ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಸುರಕ್ಷೆಯ ಕೀಲಿಕೈ

Last Updated 25 ಜೂನ್ 2011, 19:30 IST
ಅಕ್ಷರ ಗಾತ್ರ

`ದೇಶದಲ್ಲಿ ಎಂತಹ ಬರಗಾಲವೇ ಬರಲಿ, ಶ್ರೀಲಂಕಾ ಮಾತ್ರ ಹಸಿವೆಯಿಂದ ಸೋಲದು. ಕಾರಣ, ನಾವು ಸಾವಿರಗಟ್ಟಲೆ ಹೆಕ್ಟಾರಿನಲ್ಲಿ ಹಲಸು ಬೆಳೆಸಿದ್ದೇವೆ~. ಶ್ರೀಲಂಕಾದ ತೋಟಗಾರಿಕಾ ಅಧಿಕಾರಿಯೊಬ್ಬರ ಮಾತಿದು. ಭವಿಷ್ಯದ ಆಹಾರ ಸುರಕ್ಷತೆಯ ಮುಂದಾಲೋಚನೆ.

ನಮ್ಮಲ್ಲಿ ಹಲಸು ನಿರ್ಲಕ್ಷಿತ ಹಣ್ಣು. ಹಿತ್ತಿಲಿನಿಂದ ಊಟದ ಮೇಜಿಗೆ ಬಾರದು. ಆಗಿಹೋದ ಕಾಲಘಟ್ಟದ ಬದುಕನ್ನು ಸೋಲಲು ಬಿಡದ ಹಲಸು, ಧಾವಂತದ ಬದುಕಿನ ಮುಂದೆ ಸೊರಗುತ್ತಿದೆ. ಫಾಸ್ಟ್ ಫುಡ್, ಹೈ-ಫೈ ಲೈಫ್ ಸ್ಟೈಲ್, ಸಿದ್ಧ ಆಹಾರಗಳ ಲಭ್ಯತೆಯು ಪಾರಂಪರಿಕ ಆಹಾರ ಕ್ರಮಗಳಿಗೆ ಮಸುಕು ತಂದಿದೆ.

`ಹಲಸು : ಸ್ಥಳೀಯ ಆಹಾರ ಸುರಕ್ಷೆಯ ಕೀಲಿಕೈ~ ಎಂಬ ಘೋಷವಾಕ್ಯದಡಿಯಲ್ಲಿ ಜೂನ್ ಮೊದಲ ವಾರ ತಿರುವನಂತಪುರದಲ್ಲಿ ಪ್ರಥಮ ರಾಷ್ಟ್ರೀಯ ಹಲಸು ಮೇಳ ಜರುಗಿತು. ಹಲಸಿನ ವಿವಿಧ ಸಾಧ್ಯತೆಗಳತ್ತ ಬೆಳಕು ಚೆಲ್ಲಿತು. ಅಲ್ಲೆಗ ಹಲಸಿನ ಬಗ್ಗೆ ಹೊಸ ಆಸಕ್ತಿ ಚಿಗುರೊಡೆದಿದೆ. ಈ ಅದ್ಭುತ ಹಣ್ಣಿನ ಅಲಕ್ಷ್ಯ ಸಲ್ಲದೆಂಬ ಸಂದೇಶ ಸಮಾಜದ ಎಲ್ಲ ಸ್ತರಗಳಲ್ಲೂ ಹಬ್ಬುತ್ತಿದೆ.

ಆದರೆ ಕರುನಾಡಲ್ಲಿ?
ಎಲ್ಲೋ ಒಂದಷ್ಟು ಹಣ್ಣು ಸೊಳೆ ತಿನ್ನುತ್ತೇವೆ. ಕಾಯಿಯಿಂದ ಚಿಪ್ಸ್, ಹಪ್ಪಳ ಬಿಟ್ಟರೆ ಬೇರೆ ಮನೆ ಪ್ರಯತ್ನಗಳು ಅಷ್ಟಕ್ಕಷ್ಟೇ. ಇದರಾಚೆಯ ನಮಗೆ ಅರಿವಿಲ್ಲದ ಹಲಸಿನ ಮೌಲ್ಯವರ್ಧನೆಯ ಪ್ರಯತ್ನ ಮತ್ತು ಅದನ್ನು ತಿಳಿದುಕೊಳ್ಳುವ ಅವಕಾಶದತ್ತ ಹೆಜ್ಜೆಯಿರಿಸಬೇಕಾದ ಅನಿವಾರ್ಯತೆಯಿದೆ. ಬಿಡಿಬಿಡಿಯಾಗಿ ಆಗುತ್ತಿರುವ ಕೆಲಸಗಳಿಗೆ ಸಾಂಘಿಕ ರೂಪ ಕೊಟ್ಟು ಬಳಕೆಯನ್ನು ಹೆಚ್ಚು ಮಾಡುವುದೇ `ಹಲಸು, ಆಹಾರ ಸುರಕ್ಷತೆ~ಗೆ ಹೆಜ್ಜೆಯಾದೀತು.

ಕೇರಳದಲ್ಲಿ ಹಲಸಿನ ಬಳಕೆ, ಮೌಲ್ಯವರ್ಧನೆಯಾದಷ್ಟು ನಮ್ಮಿಲ್ಲಿ ಆಗಿರುವುದು ಕಡಿಮೆಯೇ. ಸೊಳೆ ತಿನ್ನಲು, ಹಪ್ಪಳ, ಚಿಪ್ಸ್.. ಇಷ್ಟಕ್ಕೇ ಸೀಮಿತವಾಗಿದೆ. ಇಷ್ಟೇ ಅಲ್ಲ, ಅದರಾಚೆಯ ಹಲಸಿನ ಲೋಕವನ್ನು ತೆರೆದಿಡುವ ಕೆಲಸವೂ ಜತೆಜತೆಗೆ ನಡೆಯಬೇಕು. ಆಗಷ್ಟೇ ಹಲಸಿನ ಆಹಾರ ಸುರಕ್ಷೆಯ ಅರಿವು.

`ಬದುಕಿನೊಂದಿಗೆ ಹೊಸೆದುಕೊಂಡ ಹಲಸಿನಿಂದ ಬಹುವಿಧಧ ಖಾದ್ಯಗಳು ಮನೆಮಟ್ಟದಲ್ಲಾಗುತ್ತಿತ್ತು. ಅಕ್ಕಿ ಸಿಗದಿದ್ದರೂ ಹಸಿವೆಯಿಂದ ಯಾರೂ ನರಳಿಲ್ಲ. ಮನೆ ಮಂದಿಯ ಬದುಕಿನ ಗಾಡಿ ಓಡುತ್ತಿತ್ತು~- ಎಂದು, ಒಂದು ಕಾಲಘಟ್ಟವನ್ನು ನೆನಪಿಸಿಕೊಳ್ಳುತ್ತಾರೆ ಕೃಷಿ ಪತ್ರಕರ್ತ ಪಡಾರು ರಾಮಕೃಷ್ಣ ಶಾಸ್ತ್ರಿ.

ಹಳ್ಳಿಯ ಸಂಪನ್ಮೂಲ ಹಳ್ಳಿಗರಿಗೆ ಬೇಡ. ನಗರದಿಂದ ಬರುವ ಫಾಸ್ಟ್‌ಫುಡ್‌ನತ್ತ ಒಲವು. ಹಳ್ಳಿ ರುಚಿ ಗೊತ್ತಿರುವ ಪಟ್ಟಣದ ಮಂದಿ ಹಳ್ಳಿಯತ್ತ ಮತ್ತೆ ಮುಖ ಮಾಡಿದ್ದಾರೆ. ಹಳ್ಳಿ ಉತ್ಪನ್ನಗಳನ್ನು ನೆಚ್ಚಿಕೊಳ್ಳುವ ಮಂದಿ ಉತ್ಪನ್ನದ ಹುಡುಕಾಟ ಶುರು ಮಾಡಿದ್ದಾರೆ. ಆದರೆ ಉತ್ಪನ್ನವೆಲ್ಲಿದೆ?

ಕೃಷಿಕ ಡಾ.ಡಿ.ಸಿ.ಚೌಟ ಬಾಲ್ಯವನ್ನು ಜ್ಞಾಪಿಸಿಕೊಳ್ಳುತ್ತಾರೆ: `ಚಿಕ್ಕವನಿದ್ದಾಗ ನಮ್ಮಮ್ಮನಿಗೆ ಹಪ್ಪಳ ಮಾಡುವ ಹವ್ಯಾಸ. ಶಾಲೆ ಬಿಟ್ಟು ಬಂದ ತಕ್ಷಣ ಸೊಳೆ ಕ್ಲೀನ್ ಮಾಡುವ ಕೆಲಸ ನಮ್ಮದು. ಮನೆ ಮಂದಿ ಎಲ್ಲರೂ ಸಹಕರಿಸುತ್ತಿದ್ದರು. ನಿತ್ಯ ಸಂಜೆ ಹಪ್ಪಳದ ಸಮಾರಾಧನೆ. ಆದರೆ ಈಗ ಹಪ್ಪಳವನ್ನು ಅಂಗಡಿಯಿಂದ ತರುವ ಸ್ಥಿತಿ~.

ಇದು ಮನೆ ಮನೆ ಕತೆ. ಯಾಕೆ ಹೀಗೆ? ಹಲಸು, ಮಾವುಗಳು ಆಹಾರ ಪಟ್ಟದಿಂದ ಕಳಚಿವೆ. ಅವುಗಳು ಫ್ಯಾಶನ್ ಆಗಿದೆ. ಮನೆಯಲ್ಲಿ ತಯಾರಾದ ಉತ್ಪನ್ನಗಳು ನೆಂಟರಿಷ್ಟರಿಗೆ, ಬಂಧುಗಳ ಮನೆವರೆಗೂ ವಿತರಣೆಯಾಗುತ್ತಿತ್ತು. ಈಗ ಹಾಗಲ್ಲ, ಒಂದು ಐಟಂ ಸಿಗದಿದ್ದರೆ ಏನಾಯ್ತು, ಅದಕ್ಕೆ ಪರ್ಯಾಯವಾದ ಬೇರೊಂದು ಐಟಂ ಮಾರುಕಟ್ಟೆಯಲ್ಲಿದೆ. ಅದುವೇ ಆಗಬೇಕೆನ್ನುವ ಅನಿವಾರ್ಯವಿಲ್ಲ. ಚಿಪ್ಸ್ ಮನೆಯಲ್ಲೇ ಮಾಡಬೇಕಿಲ್ಲ, ಬೇಕರಿಯಲ್ಲಿ ಸಿಗುತ್ತದಲ್ಲ! ಹಪ್ಪಳ ಮಾರುಕಟ್ಟೆಯಲ್ಲಿ ಲಭ್ಯ, ಹಣ ಚೆಲ್ಲಿದರೆ ಆಯಿತು.

`ರೇಷನ್‌ನಲ್ಲಿ ಎರಡು ರೂಪಾಯಿಗೆ ಅಕ್ಕಿ ಸಿಗೋವಾಗ ಯಾಕ್ರಿ ರಾಗಿ, ಗೋಧಿ ಬೆಳೀಬೇಕು. ವಾರಕ್ಕೆ ಮೂರು ದಿವಸ ಕೆಲಸಕ್ಕೆ ಹೋದ್ರೆ ಸಾಕಲ್ವಾ?~- ಬೆಂಗಳೂರು ಸನಿಹದ ಹಾರೋಹಳ್ಳಿಯಲ್ಲಿ ಪ್ರವಾಸ ಮಾಡುತ್ತಿದ್ದಾಗ ರೈತರೊಬ್ಬರು ಹೇಳಿದ ಮಾತು ನಿತ್ಯ ನೆನಪಾಗುತ್ತದೆ. ಈ ಮನೋಭಾವ ಕೃಷಿಯಲ್ಲಿ ಮಾತ್ರವಲ್ಲ, ಎಲ್ಲ ರಂಗದಲ್ಲೂ ಪ್ರತಿಧ್ವನಿಸುತ್ತಿದೆ. ಇಂತಹ ವ್ಯವಸ್ಥೆಗಳು ಆಹಾರ ಸುರಕ್ಷೆ ಪರಿಕಲ್ಪನೆಯನ್ನು ಬುಡಮೇಲು ಮಾಡಿದೆ. ದುಡಿಯುವವನನ್ನು ದುಡಿಯದಂತೆ, ಸೋಮಾರಿಯಾಗಿ ಮಾಡಿದೆ. 

ಮೇಳದಲ್ಲಿ ಮೇಳೈಸಿದ ಹಲಸಿನ ಸಾಧ್ಯತೆಗಳು
ತಿರುವನಂತಪುರದ ಹಲಸು ಮೇಳದಲ್ಲಿ ಐವತ್ತಕ್ಕೂ ಹೆಚ್ಚೂ ಮಳಿಗೆಯನ್ನು ಸುತ್ತುತ್ತಿದ್ದೆ. ಹಪ್ಪಳದಿಂದ ಐಸ್‌ಕ್ರೀಂ ತನಕ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ಮೇಲಾಟ. ಸ್ಥಳದಲ್ಲೇ ಖಾದ್ಯಗಳ ಲೈವ್ ತಯಾರಿ. ಅವುಗಳನ್ನು ಹೊಟ್ಟೆಗಿಳಿಸಿಕೊಳ್ಳಲು ಕಾತರಿಸುವ ಹಲಸುಪ್ರಿಯರು. ಹಲಸಿನ ಹಣ್ಣಿನ ದೋಸೆ, ಪಪ್ಸ್, ಜಾಮ್, ಹಲ್ವ, ಚಾಕೊಲೇಟ್, ಅಡ, ಗಟ್ಟಿ, ಪಾಯಸ... ಹೀಗೆ ವಿವಿಧ ವೈವಿಧ್ಯ ಖಾದ್ಯಗಳು.
ಮೂರು ದಿವಸದ ಹಲಸು ಮೇಳದ ಮಳಿಗೆಗಳಿಗೆ ಎಷ್ಟು ಜನಸಂದಣಿ ಇತ್ತೆಂದರೆ, ನಮ್ಮ ಜಿಕೆವಿಕೆ ಕೃಷಿಮೇಳವನ್ನು ನೆನಪಿಸುತ್ತಿತ್ತು. ಅಲ್ಲೇ ತಿನ್ನುವುದಲ್ಲದೆ, ಮನೆಮಂದಿಗೆ ಎಂದು ಖಾದ್ಯಗಳನ್ನು ಕಟ್ಟಿಸಿಕೊಂಡು ಹೋಗುತ್ತಿದ್ದರು. ಎರಡನೇ ದಿವಸದ ಸಂಜೆಗೆ ಬಹುತೇಕ ಮಳಿಗೆಗಳಲ್ಲಿ ಉತ್ಪನ್ನಗಳೇ ಇಲ್ಲ!

ಹಲಸಿನ ಉತ್ಪನ್ನಗಳನ್ನು ಪ್ಯಾಕೆಟ್ ಮಾಡಿಟ್ಟರೆ ಕೊಳ್ಳುಗರು ಧಾರಾಳ. ಹಲಸಿನ ಸೊಳೆಯನ್ನು ತೆಗೆದು ಪ್ಯಾಕೆಟ್ ಮಾಡಿಟ್ಟರೆ ಯಾರಿಗೆ ಬೇಡ? ಶಿರಸಿಯ ಕದಂಬ ಹಲಸು ಮೇಳದಲ್ಲಿ ಹಲಸಿನ ಸೊಳೆಯ ಆಕರ್ಷಕ ಪ್ಯಾಕೆಟ್‌ಗೆ ಹಲವರು ಮಾರುಹೋಗಿದ್ದರು. ಹಲಸೆಂದರೆ ಮೂಗು ಮುರಿಯುವವರೂ, ಸಂಜೆಯ ಹೊತ್ತಿಗೆ ನಮಗೊಂದು ಪ್ಯಾಕೆಟ್ ಇರಲಿ ಎಂದು ಚೀಲಕ್ಕಿಳಿಸಿಕೊಂಡವರೇ ಅಧಿಕ.

ಹಲಸಿಗೊಂದು ಶಾಪವಿದೆ, ಅದರ ಸಂಸ್ಕರಣೆ. ಗ್ರಾಹಕರ ಎದುರೇ ಕೈಗೆ ಗ್ಲೌಸ್ ಹಾಕಿ, ಸೊಳೆ ತೆಗೆದು, ಚಿಕ್ಕ ಪ್ಲೇಟ್‌ನಲ್ಲಿಟ್ಟುಕೊಟ್ಟರೆ,  ನಂಗೊಂದಿರಲಿ, ಮಡದಿಗೊಂದಿರಲಿ ಎಂದು ಹಣದ ಮುಖ ನೋಡದೆ ಸೊಳೆಯನ್ನು ಹೊಟ್ಟೆಗಿಳಿಸುವುದಿಲ್ಲವಾ? ಕನಿಷ್ಠ ಸಂಸ್ಕರಣೆ ಮಾಡಿ `ರೆಡಿ ಟು ಕುಕ್~ ಮತ್ತು `ರೆಡಿ ಟು ಈಟ್~ ಆಗಿ ಕೊಟ್ಟರೆ ಈಗಲೂ ಮಾರುಕಟ್ಟೆ ಇದ್ದೇ ಇದೆ. ಮಾಡುವ ಪ್ರಯತ್ನಗಳು ಬೇಕಷ್ಟೇ.

ಗ್ರಾಮಮಟ್ಟದಿಂದ ತೊಡಗಿ ಅಂತರರಾಷ್ಟ್ರೀಯ ಹಂತದವರೆಗೂ ಹಲಸಿನ ಉತ್ಪನ್ನಗಳು ಜನಪ್ರಿಯವಾಗುತ್ತಿವೆ. ಹಲಸಿನ ತೋಟಗಳನ್ನು ನೀರು, ಗೊಬ್ಬರ ಕೊಟ್ಟು ಎಬ್ಬಿಸುವ ಪರಿಪಾಠ ಆರಂಭವಾಗುತ್ತಿವೆ. ಭವಿಷ್ಯಕ್ಕೆ ಇದು ಆಹಾರ ಸುರಕ್ಷೆ ಎಂಬ ಅರಿವು ಮೂಡಲು ಆರಂಭವಾಗಿದೆ. ಮೌಲ್ಯವರ್ಧನೆ ಮಾಡಿ ಜನರ ಕೈಗೆ ಇಡುವುದೂ ಆಹಾರ ಸುರಕ್ಷೆಯ ಒಂದು ಭಾಗ. ಹಲಸಿನ ಬೀಜದ ಪೌಡರನ್ನು ಅಕ್ಕಿಯೊಂದಿಗೆ ಸಮಾನ ಮಿಶ್ರ ಮಾಡಿ ದೋಸೆ ಮಾಡಿದಾಗ, ಅರ್ಧದಷ್ಟು ಅಕ್ಕಿಯ ಉಳಿತಾಯ. ಇಂತಹ ಉಳಿತಾಯಗಳು ಹಲಸಿನ ಮೌಲ್ಯವರ್ಧನೆಯಲ್ಲಿ ಅಜ್ಞಾತ. ಅದನ್ನು ಹೊರತೆಗೆಯುವ ಕೆಲಸಗಳಾಗಬೇಕಿದೆ. ಅಂತಹ ದೇಶಮಟ್ಟದ, ಕಡಲಾಚೆಯ ಕೆಲವು ಪ್ರಯತ್ನಗಳು ಇಲ್ಲಿವೆ.

ಎಷ್ಟೊಂದು ಅವಕಾಶ!
ಹಲಸಿನ ಹಣ್ಣಿನ ಮೌಲ್ಯವರ್ಧನೆಯಲ್ಲಿ ವಿಯೆಟ್ನಾಂ ಮುಂದು. ಇಲ್ಲಿನ `ವಿನಾಮಿಟ್~ ಸಂಸ್ಥೆ ವಿಧವಿಧ ಚಿಪ್ಸ್ ತಯಾರಿಸುತ್ತಿದೆ. ಒಂದು ದಿವಸಕ್ಕೆ ಐವತ್ತು ಟನ್ ಹಲಸಿನ ಹಣ್ಣು ಯಂತ್ರದ ಬಾಯೊಳಗೆ ಹೋಗುತ್ತದೆ. ರೈತರನ್ನು ಬೆಳೆಯಲು ಪ್ರೇರೇಪಿಸುವುದಲ್ಲದೆ, ಸಾವಿರಗಟ್ಟಲೆ ಎಕರೆ ಹಲಸಿನ ತೋಟವನ್ನು ನೀರು, ಗೊಬ್ಬರ ನೀಡಿ ಬೆಳೆಸುತ್ತಿದೆ.

ಸ್ಮಿತಾ ವಸಂತ್ ಭಾರತದವರು. ಇವರು ಕ್ಯಾಲಿಫೋರ್ನಿಯಾದಲ್ಲಿ ಕಳೆದ ನಾಲ್ಕೈದು ವರುಷದಿಂದ ಹಲಸಿನ ಹಣ್ಣಿನ ಐಸ್‌ಕ್ರೀಂ ಪ್ರಸಿದ್ಧವಾಗಿದೆ ಎನ್ನುತ್ತಾರೆ. ರೆಸ್ಟೋರೆಂಟ್, ಸಮಾರಂಭಗಳಿಗೆ ಹೆಚ್ಚು ಬೇಡಿಕೆ. ಮಲೇಷ್ಯಾವು `ಮಿನಿಮಲ್ ಪ್ರಾಸೆಸಿಂಗ್~ ಮೂಲಕ ಹಲಸಿನ ತಾಳಿಕೆಯನ್ನು ಹೆಚ್ಚಿಸಿ, ಅದಕ್ಕೆ ಹೈಟೆಕ್ ಸ್ಪರ್ಶ ಕೊಟ್ಟು ರಫ್ತು ಮಾಡುತ್ತಿದೆ.

ಕೇರಳದ ಪಾರುಲ್ ಎಕ್ಸ್‌ಪೋರ್ಟ್ಸ್ ಐದಾರು ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಎಳೆ ಹಲಸು, ಎಳೆ ಹಲಸಿನ ಪಲ್ಯ, ಹಲಸಿನ ಬೀಜ, ಬೀಜದ ಪಲ್ಯ, ಕಾಯಿ ಮತ್ತು ಹಣ್ಣು ಸೊಳೆ, ಹಣ್ಣಿನ ಎಲೆ ಕಡುಬು, ಕುಂಬಳಪ್ಪನ್ (ಕಾಡು ದಾಲ್ಚಿನ್ನಿ ಎಲೆಯಲ್ಲಿ ಮಡಚಿ ಮಾಡಿದ ಕಡುಬು), ಹಣ್ಣಿನ ಬೆರಟ್ಟಿ ಮತ್ತು ಹಲಸಿನ ಚಿಪ್ಸ್ ಮುಖ್ಯ ತಯಾರಿಗಳು.
ಕೇರಳದ ಜೋಸ್ ಸೆಬಾಸ್ಟಿಯನ್ ಅವರದು ಹಲಸಿನ ವೈನ್ ಮುಖ್ಯ ಉತ್ಪನ್ನ.

ಏನಿಲ್ಲವೆಂದರೂ ವರುಷಕ್ಕೆ ಒಂದು ಸಾವಿರ ಲೀಟರ್ ಮಾರಾಟ. ಕೊಟ್ಟಾಯಂ ಜಿಲ್ಲೆಯ ಜೋಸೆಫ್ ಲುಕೋಸ್‌ರ ಒಣ ಕಾಯಿಸೊಳೆ, ಎಳೆ ಕಾಯಿ (ಗುಜ್ಜೆ)ಯ ಟೆಂಡರ್ ಜಾಕ್‌ಫ್ರೂಟ್ ಫ್ರೈ, ಹಲಸಿನ ಬೀಜದ ಹುಡಿ, ಅವಲೋಸ್ ಪುಡಿ ತಯಾರಿ. ಗ್ರಾಮಸಂಸ್ಥೆ ಮೂಲಕ ಬಿಕರಿ.

ಪಾಲಕ್ಕಾಡ್ ಜಿಲ್ಲೆಯ ಕಾಞಿರಪುಳದ ಜೇಮ್ಸ ಪಿ.ಮ್ಯಾಥ್ಯೂ ಆರೇಳು ವರ್ಷಗಳಿಂದ ಹಲಸಿನ ಮೌಲ್ಯವರ್ಧನೆಯ ಗುಂಗನ್ನು ಅಂಟಿಸಿಕೊಂಡವರು. ತಿರುವನಂತಪುರದ ಹಲಸು ಮೇಳದಲ್ಲಿ ಪಲ್ಯ, ಪಾಯಸವನ್ನು ಮಳಿಗೆಯಲ್ಲೇ ತಯಾರಿಸಿ ಹಂಚಿದ್ದಾರೆ.

`ಒಂದಷ್ಟು ಮಂದಿಗೆ ಗೊತ್ತಾಗಲಿ. ಎಲ್ಲರೂ ಮಾಡಿಕೊಳ್ಳಬಹುದಾದ ಉತ್ಪನ್ನ~ ಎನ್ನುತ್ತಾರೆ. ಒಣ ಹಣ್ಣು, ಒಣ ಕಾಯಿಸೊಳೆ, ಒಣ ಗುಜ್ಜೆ- ಇವು ಮೂರು ಮುಖ್ಯ ಉತ್ಪನ್ನ. ಚೆನ್ನಾಗಿ ಕಾದಿಟ್ಟರೆ ಒಂದು ವರುಷ ತಾಳಿಕೆ.

ಮುಂಬಯಿಯ ನ್ಯಾಚುರಲ್ ಐಸ್‌ಕ್ರೀಂನ ಆರ್.ಎಸ್.ಕಾಮತ್ ಅವರ ಹಲಸಿನ ಹಣ್ಣಿನ ಐಸ್‌ಕ್ರೀಂ ದೇಶಾದ್ಯಂತ ಗ್ರಾಹಕರನ್ನು ಸೃಷ್ಟಿಸಿದೆ. ಮುಂಬಯಿಯಿಂದ ಐಸ್‌ಕ್ರೀಂನೊಂದಿಗೆ ತಿರುವನಂತಪುರಕ್ಕೆ ಹಾರಿಬಂದ ಕಾಮತರು ಮೇಳದ ಪ್ರತಿನಿಧಿಗಳಿಗೆ ಹಲಸಿನ ಹಣ್ಣಿನ ಐಸ್‌ಕ್ರೀಂ ತಿನ್ನಿಸಿದರು.

ಉತ್ತರ ಪ್ರದೇಶದ `ಆದಿತ್ಯ ಅಗ್ರಿ ಫುಡ್ಸ್~ ಇದರ ಹಲಸಿನ ಚಿಪ್ಸ್, ಮಹಾರಾಷ್ಟ್ರದ ಪಾವಸ್‌ನಲ್ಲಿ ಉದ್ದಿಮೆ ಹೊಂದಿರುವ ಅಮರ್ ಜೆ. ದೇಸಾಯಿ ಅವರ ಎರಡು ವರುಷ ತಾಳಿಕೆಯಿರುವ ಕ್ಯಾನ್ಡ್ ಎಳೆ ಹಲಸು, ಪುಣೆಯ ಹರ್ಡೀಕರ್ ಸಂಸ್ಥೆಯ ಒಣ ಹಲಸಿನ ಹಣ್ಣು ಮತ್ತು ಹಲಸಿನ ಹಣ್ಣಿನ ಹುಡಿ.. ಹೀಗೆ ದೇಶಮಟ್ಟದಲ್ಲೂ ಹಲಸು ವಿವಿಧ ರೂಪಗಳಲ್ಲಿ ಹೊಟ್ಟೆಗಿಳಿಯುತ್ತದೆ.

ದೂರದ ಮಾತೇಕೆ. ನಮ್ಮ ತುಮಕೂರಿನ `ಪಾವನ~ ಸ್ಟೋರಿನ ಸೀತಾರಾಮ್‌ರ ಹಲಸಿನ ಹಣ್ಣಿನ ಬರ್ಫಿಯನ್ನು ಕೇಳಿ ಪಡೆಯುವ ಗ್ರಾಹಕರಿದ್ದಾರೆ. ವರುಷವಿಡೀ ಹಲಸಿನ ಚಿಪ್ಸನ್ನು ಒದಗಿಸುವ ಶಿರಸಿ ಮೆಣಸಿಕೇರಿಯ ರೇಖಾ ಶರಶ್ಚಂದ್ರ ಹೆಗಡೆ, ತುಮಕೂರಿನ ಕೃಷ್ಣಮೂರ್ತಿಯವರ ಹಲಸಿನ ಎಳೆ ಗುಜ್ಜೆಯನ್ನು ಉಪ್ಪಿನಲ್ಲಿಟ್ಟ `ಉಪ್ಪು ಗುಜ್ಜೆ~, ಬೆಂಗಳೂರು ಕೃಷಿ ವಿ.ವಿ.ಯ ಕೊಯ್ಲೋತ್ತರ ತಂತ್ರಜ್ಞಾನ ವಿಭಾಗದ ಹಲಸಿನ ಶ್ರೀಖಂಡ್, ಕುಲ್ಫಿ, ಜ್ಯೂಸ್... ಹೀಗೆ ಒಂದೇ ಎರಡೇ.

ಅವಕಾಶಗಳು ಅಂಗೈಯಲ್ಲಿವೆ. ಹಲಸಿನ ಕುರಿತಾಗಿ ಇದ್ದ `ಮೈಂಡ್ ಸೆಟ್~ ಬದಲಾದರೆ ಇಂತಹ ಅವಕಾಶಗಳಿಗೆ ತೆರೆದುಕೊಳ್ಳಬಹುದು. ಹಲಸಿನ ಪೂರೈಕೆ ಸರಪಣಿ ಗಟ್ಟಿಯಾಗಬೇಕು. ಹಲಸು ಅದೇ ರೂಪದಲ್ಲಿ ಹೆಚ್ಚಿನವರಿಗೆ ಬೇಡ. ಆದರೆ ಮೌಲ್ಯ ವರ್ಧಿಸಿ ಒಳ್ಳೆಯ ಗುಣಮಟ್ಟ, ಪ್ಯಾಕಿಂಗ್‌ನೊಂದಿಗೆ ಬಳಕೆದಾರರಿಗೆ ತಲುಪಿಸಲು ಸಾಧ್ಯವಾದರೆ ಕೊಳ್ಳುಗರಿದ್ದಾರೆ.

ಪಂಚತಾರಾ ಹೋಟೆಲಿನ ಟೇಬಲ್ಲಿಗೂ ಹಲಸಿನ ಸೊಳೆ, ಉತ್ಪನ್ನಗಳು ಬಂದಿವೆ. ನಮ್ಮ ಊಟದ ಬಟ್ಟಲಿಗೂ ಅದು ಬರಲಿ. ಆಗ ಅದೊಂದು  ಅಪ್ರಧಾನ ಬೆಳೆಯಾಗಲಾರದು. ಸ್ಥಳೀಯ ಆಹಾರ ಸುರಕ್ಷತೆಗೆ ದೊಡ್ಡ ಆಧಾರವಾದೀತು. ಮನೆಯಿಂದಲೇ ಶುರುವಾಗಲಿ, ಹಲಸಿನ ಮಾನ. ನಿರ್ಲಕ್ಷಿತವಾಗಿರುವುದು ಹಲಸಲ್ಲ, ನಮ್ಮ ಮನಸ್ಸು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT