ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶ ರಾಜಕಾರಣಕ್ಕೆ ಮುನ್ನುಡಿ ಬರೆದ ಸಾಗರ

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಸಾಗರ (ಶಿವಮೊಗ್ಗ ಜಿಲ್ಲೆ):ಚುನಾವಣೆಯಲ್ಲಿ ಜಾತಿ ಮತ್ತು ಹಣದ ಬೆಂಬಲ ಇದ್ದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂಬ ಮಾತು ಈಗ ಎಲ್ಲೆಡೆ ಚಾಲ್ತಿಯಲ್ಲಿದೆ. ರಾಜಕೀಯ ಪಕ್ಷಗಳು ಟಿಕೆಟ್ ವಿತರಿಸುವಾಗ ಆಯಾ ಕ್ಷೇತ್ರಗಳಲ್ಲಿ ಯಾವ ಜಾತಿಯ ಜನರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಗಮನಿಸಿಯೇ ಟಿಕೆಟ್ ಹಂಚುವುದು ಸರ್ವೇಸಾಮಾನ್ಯ.

ಈ ಮಾತಿಗೆ ಅಪವಾದ ಎನ್ನುವಂತೆ ನಡೆದದ್ದು 1952ರ ಸಾಗರ ವಿಧಾನಸಭಾ ಕ್ಷೇತ್ರದ ಚುನಾವಣೆ. ಹಣ ಮತ್ತು ಜಾತಿಯ ಬೆಂಬಲವಿಲ್ಲದೇ ಸೋಷಿಯಲಿಷ್ಟ್ ಪಕ್ಷದಿಂದ ಸ್ಪರ್ಧಿಸಿದ್ದ ಶಾಂತವೇರಿ ಗೋಪಾಲಗೌಡ ಅವರು ಈ ಕ್ಷೇತ್ರ ದಲ್ಲಿ ಗೆಲ್ಲುವ ಮೂಲಕ ಕರ್ನಾಟಕದಲ್ಲಿ ಆದರ್ಶದ ರಾಜಕಾರಣಕ್ಕೆ ಮುನ್ನುಡಿ ಬರೆದರು.  

1952ರಲ್ಲಿ ನಡೆದ ಮೊದಲ  ಸಾರ್ವತ್ರಿಕ  ಚುನಾವಣೆಯಲ್ಲಿ  ದೇಶದ   ಎಲ್ಲೆಡೆ ಕಾಂಗ್ರೆಸ್ ಪಕ್ಷದ ಅಲೆ ಇತ್ತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬದರೀನಾರಾಯಣ್ ಅಯ್ಯಂಗಾರ್ ಸ್ಪರ್ಧಿಸಿದ್ದರು. ಗೋಪಾಲಗೌಡರು ಯಾವ ಜಾತಿಗೆ ಸೇರಿದ್ದರೋ ಆ ಜಾತಿಯ ಜನ ಈ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರಲಿಲ್ಲ. ಆಗಷ್ಟೇ ಈ ಭಾಗದಲ್ಲಿ ನಡೆದ ಕಾಗೋಡು ಸತ್ಯಾಗ್ರಹ ಗೋಪಾಲಗೌಡ ಅವರ ಸ್ಪರ್ಧೆಗೆ ವೇದಿಕೆ ಸೃಷ್ಟಿಸಿತ್ತು. ಕಾಂಗ್ರೆಸ್ ಪರ ಬಲವಾದ ಅಲೆಯ ಜತೆಗೆ ಜಮೀನ್ದಾರಿ ಹಿನ್ನೆಲೆಯ ಬದರೀ ನಾರಾಯಣ್ ಅಯ್ಯಂಗಾರ್ ಅವರನ್ನು ಚುನಾವಣೆಯಲ್ಲಿ ಎದುರಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅಲ್ಲದೇ ಗೋಪಾಲಗೌಡರು ಈ ಕ್ಷೇತ್ರದವರಲ್ಲ ಎಂಬ ಅಂಶವು ಸೇರಿತ್ತು.

ಈ ಎಲ್ಲಾ ಪ್ರತಿಕೂಲ ಅಂಶಗಳ ನಡುವೆಯೂ ಕ್ಷೇತ್ರದ ಮತದಾರರು ಗೋಪಾಲಗೌಡ ಅವರಿಗೆ ಚುನಾವಣೆಗೆ ಹಣ ನೀಡಿ ಮತವನ್ನೂ ನೀಡಿದರು. ಯಾವುದೇ ಹಣ ಖರ್ಚು ಮಾಡದೇ ಗೋಪಾಲಗೌಡರು 13,722 ಮತಗಳನ್ನು ಗಳಿಸಿದರೆ ಅವರ ಪ್ರತಿಸ್ಪರ್ಧಿ ಬದರೀನಾರಾಯಣ್ ಅಯ್ಯಂಗಾರ್ 11,485 ಮತಗಳನ್ನು ಪಡೆದರು. ಈ ಮೂಲಕ ಗೋಪಾಲಗೌಡ ಅವರು ಕರ್ನಾಟಕದ ಪ್ರಮುಖ ರಾಜಕಾರಣಿಯಾಗಿ ಹೊರಹೊಮ್ಮಲು ಅವಕಾಶ ಮಾಡಿಕೊಟ್ಟದ್ದು ಈ ಕ್ಷೇತ್ರದ ಹೆಗ್ಗಳಿಕೆ.

ಒಂದೆಡೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಬದರೀ ನಾರಾಯಣ್ ಅಯ್ಯಂಗಾರ್, ಮತ್ತೊಂದೆಡೆ ಕಾಗೋಡು ಸತ್ಯಾಗ್ರಹಕ್ಕೆ ಕಾವು ನೀಡಿದ ಗೋಪಾಲಗೌಡ ಅವರ ನಡುವೆ ಅಂದಿನ ಚುನಾವಣೆ ಅಕ್ಷರಶಃ ತತ್ವ ಸಿದ್ಧಾಂತಗಳ ಆಧಾರದ ಮೇಲೆ ನಡೆದಿತ್ತು. ಯಾವುದೇ ವೈಯಕ್ತಿಕ ದೋಷಾರೋಪಣೆಗಳನ್ನು ಮಾಡದೇ ಅಭ್ಯರ್ಥಿಗಳು ಪರಸ್ಪರ ಒಬ್ಬರು ಮತ್ತೊಬ್ಬರನ್ನು ಗೌರವಿಸುತ್ತಾ ಚುನಾವಣೆ ಮಾಡಿದ್ದು ಅಂದಿನ ವಿಶೇಷ ಎಂದು ಈ ಕ್ಷೇತ್ರದ ಹಿರಿಯ ಮತದಾರರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. 
-ಎಂ.ರಾಘವೇಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT