ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಮಕ್ಕಳಿಗೆ ಆಹಾರ-ವಂಚನೆ

Last Updated 24 ಸೆಪ್ಟೆಂಬರ್ 2011, 8:45 IST
ಅಕ್ಷರ ಗಾತ್ರ

ಅಮಾಸೆಬೈಲು (ಸಿದ್ದಾಪುರ): ತಾಲ್ಲೂಕಿನ ಅಂಗನವಾಡಿಗಳಲ್ಲಿ ಮಕ್ಕಳಿಗೆ ವಿತರಿಸುವ ಆಹಾರದಲ್ಲಿ ವಂಚನೆ ನಡೆಯುತ್ತಿದೆ. ಸರ್ಕಾರದ ಪೂರೈಸುವ ಆಹಾರದಲ್ಲಿ ಶೇ.25 ರಷ್ಟು ಮಾತ್ರ ಮಕ್ಕಳಿಗೆ ತಲುಪುತ್ತಿದೆ.

ಅಂಗನವಾಡಿಗೆ ಆಗಮಿಸದ ಮಕ್ಕಳ ಹಾಜರಾತಿ ತೋರಿಸಿ,  ತಪ್ಪುದಾಖಲೆ ಸೃಷ್ಟಿಸಿದ ಪ್ರಕರಣ ಗಮನಕ್ಕೆ ಬಂದಿದೆ ಎಂದು ರಾಜ್ಯ ಮೂರನೇ ಹಣಕಾಸು ಆಯೋಗದ ಶಿಫಾರಸು ಅನುಷ್ಠಾನ ಕಾರ್ಯಪಡೆ ಅಧ್ಯಕ್ಷ ಎ.ಜಿ.ಕೊಡ್ಗಿ ತಿಳಿಸಿದ್ದಾರೆ.

ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಅಹವಾಲನ್ನು ಸ್ವೀಕರಿಸಿ ಅವರು ಮಾತನಾಡಿದರು.

`ಅಂಗನವಾಡಿ ಕೇಂದ್ರಗಳಲ್ಲಿ  ನಡೆಯುತ್ತಿರುವ ಈ ಅವ್ಯವಹಾರಕ್ಕೆ ಅಧಿಕಾರಿಗಳೇ ನೇರ ಹೊಣೆ. ಒಂದು ತಿಂಗಳೊಳಗೆ ಈ ಅವ್ಯವಹಾರಕ್ಕೆ ಕಡಿವಾಣ ಹಾಕದಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಂದು ತಾಲ್ಲೂಕು ಶಿಶು ಅಭಿವೃದ್ದಿ ಅಧಿಕಾರಿ ನಯನಾ ಗಾಂವ್ಕರ್ ಅವರಿಗೆ  ಎ.ಜಿ.ಕೊಡ್ಗಿ ಎಚ್ಚರಿಸಿದರು.

`ಜನಪ್ರತಿನಿಧಿಗಳೇ ಕಾಮಗಾರಿ ಗುತ್ತಿಗೆಯನ್ನು ವಹಿಸಿಕೊಂಡರೆ ಅದರ ಗುಣಮಟ್ಟವನ್ನು ಜನರು ಪರೀಕ್ಷಿಸಬೇಕು. ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಗ್ರಾಮದ ಅಭಿವೃದ್ಧಿಗೆ ಜನರು ಸಹಕರಿಸಬೇಕು. ಕರ್ತವ್ಯಕ್ಕೆ ಲೋಪಕ್ಕೆ ಅವಕಾಶ ಕಲ್ಪಿಸಬಾರದು~ ಎಂದರು.

`ರೈತರ ಕೃಷಿ ಕ್ಷೇತ್ರಗಳನ್ನು, ವಿಶೇಷವಾಗಿ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಮಂಗಗಳ ಹಾವಳಿ ತಡೆಗಟ್ಟಲು ಮಂಕಿ ಪಾರ್ಕ್ ನಿರ್ಮಿಸುವ ಉದ್ದೇಶ ಸರ್ಕಾರಕ್ಕಿದೆ~ ಎಂದರು.

`ಮುಜರಾಯಿ ಇಲಾಖೆಯ ದೇಗುಲಗಳಲ್ಲಿ ಅರ್ಚಕರಿಗೆ ನೀಡುವ ಭತ್ಯೆಯನ್ನು ಮೊಕ್ತೇಸರರು ಪಡೆಯುತ್ತಿದ್ದಾರೆ~ ಎಂದು ಸೂರ್ಯನಾರಾಯಣ ಐತಾಳ್ ಆರೋಪಿಸಿದರು. ಉತ್ತರಿಸಿದ ಗ್ರಾಮಲೆಕ್ಕಿಗರು, `ಮುಂದೆ ಇದನ್ನು ಅರ್ಚಕರಿಗೆ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ~ ಎಂದರು.

ಗ್ರಾ.ಪಂ ವ್ಯಾಪ್ತಿಯ ಪೂರ್ಣ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಜಿ.ಪಂ ಎಂಜಿನಿಯರ್ ಶ್ರಿಧರ್ ಫಾಲೇಕರ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

`ಎರಡು ವರ್ಷದಿಂದ ಸರ್ಕಾರದಿಂದ ರಸ್ತೆ ದುರಸ್ತಿಗೆ ಹಣ ಬಿಡುಗಡೆಯಾಗಿಲ್ಲ~ ಎಂದು ಎಂಜಿನಿಯರ್ ಉತ್ತರಿಸಿದರು.

ಲಿಖಿತವಾಗಿ ನೀಡಿ ಎಂದು  ಕೊಡ್ಗಿ ತರಾಟೆಗೆ ತೆಗೆದುಕೊಂಡಾಗ ಎಂಜಿನಿಯರ್ ನಿರುತ್ತರಾದರು.
ತಿಂಗಳುಗಟ್ಟಲೆ ವೃದ್ದಾಪ್ಯ ವೇತನ  ಸಿಗದ ಬಗ್ಗೆ, ಅಕ್ರಮ ಸಕ್ರಮ ಭೂಮಿ ದಾಖಲೆಗಳು ಸಿಗದ ಬಗ್ಗೆ ಆಕ್ರೋಶ ವ್ಯಕ್ತವಾಯಿತು.

ಜಲಾನಯನ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸಹಿತ ಪ್ರಮುಖ ಅಧಿಕಾರಿಗಳು ಪ್ರತಿ ಗ್ರಾಮಸಭೆಗೂ ಗೈರುಹಾಜರಾಗುತ್ತಿದ್ದಾರೆ, ಅಂಗನವಾಡಿಗಳಲ್ಲಿ ಮಕ್ಕಳಿಗೆ ಸರಿಯಾದ ಸೌಲಭ್ಯ ಇಲ್ಲ, ಪಶು ವೈದ್ಯಾಧಿಕಾರಿಯಿಂದ ಉತ್ತಮ ಸೇವೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾ.ಪಂ ವ್ಯಾಪ್ತಿಯ ನರಸೀಪುರ, ಕಾನಬೈಲ್ ರಸ್ತೆ ಸಹಿತ ಹಲವಾರು ರಸ್ತೆಗಳ ಅಭಿವೃದ್ಧಿಗೆ  ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ. ನಕ್ಸಲ್ ಭಾದಿತ ಪ್ರದೇಶದ ಕೆಲ ರಸ್ತೆ ಸಂಪರ್ಕಸುವ ರಸ್ತೆಗಳು ಸಂಪೂರ್ಣ ಹಾಳಾದ್ದರಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಗ್ರಾಮಸ್ಥರು ಶಾಲಾ ಮಕ್ಕಳು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ದೂರಿದರು.

ಗ್ರಾ.ಪಂ ಅಧ್ಯಕ್ಷ  ಅಶೋಕ್ ಕುಮಾರ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು  ತಾ.ಪಂ ಸದಸ್ಯ ನವೀನ್ ಚಂದ್ರ ಶೆಟ್ಟಿ, ಸದಾಶಿವ ಶೆಟ್ಟಿ, ಗ್ರಾ.ಪಂ ಉಪಾಧ್ಯಕ್ಷೆ ಸುಮತಿ, ಅರಣ್ಯ ಇಲಾಖೆಯ ವಿನೋದ್ ಇದ್ದರು.

ಬೆಳಿಗ್ಗೆ 11 ಗಂಟೆಗೆ ಆರಂಭವಾದ ಗ್ರಾಮಸಭೆಯು ಮದ್ಯಾಹ್ನ 3ಗಂಟೆವರೆಗೂ ಮುಂದುವರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT