ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23 ಲಕ್ಷ ಕಬ್ಬಿಣಾಂಶಯುಕ್ತ ಮಾತ್ರೆ ವಿತರಣೆ

ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ವಿಟಮಿನ್ ಕೊರತೆ
Last Updated 4 ಡಿಸೆಂಬರ್ 2013, 6:17 IST
ಅಕ್ಷರ ಗಾತ್ರ

ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ವಿಟಮಿನ್ ಕೊರತೆ ಸಾಮಾನ್ಯವಾಗಿ ಕೇಳಿಬರುವ ಮಾತು. ಅಂಥ ಮಕ್ಕಳಿಗೆ ಕಬ್ಬಿಣಾಂಶಯುಕ್ತ ಮಾತ್ರೆಗಳನ್ನು ಒದಗಿಸುವ ಯೋಜನೆಯನ್ನು ಸರ್ಕಾರ ಈಗಾಗಲೇ ಜಾರಿಗೊಳಿಸಿದೆ. ಅದರಂತೆ ಜಿಲ್ಲೆಯಲ್ಲಿ ಕಬ್ಬಿಣಾಂಶಯುಕ್ತ, ಅಲ್ಬೆಂಡೊಸಲ್ ಹಾಗೂ ಪೋಲಿಕ್ ಆಸಿಡ್ ಮಾತ್ರೆಗಳನ್ನು ಸುಮಾರು 2ಲಕ್ಷಕ್ಕಿಂತ ಹೆಚ್ಚು 1ರಿಂದ ಎಸ್ಸೆಸ್ಸೆಲ್ಸಿಯವರೆಗಿನ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದೆ.

ಇದುವರೆಗೂ ವಿತರಿಸಿದ ಒಟ್ಟು ಮಾತ್ರೆಗಳ ಸಂಖ್ಯೆ ಸುಮಾರು 23ಲಕ್ಷ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2012–13ನೇ ಸಾಲಿನಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನ ಹಾಗೂ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಮಾತ್ರೆಗಳನ್ನು ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಕಂಡುಬರುವ ಕಬ್ಬಿಣಾಂಶದ ಕೊರತೆ, ಜಂತು ಹುಳುಗಳ ನಿಯಂತ್ರಣ ಹಾಗೂ ಕಣ್ಣಿನಲ್ಲಿ ದೋಷ ತಡೆಗಟ್ಟಲು ಇಲಾಖೆಯಿಂದ ಈ ಯೋಜನೆ ಜಾರಿಗೆ ತರಲಾಗಿದೆ. 1ರಿಂದ 5ನೇ ತರಗತಿಯ ಸರ್ಕಾರಿ ಹಾಗೂ ಅನುದಾನ ಸಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಬಾರಿಯಂತೆ 400ಎಂ.ಜಿ.ಗಾತ್ರದ ಅಲ್ಬೆಂಡೊಸಲ್ ಹಾಗೂ ವಾರದಲ್ಲಿ ಮೂರು ಬಾರಿಯಂತೆ ಕಬ್ಬಿಣಾಂಶಯುಕ್ತ ಮಾತ್ರೆಗಳನ್ನು ನೀಡಲಾಗುತ್ತಿದೆ. ಹಾಗೆಯೇ, ಸರ್ಕಾರಿ, ಅನುದಾನ ಹಾಗೂ ಅನುದಾನ ರಹಿತ 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಕಬ್ಬಿಣಾಂಶ ಯುಕ್ತ ಮಾತ್ರೆ ತಿಂಗಳಿಗೆ 4ಬಾರಿ ಹಾಗೂ ಅಲ್ಬೆಂಡೊಸಲ್ ಮಾತ್ರೆ ವರ್ಷದಲ್ಲಿ ಎರಡು ಬಾರಿ ನೀಡಲಾಗುತ್ತಿದೆ.

ಪ್ರತಿ ತಿಂಗಳು ಸರ್ಕಾರದಿಂದ ನೇರವಾಗಿ ಬರುವ ಮಾತ್ರೆಗಳುಳ್ಳ ಬಾಕ್ಸ್ ಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶೇಖರಿಸಿಡಲಾಗುತ್ತದೆ. ತದನಂತರ ಆಯಾ ತಾಲ್ಲೂಕುಗಳಲ್ಲಿ ನೇಮಿಸಲಾಗಿರುವ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿಗಳ ಮೂಲಕ ಸಂಬಂಧಪಟ್ಟ ಶಾಲೆಗಳಿಗೆ ಕಳುಹಿಸಿ ಕೊಡಲಾಗುತ್ತದೆ.

ಇಲಾಖೆಯಿಂದ 2012–13ನೇ ಸಾಲಿನಲ್ಲಿ ಶಿವಮೊಗ್ಗ ತಾಲ್ಲೂಕು 47,720, ಭದ್ರಾವತಿ 37,000, ಸಾಗರ – 25,076, ಶಿಕಾರಿಪುರ –22,700, ಸೊರಬ –21,774, ಹೊಸನಗರ– 16,651 ಹಾಗೂ ತೀರ್ಥಹಳ್ಳಿ –17,112 ವಿದ್ಯಾರ್ಥಿಗಳಿಗೆ ಮಾತ್ರೆಗಳನ್ನು ವಿತರಣೆ ಮಾಡಲಾಗಿದೆ.

ಇದಲ್ಲದೆ,  ಶಿವಮೊಗ್ಗ 15, ಭದ್ರಾವತಿ 11, ಸಾಗರಕ್ಕೆ 11, ಶಿಕಾರಿಪುರ ಹಾಗೂ ಸೊರಬ ತಾಲ್ಲೂಕುಗಳಿಗೆ 9, ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕುಗಳಿಗೆ ತಲಾ 7ಐರನ್ ಮತ್ತು ಪೋಲಿಕ್ ಆಸಿಡ್ ಮಾತ್ರೆಗಳ ಬಾಕ್ಸ್ ಗಳನ್ನು ನೀಡಲಾಗಿದೆ.

‘ಆಲ್ಬೆಂಡೊಸಲ್ ಮಾತ್ರೆಗಳುಳ್ಳ ಬಾಕ್ಸ್ ಗಳನ್ನು ಶಿವಮೊಗ್ಗ– ಭದ್ರಾವತಿ ತಾಲ್ಲೂಕುಗಳಿಗೆ ತಲಾ 4, ಸಾಗರ, ಶಿಕಾರಿಪುರ, ಸೊರಬ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕುಗಳಿಗೆ ತಲಾ 3ರಂತೆ ಹಂಚಿಕೆ ಮಾಡಲಾಗಿದ್ದು, ಐರನ್ ಮತ್ತು ಪೋಲಿಕ್ ಆಸಿಡ್ ಮಾತ್ರೆಗಳ ಒಟ್ಟು 69 ಬಾಕ್ಸ್ ಗಳನ್ನು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ವಿತರಿಸಲಾಗಿದೆ’ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ
ನೀಡುತ್ತಾರೆ.

‘ತಾಲ್ಲೂಕು ವೈದ್ಯಾಧಿಕಾರಿಗಳ ತಂಡ ಪರಿಶೀಲಿಸಿದ ನಂತರ ವಿದ್ಯಾರ್ಥಿಗಳಿಗೆ ಮಾತ್ರೆಗಳನ್ನು ವಿತರಿಸಬೇಕು ಎಂಬ ನಿಯಮ ಮಾಡಲಾಗಿದೆ. ಬಡ ಕುಟುಂಬದ ವಿದ್ಯಾರ್ಥಿಗಳೇ ಹೆಚ್ಚಿರುವ ಸರ್ಕಾರಿ ಶಾಲೆಗಳಲ್ಲಿ ಈ ಯೋಜನೆ ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದ್ದು, 2013–14ನೇ ಸಾಲಿನಲ್ಲಿ ಪ್ರತಿಯೊಂದು ಗ್ರಾಮೀಣ ಶಾಲೆಯ ವಿದ್ಯಾರ್ಥಿಯನ್ನು ತಲುಪಬೇಕೆಂಬ ಗುರಿ ಶಿಕ್ಷಣ ಇಲಾಖೆಯದ್ದಾಗಿದೆ’ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಹಾಲಾನಾಯ್ಕ ಹೇಳುತ್ತಾರೆ.

‘ಸರ್ಕಾರ ಗುರುತಿಸಿದ ಕಂಪೆನಿಯಿಂದ ನೇರವಾಗಿ ಶಿಕ್ಷಣ ಇಲಾಖೆಗೆ ಮಾತ್ರೆಗಳು ಬರುವುದರಿಂದ, ಇದರಲ್ಲಿ ಯಾವುದೇ ಮೋಸವಾಗಲು ಸಾಧ್ಯವಿಲ್ಲ’ ಎಂದು ಇಲಾಖೆಯ ಅಧಿಕಾರಿ ಶಿವುಕುಮಾರ್ ಮಾಹಿತಿ ನೀಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT