ ಅಂಗವಾಗಿ ಈ ವರ್ಷಗಳಲ್ಲಿ ನಾಲ್ಕು ನೂರು ಗ್ರಾಮಗಳನ್ನು ದತ್ತು ತೆಗೆದು ಕೊಂಡಿದ್ದೇವೆ. ವರದಕ್ಷಿಣೆ, ಮದ್ಯಪಾನ ಮತ್ತಿತರ ಅನಿಷ್ಠಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಜನರಿಗೆ ಗಾಂಧಿ ತತ್ವ ಹಾಗೂ ಖಾದಿ ಮಹತ್ವ ತಿಳಿಸುತ್ತಿದ್ದೇವೆ. ಖಾದಿಗೆ ಉತ್ತೇಜನ  ನೀಡಲು ಈ ವರ್ಷ ಸುಮಾರು 2.5 ಲಕ್ಷ  ಮೀಟರ್ ಖಾದಿಯನ್ನು ನಮ್ಮ ವಿವಿ ಖರೀದಿಸಿದೆ.* ಈ ಚಟುವಟಿಕೆಗಳಿಗೆಲ್ಲ ನಿಮಗೆ ಸಮಯ ಎಲ್ಲಿದೆ?

ಮನಸ್ಸಿದ್ದರೆ ಮಾರ್ಗವಿದೆ. ರಾಜಕೀಯ ಅಪೇಕ್ಷೆಗಳಿಲ್ಲದ ಬದ್ಧತೆ, ಪ್ರೀತಿ ಹಾಗೂ ನೂರಕ್ಕೆ ನೂರರಷ್ಟು ತೊಡಗಿಸಿಕೊಳ್ಳುವ ಮನಸ್ಥಿತಿ ಇದ್ದರೆ ಸಮಯ ತಾನಾಗಿ ಸಿಗುತ್ತದೆ. ನಾನೇ ಮುಂದೆ ನಿಂತು ಈ ಕೆಲಸಗಳನ್ನು ಮಾಡುವುದರಿಂದ ವಿದ್ಯಾರ್ಥಿಗಳಿಗೂ ಪ್ರೇರಣೆ ಸಿಗುತ್ತಿದೆ.*  ನಿಮ್ಮ ದೃಷ್ಟಿಯಲ್ಲಿ ವಿ ವಿ ಕುಲಪತಿ ಹೇಗಿರಬೇಕು?

 ಮೊದಲೇ ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ಯಾವುದೇ ಕುಲಪತಿ ಮೊದಲು ಬೌದ್ಧಿಕ ಮುಖಂಡನಾಗಿರಬೇಕು. ಆಡಳಿತದ ಕೆಲಸಗಳಿಗೆ ತುಂಬಾ ಸಮಯ ಬೇಕಾಗಿಲ್ಲ. ಇದು ನನ್ನ ಖಚಿತ ನಿಲುವು. ಆಡಳಿತಾತ್ಮಕ ಕೆಲಸಗಳು ಆದೇಶಗಳಲ್ಲಿ ಹಾಗೂ ಸ್ವಲ್ಪ ಮಟ್ಟಿನ ಮೇಲ್ವಿಚಾರಣೆಯಲ್ಲಿ ಮುಗಿದು ಹೋಗುತ್ತವೆ. ಆದರೆ ಬೌದ್ಧಿಕ ಕೆಲಸಗಳಿಗೆ ಅಂತ್ಯವೇ ಇಲ್ಲ. ಇಂದಿಗೂ ನಾನು ದಿನಕ್ಕೆ ಎರಡು ತರಗತಿಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳುತ್ತೇನೆ. ವಿ.ವಿ.ಗಳು ಶಿಕ್ಷಣ ಚಟುವಟಿಕೆ ಮೀರಿ ಹೊರಗೆ ಹೋಗುವುದಿಲ್ಲ ಎಂಬ ಮಾತಿದೆ. ನಾವು ಶಿಕ್ಷಣದ ಜೊತೆಗೆ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತ ವಿಶ್ವವಿದ್ಯಾಲಯ ಕಟ್ಟುತ್ತಿದ್ದೇವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.