ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಾಧನೆ ಬಳಿಕ ಶಾಂತಿ ಸಮಾರಾಧನೆ

ಚೆಲ್ಲಿದರು ಮಲ್ಲಿಗೆಯ ಭಾಗ 10
Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕರಗ ಶಕ್ತ್ಯೋತ್ಸವದ ಹತ್ತನೆಯ ದಿನ ಆಚರಣೆ ಮಾಡುವುದೇ ಗಾವು ಸೇವಾ ಆರಾಧನೆ.  ಶಾಕ್ತಪಂಥದ ಆಚರಣೆಗಳ ಪದ್ಧತಿಯಲ್ಲಿ ಶಕ್ತಿದೇವತೆಯ ಆರಾಧನೆಯ ಬಳಿಕ ಶಾಂತಿ ಮಾಡುವುದು ಮಹತ್ವದ ಭಾಗ. ಇದಕ್ಕಾಗಿ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಆವರಣವನ್ನು ಕೇಂದ್ರವನ್ನಾಗಿಸಿಕೊಂಡು ನಡೆಯುವ ಶ್ರೀ ದ್ರೌಪದಿ ಕರಗ ಉತ್ಸವದ ನಂತರ ಗಾವು ಸೇವೆ ಕೈಗೊಳ್ಳಲಾಗುತ್ತದೆ. 

ಇದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆವರಣದಲ್ಲಿರುವ ಏಳು ಸುತ್ತಿನ ಕೋಟೆಯ ಬಳಿಗೆ ಉತ್ಸವಮೂರ್ತಿಗಳನ್ನು ಅಲಂಕರಿಸಿ ರಥದಲ್ಲಿಟ್ಟುಕೊಂಡು ಮೆರವಣಿಗೆಯಲ್ಲಿ ಶ್ರೀ ಧರ್ಮರಾಯಸ್ವಾಮಿ ದೇವಾಲಯದಿಂದ ಕರೆತರಲಾಗುವುದು. ನಂತರ ಪುರಾಣ ಪ್ರವಚನ ಆರಂಭ. 

ಮಹಾಭಾರತದ ಪ್ರಮುಖ ಪ್ರಸಂಗಗಳನ್ನು ಪಠಿಸುವ ಪೂಜಾರರು ಧರ್ಮರಾಯನು ಮಹಾಭಾರತದ ಅಂತ್ಯದಲ್ಲಿ ನಡೆಸುವ ಪೋತರಾಜನ ಕಥೆಯನ್ನು ಬಹುಮುಖ್ಯವಾಗಿ ವಿವರಿಸುತ್ತಾರೆ. ಪೋತರಾಜನ ವಿಶೇಷತೆಯನ್ನು ಪರಿಚಯಿಸುವ ಕಾರ್ಯವೂ ಪಠಣದ ಸಮಯದಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಪೂಜಾರರು, ವೀರಕುಮಾರರು, ಜಾಕರಿದಾರರು ಏಳು ಸುತ್ತಿನ ಕೋಟೆಯಲ್ಲಿ ಹಾಜರಿರುತ್ತಾರೆ.

ಪುರಾಣಗಳಲ್ಲಿ ಬಣ್ಣಿಸಿರುವ ಪೋತರಾಜನ ಬಗ್ಗೆ ತಿಳಿಹೇಳುವ ಪೂಜಾರರು ಘಂಟೆ ಪೂಜಾರರ ಮಾರ್ಗದರ್ಶನದಲ್ಲಿ ಪುನಃ ಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೆ ಉತ್ಸವವನ್ನು ಕರೆತರುತ್ತಾರೆ.  

ದೇಗುಲದಿಂದ ಪೋತರಾಜ ಪೂಜಾರರ ಮನೆಗೆ ವಿಧಿ ವಿಧಾನಗಳೊಂದಿಗೆ ಆಗಮಿಸುವ ಘಂಟೆ ಪೂಜಾರರು ಪೋತರಾಜರ ಶಕ್ತಿಯನ್ನು ಧರಿಸಲು ಪೋತರಾಜ ಪೂಜಾರಿಯನ್ನು ಪ್ರೇರೇಪಿಸುವರು. ಪೋತರಾಜರನ್ನು ಆವಾಹಿಸಿಕೊಂಡ ಪೂಜಾರರನ್ನು ದೇವಾಲಯಕ್ಕೆ ಕರೆತರಲಾಗುವುದು. ಕೋಪ ಹಾಗೂ ಸಿಟ್ಟಿನಿಂದ ಕುದಿಯುತ್ತಿರುವ ಪೋತರಾಜರನ್ನು ಸಂತೈಸಲು ಮಂತ್ರ ಪಠಿಸಿ, ತಂತ್ರ ಮಾಡಿದರೂ ಪೋತರಾಜರ ಉದ್ರೇಕ ಕಡಿಮೆಯಾಗುವುದಿಲ್ಲ.  ಇಂತಹ ಸಂದರ್ಭದಲ್ಲಿ ಕಪ್ಪು ಮೇಕೆಯೊಂದನ್ನು ಬಲಿಕೊಟ್ಟಾಗ ಪೋತರಾಜ ಶಾಂತರಾಗುತ್ತಾರೆಂಬ ನಂಬಿಕೆ ಭಕ್ತರದು.

ಇದರಿಂದಾಗಿ ಎಲ್ಲಾ ಶಕ್ತಿಗಳ ರೌದ್ರರೂಪವು ಶಮನಗೊಳ್ಳಲು ಹಾಗೂ ಶಾಂತಿಗೊಳ್ಳಲು ಈ ಗಾವು ಉತ್ಸವವನ್ನು ದೇವಾಲಯದಲ್ಲಿ ಆಚರಿಸುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯ. ಈ ಗಾವು ಉತ್ಸವವು ಏಪ್ರಿಲ್ 25ರಂದು ರಾತ್ರಿ ನಡೆಯುವುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT