ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನಾ ಲಿಲ್ಲಾಹಿ...

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

ಕಥೆ

ಅಹ್ಮದ್ ಮುಹಮ್ಮದ್ ಮುಸ್ಲಿಯಾರ್ ಯಾನೆ ಊರಿನ ಪ್ರೀತಿಯ ಮಮ್ಮುಂಞ ಉಸ್ತಾದರು ಬಲಗೈಯ ಐದೂ ಬೆರಳುಗಳು ಆಕಾಶವನ್ನು ದಿಟ್ಟಿಸುವಂತೆ ಮಾಡಿ ಒಮ್ಮೆ ಕಣ್ಣು ಮುಚ್ಚಿ ನೀಳಗಡ್ಡದ ಮೇಲೆ ಕೈಯಾಡಿಸಿದರು.

ಅವರ ಕೈಯಲ್ಲಿದ್ದ  ತಸ್ಬೀ ಮಾಲೆ* ಅತ್ತಿಂದಿತ್ತ ಅಲ್ಲಾಡಿತು. ಇನ್ನಾಲಿಲ್ಲಾಹಿ ವ ಇನ್ನಾ ಇಲೈಹೀ ರಾಜಿವೂನ್ ಎಂಬ ವಾಕ್ಯ ಆಯಾಚಿತವಾಗಿ ಅವರ ಬಾಯಿಯಿಂದ ಹೊರಬಿತ್ತು. ಎಲ್ಲರೂ ಬರುವುದು ಅಲ್ಲಾಹನ ಕಡೆಯಿಂದಲೇ..ಹೋಗುವುದೂ ಅಲ್ಲಿಗೇ. ಮುಸ್ಲಿಯಾರರ ಮುಚ್ಚಿದ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಿದ್ದ ಅಬ್ದುಲ್ಲಾ. “ಬೀಪಾತು ಹೀಗೆ ಹೇಳಿದಳಾ!” ಎಂದು ಮತ್ತೊಮ್ಮೆ ಗೊಣಗಿದರು ಉಸ್ತಾದರು.

ಅಬ್ದುಲ್ಲಾ ಮಾತನಾಡಲಿಲ್ಲ. ಇನ್ನೇನಿದ್ದರೂ ನೀವುಂಟು ಧರ್ಮಸೂಕ್ಷ್ಮಗಳುಂಟು.. ಎಂಬಂತೆ ಮುಖ ಮಾಡಿ ಕುಳಿತೇ ಇದ್ದ. ಉಸ್ತಾದರೂ ಕುಳಿತಲ್ಲೇ ಮಿಸುಕಾಡಿದರು.
“ಎಷ್ಟು ಹೊತ್ತಿಗೆ ತೀರಿಕೊಂಡದ್ದು?”

“ಇವಳು ಮಧ್ಯಾಹ್ನ ಊಟ ಮುಗಿಸಿ ನಿದ್ದೆ ಹೊಡೆದಿದ್ದಾಳೆ. ಗಂಡ ಎಂದಿನಂತೆ ಹಜಾರದ ಮಂಚದಲ್ಲಿ ಮಲಗಿಯೇ ಇದ್ದ. ಸಂಜೆ ನಾಲ್ಕಕ್ಕೆ ನಿದ್ದೆಯಿಂದ ಎದ್ದು ಬಂದಾಗ ಗೊತ್ತಾಗಿದೆ.”
“ಎಷ್ಟು.. ಐದಾರು ವರ್ಷಗಳೇ ಆಗಿರಬೇಕಲ್ಲ, ಅವನು ಹಾಸಿಗೆ ಹಿಡಿದು?”

“ಹೌದು ಉಸ್ತಾದ್. ಹಾಗೇ ಮಲಗಿಕೊಂಡೇ ಇದ್ದ. ಮಲಗಿದಲ್ಲೇ ಬಲಗಾಲು ಮಡಚಿಕೊಂಡು ಗೋಡೆಗೆ ಆನಿಸಿ ಇಟ್ಟರೆ ನಿದ್ದೆ ಹೋದದ್ದೂ ಗೊತ್ತಾಗುತ್ತಿರಲಿಲ್ಲ. ಪಾಪ, ಅವಳೂ ಎಷ್ಟೊಂದು ನಿಷ್ಠೆಯಿಂದ ಗಂಡನ ಸೇವೆ ಮಾಡಿದ್ದಾಳೆ. ಈ ಐದು ವರ್ಷಗಳಲ್ಲಿ ಅವನ ಹಾಸಿಗೆ ಪಕ್ಕ ಬಿಟ್ಟು ಎದ್ದಿಲ್ಲ...”

“ಮದುವೆಯಾಗಿ ಹತ್ತು ವರ್ಷಗಳೇ ಕಳೆದವು. ಮಕ್ಕಳಿಲ್ಲ ಎನ್ನುವ ಕೊರಗೊಂದು ಬಿಟ್ಟರೆ ಬೇರೆ ಏನೂ ಕಷ್ಟ ಇರಲಿಲ್ಲಾಂತ ಕಾಣುತ್ತೆ. ಐದು ಮನೆಗಳಿಂದ ಬರೋ ಬಾಡಿಗೆ ಕಡಿಮೆ ಏನೂ ಅಲ್ಲ ಬಿಡು..”

ಮೌಲ್ವಿಯವರು “ಈಗ ಏನ್ಮಾಡೋದು?” ಎಂದು ಮತ್ತೆ ಅಬ್ದುಲ್ಲಾನತ್ತ ನೋಡಿದರು.
“ನೀವೇ ಬಂದು ಹೇಳಿ ಉಸ್ತಾದ್. ನಿಮ್ಮ ಕಣ್ಣ ಮುಂದೆ ಬೆಳೆದ ಹುಡುಗಿ ಇನ್ಯಾರ ಮಾತನ್ನು ಕೇಳಬೇಕು? ಮಯ್ಯತ್‌ನ* ಬಲಗಾಲು ಮಡಚಿಯೇ ಇದೆ. ಅದನ್ನು ನೇರ ಮಾಡಿ ಮಯ್ಯತ್ತನ್ನು ಸರಿ ಮಾಡಿ ಮಲಗಿಸಲಿಕ್ಕೂ ಅವಳು ಬಿಡುತ್ತಿಲ್ಲ. ಮಯ್ಯತ್ ಎತ್ತೋದು ತಡವಾದಷ್ಟೂ ತೊಂದರೆಯೇ. ಈ ಮಳೆಯದ್ದು ಬೇರೆ ಹೇಳೋ ಹಾಗಿಲ್ಲ. ರಾತ್ರಿ ಭಾರೀ ಮಳೆ ಬರೋ ಹಾಗಿದೆ” ಅಬ್ದುಲ್ಲಾ ಆತಂಕವನ್ನೆಲ್ಲ ಧ್ವನಿಯಲ್ಲಿ ತುಂಬಿದ.

“ಬೀಪಾತು ಚಿಕ್ಕಂದಿನಿಂದ ನನ್ನ ಕಣ್ಣ ಮುಂದೆ ಬೆಳೆದ ಹುಡುಗಿ. ಮದ್ರಸಾದಲ್ಲಿ ಅವಳ ಪುಟ್ಟ ಕಾಲುಗಳಿಗೆ ನಾಗರ ಬೆತ್ತದಿಂದ ಬರೆ ಎಳೆದಾಗಲೂ ಹಲ್ಲು ಕಚ್ಚಿ ಸಹಿಸಿಕೊಂಡಿದ್ದವಳು. ಅವಳು ಹುಟ್ಟಿದಾಗ ಅವಳಪ್ಪ ಹೆಸರು ಕೇಳಿಕೊಂಡು ಬಂದಿದ್ದ. ನಾನೇ ಬೀಪಾತುಮ್ಮ ಎಂಬ ಹೆಸರು ಕೊಟ್ಟಿದ್ದು.. ತುಂಬ ಒಳ್ಳೆ ಹುಡುಗಿ..” ಎಂದು ಮತ್ತೊಮ್ಮೆ ನಿಟ್ಟುಸಿರು ಬಿಟ್ಟ ಮೌಲ್ವಿಯವರು. “ನಡಿ..” ಎಂದು ನಿರ್ಧಾರದ ಧ್ವನಿಯಲ್ಲಿ ಮೇಲೆದ್ದರು.

ಬೀಪಾತುಮ್ಮನ ಮನೆ ಮಸೀದಿಯ ಬಾಂಗ್*  ಕೇಳುವಷ್ಟೇ ದೂರದಲ್ಲಿತ್ತು. ಗುಡ್ಡೆ ಮನೆಯ ಏರು ಇಳಿದು ಒಂದೈವತ್ತು ಹೆಜ್ಜೆ ಗದ್ದೆ ಬದಿಯಲ್ಲಿ ನಡೆದರೆ ದೊಡ್ಡ ಕೊಳ ಸಿಗುತ್ತದೆ. ಅದರ ಮುಂದಿನ ದಣಪೆ ದಾಟಿದರೆ ಸಾಲು ಬಾಡಿಗೆ ಮನೆಗಳು. ಹಿಂದಿನ ಅಂಗಳ ದಾಟಿದರೆ ಬೀಪಾತುಮ್ಮನ ಅಪ್ಪ ಆದಂ ಸಾಹೇಬರು ಕಟ್ಟಿಸಿದ ದೊಡ್ಡ ಹೆಂಚಿನ ಮನೆ.

ಮೌಲ್ವಿಯವರು ಬಾಡಿಗೆ ಮನೆ ದಾಟುತ್ತಿದ್ದಂತೆಯೇ ಅಂಗಳದಲ್ಲಿ ಸೇರಿದ್ದ ಜನರು ಸರಿದು ನಿಂತರು. ~ಅಸ್ಸಲಾಮು ಅಲೈಕುಂ ಉಸ್ತಾದ್~ ಎಂದು ಸರತಿಯಂತೆ ಸಲಾಮುಗಳು. ವ ಅಲೈಕುಂ ಸಲಾಮ್.. “ಉಸ್ತಾದ್ ಬಂದ್ರು, ದಾರಿ ಬಿಡಿ..” ಎಂದರು ಕೆಲವರು.

ಜನರ ಗುಂಪನ್ನು ಸೀಳಿ ಹಜಾರ ಪ್ರವೇಶಿಸಿದ ಉಸ್ತಾದರು ಮಯ್ಯತ್ತನ್ನು ದಿಟ್ಟಿಸಿ ನೋಡಿದರು. ಗೋಡೆಗೆ ತಾಗಿದ್ದ ಮರದ ಮಂಚ. ಹಾಸಿಗೆಯಲ್ಲಿ ಇನ್ನೂ ಮಲಗಿದಂತೆಯೇ ಇದೆ ದೇಹ. ಬಲಗಾಲು ಮಡಚಿ ಗೋಡೆಗೆ ಆನಿಸಿದೆ. ತಲೆ ಪಕ್ಕದಲ್ಲಿ ಹೊಗೆ ಎಬ್ಬಿಸುತ್ತಿರುವ ಲೋಬಾನದ ಗೂಡು. ಮಯ್ಯತ್‌ನ ಬಳಿಯಲ್ಲೇ ನೆಲದಲ್ಲಿ ಚಾಪೆಯ ಮೇಲೆ ತಲೆಗೆ ಕೈಹೊತ್ತು ಮಂಕಾಗಿ ಕುಳಿತಿದ್ದಾಳೆ ಬೀಪಾತು. ಕಣ್ಣೀರು ಮಡುಗಟ್ಟಿದ ಮುಖ. ತಲೆ ಸಹಿತ ಮೈತುಂಬ ಬಟ್ಟೆಯೊಂದನ್ನು ಹೊದ್ದುಕೊಂಡಿದ್ದಾಳೆ. ಉಸ್ತಾದರು ಹತ್ತಿರ ಬರುತ್ತಲೇ ಬೀಪಾತುವಿನ ದುಃಖದ ಕಟ್ಟೆಯೊಡೆಯಿತು. “ನನ್ನನ್ನು ಬಿಟ್ಟು ಹೊರಟ್ಹೋದ್ರು.. ಉಸ್ತಾದ್..” ಎಂದು ಸ್ವಲ್ಪ ಜೋರಾಗಿಯೇ ಅಳತೊಡಗಿದಳು.

“ಆಯ್ತು ಏಳು ಮಗಳೇ. ಕಣ್ಣೀರು ಒರೆಸಿಕೊ. ಸಾವು ಯಾರನ್ನು ಬಿಟ್ಟಿದೆ ಹೇಳು? ಇಂತಹ ಹೊತ್ತಲ್ಲಿ ತಾಳ್ಮೆ ವಹಿಸಿಕೊಳ್ಳಬೇಕು. ಅವನಿಗೆ ನೀನಲ್ಲದೆ ಯಾರಿದ್ದರು ಹೇಳು? ಅವನು ಹುಷಾರಿಲ್ಲದೆ ವರ್ಷಗಟ್ಟಳೆ ಮಲಗಿದರೂ ನೀನು ತಾಳ್ಮೆಯಿಂದ ಸೇವೆ ಮಾಡಿದ್ದೀಯ. ಈಗ ಕೊನೆಯ ಕ್ರಿಯೆಗಳಲ್ಲಿ ತಾಳ್ಮೆ ಕಳೆದುಕೊಂಡರೆ ಹೇಗೆ? ಮದುಮಗನ ತರಹ ಸಿಂಗರಿಸಿ ಅವನನ್ನು ನಾವೆಲ್ಲ ಸೇರಿ ಕಳಿಸಿಕೊಡಬೇಕಲ್ಲ..? ಏಳು ಮಗಳೇ...”

ಬೀಪಾತುವಿನ ಅಳು ಇನ್ನಷ್ಟು ಜೋರಾಯಿತು. “ಆಯ್ತಮ್ಮೋ.. ಅಳಬೇಡ“ ಎಂದು ಪಕ್ಕದಲ್ಲೇ ನಿಂತಿದ್ದ ವಯಸ್ಸಾದ ಮಹಿಳೆಯರು ಅರ್ಧ ಗದರಿಕೆ, ಅರ್ಧ ಸಮಾಧಾನದ ಧ್ವನಿಯಲ್ಲಿ ನುಡಿದರು. “ನನಗೇನೂ ಗೊತ್ತಾಗ್ತಿಲ್ಲ ಉಸ್ತಾದ್.. ನೀವೇ ಮುಂದೆ ನಿಂತು ಎಲ್ಲ ಮಾಡಿಸಬೇಕು..” ಎಂದು ಅಳುತ್ತಾ ಕುಳಿತಲ್ಲೇ ಕ್ಷೀಣ ಧ್ವನಿ ಹೊರಡಿಸಿದಳು ಬೀಪಾತುಮ್ಮ.
“ಆಯ್ತು.. ಅದಕ್ಕೇ ತಾನೇ ನಾನು ಬಂದಿರೋದು. ಯಾವುದು ಯಾವ ತರಹ ಆಗಬೇಕೋ ಹಾಗೆಯೇ ಆಗಬೇಕು ಅಲ್ವಾ? ನೀನು ಹಠ ಮಾಡಿದರೆ ಅಲ್ಲಾಹು ಮೆಚ್ಚುವುದಿಲ್ಲ. ಮೊದಲು ಮಯ್ಯತ್ತಿನ ಮಡಚಿದ ಕಾಲನ್ನು ನೇರ ಮಾಡಬೇಕಲ್ಲ.... ನೋಡುವಾ ಯಾರದು.. ಈ ಕಡೆ ಬನ್ನಿ..”

“ಯಾ ಅಲ್ಲಾ... ಅಯ್ಯ್, ಉಸ್ತಾದ್.. ಅವ್ರ ಕಾಲು ಮುಟ್ಟಬೇಡಿ. ನಿಮ್ಮ ಕಾಲು ಹಿಡೀತೀನಿ, ದಮ್ಮಯ್ಯ. ಅವ್ರಿಗೆ ಇದ್ದದ್ದು ಎರಡೇ ಎರಡು ಆಸೆಗಳು. ಖಬರ್‌ನಲ್ಲಿ* ಮಲಗಿಸುವಾಗ ಕಾಲು ಹಾಗೆಯೇ ಮಡಚಿಯೇ ಇಡಬೇಕು ಎನ್ನುವುದು ಮೊದಲನೆಯದ್ದು. ರಾತ್ರಿ ಹೊತ್ತು ಮಣ್ಣು ಮಾಡಬೇಡಿ ಅನ್ನೋದು ಇನ್ನೊಂದು ಆಸೆ. ನಿಮ್ಮನ್ನು ನಾನು ಬೇರೇನೂ ಕೇಳುವುದಿಲ್ಲ, ದಯವಿಟ್ಟು ಇದೆರಡು ಆಸೆಗಳನ್ನು ಪೂರೈಸಿ ಉಸ್ತಾದ್..”- ಅಳುತ್ತಲೇ ಬೀಪಾತುಮ್ಮ ಗೋಗರೆದಳು.

“ಅಯ್ಯ...! ಅದು ಹೇಗೆ ಆಗುತ್ತೆ ಬೀಪಾತು? ಹಾಗೆ ಖಬರ್‌ನಲ್ಲಿ ಮಯ್ಯತ್ತು ಮಲಗಿಸುವುದು ಸಾಧ್ಯವಾ? ಖಬರ್ ಗುಂಡಿ ತೋಡುವಾಗಲೇ ಎರಡು ಹಂತಗಳನ್ನು ಮಾಡಬೇಕಲ್ಲ. ಅಲ್ಲ, ನಿನ್ನ ಆಸೆಗೂ ಒಂದು ರೀತಿ ನೀತಿ ಬೇಡವಾ? ಮಗಳೇ, ಇವೆಲ್ಲ ನಾವು ಗಂಡಸರು ನೋಡಿಕೊಳ್ಳುತ್ತೇವೆ.. ನೀನು ಸುಮ್ಮನಿರು, ಅಳಬೇಡ...”

“ಅದು ನನ್ನ ಆಸೆ ಅಲ್ಲ ಉಸ್ತಾದ್, ಅವರದ್ದು. ಕಳೆದ ಐದು ವರ್ಷಗಳಲ್ಲಿ ಅವ್ರ ಬೇರೆ ಏನನ್ನೂ ಕೇಳಿಲ್ಲ. ಆದರೆ ಈ ಎರಡು ಆಸೆಗಳನ್ನು ನನ್ನ ಬಳಿ ಪದೇ ಪದೇ ಹೇಳಿದ್ದಾರೆ..”
“ನೋಡು ಮಗಳೇ. ಯಾವುದಕ್ಕಾದರೂ ಒಂದು ಕಾರಣ ಬೇಕಲ್ಲ.. ಮಯ್ಯತ್ತಿನ ಕೈಗಳನ್ನು ಹಾಗೂ ಕಾಲುಗಳನ್ನು ನೆಟ್ಟಗೆ ಚಾಚಿ ಇಡುವುದು ಕ್ರಮ. ಅದು ಶರೀಅತ್ ನಮಗೆ ಹೇಳಿಕೊಟ್ಟ ಕ್ರಮ. ಆದಂ ನೆಬಿಯ ಕಾಲದಲ್ಲೇ ಕಾಗೆಯೊಂದು ಸತ್ತ ಜತೆಗಾರನ ಶವದ ಮುಂದೆ ಕುಳಿತು ಮಣ್ಣನ್ನು ಕೆದರಿ ಗುಂಡಿ ತೋಡಿದ ಪ್ರಸಂಗ ನಿನಗೆ ಗೊತ್ತಿಲ್ಲವಾ? ಹಾಗೆ ಕಾಗೆ ತೋರಿಸಿಕೊಟ್ಟದ್ದರಿಂದಲೇ ನೆಬಿಯವರಿಗೆ ಮಯ್ಯತ್ ಮಣ್ಣು ಮಾಡಬೇಕೆಂದು ಗೊತ್ತಾದದ್ದು. ಅದು ಬಿಡು; ರಾತ್ರಿ ವೇಳೆ ಎಷ್ಟೊಂದು ಮಯ್ಯತ್ ಮಣ್ಣು ಮಾಡಿಲ್ಲ ನಾವು... ಹಾಂ..”

ಬೀಪಾತುವಿನ ಅಳು ಇನ್ನಷ್ಟು ಜೋರಾಯಿತು. ಅಳುತ್ತಲೇ ಗಟ್ಟಿ ಧ್ವನಿಯಲ್ಲಿ ಮಾತನಾಡತೊಡಗಿದಳು- “ಅವ್ರ ಐದು ವರ್ಷಗಳಿಂದ ಕಾಲನ್ನು ಹಾಗೆಯೇ ಮಡಚಿ ಗೋಡೆಗೆ ಆನಿಸಿ ಇಡುತ್ತಿದ್ದರು. ಬಹಳ ಸಲ ಕಾಲು ನೆಟ್ಟಗೆ ಮಾಡಲು ಯತ್ನಿಸಿದೆ. ಆದರೆ ಜೀವ ಹೋಗುವಂತಹ ನೋವಾಗುತ್ತದೆ, ದಯವಿಟ್ಟು ನನ್ನ ಕಾಲು ಮಡಚಬೇಡ.. ಎಂದು ಹೇಳಿದ ಬಳಿಕ ಹಾಗೆಯೇ ಬಿಟ್ಟಿದ್ದೇನೆ. ರಾತ್ರಿ ಅಂದರೆ ಅವರಿಗೆ ಭಯ. ರಾತ್ರಿ ವೇಳೆ ಗೋರಿಯೊಳಗೆ ಭಯಾನಕ ಕತ್ತಲೆ ಇರುತ್ತದೆ, ದಯವಿಟ್ಟು ನಾನು ಸತ್ತಾಗ ನನ್ನನ್ನು ರಾತ್ರಿ ವೇಳೆ ದಫನ್ ಮಾಡಲು ಬಿಡಬೇಡ ಎಂದೂ ಹೇಳುತ್ತಿದ್ದರು. ಎರಡೂ ಅವರ ಕೊನೆಯಾಸೆ ಉಸ್ತಾದ್. ದಯವಿಟ್ಟು ಇಲ್ಲ ಅನ್ನಬೇಡಿ- ನೀವು ಹೇಳಿದರೆ ಊರಿನವರೂ ಕೇಳುತ್ತಾರೆ...”
“ಇದೊಳ್ಳೆ ಫಜೀತಿ ಆಯ್ತಲ್ಲ..”

ಅನ್ನಿಸಿತು ಉಸ್ತಾದರಿಗೆ ಚಿಕ್ಕ ಮಗುವಿನಂತೆ ಅಳುತ್ತಿದ್ದ ಬೀಪಾತುಮ್ಮಳ ತಲೆ ಸವರಿದರು. “ಆಯ್ತು ಮಗಳೇ. ಹಾಗೆಯೇ ಮಾಡೋಣ. ಆದರೆ ನೆನಪಿಟ್ಟುಕೋ.. ನಮಗಿರೋದು ಇದೊಂದೇ ಲೋಕವಲ್ಲ. ಮರಣಾನಂತರ ಬರ್ಝುಕ್ ಎಂಬ ಲೋಕವಿದೆ. ಪಾಪ- ಪುಣ್ಯಗಳ ಲೆಕ್ಕಾಚಾರಕ್ಕೆ ಒಂದು ಅಂತಿಮ ದಿನವಿದೆ. ಅವತ್ತು ನಮ್ಮ ಒಳಿತು ಕೆಡುಕುಗಳನ್ನೆಲ್ಲ ತಕ್ಕಡಿಯಲ್ಲಿ ತೂಗಿ ನ್ಯಾಯ ತೀರ್ಮಾನ ನೀಡುತ್ತಾನೆ ಆ ಅಲ್ಲಾಹು. ಮರಣಾನಂತರ ಆ ನಿರ್ಣಾಯಕ ದಿನದವರೆಗೆ ನಾವು ಖಬರಿನಲ್ಲಿ ಇರುವ ಲೋಕವೇ ಬರ್ಝುಕ್ ಲೋಕ. ಅಲ್ಲಿ ಇದ್ದೇ ನಾವು ಮುಂದಕ್ಕೆ ಹೋಗಬೇಕಲ್ಲ..?

ರಾತ್ರಿ ಹಗಲು ಅನ್ನೋದೆಲ್ಲ ಎಲ್ಲ ಕಡೆಗೆ ಒಂದೇ ತರಹ ಇರುತ್ತದಾ...? ನಮಗೆ ಈಗ ಹಗಲಾದರೆ ಅಲ್ಲಿ ಅಮೆರಿಕದವರಿಗೆ ರಾತ್ರಿ. ಖಬರ್‌ನಲ್ಲಿ ಹಗಲೂ ಕತ್ತಲೆಯೇ, ರಾತ್ರಿಯೂ ಕತ್ತಲೆಯೇ ಅಲ್ವಾ? ಮಕ್ಕಳ ಹಾಗೆ ಮಾತನಾಡಬೇಡ. ಮೊದಲು ಮಯ್ಯತ್ತನ್ನು ಸರಿ ಮಾಡಿಕೊಳ್ಳೋಣ. ಸಂಜೆ ಕತ್ತಲಾಗುತ್ತಾ ಬಂತು. ಮಳೆ ಬೇರೆ ಶುರುವಾದರೆ ಮಯ್ಯತ್ ಎತ್ತೋದು ಕಷ್ಟ.. ಅಲ್ವಾ? ಯಾರು.. ಆದಂ ಎಲ್ಲಿ? ಬೀಪಾತುವನ್ನು ಹೆಣ್ಣುಮಕ್ಕಳು ಒಳಗೆ ಕರೆದುಕೊಂಡು ಹೋಗಿ ನೋಡುವಾ..” ಎನ್ನುತ್ತಾ ಉಸ್ತಾದ್ ನೆರೆದಿದ್ದ ಜನರ ಕಡೆಗೆ ನೋಡಿದರು.

ಬೀಪಾತುಮ್ಮ ಧಿಗ್ಗನೆ ಎದ್ದು ನಿಂತಳು. ಅದೆಲ್ಲಿಂದಲೋ ಶಕ್ತಿಯೊಂದು ಆವಾಹಿಸಿದಂತೆ ಆಕೆಯ ಮುಖ ಸಿಟ್ಟಿನಿಂದ ಪ್ರಜ್ವಲಿಸಿತು. ದೀರ್ಘ ಉಸಿರಿನಿಂದ ಎದೆ ಏರಿಳಿಯತೊಡಗಿತು. “ಇಲ್ಲ ಉಸ್ತಾದ್.. ಮಯ್ಯತ್ ಎತ್ತುವುದಾದರೆ ಆ ಕಾಲನ್ನು ಹಾಗೆಯೇ ಇಟ್ಟು ಎತ್ತಬೇಕು. ನಾನು ಕಾಲು ಮಡಚಲು ಬಿಡುವುದಿಲ್ಲ..” ಎಂದು ನಿರ್ಧಾರದ ಸ್ವರದಲ್ಲಿ ನುಡಿದು ಮಯ್ಯತ್ತನ್ನು ಎರಡೂ ಕೈಗಳಿಂದ ಅಪ್ಪಿ ಹಿಡಿದು ಮಲಗಿದಳು ಬೀಪಾತು!

ನೆರೆದಿದ್ದ ಜನ ಧಿಗ್ಮೂಢರಂತೆ ನೋಡಿದರು. ತನ್ನ ದೊಡ್ಡಪ್ಪನ ಮಗಳಾದ ಬೀಪಾತುವಿನ ಈ ಅವತಾರ ನೋಡಿ ಆದಂಗೂ ಸಿಟ್ಟು ಬಂತು. “ಏ.. ಏನೇ ನಿಂದು? ಬನ್ರೇ ಇಲ್ಲಿ. ಇವಳನ್ನು ಎತ್ತಿ ಒಳಗೆ ಒಯ್ಯಿರಿ..” ಎಂದು ಸಿಟ್ಟಿನಿಂದಲೇ ಕೂಗಿದ. ನಾಲ್ಕೈದು ಹೆಂಗಸರು ಬೀಪಾತುಮ್ಮನ ರಟ್ಟೆಗಳನ್ನು ಹಿಡಿದು ಎತ್ತಿದರು. ಆದಂನೂ ಕೈ ಜೋಡಿಸಿದ. ಆದರೆ ಜಪ್ಪಯ್ಯ ಎಂದರೂ ಬೀಪಾತುಮ್ಮ ಮಯ್ಯತ್ತನ್ನು ಬಿಟ್ಟು ಅಲ್ಲಾಡಲಿಲ್ಲ. ಭೋರೆಂದು ಅಳುತ್ತಾ... “ಅಯ್ಯ್.. ನನ್ನ ಉಸ್ತಾದ್.. ನನ್ನ ಗಂಡನ ಕೊನೆಯಾಸೆ ಉಸ್ತಾದ್..” ಎಂದು ಕೂಗತೊಡಗಿದಳು. ಅಂಗಳದಲ್ಲಿದ್ದವರು ಒಳಗೆ ಓಡಿ ಬಂದರು. ಉಸ್ತಾದ್ ಕೈ ಕೈ ಹಿಸುಕಿಕೊಂಡರು.

“ಇದೇನಿದು ಈ ಹೆಂಗಸಿನ ರಂಪಾಟ! ಏನು ಊರಲ್ಲಿ ಇದುವರೆಗೂ ಯಾರ ಗಂಡಂದಿರೂ ಸತ್ತಿಲ್ವ.. ಇದೆಲ್ಲ ಅತಿ ಆಯ್ತಪ್ಪ..” ಕೆಲವರು ಗೊಣಗತೊಡಗಿದರು. ಎಳೆದಾಟ, ಕೊಸರಾಟ, ಅಳು, ಹೆಂಗಸರ, ಗಂಡಸರ ಗದರುವಿಕೆ..

“ಆಯ್ತು ಬಿಡಿ. ಅವಳನ್ನು ಬಿಟ್ಟು ಬಿಡಿ... ಆದಂ ಸ್ವಲ್ಪ ಇಲ್ಲಿ ಬಾ..” ಎನ್ನುತ್ತಾ ಉಸ್ತಾದ್ ಕೂಡಾ ಹಜಾರದಿಂದ ಅಂಗಳಕ್ಕೆ ಹೊರ ನಡೆದರು..

ಅಂಗಳದ ಕೊನೆಯಲ್ಲಿದ್ದ ಮಾವಿನ ಮರದ ಬುಡದಲ್ಲಿ ನಿಂತು, ಜುಬ್ಬಾದ ಕಿಸೆಯಿಂದ ಬೀಡಿಯೊಂದನ್ನು ತೆಗೆದು ಬಾಯಿಗಿಟ್ಟು ಬೆಂಕಿ ಹಚ್ಚಿದರು ಉಸ್ತಾದ್. ದೀರ್ಘ ದಮ್ಮೆಳೆದು ಒಮ್ಮೆ ಕ್ಯಾಕರಿಸಿ ಉಗುಳಿ, ಆಚೀಚೆ ನೋಡಿದರು.

“ಸ್ನಾನ ಮಾಡಿಸೋದಕ್ಕೆ ಎಲ್ಲ ವ್ಯವಸ್ಥೆ ಮಾಡಿದ್ದೀರಾ? ಮಯ್ಯತ್ ನೋಡೋದಕ್ಕೆ ಯಾರಾದರೂ ಬರುವವರಿದ್ದಾರೆಯೆ?”

“ಸ್ನಾನಕ್ಕೆ ನೀರೂ ಬಿಸಿಯಾಗಿದೆ. ಕಫನ್‌ನ ಬಟ್ಟೆ ತರಿಸಿಯಾಗಿದೆ. ಹತ್ತಿರದವರು ಎಲ್ಲರೂ ಬಂದು ಸೇರಿದ್ದಾರೆ. ಇವಳ ತಂಗಿ ಮತ್ತು ಆಕೆಯ ಗಂಡ ಇಬ್ಬರೂ ಸೌದಿಯಿಂದ ಫೋನ್ ಮಾಡಿದ್ದರು. ಬರಲು ಆಗುವುದಿಲ್ಲ- ಮಯ್ಯತ್ ಎತ್ತಿಬಿಡಿ.. ಅಂತ..” ಆದಂ ಹೇಳಿದ.
“ಖಬರ್‌ಸ್ತಾನದಲ್ಲಿ ಗುಂಡಿ ತೋಡಿ ಆಗಿದೆಯಾ? ಎಲ್ಲಿ ಖಾದಿರಾಕ..?”

“ಅದೂ ಒಂದು ಸಮಸ್ಯೆ ಆಗಿದೆ ಉಸ್ತಾದ್. ತೋಡಿ ಇಟ್ಟ ಖಬರ್ ಇಲ್ಲ. ಹೊಸ ಗುಂಡಿ ತೋಡೋದಕ್ಕೆ ಖಾದಿರಾಕನ ಹುಡುಗರು ಹೋಗಿದ್ದಾರೆ. ಆದರೆ ಅಲ್ಲಿ ಮುರಕಲ್ಲು ಸಿಕ್ಕಿದೆಯಂತೆ. ಪೂರ್ತಿ ತೋಡೋದಕ್ಕೆ ರಾತ್ರಿ ಹನ್ನೊಂದು ಗಂಟೆಯಾದರೂ ಆಗಬಹುದು ಅಂತಿದ್ದಾರೆ.. ಇನ್ನೇನು ಮಳೆ ಶುರುವಾದರೆ ಅದೂ ಕಷ್ಟ..” ಎಂದ ಆದಂ.
ಉಸ್ತಾದ್ ಪುಸಪುಸನೆ ಬೀಡಿಯ ಹೊಗೆ ಬಿಟ್ಟರು.  “ಬೆಳಿಗ್ಗೆ ಎತ್ತೋಣವಾ..?”

“ಆಗಲೇ ಸ್ವಲ್ಪ ವಾಸನೆ ಶುರುವಾಗಿದೆ. ಕರ್ಪೂರ ಸಾಕಷ್ಟು ಹಾಕಿದ್ದೇವೆ. ಲೋಬಾನದ ಹೊಗೆ ಇದ್ದುದರಿಂದ ನಿಮಗೆ ಅಷ್ಟು ಗೊತ್ತಾಗಿಲ್ಲ. ಐದು ವರ್ಷಗಳಿಂದ ಮಲಗಿದಲ್ಲೇ ಇದ್ದ ದೇಹ ನೋಡಿ, ಜೀರ್ಣವಾಗಿದೆ, ಏನೂ ಗಟ್ಟಿ ಇಲ್ಲ. ಬೆಳಿಗ್ಗೆವರೆಗೆ ಇಡೋದಾದರೆ ಐಸ್ ಇಡಬೇಕು..”

“ಮೈಕಾಲಕ್ಕೆ* ಹೋಗಿ ಐಸ್ ತನ್ನಿ, ಇಟ್ಟು ಬಿಡೋಣ..”
“ಕೋಸ್ಟಲ್ ಐಸ್ ಪ್ಲಾಂಟ್‌ಗೆ ಫೋನ್ ಮಾಡಿದ್ದೆವು. ನಿನ್ನೆ ರಾತ್ರಿ ಕರೆಂಟ್ ಹೋದದ್ದು ಇನ್ನೂ ಬಂದಿಲ್ಲವಂತೆ. ಬೇರೆ ಕಡೆ ನೋಡಬೇಕು. ಎಲ್ಲ ಕಡೆ ಕರೆಂಟ್ ಪ್ರಾಬ್ಲಂ...”
“ಎಲ್ಲಾದರೂ ಸಿಗುತ್ತೆ ಬಿಡಿ. ಯಾರಾದರೂ ಕಾರು ತಗೊಂಡು ಹೋಗಿ ಐಸ್ ವ್ಯವಸ್ಥೆ ಮಾಡಿ.. ಅವಳ ಎರಡೂ ಆಸೆಗಳನ್ನು ಪೂರೈಸೋಣ, ಬೆಳಿಗ್ಗೆಯೇ ಎತ್ತೋಣ. ಹಾಗೆಯೇ ಕಾದಿರಾಕನ ಹುಡುಗರಿಗೆ ಕೆಳಗಿನ ಖಬರ್‌ನ ಎತ್ತರ ಸ್ವಲ್ಪ ಹೆಚ್ಚೇ ಇಡಲು ಹೇಳಿ. ಖಬರ್‌ನಲ್ಲಿ ಮಲಗಿಸುವಾಗ ಕಾಲು ಮಡಚಿ ಇಟ್ಟರೆ ಏನೂ ತೊಂದರೆ ಇಲ್ಲ...” ಉಸ್ತಾದ್ ನಿರ್ಧಾರದ ಧ್ವನಿಯಲ್ಲಿ ಹೇಳಿದಾಗ ಎಲ್ಲರಿಗೂ ಅಚ್ಚರಿ.

“ಜಮಾತ್ ಪ್ರೆಸಿಡೆಂಟರನ್ನು ಒಂದು ಮಾತು ಕೇಳೋದು ಒಳ್ಳೆಯದು. ಅವರು ಆಗಲೇ ಮಯ್ಯತ್ ನೋಡಲು ಬಂದಾಗ ಬಹಳ ಸಿಟ್ಟಿಗೆದ್ದಿದ್ದರು. ಕಾಲು ಮಡಚಿ ಮಯ್ಯತ್ ತೆಗೆಯಲು ಸಾಧ್ಯವೇ ಇಲ್ಲ ಎಂದು ಕೂಗಾಡಿದರು..” ಆದಂ ಅಳುಕುತ್ತಲೇ ಉಸುರಿದ.
“ಪ್ರೆಸಿಡೆಂಟರ ವಿಷಯ ನನಗೆ ಬಿಡಿ. ಬೇಕಿದ್ದರೆ ಮಂಗಳೂರಿಗೆ ಫೋನ್ ಮಾಡಿ ಖಾಜಿಯವರಿಂದಲೇ ಒಂದು ಮಾತು ಹೇಳಿಸೋಣ..” ಎಂದರು ಉಸ್ತಾದ್.

“ಸಮಸ್ಯೆ ಅಷ್ಟು ಸುಲಭವಿಲ್ಲ. ಪ್ರೆಸಿಡೆಂಟರು ಆಗಲೇ ಮಂಗಳೂರಿಗೆ ಖಾಜಿಯವರಿಗೆ ಫೋನ್ ಮಾಡಿ ಕೇಳಿದರಂತೆ. ಕಾಲು ಮಡಚಿ ಮಯ್ಯತ್ ದಫನ ಮಾಡುವುದು ಖಂಡಿತಾ ಸಾಧ್ಯವಿಲ್ಲ.. ಎಂದು ಖಾಜಿಯವರೇ ಹೇಳಿದ್ದಾರಂತೆ..”- ಜಬ್ಬಾರ್‌ಹಾಜಿ ಖಚಿತ ಧ್ವನಿಯಲ್ಲಿ ಹೇಳಿದ.

ಇದೊಳ್ಳೆ ಫಜೀತಿಯಾಯ್ತಲ್ಲ.. ಏನು ಮಾಡೋಣ... ಎನ್ನುವಂತೆ ಜನರ ಗುಂಪಿನತ್ತ ನೋಡಿದರು ಉಸ್ತಾದ್.

“ಮಯ್ಯತ್ ಸ್ನಾನ ಮಾಡಿಸೋದು ಹೇಗೂ ಗಂಡಸರೇ ತಾನೆ? ಬೀಪಾತುಗೆ ಹೇಳೋದೇನೂ ಬೇಡ. ಸ್ನಾನ ಮಾಡುವಾಗ ಹಾಗೆಯೇ ಕಾಲನ್ನು ನೆಟ್ಟಗೆ ಮಾಡಿದರಾಯ್ತು...” ಎಂದನೊಬ್ಬ.

“ಹಾಗೆಲ್ಲ ಆಗುವುದಿಲ್ಲ. ನಾಳೆ ಬೆಳಿಗ್ಗೆ ಸ್ನಾನಕ್ಕೆ ಎತ್ತುವಾಗ ಕಾಲು ಮರಗಟ್ಟಿರುತ್ತದೆ. ನೀವು ನೆಟ್ಟಗೆ ಮಾಡಲು ಹೋದರೆ ಕಾಲು, ಮೂಳೆ ತುಂಡಾದೀತು.. ಏನು ಮಯ್ಯತ್ ಅಂದರೆ ಹುಡುಗಾಟ ಅಂದುಕೊಂಡಿದ್ದೀರಾ.. ಹಾಗೆಲ್ಲ ಮಯ್ಯತ್ತಿಗೆ ನೋವು ಮಾಡಬಾರದು” ಎಂದು ಗದರಿದ ಸಲೀಂ. ಅವನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಂಪೌಂಡರ್ ಆಗಿದ್ದುದರಿಂದ ಅವನ ಮಾತಿಗೆ ಬೇರೆಯೇ ತೂಕವಿತ್ತು.

“ತುಂಡಾದರೂ ಪರವಾಗಿಲ್ಲ. ಆಕ್ಸಿಡೆಂಟ್ ಆಗಿ ಸತ್ತವರದ್ದು ಕಾಲು ಏನು ನೆಟ್ಟಗೇ ಇರುತ್ತದಾ..? ಎಷ್ಟು ಮಯ್ಯತ್‌ಗಳನ್ನು ಬಟ್ಟೆಯಲ್ಲಿ ಒಟ್ಟು ಸೇರಿಸಿ ತಂದು ಮಣ್ಣು ಮಾಡಿಲ್ಲ.. ಏನೇ ಆದರೂ ಆ ಬೀಪಾತುವಿಗೆ ಇಷ್ಟು ಅಹಂಕಾರ ಇರಬಾರದು. ಏನಿದು.. ಧರ್ಮ ಕರ್ಮ ಒಂದೂ ನೋಡಬಾರದಾ..? ಯಃಕಶ್ಚಿತ್ ಒಬ್ಬ ಹೆಂಗಸು ಹೀಗೆ ಹಠ ಹಿಡಿದರೆ ನೀವಾದರೂ ಏಕೆ ಸೊಪ್ಪು ಹಾಕುತ್ತೀರಿ ಉಸ್ತಾದ್? ಇಸ್ಲಾಮಿನ ವಿಧಿ ಏನು ಹೇಳುತ್ತದೋ ಅದರ ಪ್ರಕಾರ ಮಾಡಿ. ಇಲ್ಲ.. ಅವಳೇ ಮಣ್ಣು ಮಾಡಿಕೊಳ್ಳಲಿ. ನಾವೆಲ್ಲ ಇಲ್ಲಿಂದ ಹೊರಟು ಹೋಗ್ತೀವಿ...” ಜಬ್ಬಾರ್‌ಹಾಜಿ ಸ್ವಲ್ಪ ದೊಡ್ಡದೇ ಎನ್ನುವ ಧ್ವನಿಯಲ್ಲಿ ಕೂಗಾಡಿದ. ಗುಂಪಿನಲ್ಲಿದ್ದ ಹಲವರು “ಹೌದು.. ಹೌದು...” ಎಂದರು.

ಜಬ್ಬಾರ್ ಹಾಜಿ ಬೀಪಾತುವಿಗೆ ದೂರದ ಸಂಬಂಧಿಯೇ. ಆದರೆ ಅವನಿಗೆ ಬೀಪಾತು ಮತ್ತು ಅವಳ ಗಂಡನನ್ನು ಕಂಡರೆ ಆಗುತ್ತಿರಲಿಲ್ಲ. ತರವಾಡಿನಿಂದ ಬಂದ ಗುಡ್ಡದ ಕೆಳಗಿನ ಒಂದು ಎಕರೆ ಜಮೀನಿನ ಬಗ್ಗೆ ಎರಡೂ ಕುಟುಂಬಗಳ ನಡುವಣ ಜಗಳ ಬಹಳ ಹಳೆಯದ್ದು. ಆದಂ ಸಾಹೇಬರ ಅಪ್ಪ ಅದನ್ನು ಖಬರಸ್ತಾನದ ಉಪಯೋಗಕ್ಕೆಂದು ಮಸೀದಿಯ ಹೆಸರಿಗೆ ಬರೆದು ಕೊಟ್ಟಿದ್ದರು. ಜಮೀನಿನ ವಿಷಯದಲ್ಲಿ ಎರಡೂ ಕುಟುಂಬದ ನಡುವೆ ಹೊಡೆದಾಟಗಳೂ ಆಗಿದ್ದವು.

“ಆಯ್ತು ನೀವು ಸುಮ್ಮನಿರಿ ಹಾಜಾರ್. ಇಸ್ಲಾಮಿನಿ ವಿಧಿಯ ಪ್ರಕಾರವೇ ಎಲ್ಲವನ್ನೂ ಮಾಡೋಣ” ಎಂದು ಉಸ್ತಾದರು ಸಮಾಧಾನ ಪಡಿಸಿದರು.

ಅಷ್ಟರಲ್ಲಿ ಮಸೀದಿಯಿಂದ ಮಗ್ರಿಬ್ ಬಾಂಗ್* ಮೊಳಗತೊಡಗಿತು. ಜನ ಅವರಸರದಿಂದ ಮಸೀದಿಯತ್ತ ಹೊರಟರು. ಉಸ್ತಾದ್ ಕೂಡಾ ಲಗುಬಗೆಯಿಂದ ಹೆಜ್ಜೆ ಹಾಕಿದರು.
ಅಂಗಳದಲ್ಲಿ ನಡೆಯುತ್ತಿದ್ದ ವಾಗ್ವಾದವನ್ನು ಮನೆಯ ಕಿಟಕಿಗಳಿಗೆ ಕಣ್ಣು ನೆಟ್ಟು ನೋಡುತ್ತಿದ್ದ ಹೆಂಗಸರ ಗುಂಪಿನಲ್ಲೂ ಗುಜುಗುಜು. “ಉಸ್ತಾದ್ ಸಿಟ್ಟಿನಿಂದ ಹೊರಟೇ ಹೋದರು” ಎಂದರೊಬ್ಬರು. ಗುಜುಗುಜು ಜೋರಾಯಿತು. ಬೀಪಾತುವಿನ ಅಳುವೂ ಸಣ್ಣದಾಗಿ ಮುಂದುವರಿದಿತ್ತು.

ಮಸೀದಿಯಲ್ಲಿ ಮಗ್ರಿಬ್‌ನ ನಮಾಜ್ ಮುಗಿಯುವುದಕ್ಕೂ ಆಕಾಶದಲ್ಲಿ ಸೋನೆ ಹಿಡಿಯುವುದಕ್ಕೂ ಸರಿ ಹೋಯಿತು. ಸಣ್ಣದಾಗಿಯೇ ಶುರುವಾದ ಮಳೆ ಒಂದೇ ಸಮನೆ ಜೋರಾಯಿತು. ಹುಲುಮನುಷ್ಯರ ಕಣ್ಣೀರು ಏನೇನೂ ಅಲ್ಲ.. ಎನ್ನುವಂತೆ ಆಕಾಶ ಸುರಿಸತೊಡಗಿದ ಮಳೆ ನೋಡಿ ಸಾವಿನ ಮನೆಯಲ್ಲಿದ್ದವರ ಆತಂಕ ಇನ್ನಷ್ಟು ಹೆಚ್ಚಾಯಿತು. ಅಷ್ಟು ಹೊತ್ತಿಗಾಗಲೇ ಖಬರಸ್ತಾನದಿಂದ ಸುದ್ದಿ ಬಂತು. “ಈ ಮಳೆಯಲ್ಲಿ ಖಬರ್ ತೋಡುವುದು ಸಾಧ್ಯವೇ ಇಲ್ಲ. ಮಳೆ ನೀರೆಲ್ಲ ಗುಂಡಿಯೊಳಗೆ ಬೀಳುತ್ತಿದೆ. ಖಬರ್ ಪಕ್ಕದಲ್ಲೇ ಗುಡ್ಡ ಇರುವುದರಿಂದ ಗುಂಡಿ ತೋಡಲು ನಿಲ್ಲಲೂ ಜಾಗವಿಲ್ಲ...”.

ನಮಾಜಿನ ಬಳಿಕ ಗಂಡಸರೆಲ್ಲ ಮಸೀದಿಯಲ್ಲೇ ಕುಳಿತರು. ಮಸೀದಿಯ ಸ್ವಚ್ಛತೆ ನೋಡಿಕೊಳ್ಳುತ್ತಿದ್ದ ಹಮೀದಾಕ ಬಂದು “ಐಸ್ ತರಲು ಮೈಕಾಲಕ್ಕೆ ಹೋದವರು ಫೋನ್ ಮಾಡಿದ್ದಾರೆ. ಎಲ್ಲೂ ಐಸ್ ಸಿಗಲಿಲ್ಲವಂತೆ. ರೊಸಾರಿಯೋ ಚರ್ಚ್‌ನಲ್ಲಿ ಕಾಫಿನ್ ಐಸ್‌ಬಾಕ್ಸ್ ಇದೆ. ತಗೊಂಡು ಬರಲಾ ಎಂದು ಕೇಳ್ತಿದಾರೆ” ಎಂದರು.
“ಎಷ್ಟಂತೆ ಬಾಡಿಗೆ?”

2-3 ಸಾವಿರ ಇರಬಹುದು. ರಾತ್ರಿಯಿಡೀ ಇಟ್ಟರೆ ಜಾಸ್ತಿ ಚಾರ್ಜ್ ಮಾಡ್ತಾರಂತೆ..
“ಏನಾದರಾಗಲಿ, ತಗೊಂಡು ಬರೋದಕ್ಕೆ ಹೇಳಿ. ಬೆಳಿಗ್ಗೆ ಖಬರ್ ತೋಡೋ ಕೆಲಸ ಶುರು ಮಾಡಿದರೆ ಮುಗಿಯೋದಕ್ಕೆ ಮಧ್ಯಾಹ್ನ ದಾಟಬಹುದು”

ಜಡಿಮಳೆಯ ಜತೆಗೆ ಮಿಂಚು, ಸಿಡಿಲು ಶುರುವಾಯಿತು. ಮಸೀದಿಯಲಿ ಬೀಪಾತುವಿನ ವರ್ತನೆಯದ್ದೇ ಚರ್ಚೆ. ಜಬ್ಬಾರ್ ಹಾಜಿಯ ಸಿಟ್ಟು ಇನ್ನೂ ಆರಿರಲಿಲ್ಲ. “ಬಲ ಹಾಕಿ ಒತ್ತಿದರೆ ಮಯ್ಯತ್ತಿನ ಕಾಲು ನೆಟ್ಟಗಾಗುತ್ತದೆ. ಲಟಕ್ ಅಂತ ಶಬ್ದ ಬರಬಹುದು ಅಷ್ಟೆ. ಅದಕ್ಕಾಗಿ ಖಬರಿನ ಆಳವನ್ನು ಹೆಚ್ಚು ಮಾಡುವುದು ಸರಿ ಅಲ್ಲ. ಉಸ್ತಾದರೇ ನೀವು ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಹಾಕುವ ಕೆಲಸ ಮಾಡಬೇಡಿ. ಖಾಜಿಯವರು ಇಡೀ ಜಿಲ್ಲೆಗೇ ಶರೀಯತ್ ಬಗ್ಗೆ ತಿಳಿಸಿ ಹೇಳುವವರು. ಅವರ ಮಾತು ಮೀರುತ್ತೀರಾ..? ನಾಳೆ ಏನಾದರೂ ಕೆಟ್ಟ ಹೆಸರು ಬಂದರೆ ಅದು ನಮ್ಮ ಜಮಾತ್‌ಗೆ. ನೀವು ಬಿಡಿ, ಬೇರೆ ಊರಿನಿಂದ ಸಂಬಳಕ್ಕೆ ಇಲ್ಲಿ ಬಂದು ನೆಲೆಸಿದ್ದೀರಿ. ನಾಳೆ ನೀವು ಕೆಲಸ ಬಿಟ್ಟು ಬೇರೆಡೆ ಹೋಗಬಹುದು. ಆದರೆ ನಾವು ಊರಿನವರು ಎಲ್ಲಿ ಹೋಗಬೇಕು..?” ಎಂದು ಜೋರಾಗಿ ಮಾತನಾಡತೊಡಗಿದ.

“ಆಯ್ತು ಹಾಜಾರ್. ಖಾಜಿಯವರಿಗೆ ನಾನೇ ಫೋನ್ ಮಾಡಿ ವಿಷಯ ವಿವರಿಸುತ್ತೇನೆ. ನೀವು ಟೆನ್ಶನ್ ತಗೋಬೇಡಿಯಪ್ಪಾ...” ಎಂದು ಉಸ್ತಾದ್ ಸಮಾಧಾನಿಸಿದರು.
“ಖಾಜಿಯವರು ಒಮ್ಮೆ ಹೇಳಿದ ಮಾತಿನಿಂದ ಹಿಂದೆ ಸರಿಯುವವರಲ್ಲ. ನೀವು ಮತ್ತೆ ಮತ್ತೆ ಫೋನ್ ಮಾಡಿದರೆ, ಅವರ ನಾಲಗೆಯೂ ಬಹಳ ಚೂಟಿ. ಸಿಟ್ಟಿನಿಂದ ಶಾಪ ಕೊಟ್ಟರೆ ಕಷ್ಟ. ಸುಮ್ಮನಿದ್ದು ಬಿಡಿ. ಕಾಲು ನೆಟ್ಟಗೆ ಬೇಕಿದ್ದರೆ ಈಗಲೇ ನಾನೇ ಹೋಗಿ ಮಾಡಿಬರುತ್ತೇನೆ..” ಜಬ್ಬಾರ್ ಹಠ ಹಿಡಿದ.

ಮಸೀದಿಯಲ್ಲಿ ಜಬ್ಬಾರ್‌ನದ್ದೇ ಒಂದು ಗುಂಪಿತ್ತು. ಅವನು ಹೇಳಿದ್ದಕ್ಕೆಲ್ಲ ಸೈ ಅನ್ನುವುದೇ ಆ ಗುಂಪಿನ ಕೆಲಸ. ಮೇಲಾಗಿ ಜಮಾತ್ ಪ್ರೆಸಿಡೆಂಟರಿಗೂ ಜಬ್ಬಾರ್ ಮಾತೆಂದರೆ ಸ್ವಲ್ಪ ತೂಕ ಹೆಚ್ಚು. ಉಸ್ತಾದ್‌ರಿಗೆ ಈಗ ಮಾತು ಬೆಳೆಸುವುದು ಸರಿ ಅಲ್ಲ.. ಅನ್ನಿಸಿತು.
ಅಷ್ಟರಲ್ಲಿ ಮಸೀದಿಯ ಗೇಟ್ ತಳ್ಳಿ ಖಾದಿರಾಕ ಮತ್ತು ಅವರ ಹುಡುಗರು ಓಡಿಬಂದರು. ಕೈಯಲ್ಲಿ ಪಿಕ್ಕಾಸು, ಹಾರೆ, ಮಣ್ಣು ಹೊರುವ ಬುಟ್ಟಿಗಳು. ಎಲ್ಲರೂ ಮಳೆಯಲ್ಲಿ ತೋಯ್ದು ತೊಪ್ಪೆಯಾಗಿದ್ದರು.

“ಏನ್ ಮಳೆ ಮಾರಾಯ್ರೆ.. ಇದು ನೋಡಿದರೆ ಬೆಳಿಗ್ಗೆವರೆಗೂ ಸುರಿಯುವಂತೆ ಕಾಣುತ್ತದೆ. ಗುಂಡಿ ಒಂದು ಅಡಿ ಕೂಡಾ ಆಗಿಲ್ಲ. ಭಾರೀ ಗಟ್ಟಿ ಕಪ್ಪು ಕಲ್ಲು ಸಿಕ್ಕಿದೆ. ಪಿಕಾಸೆಯಿಂದ ಮೀಟಿದರೆ ಬೆಂಕಿಯ ಕಿಡಿ ಬರುತ್ತದೆ, ಹಾಗಿದೆ. ಬೇರೆ ಕಡೆ ತೆಗೆದಿದ್ದರೆ ಸರಿ ಇತ್ತೇನೋ. ಆದರೆ ಅದು ಇವರ ತರವಾಡಿನ* ಜಾಗ ಅಲ್ವಾ. ಅದರಲ್ಲಿ ಸ್ವಲ್ಪ ಜಾಗ ಇವರ ಕುಟುಂಬದ ಖಬರಿಗೇ ಮೀಸಲು...~ ಮಸೀದಿಯ ಅಂಗಳದಲ್ಲೇ ನಿಂತು ಗೊಣಗುತ್ತಾ ಬೀಡಿ ಹೊತ್ತಿಸಿದರು ಖಾದಿರಾಕ.

ಮಳೆಯ ಜತೆಗೆ ಗಾಳಿಯೂ ಜೋರಾಯಿತು. ಒಮ್ಮೆಲೆ ಕರೆಂಟ್ ಕೈಕೊಟ್ಟಿತು. ಮಸೀದಿಯ ತುಂಬ ಕತ್ತಲೆ. ಇನ್ನೇನು ಇಷಾ ಬಾಂಗ್* ಕೊಡಲೆಂದು ಮೈಕ್ ಮುಂದೆ ನಿಂತಿದ್ದ ಹಮೀದಾಕ ~ಯಾ ಅಲ್ಲಾ.. ಇದೇನು ಕರೆಂಟೂ ಹೋಯ್ತಲ್ಲ~ ಎಂದು ಈಚೆ ಬಂದರು. `ಕ್ಯಾಂಡಲ್ ಇದೆಯಾ ನೋಡಿ ಹಮೀದಾಕ..~ ಎಂದು ಯಾರೋ ಕೂಗಿದರು. ಇಷಾ ನಮಾಜಿಗೆ ವುಳೂ* ಮಾಡಿ ಸಿದ್ದರಾಗಲು ಜನ ಕತ್ತಲಲ್ಲೇ ಹೊರಗೆ ಬಂದರು.
`ಕರೆಂಟ್ ಇಲ್ಲದಿದ್ದರೆ ಪರವಾಗಿಲ್ಲ. ನೀವು ಹಾಗೆಯೇ ಬಾಂಗ್ ಕೊಡಿ~ ಎಂದು ಉಸ್ತಾದರು ಸಲಹೆಯಿತ್ತರು.

ನಿಮಿಷ ನಿಮಿಷಕ್ಕೂ ಮಳೆಯ ಹೊಡೆತ ಏರುತ್ತಲೇ ಇತ್ತು. ನಡುನಡುವೆ ಕಣ್ಣು ಕೋರೈಸುವ ಮಿಂಚು. ಛಟ್ ಛಟಾಲ್.. ಎಂದು ಪಕ್ಕದಲ್ಲೇ ಸಿಡಿಲು ಹೊಡೆದ ಶಬ್ದ. ಮಸೀದಿಯೊಳಗೆ ಕಿಟಕಿ ಪಕ್ಕದಲ್ಲೇ ಕುಳಿತಿದ್ದ ಉಸ್ತಾದರೂ ಒಮ್ಮೆ ಬೆಚ್ಚಿ ಬಿದ್ದರು. `ಸುಬಹಾನಲ್ಲಾ...ವಲ್‌ಹಮ್ದುಲಿಲ್ಲಾಹ್...~ ಎಂದು ಅವರ ಬಾಯಿಯಿಂದ ಆಯಾಚಿತವಾಗಿ ಅಲ್ಲಾಹನ ನಾಮಸ್ಮರಣ ಹೊರಬಿತ್ತು.

ಬೀಪಾತು ಈಗ ಏನು ಮಾಡುತ್ತಿರಬಹುದು..? ಸಾವಿನ ಮನೆಯಲ್ಲಿ ಕರೆಂಟ್ ಹೋದರೆ ಇನ್ನೂ ಕಷ್ಟವೇ. ಕಾಫಿನ್ ಐಸ್ ಬಾಕ್ಸ್ ತರಲು ಹೋದವರು ಈಗ ಬಂದಿರಬಹುದೆ? ಬಂದಿದ್ದರೆ ಮಯ್ಯತ್ತನ್ನು ಐಸ್‌ಬಾಕ್ಸ್‌ನಲ್ಲಿ ಇಡಬಹುದಿತ್ತು.. ಕರೆಂಟ್ ಇಲ್ಲದಿದ್ದರೂ ಪರವಾಗಿಲ್ಲ, ಈ ಮಳೆ ನಿಂತಿದ್ದರೆ ಸಾಕಿತ್ತು... ಉಸ್ತಾದರ ಆಲೋಚನೆ ಮನಸ್ಸಿನಲ್ಲೇ ನಡೆದಿತ್ತು.

ಹಮೀದಾಕ ಗಟ್ಟಿ ಧ್ವನಿಯಲ್ಲಿ ಬಾಂಗ್ ನೀಡಿದರು. ನಾಲ್ಕೈದು ಕ್ಯಾಂಡಲ್‌ಗಳು, ಒಂದೆರಡು ಗ್ಯಾಸ್‌ಲೈಟ್‌ಗಳು ಬೀರುವ ಮಂದ ಬೆಳಕು. ಎಲ್ಲರೂ ಸಾಲಾಗಿ ನಮಾಜ್‌ಗೆ ನಿಂತರು. ಎಲ್ಲರಿಗಿಂತ ಮುಂದೆ ಉಸ್ತಾದ್, ಅವರ ಹಿಂದೆ 2 ಸಾಲುಗಳು... ಅಲ್ಲಾಹು ಅಕ್ಬರ್.. ಎಂದು ಎರಡೂ ಕೈಗಳನ್ನು ಕಿವಿಯೆತ್ತರಕ್ಕೆ ಎತ್ತಿ ಎದೆ ಮೇಲೆ ಕಟ್ಟಿದರು ಉಸ್ತಾದ್. ಹಳೇ ಕಾಲದ ದೊಡ್ಡ ಕಂಭಗಳ ಮಸೀದಿಯ ಗೋಡೆಯ ಮೇಲೆ ನಮಾಜ್‌ಗೆ ನಿಂತವರ ನೆರಳು ಆಟವಾಡುತ್ತಿತ್ತು.

ನಮಾಜ್ ಮಾಡುತ್ತಿದ್ದಾಗಲೂ ಉಸ್ತಾದರ ಮನಸ್ಸು ಸಾವಿನ ಮನೆಯಲ್ಲೇ ಇತ್ತು.. ಐಸ್‌ಬಾಕ್ಸ್ ಬಂದಿರಬಹುದಾ.. ಕಾಲನ್ನು ಮಡಚುವುದು ಹೇಗೆ? ಬೀಪಾತುವನ್ನು ಒಪ್ಪಿಸುವುದು ಹೇಗೆ?

ಎಲ್ಲರೂ  ನಮಾಜ್ ಮುಗಿಸಿ ಮಸೀದಿಯ ಹೊರಗಿನ ಹಜಾರಕ್ಕೆ ಬಂದು ಕುಳಿತರು. `ಈ ಮಳೆ ರಾತ್ರಿ ನಿಲ್ಲುವುದಿಲ್ಲ ಬಿಡಿ. ಮನೆಗೆ ಹೋಗಿ ಊಟ ಮಾಡಿ ಮಲಗಿದರೆ ಸಾಕು..~ ಎಂದು ಕೆಲವರು ಮಳೆಯಲ್ಲೇ ಮನೆಯ ಹಾದಿ ಹಿಡಿಯುವ ಬಗ್ಗೆ ಮಾತನಾಡಿಕೊಂಡರು.
ಧೋ... ಎಂದು ಸುರಿಯುತ್ತಿರುವ ಮಳೆ. ಭರ‌್ರೋ.. ಎಂದು ಬೀಸುತ್ತಿದ್ದ ಗಾಳಿ. ಹೊರಗೆ ಗವ್ವೆನ್ನುವ ಕತ್ತಲೆ. ಮತ್ತೆ ಛಟ್ ಛಟಾಲ್ ಎಂದು ಸಿಡಿಲು ಬಡಿಯಿತು. ಅದರ ಬೆನ್ನಲ್ಲೇ ಮಸೀದಿಯ ಹಿಂದಿನಿಂದ `ದುಡುಂ~ ಎಂಬ ಭಾರೀ ಶಬ್ದವೊಂದು ಕೇಳಿಸಿತು. `ಯಾ ಅಲ್ಲಾ... ಏನಾಯ್ತು..~ ಎಂದಾರೋ ಕೂಗಿದರು. ಖಾದಿರಾಕ ಸಹಿತ ಒಂದಿಬ್ಬರು ಮಸೀದಿಯ ಹಿಂಭಾಗದ ಕಿಟಕಿಯತ್ತ ಓಡಿದರು. ಕತ್ತಲೆಗೆ ಏನೂ ಕಾಣುತ್ತಿಲ್ಲ. `ಟಾರ್ಚ್ ತನ್ನಿ ನೋಡೋಣ~ ಎಂದು ಹಮೀದಾಕ ಕೂಗಿದರು.

ಟಾರ್ಚಿನ ಬೆಳಕು ಬೀರುತ್ತಾ ಜನರ ಗುಂಪು ಗುಡ್ಡದ ಕೆಳಭಾಗಕ್ಕೆ ಧಾವಿಸಿತು. ಉಸ್ತಾದ್ ಮಸೀದಿಯ ಕಿಟಕಿಯ ಬಳಿಗೆ ಬಂದು ಕುಳಿತು ಕತ್ತಲಲ್ಲಿ ಇಣುಕತೊಡಗಿದರು. ಇದ್ಯಾಕೋ ಇವತ್ತು ರಾತ್ರಿ ಏನೋ ಸಂಭವಿಸಲಿದೆ ಎಂದು ಅವರಿಗೆ ಮೊದಲೇ ಅನ್ನಿಸತೊಡಗಿತ್ತು. ಪಾಪ ಬೀಪಾತು.. ಅವಳ ಗಂಡ ತೀರಿಕೊಂಡ ದಿನವೇ ಹೀಗೆ ಮಳೆ ಹಿಡಿಯಬೇಕೆ? ಮಯ್ಯತ್‌ನ ಕಾಲು ಮಡಚಿದರೂ ನೇರ ಇಟ್ಟರೂ ಕೊನೆಗೆ ಎಲ್ಲವೂ ಮಣ್ಣಾಗುವುದೇ ತಾನೆ? ಮಕ್ಕಾಗೆ ಹೋದ ವಿದೇಶೀಯರು ಅಲ್ಲೇ ಮೃತಪಟ್ಟರೆ ಎರಡೇ ವಾರಕ್ಕೆ ಖಬರ್‌ನ ಒಳಗೆ ಕೆಮಿಕಲ್ ಹಾಕಿ ಎಲ್ಲವನ್ನೂ ಹುಡಿಯಾಗಿ ಪರಿವರ್ತಿಸುತ್ತಾರೆ. ಇಲ್ಲಿ ಇಷ್ಟು ಸಣ್ಣ ವಿಷಯವನ್ನು ಯಾಕೋ ದೊಡ್ಡದು ಮಾಡ್ತಿದಾರೆ.. ಯಾವುದಕ್ಕೂ ಒಮ್ಮೆ ಬೆಳಕು ಹರಿಯಲಿ..

ಗುಡ್ಡದ ಕೆಳಗೆ ಹೋಗಿದ್ದ ಜನರ ಗುಂಪು ಮತ್ತೆ ಮೇಲಕ್ಕೆ ಓಡಿಬರುವುದು ಕಾಣಿಸಿತು. `ಏನಾಯ್ತು..~ ಎಂದು ಉಸ್ತಾದರು ಕಾತರದಿಂದ ಕೇಳಿದರು.

ಗುಡ್ಡ ಪೂರ್ತಿ ಕುಸಿದು ಕುಳಿತಿದೆ ಉಸ್ತಾದ್! ಮಳೆಯಲ್ಲಿ ತೊಪ್ಪೆಯಾಗಿ ಏದುಸಿರು ಬಿಡುತ್ತಾ ಬಂದ ಖಾದಿರಾಕ ಆತಂಕದ ಧ್ವನಿಯಲ್ಲಿ ಹೇಳಿದರು. ಅವರ ಹಿಂದೆಯೇ ಜಬ್ಬಾರ್ ಹಾಜಿಯ ದೊಡ್ಡ ಗಂಟಲು ಕೇಳಿಸಿತು:  ಕುಸಿದು ಬೀಳದೆ ಇನ್ನೇನಾಗುತ್ತೆ? ಅಲ್ಲಾಹು ಎಲ್ಲದಕ್ಕೂ ತನ್ನದೇ ರೀತಿಯಲ್ಲಿ ಉತ್ತರ ಕೊಡುತ್ತಾನೆ. ಷರೀಯತ್ತಿನ ವಿಧಿಯನ್ನು ಮೀರಿ ಆಟ ಆಡಬಾರದು. ನಾನು ಹೇಳಿದರೆ ಕೇಳಿಸಿಕೊಂಡ್ರಾ? ಆ ಮಯ್ಯತ್ತಿನ ಕಾಲು ಮಡಚಿ ಹೂಳಲು ಹೊರಟದ್ದಕ್ಕೇ ಹೀಗಾಗಿದೆ. ನನ್ನ ಜೀವಮಾನದಲ್ಲಿ ಇಷ್ಟು ಭಾರೀ ಮಳೆ ನೋಡಿಲ್ಲಪ್ಪ.. ಈ ಊರಿಗೆ ಏನೋ ಮುಸೀಬತ್ತು ಕಾದಿದೆ. ನಾಳೆ ಮೈಕಾಲದಿಂದ ಖಾಜಿಯವರನ್ನೇ ಕರೆಸೋಣ.. ಅವರೇ ಬಂದು ತೀರ್ಮಾನ ಮಾಡಲಿ.

ಮತ್ತೆ ಫಳಾರೆಂದು ಮಿಂಚು ಕಣ್ಣು ಕೋರೈಸಿತು. `ಸುಬ್‌ಹಾನಲ್ಲಾ..~ ಎನ್ನುತ್ತಾ ಬರಲಿರುವ ಸಿಡಿಲಿನ ಭಾರೀ ಶಬ್ದವನ್ನು ಊಹಿಸಿ ಉಸ್ತಾದರು ಕಿವಿ ಮುಚ್ಚಿಕೊಂಡರು.
 
*
ತಸ್ಬೀ ಮಾಲೆ = ಜಪ ಮಾಲೆ, ಬಾಂಗ್ = ಪ್ರಾರ್ಥನೆಯ ಕರೆ, ಮಯ್ಯತ್= ಮೃತ ದೇಹ, ಖಬರ್ = ಗೋರಿ, ರಸೂಲುಲ್ಲ = ಮುಹಮ್ಮದ್ ಪೈಗಂಬರರು, ಮೈಕಾಲ = ಮಂಗಳೂರು, ಮಗ್ರಿಬ್ ಬಾಂಗ್ = ಸೂರ್ಯಾಸ್ತದ ಬಳಿಕದ ಪ್ರಾರ್ಥನೆಯ ಕರೆ, ತರವಾಡು = ಮನೆತನ, ಇಷಾ ಬಾಂಗ್ = ರಾತ್ರಿಯ ಪ್ರಾರ್ಥನೆಯ ಕರೆ, ವುಳೂ = ಅಷ್ಟಾಂಗಗಳನ್ನು ನೀರಿನಿಂದ ಶುದ್ಧ ಮಾಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT