ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್ ಟೆನಿಸ್: ಮೂರನೇ ಸುತ್ತಿಗೆ ನೊವಾಕ್, ಸೆರೆನಾ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಎಎಫ್‌ಪಿ): ಹಾಲಿ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೊವಿಚ್ ಹಾಗೂ ಅಮೆರಿಕದ ಸೆರೆನಾ ವಿಲಿಯಮ್ಸ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಮೆಲ್ಬರ್ನ್ ಪಾರ್ಕ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜೊಕೊವಿಚ್ 6-3, 6-2, 6-1ರ ನೇರ ಸೆಟ್‌ಗಳಿಂದ ಕೊಲಂಬಿಯಾದ ಸ್ಯಾಂಟಿಯಾಗೊ ಗಿರಾಲ್ಡೊ ಎದುರು ಗೆಲುವು ಪಡೆದರು.

ಕಳೆದ ವರ್ಷ ಮೂರು ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಚಾಂಪಿಯನ್ ಆಗಿರುವ ಈ ಆಟಗಾರ ಎರಡನೇ ಸುತ್ತಿನ ಪಂದ್ಯದಲ್ಲಿ ಗಂಟೆಗೆ 201ಕಿ.ಮೀ. ವೇಗದಲ್ಲಿ ಸರ್ವ್ ಮಾಡಿದರು. ಅಷ್ಟೇ ಅಲ್ಲ ಒಟ್ಟು 9 ಏಸ್‌ಗಳನ್ನು ಸಿಡಿಸಿದರು.

41 ನಿಮಿಷಗಳ ಕಾಲ ನಡೆದ ಮೊದಲ ಸೆಟ್‌ನಲ್ಲಿ ನೊವಾಕ್ ಅಲ್ಪ ಪ್ರತಿರೋಧ ಎದುರಿಸಬೇಕಾಯಿತು. ಇನ್ನುಳಿದ ಎರಡೂ ಸೆಟ್‌ಗಳಲ್ಲಿ ಗಿರಾಲ್ಡೊನಿಂದ ಹೆಚ್ಚು ಪೈಪೋಟಿ ಮೂಡಿಬರಲಿಲ್ಲ. ಈ ಹೋರಾಟ ಒಟ್ಟು 102 ನಿಮಿಷ ನಡೆಯಿತು. ಅಮೆರಿಕದ ಸೆರೆನಾ ವಿಲಿಯಮ್ಸ ಎರಡನೇ ಸುತ್ತಿನ ಪಂದ್ಯದಲ್ಲಿ 6-0, 6-4ರಲ್ಲಿ ಜೆಕ್ ಗಣರಾಜ್ಯದ ಬರ್ಬರೊ ಜಾಹ್ಲಾವೊವಾ ಎದುರು ಗೆಲುವು ಸಾಧಿಸಿದರು.

ಅಮೆರಿಕದ 15ನೇ ಶ್ರೇಯಾಂಕದ ಆಟಗಾರ ಆ್ಯಂಡಿ ರಾಡಿಕ್ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಲು ಕಂಡರು. ಆತಿಥೇಯ ರಾಷ್ಟ್ರದ ಶ್ರೇಯಾಂಕ ರಹಿತ ಆಟಗಾರ ಲೇಟನ್ ಹೆವಿಟ್ 3-6, 6-3, 6-4ರಲ್ಲಿ  ಮುನ್ನಡೆ ಸಾಧಿಸಿದ್ದ ವೇಳೆ ರಾಡಿಕ್ ಗಾಯದ ಸಮಸ್ಯೆಯಿಂದ ಹಿಂದೆ ಸರಿದಿದ್ದರು. 

ಪುರುಷರ ವಿಭಾಗದ ಸಿಂಗಲ್ಸ್‌ನ ಎರಡನೇ ಸುತ್ತಿನ ಇತರ ಪಂದ್ಯಗಳಲ್ಲಿ ಇಂಗ್ಲೆಂಡ್‌ನ ಆ್ಯಂಡಿ ಮರ‌್ರೆ 6-1, 6-4, 6-4ರಲ್ಲಿ ಫ್ರಾನ್ಸ್‌ನ ಎಡ್ವರ್ಡ್ ರೋಜರ್ ವಾಸಲಿನ್ ಮೇಲೂ, ಫ್ರಾನ್ಸ್‌ನ ಜೋ ವಿಲ್ಫ್ರೆಡ್ ಸೋಂಗಾ 7-5, 6-4, 6-4ರಲ್ಲಿ ಇಂಗ್ಲೆಂಡ್‌ನ ರಿಚರ್ಡ್ ಮೆಲ್ಲೊ ವಿರುದ್ಧವೂ, ಫ್ರಾನ್ಸ್‌ನ ಗೈಲ್ ಮೊನ್‌ಫಿಲ್ಸ್ 2-6, 6-0, 6-4, 6-2 ರಲ್ಲಿ ಬ್ರೆಜಿಲ್‌ನ ಥಾಮಸ್ ಬೆಲೂಸಿ ಎದುರೂ, ಸ್ಪೇನ್‌ನ ಡೇವಿಡ್ ಫೆರರ್ 6-7, 6-2, 3-6, 6-2, 6-3ರಲ್ಲಿ ಅಮೆರಿಕದ ರ‌್ಯಾನ್ ಸ್ವೀಟಿಂಗ್ ಮೇಲೂ, ಸರ್ಬಿಯಾದ ಜಾಂಕೊ ತಿಪ್ಸರೆವಿಕ್ 3-6, 6-2, 7-6, 6-4ರಲ್ಲಿ ಆಸ್ಟ್ರೇಲಿಯಾ ಜೇಮ್ಸ ಡಕ್‌ವರ್ತ್ ಮೇಲೂ, ಜಪಾನ್‌ನ ಕೈ ನಿಷಿಕೋರಿ 3-6, 1-6, 6-4, 6-1, 6-1ರಲ್ಲಿ ಆಸ್ಟ್ರೇಲಿಯಾದ ಮ್ಯಾಥೂ ಎಡ್ಬನ್ ವಿರುದ್ಧವೂ ಜಯ ಸಾಧಿಸಿ ಮೂರನೇ ಸುತ್ತಿಗೆ ಮುನ್ನಡೆದರು.

ಶರ್ಪೋವಾಗೆ ಗೆಲುವು: ರಷ್ಯಾದ ಐದನೇ ಶ್ರೇಯಾಂಕದ ಆಟಗಾರ್ತಿ ಮರಿಯಾ ಶರ್ಪೋವಾ 6-0, 6-1ರಲ್ಲಿ ಅಮೆರಿಕದ ಜಾಮಿಯಾ ಹಾಂಪ್ಟನ್ ಎದುರು ಗೆಲುವು ಪಡೆದರು. ವೃತ್ತಿ ಜೀವನದಲ್ಲಿ ಶರ್ಪೋವಾ ಪಡೆದ 500ನೇ ಗೆಲುವು ಇದಾಗಿದೆ.

2008ರಲ್ಲಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ ನಂತರ ಯಾವುದೇ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಕಳೆದ ವರ್ಷದ ಫ್ರೆಂಚ್ ಓಪನ್ ಟೂರ್ನಿಯ ನಾಲ್ಕರ ಘಟ್ಟದ ಪಂದ್ಯದಲ್ಲಿ ಮಾಜಿ ಅಗ್ರ ಶ್ರೇಯಾಂಕದ ಆಟಗಾರ್ತಿ ಮುಗ್ಗರಿಸಿದ್ದರು. `ಇಷ್ಟು ದಿನ ಕಾಡಿದ್ದ ಮೊಣಕಾಲು ನೋವು ಈಗ ಗುಣವಾಗಿದೆ. ಇನ್ನುಮುಂದೆ ಇಂದಿಗಿಂತಲೂ ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸುತ್ತೇನೆ~ ಎಂದು ಶರ್ಪೋವಾ ಪ್ರತಿಕ್ರಿಯಿಸಿದರು.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಫ್ರಾನ್ಸ್‌ನ ಮಾರಿಯನ್ ಬರ್ಟೊಲಿ 6-3, 6-2ರಲ್ಲಿ ಆಸೀಸ್‌ನ ಜೆಲೆನಾ ದಿಕೊಜ್ ಮೇಲೂ, ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ 6-2, 2-6, 6-4ರಲ್ಲಿ ಸ್ಪೇನ್‌ನ ಕಾರ್ಲಾ ಸೊರೆಜ್ ನಾವಾರೊ ವಿರುದ್ಧವೂ, ರಷ್ಯಾದ ವೆರಾ ಜೊನಾರೇವಾ 6-1, 7-6ರಲ್ಲಿ ಜೆಕ್ ಗಣರಾಜ್ಯದ ಲೂಸಿಯಾ ರ‌್ಯಾಡಿಕಾ ಮೇಲೂ, ಜರ್ಮನಿಯ ಸಬಿನಿ ಲಿಸಿಕಿ 6-1, 6-2ರಲ್ಲಿ ಇಸ್ರೇಲ್‌ನ ಶಹರ್ ಪೀರ್ ವಿರುದ್ಧವೂ, ಶ್ರೇಯಾಂಕ ರಹಿತ ಅಮೆರಿಕದ ವಾನಿಯಾ ಕಿಂಗ್ 5-7, 6-3, 6-4ರಲ್ಲಿ ರಷ್ಯಾದ ಅನಸ್ತೇಸಿಯಾ ಪೆವ್ಲೊಚಂಕೊವಾ ಮೇಲೂ ಗೆಲುವು ಸಾಧಿಸಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟರು.

ಸಾನಿಯಾ-ಎಲೆನಾ ಶುಭಾರಂಭ: ಭಾರತದ ಸಾನಿಯಾ ಮಿರ್ಜಾ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ಅವರು ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ಶುಭಾರಂಭ ಮಾಡಿದರು. ಮೊದಲ ಸುತ್ತಿನ ಪಂದ್ಯದಲ್ಲಿ ಈ ಜೋಡಿ 6-0, 6-2ರಲ್ಲಿ ಜರ್ಮನಿಯ ಡಿ. ಎಲಿನಿ-ಅಲೆಕ್ಸಾಂಡ್ರಾ ಪನೊವಾ ಎದುರು ಗೆಲುವು ಸಾಧಿಸಿತು.

ಎರಡೂ ಸೆಟ್‌ಗಳಲ್ಲಿ ಇಂಡೋ -ರಷ್ಯನ್ ಜೋಡಿಗೆ ಎದುರಾಳಿ ಆಟಗಾರ್ತಿಯರು ಸುಲಭವಾಗಿ ಶರಣಾದರು. ಮೊದಲ ಸೆಟ್ ಕೇವಲ 19 ನಿಮಿಷ ನಡೆದರೆ, ಎರಡನೇ ಸೆಟ್ 31 ನಿಮಿಷದಲ್ಲಿ ಅಂತ್ಯ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT