ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಗಿರಿಯ ತುದಿ ಏರಿ...

Last Updated 11 ಡಿಸೆಂಬರ್ 2012, 13:33 IST
ಅಕ್ಷರ ಗಾತ್ರ

ಇದನ್ನು ಏರಲು ಸಾಧ್ಯವೇ...? ತುಮಕೂರು ಜಿಲ್ಲೆಯಲ್ಲಿರುವ ಮಧುಗಿರಿ ಬೆಟ್ಟವನ್ನು ನೋಡುವಾಗ ಮೊದಲು ಮನದಲಿ ಮೂಡುವ ಪ್ರಶ್ನೆ ಇದು. ಏಷ್ಯಾದ ಎರಡನೇ ಅತಿ ದೊಡ್ಡ ಏಕಶಿಲಾ ಬೆಟ್ಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಬೆಟ್ಟ ಒಡ್ಡುವ ಸವಾಲೇ ಅಂಥದ್ದು. ಈ ಸವಾಲು ಸ್ವೀಕರಿಸುವ ಚಾರಣಿಗರು  ಮಧುಗಿರಿಯ ತುದಿ ಏರಿ ಸಂಭ್ರಮಿಸುತ್ತಾರೆ. `ಗಿರಿ'ಯ ನೆನಪು ಸಹ  `ಮಧು'ವಿನಂತೆ ಸಿಹಿ!

17ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಕೋಟೆ ಈ ದುರ್ಗದ ಇನ್ನೊಂದು ಆಕರ್ಷಣೆ. ಬೆಟ್ಟದಲ್ಲಿ ಅಲ್ಲಲ್ಲಿರುವ ಬುರುಜುಗಳು ಊರಿನ ಸುಂದರ ನೋಟವನ್ನೇ ಕಟ್ಟಿ ಕೊಡುತ್ತದೆ.  ಚಾರಣ ಆರಂಭಗೊಳ್ಳುವುದು ಕೋಟೆಯ ದ್ವಾರ ಪ್ರವೇಶಿಸುವ ಮೂಲಕ. ಸ್ವಲ್ಪ ದೂರದಲ್ಲಿ ದೊಡ್ಡ ಕೆರೆ. ಕೆರೆಯ ಪಕ್ಕದ್ಲ್ಲಲಿರುವ ನೀರಿನ ತೊಟ್ಟಿ, ಮಳೆ ನೀರು ಸಂಗ್ರಹ ಹಾಗೂ ಜಲ ಸಂರಕ್ಷಣೆಯ ಕುರಿತಾಗಿ ಅಂದಿನ ಜನರಿಗಿದ್ದ ಕಾಳಜಿಗೆ ಹಿಡಿದ ಕನ್ನಡಿ. 

ಚಾರಣದ ಮೊದಲ 20 ನಿಮಿಷದ ಹಾದಿ ತುಂಬಾ ಸಲೀಸು. ನಂತರದ ಪ್ರತಿಯೊಂದು ಹೆಜ್ಜೆಯೂ ಕಠಿಣವೇ. ಕಡಿದಾದ ಏರು ಹಾದಿಯಲ್ಲಿ ಆಧಾರಕ್ಕಾಗಿ ಕಬ್ಬಿಣದ ಸರಳುಗಳಿವೆ. ಏದುಸಿರಿನ ಹಾದಿಯಲ್ಲಿ ಮನಸ್ಸು ಸ್ವಲ್ಪ ವಿಶ್ರಾಂತಿ ಬಯಸುತ್ತದೆ.  ಚೀಲದಲ್ಲಿದ್ದ ನೀರು, ಕುರುಕಲು ತಿಂಡಿಗಳು ಆಯಾಚಿತವಾಗಿ ಹೊರ ಇಣುಕುತ್ತವೆ. ಬಂದ ದಾರಿಯತ್ತ ತಿರುಗಿದರೆ ಆಳ ಪ್ರಪಾತ... ತಲೆ ಸುತ್ತಿದ ಅನುಭವ...

