ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಂತ್ರ ಸ್ಥಿತಿ ನಿವಾರಣೆಗೆ ಮೈತ್ರಿ ಯಾರ ಮಧ್ಯೆ ?

Last Updated 6 ಜನವರಿ 2011, 9:10 IST
ಅಕ್ಷರ ಗಾತ್ರ

ಚಳ್ಳಕೆರೆ: ತಾಲ್ಲೂಕಿನ ಗಮನ ಸೆಳೆದಿದ್ದ ದೊಡ್ಡೇರಿ ಜಿ.ಪಂ. ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ. ಅನಿಲ್ ಕುಮಾರ್ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಎಸ್.ವಿ. ಶ್ರೀನಿವಾಸ್ ವಿರುದ್ಧ 4,043 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಇದೇ ದೊಡ್ಡೇರಿ ತಾ.ಪಂ. ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿರ್ಮಲ ಕೇವಲ 4 ಮತಗಳಿಂದ ಸಮೀಪದ ಸ್ಪರ್ಧಿ ಬಿಜೆಪಿಯ ಚಂದ್ರಮ್ಮ ಅವರ ಎದುರು ಸೋಲು ಅನುಭವಿಸಿದ್ದಾರೆ.

ಮಾಜಿ ಸಚಿವ ಸುಧಾಕರ್‌ಗೆ ಪ್ರತಿಷ್ಠೆಯ ಕಣವಾಗಿದ್ದ ನನ್ನಿವಾಳ ಜಿ.ಪಂ.ನಲ್ಲಿ ಬಿಜೆಪಿಯ ಪುಷ್ಪಾ ಸಂಜೀವ ಮೂರ್ತಿ ಅವರನ್ನು 3,172 ಮತಗಳ ಅಂತರದಿಂದ ಸೋಲಿಸುವ ಮೂಲಕ ಕಾಂಗ್ರೆಸ್‌ನ ಕವಿತಾ ಮಹೇಶ್ ಗೆಲುವಿಗೆ ಕಾರಣವಾಗಿದ್ದಾರೆ. ಕವಿತಾ ಮಹೇಶ್ ಕಳೆದ ಭಾರಿ ಚಳ್ಳಕೆರೆ ತಾಲ್ಲೂಕು ಪಂಚಾಯ್ತಿಯ ಉಪಾಧ್ಯಕ್ಷೆ ಆಗಿದ್ದವರು. ಈ ಭಾರಿ ಜಿ.ಪಂ. ಪ್ರವೇಶ ಮಾಡುತ್ತಿರುವುದು ವಿಶೇಷ.

ಪರಶುರಾಂಪುರ ಜಿ.ಪಂ. ಕ್ಷೇತ್ರದಲ್ಲಿ ಕಳೆದ ಅವಧಿಯಲ್ಲಿ ಪತಿ ರಂಗಸ್ವಾಮಿ ಈ ಭಾರಿ ಪತ್ನಿ ಸಣ್ಣತಿಮ್ಮಕ್ಕ ಜಯಗಳಿಸುವ ಮೂಲಕ ಎರಡು ಅವಧಿಗೂ ಗಂಡ-ಹೆಂಡತಿ ಈ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶ ಸಾಧಿಸಿದ್ದಾರೆ. ಎರಡು ಭಾರಿ ಸತತವಾಗಿ ಜಿ.ಪಂ. ಸದಸ್ಯರಾಗಿದ್ದ ಎಚ್.ವಿ. ಹನುಮಂತರೆಡ್ಡಿ ಈ ಭಾರಿ ದೊಡ್ಡ ಉಳ್ಳಾರ್ತಿ ಕ್ಷೇತ್ರದಲ್ಲಿ ಜೆಡಿಎಸ್‌ನ ಟಿ. ರವಿಕುಮಾರ್ ಎದುರು ಸೋಲು ಅನುಭವಿಸಿದ್ದಾರೆ.

ಈ ಕ್ಷೇತ್ರದಲ್ಲಿ ಜಯಗಳಿಸಿರುವ ಟಿ. ರವಿಕುಮಾರ್ ಎರಡನೇ ಭಾರಿಗೆ ಜಿ.ಪಂ. ಪ್ರವೇಶ ಮಾಡುತ್ತಿದ್ದಾರೆ. ಕಳೆದ ಅವಧಿಯಲ್ಲಿ ಚಿತ್ರದುರ್ಗ ತಾಲ್ಲೂಕು ಲಕ್ಷ್ಮಿಸಾಗರದಿಂದ ಆಯ್ಕೆಯಾಗಿದ್ದ ಇವರು ಈ ಭಾರಿ ಚಳ್ಳಕೆರೆ ತಾಲ್ಲೂಕು ದೊಡ್ಡ ಉಳ್ಳಾರ್ತಿ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ. ಉಳಿದಂತೆ ತಳಕು ಮೀಸಲು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಈ ಹಿಂದೆ ಚಿತ್ರದುರ್ಗದಲ್ಲಿ ಡಿಡಿಪಿಐ ಆಗಿದ್ದ ರಂಗಪ್ಪ ಪತ್ನಿ ಸರೋಜಮ್ಮ ಕಾಂಗ್ರೆಸ್ ಅಭ್ಯರ್ಥಿ ಭಾಗ್ಯಲಕ್ಷ್ಮೀ ಎದುರು ಪರಾಭವಗೊಂಡಿದ್ದಾರೆ.

ಎರಡು ಭಾರಿ ಸದಸ್ಯರಾಗಿ ಜಿ.ಪಂ. ಅಧ್ಯಕ್ಷರಾಗಿದ್ದ ಬಾಲರಾಜು ಈ ಭಾರಿ ತಮ್ಮ ಪತ್ನಿ ಜಯಮ್ಮರನ್ನು ನಾಯಕನಹಟ್ಟಿ ಕ್ಷೇತ್ರದಿಂದ ಗೆಲ್ಲಿಸುಲ್ಲಿ ಸಫಲರಾಗಿದ್ದಾರೆ. ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಜಾಜೂರು ಜಿ.ಪಂ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ರೈತ ಮುಖಂಡ ಕೆ.ಪಿ. ಭೂತಯ್ಯ ಕೇವಲ 1,505 ಮತಗಳನ್ನು ಪಡೆದಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದ ಈ ಕ್ಷೇತ್ರದಲ್ಲಿ ಬಿಜೆಪಿಯ ಜಯಪಾಲಯ್ಯ 8,448 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಜಗನ್ನಾಥ್ ವಿರುದ್ಧ 2,097 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ತಾಲ್ಲೂಕು ಪಂಚಾಯ್ತಿಯ 29 ಕ್ಷೇತ್ರಗಳಲ್ಲಿ ನೇರಲಗುಂಟೆ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ವರವು ಬೊಮ್ಮಯ್ಯ ಕಾಂಗ್ರೆಸ್‌ನ ಅತೀ ಚಿಕ್ಕ ವಯಸ್ಸಿನ ತಿಪ್ಪೇಶ್ ಕುಮಾರ್ ವಿರುದ್ಧ 73 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.

ಉಳಿದಂತೆ ದೇವರ ಮರಿಕುಂಟೆ ತಾ.ಪಂ. ಕ್ಷೇತ್ರದಲ್ಲಿ ನಿವೃತ್ತ ದೈಹಿಕ ಶಿಕ್ಷಕ ಬಾಲರಾಜು ಬಿಜೆಪಿಯಿಂದ ಸ್ಫರ್ಧಿಸಿದ್ದರು. ಸ್ಥಳೀಯರಿಗೆ ಆದ್ಯತೆ ನೀಡುವ ಮೂಲಕ ಮತದಾರ ಈ ಕ್ಷೇತ್ರದಲ್ಲಿ ಜೆಡಿಎಸ್‌ನ ಎಂ.ಎಸ್. ಮಂಜುನಾಥ್ ಅವರನ್ನು ಆರಿಸಿ ಕಳುಹಿಸಿದ್ದಾರೆ. ಒಟ್ಟು 29 ಕ್ಷೇತ್ರಗಳಲ್ಲಿ 12 ಬಿಜೆಪಿ, 11 ಕಾಂಗ್ರೆಸ್, 5ಜೆಡಿಎಸ್, 1 ಪಕ್ಷೇತರ ಗೆಲುವು ಸಾಧಿಸುವ ಮೂಲಕ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಲಭಿಸದೇ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕೂಟ ರಚನೆಯಾದರೆ ತಾಲ್ಲೂಕು ಪಂಚಾಯ್ತಿ ಅಧಿಕಾರ ಕಾಂಗ್ರೆಸ್-ಜೆಡಿಎಸ್‌ಗೆ ಒಲಿಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT