ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಬರೆ ಕಾಮಗಾರಿ: ಅಭಿವೃದ್ಧಿಗೆ ಬರೆ

Last Updated 19 ಡಿಸೆಂಬರ್ 2012, 8:46 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ತಾಲ್ಲೂಕಿನ ಬೂದಿತಿಟ್ಟು ಗ್ರಾಮದಲ್ಲಿ ಮೂಲಭೂತ ಸೌಕರ್ಯದ ಕೊರತೆ ಹಾಗೂ ಅರೆಬರೆ ಕಾಮಗಾರಿಗಳಿಂದಾಗಿ ಅಭಿವೃದ್ಧಿ ಕುಂಠಿತಗೊಂಡಿದೆ.

ಮಾಲಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ 1,000 ಜನಸಂಖ್ಯೆಯಿದ್ದು ಮೂಲಭೂತ ಸೌಕರ್ಯಗಳು ಲಭಿಸಿಲ್ಲ. 2 ವರ್ಷಗಳ ಹಿಂದೆ ಚರಂಡಿ ನಿರ್ಮಾಣ ಮಾಡಲು ಕಾಲುವೆ ನಿರ್ಮಿಸಿದ್ದು, ಕೆಲವೊಂದು ಕಡೆ ಮಾತ್ರ ಕಾಮಗಾರಿ ನಡೆದಿದೆ. ಉಳಿದ ಜಾಗದಲ್ಲಿ ಮನೆಗಳಿಂದ ಹೊರ ಬರುವ ತ್ಯಾಜ್ಯ ನೀರು ಮನೆಯೆದುರೇ ಸಂಗ್ರಹಗೊಂಡು ಸೊಳ್ಳೆಗಳು ಹೆಚ್ಚಾಗಿ ಅನೈರ್ಮಲ್ಯ ವಾತಾವರಣ ಉಂಟಾಗಿದೆ.

ಹಲವು ಕಡೆಗಳಲ್ಲಿ ಗಿಡಗಂಟಿಗಳು ಬೆಳೆದು ಚರಂಡಿ ಕಾಣದಂತಾಗಿವೆ, ಇದರಿಂದ ರಾತ್ರಿ ಸಮಯದಲ್ಲಿ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಹಾಗೂ ಕೆಲ ವಾಹನಗಳು ಕಾಲುವೆಯಲ್ಲಿ ಜಾರಿದ ಘಟನೆಗಳೂ ನಡೆದಿವೆ ಎನ್ನುತ್ತಾರೆ ಗ್ರಾಮಸ್ಥರು.

ಸರಿಯಾಗಿ ವಿದ್ಯುತ್ ಪೂರೈಕೆಯಾಗದ ಕಾರಣ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಇನ್ನುಳಿದ ದಿನಗಳಲ್ಲಿ ಹ್ಯಾಂಡ್ ಪಂಪ್ ಅವಲಂಬಿಸಬೇಕಿದೆ. ಎರಡು ಹ್ಯಾಂಡ್‌ಪಂಪ್‌ಗಳಿದ್ದು ಒಂದು ಹ್ಯಾಂಡ್‌ಪಂಪ್‌ನಲ್ಲಿ ಪೈಪ್ ಹಾಳಾಗಿರುವುದರಿಂದ ಕಬ್ಬಿಣದ ಅಂಶವುಳ್ಳ ನೀರು ಬರುತ್ತಿದೆ. ಈ ನೀರನ್ನೇ ಕುಡಿಯುವ ಪರಿಸ್ಥಿತಿ ಗಾಮಸ್ಥರಿಗೆ ಎದುರಾಗಿದೆ.

ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಬೀದಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಕಾಮಗಾರಿ ನಡೆಸಲಾಗಿದೆ. ಆದರೆ ಗುತ್ತಿಗೆದಾರರು ಸಿಮೆಂಟ್ ಪೈಪ್‌ಗಳನ್ನು ಹಾಕಿ ಮಣ್ಣುಮುಚ್ಚಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮಳೆಗಾಲದಲ್ಲಿ ನೀರು ಸರಾಗವಾಗಿ ಕೆರೆಗೆ ಹೋಗಲೆಂದು ಚರಂಡಿ ನಿರ್ಮಿಸಿದ್ದಾರೆ. ಈ ಕಾಮಗಾರಿ ಕೂಡ ಪೂರ್ಣವಾಗಿಲ್ಲ.
ಗ್ರಾಮ ಪಂಚಾಯಿತಿ ವತಿಯಿಂದ ಎನ್‌ಆರ್‌ಇಜಿ ಯೋಜನೆಯಲ್ಲಿ 56 ಪುರುಷರು ಮತ್ತು 27 ಮಹಿಳೆಯರಿಗೆ ಜಾಬ್‌ಕಾರ್ಡ್ ನೀಡುವುದಾಗಿ ತಲಾ ರೂ.60ರಂತೆ ಹಣ ಹಾಗೂ ಫೋಟೋ ತೆಗೆದುಕೊಂಡು ಹೋಗಿ ಮೂರು ತಿಂಗಳಾಗಿವೆ. ಆದರೆ ಇದುವರೆಗೂ ಜಾಬ್‌ಕಾರ್ಡ್ ನೀಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT