ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.68 ಕೋಟಿ ಮೌಲ್ಯದ ವಸ್ತು ವಶ

Last Updated 13 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪಶ್ಚಿಮ ವಿಭಾಗದ ಪೊಲೀಸರು ದರೋಡೆ, ಕಳವು, ಸರಗಳ್ಳತನ ಮುಂತಾದ 178 ಪ್ರಕರಣಗಳನ್ನು ಭೇದಿಸಿ 1.68 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ವಾಹನ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 67 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆ ನಡೆಸಿರುವ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ಅವರ ತಂಡಕ್ಕೆ ನಗರ ಪೊಲೀಸ್ ಕಮಿಷನರ್ ಶಂಕರ ಬಿದರಿ ಅವರು ಎರಡು ಲಕ್ಷ ರೂಪಾಯಿ ಬಹುಮಾನ ಘೋಷಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿದರಿ ಅವರು, ‘ಕನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವೇಲು, ಪ್ರಭಾಕರರೆಡ್ಡಿ ಮತ್ತು ರಮೇಶ್ ಎಂಬುವರನ್ನು ಬಂಧಿಸಿರುವ ಚಂದ್ರಾಲೇಔಟ್ ಪೊಲೀಸರು ಒಟ್ಟು 24 ಪ್ರಕರಣಗಳನ್ನು ಪತ್ತೆ ಮಾಡಿ 43 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗುಂಡ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಚಿಕ್ಕಮಗಳೂರಿನ ಎಸ್ಟೇಟ್‌ವೊಂದರಲ್ಲಿ ಅಡಗಿದ್ದ ಆತನನ್ನು ಬಂಧಿಸಲಾಯಿತು’ ಎಂದರು.

‘ದ್ವಿಚಕ್ರ ವಾಹನ ಕಳವು ಪ್ರಕರಣಗಳನ್ನು ಭೇದಿಸಿರುವ ಉಪ್ಪಾರಪೇಟೆ ಪೊಲೀಸರು ಯೋಗೀಶ, ರಾಮ, ದಿನೇಶ್, ವಿನಯ್, ಸತೀಶ್ ಎಂಬುವರನ್ನು ಬಂಧಿಸಿದ್ದಾರೆ. 12.50 ಲಕ್ಷ ರೂಪಾಯಿ ಮೌಲ್ಯದ 25 ಬೈಕ್‌ಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ. ಐದೂ ಮಂದಿ ಸಿನಿಮಾಗಳಲ್ಲಿ ಸಹ ಕಲಾವಿದರಾಗಿ ಅಭಿನಯಿಸಿದ್ದಾರೆ. ಯೋಗೀಶ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾನೆ’ ಎಂದು ಅವರು ತಿಳಿಸಿದರು.

‘ರಾಮನಗರದ ಲೋಕೇಶ್ (31) ಮತ್ತು ಚಾಮರಾಜಪೇಟೆಯ ಟಿಪ್ಪುನಗರದ ಸಾದತ್ ಅಲಿ (31) ಎಂಬುವರನ್ನು ಬಂಧಿಸಿರುವ ಕಲಾಸಿಪಾಳ್ಯ ಪೊಲೀಸರು 46 ಲಕ್ಷ ರೂಪಾಯಿ ಮೌಲ್ಯದ ಎಂಟು ಕಾರು ಮತ್ತು ಟೆಂಪೊ ಟ್ರಾವೆಲ್ಲರ್ ವಶಪಡಿಸಿಕೊಂಡಿದ್ದಾರೆ. ವಿಜಯನಗರ, ಕಲಾಸಿಪಾಳ್ಯ, ಮೈಕೊಲೇಔಟ್ ಮುಂತಾದೆಡೆ ಅವರು ಕಾರು ಕಳವು ಮಾಡಿದ್ದರು’ ಎಂದು ಸಿದ್ದರಾಮಪ್ಪ ಹೇಳಿದರು.
‘ಕಾಮಾಕ್ಷಿಪಾಳ್ಯದ ದೊಡ್ಡಬೆಲೆ ರಸ್ತೆಯಲ್ಲಿರುವ ಶಿವಮಾರುತಿ ಆಶ್ರಮಕ್ಕೆ ನುಗ್ಗಿ ಸರೋಜಮ್ಮ ಎಂಬುವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ್ದ ಸ್ವಾಮಿ, ಚಂದ್ರಶೇಖರ್ ಮತ್ತು ಕಿರಣ್ ಎಂಬುವರನ್ನು ಬಂಧಿಸಿ 5.60 ಲಕ್ಷ ರೂಪಾಯಿ ಬೆಲೆಯ ಆಭರಣ ಮತ್ತು ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಅವರು ತಿಳಿಸಿದರು.

ಎಸಿಪಿಗಳಾದ ಎಂ.ಕೆ.ಸೋಲಭೇಶ್ವರಪ್ಪ, ಎಂ.ಐ.ಜಮೀಲ್, ಜಿ.ಆರ್.ದೇಸಾಯಿ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಎ.ಬಿ.ರಾಜೇಂದ್ರ ಕುಮಾರ್, ಲೋಕೇಶ್ವರ, ಬಿ.ಜಗನ್ನಾಥ ರೈ, ಎನ್.ಎಚ್.ರಾಮಚಂದ್ರಯ್ಯ ಅವರ ತಂಡ ಆರೋಪಿಗಳನ್ನು ಬಂಧಿಸಿದೆ. ವಶಪಡಿಸಿಕೊಂಡ ವಸ್ತುಗಳನ್ನು ಅದರ ಮಾಲೀಕರಿಗೆ ವಿತರಿಸಲಾಯಿತು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್ ಕುಮಾರ್, ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪಾದಚಾರಿ ಸಾವು
ಬೆಂಗಳೂರು: ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೆ.ಆರ್.ಪುರ ಸಮೀಪದ ಗ್ರಾಫೈಟ್ ಇಂಡಿಯಾ ಫ್ಯಾಕ್ಟರಿ ರಸ್ತೆಯಲ್ಲಿ ಬುಧವಾರ ನಸುಕಿನಲ್ಲಿ ನಡೆದಿದೆ. ಹೂಡಿ ನಿವಾಸಿ ಪಿ.ಮಹಂತೇಶ್ (21) ಸಾವನ್ನಪ್ಪಿದವರು. ಅವರು ಟೈಕೊ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಅವರು ಕೆಲಸಕ್ಕೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಕಚೇರಿಯ ಬಳಿ ನಡೆದು ಹೋಗುತ್ತಿದ್ದ ಅವರಿಗೆ ಕಾರು ಡಿಕ್ಕಿ ಹೊಡೆಯಿತು. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು. ಘಟನೆ ನಂತರ ಕಾರು ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆ.ಆರ್.ಪುರ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT