ಗುರುವಾರ , ಮೇ 26, 2022
23 °C

ಹಿಂಸೆಗೆ ತಿರುಗಿದ ವಿಧಾನಸಭೆ ಚಲೋ ರ್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂಸೆಗೆ ತಿರುಗಿದ ವಿಧಾನಸಭೆ ಚಲೋ ರ್ಯಾಲಿ

ಹೈದರಾಬಾದ್ (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯ ಬೇಡಿಕೆಗೆ ಬೆಂಬಲ ಸೂಚಿಸಿ ತೆಲಂಗಾಣ ವಿದ್ಯಾರ್ಥಿ ಜಂಟಿ ಕ್ರಿಯಾ ಸಮಿತಿ ಸೋಮವಾರ ನಡೆಸಿದ ‘ವಿಧಾನಸಭೆ ಚಲೋ’ ರ್ಯಾಲಿ ಸಂದರ್ಭದಲ್ಲಿ ನಗರದ ಕೆಲವೆಡೆ ಹಿಂಸಾಚಾರ ಉಂಟಾಯಿತು.ನಿಜಾಂ ಕಾಲೇಜು ವಿದ್ಯಾರ್ಥಿನಿಲಯವಿರುವ ಬಷೀರ್‌ಬಾಗ್ ಪ್ರದೇಶ ಮತ್ತು ಆದಿಕಮೆಟ್‌ನಲ್ಲಿ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ ವಿದ್ಯಾರ್ಥಿಗಳನ್ನು ಆಶ್ರುವಾಯು ಬಳಸಿ ಚದುರಿಸಲಾಯಿತು ಎಂದು ಪೂರ್ವ ವಲಯದ ಡಿಸಿಪಿ ವೈ. ಗಂಗಾಧರ್ ತಿಳಿಸಿದ್ದಾರೆ.ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ತೆಗೆದು ಹಾಕಿ ಕಲಾ ಕಾಲೇಜಿನಿಂದ ಎನ್‌ಸಿಸಿ ಗೇಟ್ ಕಡೆಗೆ ರ್ಯಾಲಿ ನಡೆಸಲು ಸುಮಾರು 500 ವಿದ್ಯಾರ್ಥಿಗಳು ಪ್ರಯತ್ನಿಸಿದರು. ಮತ್ತು ವಿಧಾನಸಭೆಯತ್ತ ರ್ಯಾಲಿ ನಡೆಸಲು ಮುಂದಾದ ವಿದ್ಯಾರ್ಥಿಗಳನ್ನು ತಡೆದ ಭದ್ರತಾ ಸಿಬ್ಬಂದಿ ಮೇಲೆ ಭಾರಿ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಲಾಯಿತು ಎಂದು ಅವರು ಹೇಳಿದ್ದಾರೆ.ಪ್ರತಿಭಟನಾಕಾರರ ಗುಂಪೊಂದು ಜಾವೈ ಉಸ್ಮಾನಿಯಾ ರೈಲ್ವೆ ನಿಲ್ದಾಣದಲ್ಲಿ ರೈಲಿನ ಬೋಗಿಯೊಂದಕ್ಕೆ ಬೆಂಕಿ ಹಚ್ಚಿತು. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಬೆಂಕಿ ನಂದಿಸಿದರು. ಮತ್ತು ಈ ಸಂಬಂಧ ಐದು ಜನ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಅವರು ತಿಳಿಸಿದ್ದಾರೆ.ಪ್ರತಿಭಟನಾಕಾರರು ನೆಕ್‌ಲೆಸ್ ರೈಲ್ವೆ ನಿಲ್ದಾಣದ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್‌ಗೂ ಬೆಂಕಿ ಹಚ್ಚಿದರು. ಮತ್ತು ನಿಲ್ದಾಣದಲ್ಲಿ ಕಲ್ಲು ತೂರಾಟ ನಡೆಸಿ ಕಿಟಕಿಯ ಗಾಜುಗಳನ್ನು ಧ್ವಂಸಗೊಳಿಸಿದ್ದಾರೆ.ಬಂದ್‌ಗೆ ಕರೆ: ಪ್ರತ್ಯೇಕ ರಾಜ್ಯ ರಚನೇಯ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ತೆಲಂಗಾಣ ಜಂಟಿ ಕ್ರಿಯಾ ಸಮಿತಿಯು ಈ ತಿಂಗಳ 22 ಮತ್ತು 23ರಂದು ತೆಲಂಗಾಣ ಪ್ರದೇಶದಲ್ಲಿ ಬಂದ್ ಆಚರಿಸಲು ಕರೆ ನೀಡಿದೆ.ಹೈದರಾಬಾದ್ ಮತ್ತು ತೆಲಂಗಾಣ ಪ್ರದೇಶದ 9 ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬಂದ್ ಜನಜೀವನವನ್ನು ಅಸ್ತವ್ಯಸ್ತಗೊಳಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.