ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧಕಾರ ಮೆಟ್ಟಿ ನಿಂತ ಮಣಿಕಂಠ

Last Updated 3 ಡಿಸೆಂಬರ್ 2013, 9:52 IST
ಅಕ್ಷರ ಗಾತ್ರ

ಮುಂಡಗೋಡ: ಹುಟ್ಟು ಅಂಧನಾದರೂ ಸಂಗೀತದಲ್ಲಿನ ಆಸಕ್ತಿ ಅದಕ್ಕೆ ಅಡ್ಡಿಯಾಗಲಿಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲದಿಂದ ಶಿಕ್ಷಣ ಪಡೆಯುತ್ತ ಕೇವಲ ಒಂದೇ ವರ್ಷದಲ್ಲಿ ಕಠಿಣವಾದ ಬ್ರೈಲ್‌ ಲಿಪಿ ಕಲಿತು ಇತರರಿಗೆ ಮಾದರಿಯಾದನು. ಆತನೇ ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಕಾಮನಹಳ್ಳಿ ಗ್ರಾಮದ ಮಣಿಕಂಠ ಗುಡ್ಡಪ್ಪ ಮಂತಗಿ.

ಸದ್ಯ ಮುಂಡಗೋಡದ ಜ್ಞಾನಪ್ರಜ್ಞಾ ಅಂಧ ಮಕ್ಕಳ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಾನೆ. ಸಂಗೀತದ ಬಗ್ಗೆ ಈತನಿಗೆ ಇರುವ ಆಸಕ್ತಿಯು ಎಂಥವರನ್ನು ಮೋಡಿ ಮಾಡದೇ ಇರಲಾರದು. 3ನೇ ತರಗತಿಯಲ್ಲಿ ಇರುವಾಗಲೇ ಕಾರವಾರದಲ್ಲಿ ನಡೆದ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ತನ್ನ ಸ್ಥಾನವನ್ನು ಉಳಿಸಿಕೊಂಡು ಬರುತ್ತಿರುವದು ಈತನ ವಿಶೇಷ. 2010ರ ಜನವರಿಯಲ್ಲಿ ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಗಾಯನ ಸ್ಪರ್ಧೆಯಲ್ಲಿ ಒಟ್ಟು ಐದು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಹಿರಿ–ಕಿರಿಯ ಸ್ವಾಮೀಜಿಯವರ ಪ್ರೀತಿಗೆ ಪಾತ್ರನಾಗಿದ್ದಾನೆ. ರಾಷ್ಟ್ರೀಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗಾಯನ ವೀರ ಬಿರುದಿನಿಂದ ಹಿಡಿದು ಚಿಕ್ಕಮಗಳೂರು, ಹಾಸನ, ಹುಬ್ಬಳ್ಳಿ, ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ನಡೆದಿರುವ ಗಾಯನ ಸ್ಪರ್ಧೆಯಲ್ಲಿ ಪ್ರೇಕ್ಷಕರ ಮನತುಂಬುವಂತೆ ಹಾಡಿ ಪ್ರಥಮ ಸ್ಥಾನ ಗಳಿಸಿದ್ದಾನೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಮಣಿಕಂಠ, ‘ಹುಟ್ಟುತ್ತಲೇ ಜಗತ್ತು ನನಗೆ ಕತ್ತಲೆಯಿಂದ ಸ್ವಾಗತಿಸಿದೆ. ನಮ್ಮಲ್ಲಿಯೂ ಸಾಧಿಸಬೇಕೆಂಬ ಛಲವಿದೆ. ಅಂಧತ್ವದ ಬಗ್ಗೆ ಮೊದಲಿಗೆ ಬೇಸರಪಟ್ಟುಕೊಳ್ಳುತ್ತಿದ್ದೆ. ಈಗ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಲೇ ಕಣ್ಣಿದ್ದವರ ಪ್ರೋತ್ಸಾಹ, ಬೆಂಬಲದಿಂದ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದೇನೆ. ಅಂಧರ ಬಗ್ಗೆ ಕನಿಕರ ಪಡದೇ ಸಹಾಯ ಮಾಡಿದರೇ ಅದೇ ದೊಡ್ಡ ಉಪಕಾರ ಮಾಡಿದಂತಾಗುತ್ತದೆ. ಇತರರಂತೆ ನಾವು ಕೂಡ ಜೀವನವನ್ನು ನಡೆಸಬಲ್ಲೇವು’ ಎಂದಾಗ, ಮೈ ಅಟೋಗ್ರಾಫ್‌ ಸಿನಿಮಾದ ಅರಳುವ ಹೂವುಗಳೇ... ಹಾಡು ನೆನಪಾಗದೇ ಇರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT