ಬುಧವಾರ, ಮಾರ್ಚ್ 22, 2023
25 °C

‘ಮೌಢ್ಯದ ವಿರೋಧಕ್ಕೆ ಮೌಲ್ಯಗಳ ನಿರಾಕರಣೆ ಸರಿಯಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮೂಢನಂಬಿಕೆಗಳನ್ನು ವಿರೋಧಿ­ಸುವ ಆತುರದಲ್ಲಿ ಮೌಲ್ಯಗಳನ್ನು ನಿರಾಕರಿಸು­ವುದು ಸರಿಯಲ್ಲ. ಪರಂಪರೆಯ ಅಂಧಶ್ರದ್ಧೆಗಳ್ನು ಮುರಿ­ಯಲು ಮದ್ಯ, ಮಾದಕ ವಸ್ತುಗಳ ಮೊರೆ ಹೋಗುವ ಅಗತ್ಯವಿಲ್ಲ.ಈ ಬಗ್ಗೆ ಜಾಗೃತಿ ಬೆಳೆಯ­ಬೇಕು’ ಎಂದು ಮೂಢನಂಬಿಕೆ ವಿರೋಧಿ ಹೋರಾಟ­ಗಾರ ದಿವಂಗತ ನರೇಂದ್ರ  ದಾಭೋ­ಲ್ಕರ್‌ ಅವರ ಪುತ್ರಿ ಮುಕ್ತಾ ದಾಭೋಲ್ಕರ್‌  ಅಭಿಪ್ರಾಯಪಟ್ಟರು.ನವಕರ್ನಾಟಕ ಪ್ರಕಾಶನ ಸಂಸ್ಥೆಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಆರು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಧರ್ಮದ ಬೆಳಕಿನಲ್ಲಿ ಮೌಲ್ಯ ಉಳಿಯಬೇಕೇ ಹೊರತು ಮೌಢ್ಯ ಬೆಳೆಯಬಾರದು. ವ್ಯಕ್ತಿಯನ್ನು ಕೊಲ್ಲಬಹುದು. ಆದರೆ, ಅವರ ಚಿಂತನೆಯನ್ನು ಕೊಲ್ಲಲು ಸಾಧ್ಯವಿಲ್ಲ’ ಎಂದು ಹೇಳಿದರು.‘ಮಹಾರಾಷ್ಟ್ರ ಅಂಧಶ್ರದ್ಧೆ ನಿರ್ಮೂಲನಾ ಸಮಿತಿಯ ಮೂಲಕ ಮೂಢನಂಬಿಕೆಗಳ ವಿರುದ್ಧ ನನ್ನ ತಂದೆ ಆರಂಭಿಸಿದ ಚಳವಳಿಗೆ ಅನೇಕರ ವಿರೋಧವಿತ್ತು. ಈ ಸಮಿತಿ ಧರ್ಮ ವಿರೋಧಿ, ದೈವ ವಿರೋಧಿ ಎಂದು ಹಲವರು ಟೀಕೆ ಮಾಡುತ್ತಿದ್ದರು. ಇಂತಹ ವಿರೋಧಿಗಳೇ ನನ್ನ ತಂದೆಯನ್ನು ಕೊಲೆ ಮಾಡಿದ್ದಾರೆ. ಕೊಲೆಗಾರರನ್ನು ಪತ್ತೆಹಚ್ಚಲು ಸರ್ಕಾರ ವಿಫಲವಾಗಿದೆ’ ಎಂದು ದೂರಿದರು.‘ವೃತ್ತಿಯಿಂದ ವೈದ್ಯರಾಗಿದ್ದ ನನ್ನ ತಂದೆ ಚಳವಳಿಗೆ ಸಮಯ ಹೊಂದಿಸಿ ಕೊಳ್ಳುತ್ತಿದ್ದರು. ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಜತೆಗೆ ಚಳವಳಿಯಲ್ಲಿ ತೊಡಗಿಸಿಕೊಳ್ಳಬೇಕೇ ಹೊರತು ಚಳವಳಿಯೇ ವೃತ್ತಿಯಾಗಬಾರದು ಎಂದು ಅವರು ಹೇಳುತ್ತಿದ್ದರು. ಅವರು ಬೆಳೆಸಿದ ಮಹಾರಾಷ್ಟ್ರ ಅಂಧಶ್ರದ್ಧೆ ನಿರ್ಮೂಲನಾ ಸಮಿತಿಯ ಚಳವಳಿಯು 25 ವರ್ಷ ಪೂರೈಸಿದೆ’ ಎಂದರು.‘ಮೌಢ್ಯವನ್ನು ವಿರೋಧಿಸುವ ವಿಚಾರದ ಕುರಿತು ನನ್ನ ತಂದೆ ಬರೆದಿದ್ದ ಕೆಲವು ಪುಸ್ತಕಗಳು ಕನ್ನಡಕ್ಕೆ ಅನುವಾದಗೊಂಡಿರುವುದು ಸಂತೋಷ ತಂದಿದೆ. ಈ ಮೂಲಕ ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಂಬಂಧ ಗಟ್ಟಿಗೊಳ್ಳುತ್ತಿದೆ’ ಎಂದು ಹೇಳಿದರು. ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ‘ಮೌಢ್ಯವನ್ನು ಆಚರಿಸುವ ಮೂಲಕ ಮಹಿಳೆಯರು ತಾವೇ ಶೋಷಣೆಗೆ ಒಳಗಾಗುತ್ತಿದ್ದಾರೆ. ಹೊಸ ಚಿಂತನೆ, ಆಲೋಚನೆಗಳಿಗೆ ಮಹಿಳೆಯರು ತೆರೆದುಕೊಳ್ಳಬೇಕಿದೆ’ ಎಂದು ತಿಳಿಸಿದರು.ಲೇಖಕ ಎಂ.ಅಬ್ದುಲ್‌ ರೆಹಮಾನ್‌ ಪಾಷ, ‘ಮೂಢನಂಬಿಕೆಯ ಬಗ್ಗೆ ಎಚ್ಚರಿಸಲು ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಲು ಆಂದೋಲನ ರೂಪಿಸುವ ಸಿದ್ಧತೆ ನಡೆಯುತ್ತಿದೆ. ಈ ಆಂದೋಲನಕ್ಕೆ ಎಲ್ಲರ ಸಹಕಾರ ಅಗತ್ಯ’ ಎಂದರು. ಲೇಖಕರಾದ ಚಂದ್ರಕಾಂತ ಪೋಕಳೆ ಮತ್ತು ಡಾ.ಪ್ರಮೀಳಾ ಮಾಧವ್‌ ತಮ್ಮ ಅನುವಾದಿತ ಪುಸ್ತಕಗಳ ಬಗ್ಗೆ ಮಾತನಾಡಿದರು.ಬಿಡುಗಡೆಗೊಂಡ ಪುಸ್ತಕಗಳು

ಎಂ.ಅಬ್ದುಲ್‌ ರೆಹಮಾನ್‌ ಪಾಷ ಅವರ ‘ನಂಬಿಕೆ, ಮೂಢನಂಬಿಕೆ, ವೈಜ್ಞಾನಿಕ ಮನೋ­ವೃತ್ತಿ’ (ಬೆಲೆ ₨ 125), ಚಂದ್ರಕಾಂತ ಪೋಕಳೆ ಅವರು ಅನುವಾದಿಸಿರುವ ನರೇಂದ್ರ ದಾಭೋ­ಲ್ಕರ್‌ ಮತ್ತು ಪ್ರೊ.ಪ.ರಾ.ಆರ್ಡೆ ಅವರ ‘ಅಂಧಶ್ರದ್ಧೆ– ಪ್ರಶ್ನೆ ಚಿಹ್ನೆ ಮತ್ತು ಪೂರ್ಣ­ವಿರಾಮ’ (ಬೆಲೆ ₨ 60), ‘ಕತ್ತಲೆಯಿಂದ ಬೆಳಕಿನೆಡೆಗೆ’ (ಬೆಲೆ ₨ 85), ಶರದ ಬೇಡೆಕರ ಅವರ ‘ಸಮಗ್ರ ನಿರೀಶ್ವರ­ವಾದ’ (ಬೆಲೆ

₨ 165), ಡಾ.ವಸುಂಧರಾ ಭೂಪತಿ ಅವರ ‘ಮಹಿಳೆ ಮತ್ತು ಮೌಢ್ಯ’ (ಬೆಲೆ ₨ 75) ಮತ್ತು ಡಾ.ಪ್ರಮೀಳಾ ಮಾಧವ್‌ ಅವರು ಅನುವಾದಿಸಿರುವ ಶರಣಕುಮಾರ ಲಿಂಬಾಳೆ ಅವರ ‘ಹಿಂದೂ’ (ಬೆಲೆ ₨120) ಪುಸ್ತಕ­ಗಳನ್ನು ಲೇಖಕ ಡಾ.ಜಿ.ರಾಮಕೃಷ್ಣ  ಬಿಡುಗಡೆಗೊಳಿಸಿದರು. ಆರೂ ಪುಸ್ತಕಗಳನ್ನು ನವಕರ್ನಾಟಕ ಪ್ರಕಾಶನ ಹೊರತಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.