ಶುಕ್ರವಾರ, ಮೇ 27, 2022
21 °C

ಸ್ಲಂನಲ್ಲಿ ಅರಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಲಂನಲ್ಲಿ ಅರಸಿ

‘ಅವಳು ಸ್ಲಂ ಹುಡುಗಿ, ಶ್ರೀಮಂತರು ಬಳಸಿ ಬಿಟ್ಟ ವಸ್ತುಗಳ ಒಡತಿ, ಶ್ರೀಮಂತ ಹುಡುಗಿಯ ಸ್ನೇಹ ಮಾಡಿ, ಶ್ರೀಮಂತಳಾಗುವ ಹಂತ ತಲುಪುವ ಈ ಹುಡುಗಿಯ ಕತೆಯೊಂದಿಗೆ ಬಡತನ, ಸ್ಲಂ ಬದುಕು, ಮಕ್ಕಳ ಮುಗ್ಧ ಮನಸು ತೆರೆದುಕೊಳ್ಳುತ್ತದೆ’. ನಿರ್ದೇಶಕ ಅರವಿಂದ್ ಕೌಶಿಕ್ ತಮ್ಮ ‘ಅರಸಿ’ ಧಾರಾವಾಹಿಯನ್ನು ಬಣ್ಣಿಸುವುದು ಹೀಗೆ.ಝೀ ಕನ್ನಡ ವಾಹಿನಿಗಾಗಿ ‘ಅರಸಿ’ ಧಾರಾವಾಹಿ ನಿರ್ದೇಶಿಸುತ್ತಿರುವ ಅವರು, ಶೀರ್ಷಿಕೆ ಗೀತೆಯಂತೆ ‘ತುಂಬಾ ಕಣ್ತುಂಬಾ ಹೊಸದೊಂದು ಹುಡುಕಾಟ’ ಧಾರಾವಾಹಿಯುದ್ದಕ್ಕೂ ಇರಲಿದೆ ಎಂದರು. ‘ನಮ್ ಏರಿಯಾಲ್ ಒಂದಿನ’, ‘ತುಘಲಕ್’ ಸಿನಿಮಾ ನಿರ್ದೇಶಿಸಿದ್ದ ಅವರಿಗೆ ಇದು ಮೂರನೇ ಸಿನಿಮಾ ನಿರ್ದೇಶಿಸಿದಂಥ ಅನುಭವ ನೀಡುತ್ತಿದೆಯಂತೆ.ಸಿನಿಮಾಗಳಲ್ಲಿ ಪುರುಷ ಪ್ರಧಾನ್ಯ ಚಿತ್ರಣ ತೋರಿಸಿದ್ದ ಅವರು ಧಾರಾವಾಹಿಯ ಮೂಲಕ ಹೆಣ್ಣುಮಕ್ಕಳ ಕತೆಯನ್ನು ನಿರ್ದೇಶಿಸುವ ಸವಾಲನ್ನು ಸ್ವೀಕರಿಸಿದ್ದಾರೆ. ನೋವಿನ ನಡುವಿನ ಸಂತೋಷದ ಹುಡುಕಾಟ ಈ ಧಾರಾವಾಹಿಯಲ್ಲಿ ಕಾಣಲಿದೆ ಎನ್ನುವ ಅರವಿಂದ್ ಇನ್ನು ಎರಡು ವರ್ಷ ಸಿನಿಮಾ ಬಗ್ಗೆ ಯೋಚಿಸದೇ ಈ ಧಾರಾವಾಹಿಗೆ ಬದ್ಧರಾಗುವ ಭರವಸೆಯನ್ನು ಚಾನಲ್‌ನವರಿಗೆ ನೀಡಿದ್ದಾರಂತೆ.

ನಿರ್ಮಾಪಕ ಗಣಪತಿ ಭಟ್ ಅವರಿಗೆ ತಾಂತ್ರಿಕತೆ ಮತ್ತು ಭಾವನೆಗಳ ಮಿಶ್ರಣವೇ ತಮ್ಮ ಈ ಧಾರಾವಾಹಿ ಎನಿಸಿದೆ.ರಂಗಭೂಮಿ ನಂಟಿರುವ ಕಲಾವಿದ ರಾಘು ಅವರಿಗೆ ಈ ಧಾರಾವಾಹಿಯಲ್ಲಿ ದೊರಕಿರುವ ಪಾತ್ರ ಸಂತೋಷ ನೀಡಿದ್ದು, ನಟಿಸಲು ಅವಕಾಶ ಇರುವ ತಮ್ಮ ಪಾತ್ರವನ್ನು ಮೆಚ್ಚಿಕೊಂಡು, ನಟ ಯಾವಾಗಲೂ ನಿರ್ದೇಶಕರಿಗೆ ಶರಣಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.ಸುವರ್ಣ ವಾಹಿನಿಯಲ್ಲಿ ಬರುತ್ತಿರುವ ‘ಲಕುಮಿ’ ಧಾರಾವಾಹಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಮಾತುಗಳನ್ನು ಆಡಿದ ತಂಡ, ತಮ್ಮ ಸಂಶೋಧನಾ ತಂಡ ಕೈಗೊಂಡ ಚರ್ಚೆ ಮತ್ತು ಸಲಹೆ ಮೇರೆಗೆ ಕಾರ್ಯಕ್ರಮ ರೂಪುಗೊಳ್ಳುತ್ತದೆ ಎಂದಿತು.ಬೇಬಿ ಪ್ರಗತಿ, ಸಾನಿಯಾ ಅಯ್ಯರ್, ರೇಣುಕಾ, ರಘು ಶಿವಮೊಗ್ಗ, ಮಧುಶ್ರೀ, ಮಾಸ್ಟರ್ ಚಕ್ರವರ್ತಿ, ಮಾ.ವಿನಯ್, ಮೋಹನ್ ಜನೇಜಾ, ಮುನ್ನಾ ಮುಂತಾದವರು ನಟಿಸಿದ್ದಾರೆ.ಧಾರಾವಾಹಿ ಫೆ.7ರಿಂದ ರಾತ್ರಿ 7.30ಕ್ಕೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರ ಕಾಣಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.