ಕಠಿಣ ಹಾದಿ
ಎದುರು ಕಾಣುತ್ತಿರುವ ಬುರುಜೇ ಬೆಟ್ಟದ ತುದಿ ಎಂದು ಕಾಲುಗಳಿಗೆ ಉತ್ಸಾಹ. ಆದರೆ, ಅಲ್ಲಿಗೆ ತಲುಪಿದಾಗ ಏರಿದಷ್ಟೇ ದೂರ ಮುಂದಕ್ಕೂ ಇದೆ ಎಂಬ ಸತ್ಯ ಅರಿತು ಹೆಜ್ಜೆಗಳು ನಿಧಾನವಾಗುತ್ತವೆ..  ಮುಂದಿನ ಹಾದಿ ಮತ್ತೂ ಕಠಿಣ. ಅಲ್ಲಿ ಕಂಬಿಗಳ ನೆರವಿಲ್ಲ. ಉರಿ ಬಿಸಿಲು ಆರೋಹಣವನ್ನು ಇನ್ನಷ್ಟು ಕಷ್ಟಗೊಳಿಸುತ್ತದೆ.

ಎರಡು ಗಂಟೆಗಳ ಚಾರಣದ ನಂತರ ತುತ್ತ ತುದಿಯಲ್ಲಿ ಕಲ್ಲಿನ ಕಟ್ಟಡ ಕಾಣುತ್ತದೆ. ಹಿಂದೆ ಅದು ಗೋಪಾಲಕೃಷ್ಣ ದೇವಾಲಯ ಆಗಿತ್ತಂತೆ. ಈಗ ಅಲ್ಲಿ ದೇವಾಲಯದ ಯಾವ ಕುರುಹೂ ಇಲ್ಲ, ಪಾಳು ಬಿದ್ದಿದೆ. ಅದರ ಹಿಂಭಾಗದಲ್ಲಿ ಕುದುರೆ ಲಾಯವಿದೆ. ಸೂಕ್ತ ನಿರ್ವಹಣೆಯ ಕೊರತೆಯಿಂದ ಲಯವಾಗಿದೆ!
ಸಮುದ್ರ ಮಟ್ಟದಿಂದ 3985 ಅಡಿಗಳಷ್ಟು (ಸುಮಾರು 1193 ಮೀಟರ್) ಎತ್ತರದಿಂದ ಸುತ್ತಲೂ ಕಣ್ಣುಹಾಯಿಸಿದಾಗ ಕಾಣುವುದು ಬೆಟ್ಟದ ಸಾಲುಗಳು, ಮಧುಗಿರಿ ಪಟ್ಟಣದ ಪೂರ್ಣ ನೋಟ, ಹಸಿರು ಹೊದ್ದ ಭೂರಮೆ.  ವೇಗವಾಗಿ ಬೀಸುವ  ತಂಗಾಳಿ, ಈ ದೃಶ್ಯಕಾವ್ಯಕ್ಕೆ  ಏರು ಹಾದಿಯ ದಣಿವು ಮಾಯ! ಇಳಿಯುವ ಹಾದಿ ಹತ್ತುವಷ್ಟು ಸಮಯವನ್ನು ತೆಗೆದುಕೊಳ್ಳದಿದ್ದರೂ, ಎಚ್ಚರಿಕೆ ಅಗತ್ಯ. 45ರಿಂದ 60 ನಿಮಿಷಗಳಲ್ಲಿ  ಬೆಟ್ಟದ ತಳವನ್ನು ತಲುಪಬಹುದು.

ಕೋಟೆಯ ಇತಿಹಾಸ
ಕೋಟೆ ನಿರ್ಮಿಸಿದ ಕೀರ್ತಿ ಸ್ಥಳೀಯ ಪಾಳೇಗಾರರಾಗಿದ್ದ ರಾಜಾ ಹೀರೇಗೌಡ ಅವರಿಗೆ ಸಲ್ಲುತ್ತದೆ. 1670ರ ಸುಮಾರಿನಲ್ಲಿ ಮಣ್ಣಿನಿಂದ ಈ ಕೋಟೆಯನ್ನು ನಿರ್ಮಿಸಲಾಗಿತ್ತು. ನಂತರದಲ್ಲಿ ಹೈದರ್ ಅಲಿ, ಟಿಪ್ಪು ಸುಲ್ತಾನ್ ಹಾಗೂ ಮೈಸೂರು ಅರಸರ ಆಳ್ವಿಕೆಯಲ್ಲಿ ಕೋಟೆ ಪುನರುಜ್ಜೀವನಗೊಂಡಿತು. ಬೆಟ್ಟದ ತಳದಲ್ಲಿ ನಾಲ್ಕು ಗುಹೆಗಳಿವೆ. ಭೀಮನ ದೊಣೆ, ನವಿಲು ದೊಣೆ ಎಂಬ ಎರಡು ಕೆರೆಗಳೂ ಇಲ್ಲಿವೆ ಎಂದು ಹೇಳುತ್ತದೆ ಇತಿಹಾಸ.

ನಿರ್ವಹಣೆ ಕೊರತೆ
ಬೆಟ್ಟ ಹಾಗೂ ಕೋಟೆಯು ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ಕೋಟೆ ಪ್ರವೇಶಿಸುವರೆಗಿನ ದಾರಿ ಉತ್ತಮವಾಗಿದ್ದರೂ, ನಂತರ ಚೆನ್ನಾಗಿಲ್ಲ. ಬಂಡೆಗಳಲ್ಲಿ ಸರಿಯಾಗಿ ಮೆಟ್ಟಿಲು ಕೊರೆದಿಲ್ಲ. ಕೋಟೆಯ ಗೋಡೆಗಳಲ್ಲಿ, ಬಂಡೆಗಳಲ್ಲಿ ಕಂಡು ಬರುವ ಅಶ್ಲೀಲ ಬರಹಗಳು ಸೌಂದರ್ಯ ಹಾಳುಗೆಡಹಿವೆ.

ಮಧುಗಿರಿ ಇಲ್ಲಿದೆ..
ತುಮಕೂರಿನಿಂದ 43 ಕಿ.ಮೀ ದೂರ. ಬೆಂಗಳೂರಿನಿಂದ 107 ಕಿ.ಮೀ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬರುವ ಡಾಬಸ್‌ಪೇಟೆಯಿಂದ ಕೊರಟಗೆರೆ ಮಾರ್ಗವಾಗಿ ಮಧುಗಿರಿಗೆ ತಲುಪಬಹುದು. (ಕೊರಟಗೆರೆ- ಪಾವಗಡದ ಮಧ್ಯೆ ಇದೆ. ಕೊರಟಗೆರೆಯಿಂದ 18 ಕಿ.ಮೀ.).

ಚಳಿಗಾಲ ಸೂಕ್ತ
ಮಳೆಗಾಲದಲ್ಲಿ ಬಂಡೆ ಜಾರುವ ಸಂಭವ ಇರುವುದರಿಂದ ಚಾರಣ ಅಪಾಯಕಾರಿ. ಕಡು ಬೇಸಿಗೆಯಲ್ಲೂ ಬೇಡ. ಆದುದರಿಂದ ಚಳಿಗಾಲವೇ ಚಾರಣಕ್ಕೆ ಸೂಕ್ತ. ಬೆಳಿಗ್ಗೆ ಬೇಗ ಚಾರಣ ಆರಂಭಿಸುವುದು ಉತ್ತಮ.  

ಬಿಸಿಲಿನಿಂದ ಚರ್ಮ, ದೇಹವನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ವಸ್ತುಗಳು ಚೀಲದಲ್ಲಿರಲಿ. ಸಾಕಷ್ಟು ನೀರು,  ಲಘು ಉಪಾಹಾರವನ್ನು ಹೊತ್ತೊಯ್ಯುವುದು ಉತ್ತಮ. ತಲೆಸುತ್ತು ಬರುವವರು/ಆಕ್ರೋಫೋಬಿಯಾದಿಂದ ಬಳಲುತ್ತಿರುವವರು ಸಾಹಸದಿಂದ ದೂರ ಇರುವುದು ಒಳ್ಳೆಯದು. ಹೆಚ್ಚು ಹಿಡಿತ (ಗ್ರಿಪ್) ಇರುವ ಶೂ ಧರಿಸುವುದು ಸುರಕ್ಷಿತ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT