ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಅಧಿಕಾರಿ-ಜಿಲ್ಲಾಡಳಿತ-ಸಂಸದರ ಸಭೆಯಲ್ಲಿ ಚರ್ಚೆ.ರೈಲ್ವೆ ವಿಭಾಗವಾಗಿ ಮಂಗಳೂರು: ಒತ್ತಡ

Last Updated 18 ಫೆಬ್ರುವರಿ 2011, 9:20 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ರೈಲ್ವೆ, ಕೊಂಕಣ ರೈಲ್ವೆ ಹಾಗೂ ನೈಋತ್ಯ ರೈಲ್ವೆ ವಲಯಗಳಲ್ಲಿ ಹರಿದು ಹಂಚಿಹೋಗಿರುವ ಮಂಗಳೂರು ಹಾಗೂ ಸುತ್ತಲಿನ ಪ್ರದೇಶವನ್ನು ಒಂದುಗೂಡಿಸಿ ಪ್ರತ್ಯೇಕ ಮಂಗಳೂರು ರೈಲ್ವೆ ವಿಭಾಗವನ್ನಾಗಿ ಘೋಷಿಸಲು ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಗುರುವಾರ ನಡೆದ ಜಿಲ್ಲಾಡಳಿತದ ಸಭೆಯಲ್ಲಿ ಒಕ್ಕೊರಲನಿಂದ ಒತ್ತಾಯಿಸಲಾಗಿದ್ದು ಈ ಸಂಬಂಧ ಮುಂಬರುವ ದಿನಗಳಲ್ಲಿ ಆಡಳಿತಾತ್ಮಕ ಸಂಘರ್ಷಕ್ಕೂ ವೇದಿಕೆ ಸಿದ್ಧವಾದಂತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈಲ್ವೆ ಸಂಬಂಧಿ ಸಮಸ್ಯೆಗಳ ಪರಿಹಾರಕ್ಕಾಗಿ ಇಲ್ಲಿಯ ಸರ್ಕಾರಿ ಅತಿಥಿಗೃಹದಲ್ಲಿ ದಕ್ಷಿಣ ರೈಲ್ವೆ ಪಾಲಘಾಟ್ ವಿಭಾಗದ ಹಿರಿಯ ಅಧಿಕಾರಿಗಳು, ಸಂಸದ ನಳಿನ್‌ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಸುಭೋದ್ ಯಾದವ್, ಮಹಾನಗರ ಪಾಲಿಕೆ ಆಯುಕ್ತ ಕೆ.ಎನ್.ವಿಜಯಪ್ರಕಾಶ್, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಸಲಾಗಿದ್ದು ಹಲವು ಪ್ರಕರಣಗಳಲ್ಲಿ ಪರಸ್ಪರ ಬಿಸಿ ಚರ್ಚೆ-ವಾಗ್ವಾದ ನಡೆಯಿತು.

ಬೈಕಂಪಾಡಿಯ ಹಳೆಯ ರೈಲ್ವೆ ಸೇತುವೆ ಶಿಥಿಲಗೊಂಡಿದ್ದು ಇದರ ನಿರ್ವಹಣೆ ಯಾರು ನಡೆಸಬೇಕು ಎಂಬುದರ ಕುರಿತು ಸುಧೀರ್ಘ ಚರ್ಚೆ ನಡೆದು ರೈಲ್ವೆ ಅಧಿಕಾರಿಗಳು, ಎನ್‌ಎಂಪಿಟಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪರಸ್ಪರ ದೋಷಾರೋಪಣೆ ಮಾಡಿದಾಗ ಸಮಸ್ಯೆಗೆ ಯಾರಿಂದಲೂ ಪರಿಹಾರ ಸಿಗಲಿಲ್ಲ. ಈ ವಿಷಯದ ಕುರಿತು ಕೊನೆಗೆ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೇ ಇದರ ಜವಾಬ್ದಾರಿ ತೆಗೆದುಕೊಳ್ಳಲು ಸೂಚಿಸಿದಾಗ ಸಭೆಯಲ್ಲಿ ಸಹಮತ ವ್ಯಕ್ತವಾಯಿತು.

ನಗರದ ಅಡ್ಯಾರು ಬಳಿ ರೈಲ್ವೆ ಗೇಟ್ ಇಲ್ಲದ ಕಾರಣ ಈಗಾಗಲೆ 7 ಜನ ಜೀವ ಕಳೆದುಕೊಂಡಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ಅಲ್ಲಿಯ ನಿವಾಸಿಗಳು ಸಭೆಯಲ್ಲಿ ಒತ್ತಾಯಿಸಿದಾಗ ತಾಂತ್ರಿಕ ಸಮಸ್ಯೆಗಳ ಕಾರಣಗಳನ್ನು ಅಧಿಕಾರಿಗಳು ಮುಂದಿಟ್ಟರು. ಪ್ರತಿಯೊಂದು ಸಮಸ್ಯೆಗೂ ರೈಲ್ವೆ ಅಧಿಕಾರಿಗಳು ತಾಂತ್ರಿಕ ಕಾರಣ ಮುಂದಿಡುವ ಮೂಲಕ ಈ ಭಾಗವನ್ನು ಅಲಕ್ಷಿಸುವುದರ ವಿರುದ್ಧ ಸಹನೆ ಕಳೆದುಕೊಂಡ ಸಂಸದ ನಳಿನ್‌ಕುಮಾರ್ ಕಟೀಲ್, ‘ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ಮೇಲೆಯೇ ನೀವು ಇಲ್ಲಿಂದ ಹೊರಡಿ, ಅಲ್ಲಿಯತನಕ ನೀವು ಹೋಗುವಂತಿಲ್ಲ’ ಎಂದು ಪಾಲಘಾಟ್ ವಿಭಾಗದ ರೈಲ್ವೆ ವ್ಯವಸ್ಥಾಪಕ ಎಸ್.ಕೆ. ರೈನಾ ಅವರನ್ನು ತರಾಟೆಗೆ ತೆಗೆದುಕೊಂಡರು.

ನಗರದ ಮಹಾಕಾಳಿಪಡ್ಪು ನಿವಾಸಿಗಳಿಗೆ ಒಳಚರಂಡಿ ನಿರ್ಮಿಸಲು ರೈಲ್ವೆ ಹಳಿ ಪಕ್ಕದ ರಸ್ತೆ ಅಡ್ಡಿಯಾಗಿದ್ದು ಈ ಬಗ್ಗೆ ಹಲವು ಸಲ ಮನವಿ ಮಾಡಿಕೊಂಡರು ಅನುಮತಿ ನೀಡಲಾಗುತ್ತಿಲ್ಲ ಎಂದು ಪಾಲಿಕೆ ಅಧಿಕಾರಿಗಳು ರೈಲ್ವೆ ಅಧಿಕಾರಿಗಳನ್ನು ಕೆಣಕಿದರು. ನೀವು ಮಾಡಬೇಕಾದ ಕಾಮಗಾರಿ ವಿವರವೇ ನಮಗೆ ತಲುಪಿಲ್ಲ, ಅನುಮತಿ ನೀಡುವುದಾದರೂ ಹೇಗೆ ಎಂದು ರೈಲ್ವೆ ಅಧಿಕಾರಿಗಳು ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಹಂತದಲ್ಲಿ ಪರಸ್ಪರ ದೋಷಾರೋಪಣೆ, ವಾಗ್ವಾದ ನಡೆದು ಸಭೆಯಲ್ಲಿ ಕೆಲಹೊತ್ತು ಗೊಂದಲ ನಿರ್ಮಾಣವಾಯಿತು.

ಇತ್ತೀಚಿನ ದಿನಗಳಲ್ಲಿ ಮಂಗಳೂರಿನ ಪ್ರಯಾಣಿಕರಿಗೆ ಮೀಸಲಾದ ಸೀಟುಗಳ ಸಂಖ್ಯೆಯಲ್ಲಿ ಕಡಿತವಾಗಿದ್ದು ಈ ಅಸಮಾನತೆ ಸರಿಯಾಗಬೇಕು ಎಂದು ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಒತ್ತಾಯಿಸಿದಾಗ, ಬರಿ ಆರೋಪ ಮಾಡುವುದು ಸರಿಯಲ್ಲ, ನಿರ್ಧಿಷ್ಟ ಮಾಹಿತಿ ನೀಡಿದರೆ ನಾವು ಈ ವಿಷಯವನ್ನು ರೈಲ್ವೆ ಸಚಿವಾಲಯದ ಗಮನಕ್ಕೆ ತರುತ್ತೇವೆ ಎಂದು ಎಸ್.ಕೆ.ರೈನಾ ಸಮಜಾಯಿಷಿ ನೀಡಿದರು.

ಕಂಕನಾಡಿಯಿಂದ ಸುರತ್ಕಲ್‌ವರೆಗೆ ರೈಲು ಹಳಿ ವಿಸ್ತರಣೆ ಕಾಮಗಾರಿಗೆ ಪೂರ್ವಭಾವಿಯಾಗಿ ಈಗಾಗಲೆ ಪಣಂಬೂರು ಭಾಗದಲ್ಲಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ರೂ. 150 ಕೋಟಿ ಮೀಸಲಿಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದರು.ಸಭೆಯ ನಂತರ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಸ್ಥಳೀಯ ರೈಲ್ವೆ ಸಮಸ್ಯೆಗಳಿಗೆ ಪೂರ್ಣ ಪರಿಹಾರ ಸಿಗುವಂತಾಗಲು ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಆಗಬೇಕಿದ್ದು ಈ ದಿಸೆಯಲ್ಲಿ ಅಗತ್ಯ ಸಂಘರ್ಷಕ್ಕೆ ವೇದಿಕೆ ಸಿದ್ಧಮಾಡಲಾಗಿದೆ ಎಂದರು.

ರೈಲ್ವೆ ಕೆಳ, ಮೇಲು ಸೇತುವೆ, ಲೆವೆಲ್ ಕ್ರಾಸಿಂಗ್ ಮತ್ತಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಅರ್ಥಪೂರ್ಣ ಚರ್ಚೆ ನಡೆದಿದ್ದು ಮತ್ತೆ ಈ ಕುರಿತು ಇದೇ 26ಕ್ಕೆ ಸಭೆ ಕರೆಯಲಾಗಿದೆ. ಕೊಂಕಣ ಹಾಗೂ ನೈಋತ್ಯ ರೈಲ್ವೆ ಅಧಿಕಾರಿಗಳೂ ಈ ಸಭೆಗೆ ಬರಬೇಕಿತ್ತು. ಆದರೆ ಮುಂದಿನ ಸಭೆಯಲ್ಲಿ ಪಾಲ್ಗೊಳ್ಳಬಹುದು ಎಂದರು.
ಮಹಾನಗರ ಪಾಲಿಕೆ ಆಯುಕ್ತ ವಿಜಯಪ್ರಕಾಶ್, ಮೇಯರ್ ರಜನಿ ದುಗ್ಗಣ್ಣ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ಪಿ.ಎನ್. ಗವಸಾನೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಕರ ಪ್ರಭು ಮತ್ತಿತರರು ಇದ್ದರು.

ಕಾರವಾರಕ್ಕೆ ವಿಸ್ತರಣೆಗೆ ವಿರೋಧ
ಯಶವಂತಪುರ ಮಂಗಳೂರು ರೈಲನ್ನು ಕಾರವಾರವರೆಗೆ ವಿಸ್ತರಣೆ ಮಾಡಬೇಕು ಎನ್ನುವ ಬೇಡಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ನಳಿನ್, ‘ನನ್ನ ಪ್ರಕಾರ ಈ ರೈಲು ಮಂಗಳೂರಿನವರೆಗೆ ಮಾತ್ರ ಇರಲಿ. ಬೇಕಾದರೆ ಕಾರವಾರಕ್ಕೆ ಪ್ರತ್ಯೇಕ ರೈಲು ಓಡಿಸಲಿ. ಈಗಿರುವ ರೈಲನ್ನೆ ಕಾರವಾರಕ್ಕೆ ವಿಸ್ತರಿಸಿದರೆ ಸ್ಥಳೀಯರಿಗೆ ತೊಂದರೆಯಾಗಲಿದೆ’ ಎಂದರು.

ಸದರಿ ರೈಲು ವಿಸ್ತರಣೆಯಿಂದ ದಕ್ಷಿಣ ಕನ್ನಡದ ಪ್ರಯಾಣಿಕರಿಗೆ ಅನ್ಯಾಯ ಮಾಡಿದಂತಾಗುತ್ತದೆ, ಕಾರವಾರದಿಂದ ಮಂಗಳೂರಿಗೆ ಬರುವ ವೇಳೆಗೆ ಸ್ಥಳೀಯ ಪ್ರಯಾಣಿಕರಿಗೆ ಅಗತ್ಯ ಆಸನಗಳು ಸಿಕ್ಕುವುದಿಲ್ಲ ಎಂದು ಮಂಗಳೂರು ರೈಲ್ವೆ ಹೋರಾಟ ಸಮಿತಿ ಸಂಚಾಲಕ ಪಿ.ವಿ. ಮೋಹನ್ ಪ್ರತ್ಯೆಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಶವಂತಪುರ ಮಂಗಳೂರು ರೈಲನ್ನು ಕಾರವಾರವರೆಗೆ ವಿಸ್ತರಿಸಲು ಆಗ್ರಹಿಸಿ ಇತ್ತೀಚೆಗೆ ಉಡುಪಿಯಲ್ಲಿ ರೈಲು ರೋಕೋ ಚಳವಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT