ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಚಾರ್ಯರ ಶಿಸ್ತು ಆದರ್ಶವಾಗಲಿ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿರುವ ಈ ಸಂದರ್ಭದಲ್ಲಿ ಡಾ.ವಿ.ಎಸ್.ಆಚಾರ್ಯ ಅವರ ವಿರುದ್ಧ ಒಂದೇ ಒಂದು ಆರೋಪ ಕೂಡ ಕೇಳಿ ಬಂದಿರಲಿಲ್ಲ. ಅವರ ನಡತೆ, ಶಿಸ್ತು, ಪ್ರಾಮಾಣಿಕತೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಆದರ್ಶವಾಗಲಿ~ ಎಂದು ರಾಜ್ಯಸಭಾ ಸದಸ್ಯ ರಾಮಜೋಯಿಸ್ ಬುಧವಾರ ಇಲ್ಲಿ ಹೇಳಿದರು.

ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಆಯೋಜಿಸಿದ್ದ ಡಾ.ವಿ.ಎಸ್.ಆಚಾರ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

`ಇವತ್ತು ರಾಜಕೀಯ ಕಲುಷಿತಗೊಂಡಿದೆ. ಇಂತಹ ಸನ್ನಿವೇಶದಲ್ಲೂ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಆಚಾರ್ಯ ಎಲ್ಲರ ಕಣ್ಣ ಮುಂದೆ ಇದ್ದರು. ಎಲ್ಲರಲ್ಲೂ ಸ್ವಾರ್ಥ ಮನೆ ಮಾಡಿದೆ. ತತ್ವ ನಿಷ್ಠೆಯ ಅಭಾವ ಕಾಣುತ್ತಿದೆ. ಅಧಿಕಾರ ದಾಹ ಹೆಚ್ಚಾಗಿದೆ. ಏನೇ ಆದರೂ ಮಂತ್ರಿಯಾಗಿ ಲೂಟಿ ಮಾಡಬೇಕೆಂಬ ಮಹದಾಸೆ ಕಾಣುತ್ತಿದೆ~ ಎಂದು ಅವರು ಅಭಿಪ್ರಾಯಪಟ್ಟರು.

`ಪಕ್ಷ ಕೊಡುವ ಜವಾಬ್ದಾರಿಯನ್ನು ನಿಭಾಯಿಸುವುದನ್ನು ಮೊದಲು ಕಲಿಯಬೇಕು. ಅದು ಬಿಟ್ಟು ಇಂತಹದ್ದೇ ಸ್ಥಾನ ಬೇಕೆಂದು ಹಠ ಮಾಡುವುದು ಸರಿಯಲ್ಲ. ನಮ್ಮನ್ನು ಅಗಲಿದ ಆಚಾರ್ಯ ಸೇರಿದಂತೆ ಯಾರೂ ಅಧಿಕಾರಕ್ಕಾಗಿ ಬಿಜೆಪಿ ಅಥವಾ ಜನಸಂಘವನ್ನು ಕಟ್ಟಲಿಲ್ಲ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು~ ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.

`ನೀವೇನು ಆಗಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಬಿಜೆಪಿಯಿಂದ ಜನಸಂಘದ ಧ್ಯೇಯ ಉಳಿಸಿಕೊಳ್ಳುತ್ತಿಲ್ಲ. ವಿಭಿನ್ನ ಪಕ್ಷ ಎಂಬ ಹೆಗ್ಗಳಿಕೆ ಪಡೆದಿದ್ದ ಬಿಜೆಪಿ ಇವತ್ತು ಭಿನ್ನರ ಪಕ್ಷವಾಗಿ ಮಾರ್ಪಡುತ್ತಿದೆ. ಪಕ್ಷದಲ್ಲಿ ಬರೇ ಒಳಜಗಳ ತುಂಬಿಕೊಂಡಿದೆ. ಇದನ್ನು ಹೋಗಲಾಡಿಸಬೇಕಾದರೆ ಎಲ್ಲರೂ ಆಚಾರ್ಯರ ಹಾಗೆ ಪಕ್ಷ ನಿಷ್ಠೆ ಬೆಳೆಸಿಕೊಳ್ಳಬೇಕು~ ಎಂದು ಹೇಳಿದರು.


ಪಕ್ಷದ ರಾಜ್ಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾತನಾಡಿ, `ಪಕ್ಷವನ್ನು ಶೂನ್ಯದಿಂದ ಕಟ್ಟಿ ಬೆಳೆಸಿದ ಆಚಾರ್ಯ ಅವರು ಎಂದೂ ಅಧಿಕಾರಕ್ಕಾಗಿ ಆಸೆ ಪಡಲಿಲ್ಲ~ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ರಾಮಚಂದ್ರಗೌಡ ಮಾತನಾಡಿ, `ಬಿಜೆಪಿಯಲ್ಲಿನ ಗೊಂದಲಗಳಿಗೆ ಆಚಾರ್ಯ ಒಬ್ಬ ಚಿಕಿತ್ಸಕರಾಗಿದ್ದರು~ ಎಂದು ಗುಣಗಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT