ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಕ್ಷೇತ್ರ ‘ಹೊರಗಿನವರಿಗೆ’ ಒಲಿದಿದ್ದೇ ಹೆಚ್ಚು

Last Updated 18 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನವೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಬಿಜೆಪಿ ನಾಯಕರ ನಡುವೆ ದೊಡ್ಡ ಕದನವೇ ನಡೆದಿತ್ತು.  ಕ್ಷೇತ್ರದ ‘ಹೊರಗಿನವರು’ ಮತ್ತು ‘ಒಳಗಿನವರು’ ಬಹಿರಂಗವಾಗಿಯೇ ಮಾತಿನ ಸಮರ ನಡೆಸಿದ್ದರು. ಅಚ್ಚರಿಯ ಸಂಗತಿ ಎಂದರೆ ಈ ಕ್ಷೇತ್ರ ಹೆಚ್ಚು ಸಲ ಹೊರಗಿನಿಂದ ಬಂದವರನ್ನೇ ಸಂಸತ್ತಿಗೆ ಕಳುಹಿಸಿದ ಇತಿಹಾಸ ಹೊಂದಿದೆ.

ನೆರೆಯ ರಾಮನಗರ, ದೇವನಹಳ್ಳಿಯಿಂದ ಆರಂಭವಾಗಿ ದೂರದ ಮಿಜೋರಾಂನಿಂದ ಬಂದವರೂ ಬೆಂಗಳೂರು ಉತ್ತರ ಕ್ಷೇತ್ರದ ಮೂಲಕ ಲೋಕಸಭೆ ಪ್ರವೇಶಿಸಿದ್ದಾರೆ. ಹಲವು ಚುನಾವಣೆಗಳಲ್ಲಿ ಗೆದ್ದವರು ಮತ್ತು ಸಮೀಪದ ಸ್ಪರ್ಧಿ ಇಬ್ಬರೂ ಹೊರಗಿನವರೇ ಆಗಿದ್ದು ಇಲ್ಲಿಯ ಮತ್ತೊಂದು ವಿಶೇಷ.

ಮೊದಲ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಎನ್‌.ಕೇಶವ ಅಯ್ಯಂಗಾರ್‌ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಆಗ ಅವರು ಸಮಾಜವಾದಿ ಪಕ್ಷದ ಸಿ.ಜಿ.ಕೆ.ರೆಡ್ಡಿ ಅವರನ್ನು ಮಣಿಸಿ ಲೋಕಸಭೆ ಪ್ರವೇಶಿಸಿದ್ದರು. 1957ರ ಚುನಾವಣೆಯಲ್ಲಿ ಬೆಂಗಳೂರು ನಗರ ಕ್ಷೇತ್ರದಲ್ಲಿ ಬೆಂಗಳೂರು ಉತ್ತರ ಕ್ಷೇತ್ರವೂ ಸೇರಿಕೊಂಡಿತು. ಆಗಲೂ ಕೇಶವ ಅಯ್ಯಂಗಾರ್‌ ಗೆಲುವು ಕಂಡರು. ನಂತರ ನಡೆದ ಚುನಾವಣೆಗಳಲ್ಲಿ  ಒಮ್ಮೆ ಮಾತ್ರ ಸ್ಥಳೀಯರಿಗೆ ಗೆಲುವು ದಕ್ಕಿದೆ.

1962ರ ಚುನಾವಣೆಯಲ್ಲೂ ಬೆಂಗಳೂರು ನಗರ ಕ್ಷೇತ್ರವೇ ಇತ್ತು. 1967 ಮತ್ತು 1971ರ ಚುನಾವಣೆಯಲ್ಲಿ ಹನುಮಂತಯ್ಯ ಅವರು ಬೆಂಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಿ, ಗೆಲುವು ಪಡೆದಿದ್ದರು.  ಅವರು ಈಗಿನ ರಾಮನಗರ ಜಿಲ್ಲೆಯ ಕೆಂಗಲ್‌ನವರು. ಅವರ ಜಯಭೇರಿಯೊಂದಿಗೆ ಈ ಕ್ಷೇತ್ರದಲ್ಲಿ ಹೊರಗಿನವರ ಅಧಿಪತ್ಯ ಆರಂಭವಾಯಿತು.

1977ರ ಚುನಾವಣೆಯಲ್ಲಿ ಮತ್ತೆ ಬೆಂಗಳೂರು ಉತ್ತರ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಆಗ ಕಾಂಗ್ರೆಸ್‌ ಸಿ.ಕೆ.ಜಾಫರ್‌ ಷರೀಫ್‌ ಅವರನ್ನು ಕಣಕ್ಕಿಳಿಸಿತ್ತು. ಚಿತ್ರದುರ್ಗ ಜಿಲ್ಲೆಯವರಾದ ಷರೀಫ್, ಬೆಂಗಳೂರು ನಗರದಲ್ಲಿ ಅದೃಷ್ಟ ಪರೀಕ್ಷೆಗೆ ಯತ್ನಿಸಿದರು. ಮೊದಲ ಪ್ರಯತ್ನದಲ್ಲೇ ಭಾರತೀಯ ಲೋಕದಳದ ಎಂ.ಚಂದ್ರಶೇಖರ್‌ ಅವರನ್ನು ಮಣಿಸಿ ಲೋಕಸಭೆ ಮೆಟ್ಟಿಲೇರಿದರು.

ನಂತರದ ನಾಲ್ಕು (1980, 1984, 1989 ಮತ್ತು 1991) ಚುನಾವಣೆಗಳಲ್ಲಿ ಷರೀಫ್‌ ಸತತ ಗೆಲುವು ಸಾಧಿಸಿದರು. ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ತಮ್ಮ ಆಪ್ತ ಸಿಬ್ಬಂದಿಯನ್ನು ಅಕ್ರಮವಾಗಿ ಲಂಡನ್‌ ಪ್ರವಾಸಕ್ಕೆ ಕರೆದೊಯ್ದ ಆರೋಪಕ್ಕೆ ಸಂಬಂಧಿಸಿದಂತೆ 1995ರಲ್ಲಿ ಅವರ ವಿರುದ್ಧ ಸಿಬಿಐ ತನಿಖೆ ಆರಂಭವಾಗಿತ್ತು. ಈ ಕಾರಣಕ್ಕಾಗಿ 1996ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅವರನ್ನು ಕಣಕ್ಕಿಳಿಸಿರಲಿಲ್ಲ.

ಮುಸ್ಲಿಂ ಸಮುದಾಯದ ಮೊಹಮ್ಮದ್ ಒಬೇದುಲ್ಲಾ ಷರೀಫ್‌ ಎಂಬವರಿಗೆ ಟಿಕೆಟ್‌ ನೀಡಿತ್ತು. 1991ರ ಚುನಾವಣೆಯಲ್ಲಿ ಜಾಫರ್ ಷರೀಫ್ ಎದುರು ಸೋಲು ಕಂಡಿದ್ದ ಸಿ.ನಾರಾಯಣಸ್ವಾಮಿ 1996ರಲ್ಲಿ ಮತ್ತೆ ಜನತಾದಳ ಅಭ್ಯರ್ಥಿಯಾಗಿ ಕಣಕ್ಕಿಳಿದರು. ನಾರಾಯಣಸ್ವಾಮಿ ದೇವನಹಳ್ಳಿಯವರು. ಆಗ ದೇವನಹಳ್ಳಿ ಬೆಂಗಳೂರು ಉತ್ತರ ಕ್ಷೇತ್ರದ  ವ್ಯಾಪ್ತಿಯಲ್ಲಿತ್ತು.

1998ರ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಜಾಫರ್‌ ಷರೀಫ್‌ ಅವರನ್ನೇ ಕಣಕ್ಕಿಳಿಸಿತು. ಅವರ ಗೆಲುವಿನ ಓಟ ಮತ್ತೆ  ದುವರಿಯಿತು. ಲೋಕಶಕ್ತಿಯ ಡಾ.ಜೀವರಾಜ ಆಳ್ವ ಅವರನ್ನು ಸೋಲಿಸಿ, ಮತ್ತೆ ಲೋಕಸಭೆ ಪ್ರವೇಶಿಸಿದರು. 1999ರ ಚುನಾವಣೆಯಲ್ಲೂ ಮತ್ತೆ ಆಯ್ಕೆಯಾದರು.

ಹೊರ ರಾಜ್ಯದ ಅಧಿಕಾರಿಯ ಕೈಹಿಡಿದರು: 2004ರ ಚುನಾವಣೆಯಲ್ಲಿ ನಿವೃತ್ತ ಐಪಿಎಸ್‌ ಅಧಿಕಾರಿ ಎಚ್‌.ಟಿ.ಸಾಂಗ್ಲಿಯಾನ ಅವರನ್ನು ಕಣಕ್ಕಿಳಿಸಿದ ಬಿಜೆಪಿ, ಜಾಫರ್‌ ಷರೀಫ್‌ ಅವರಿಗೆ ಸೋಲಿನ ಕಹಿ ಉಣಿಸಿತು. ಮಿಜೋರಾಂನ ಐಸ್ವಾಲ್‌ನವರಾದ ಸಾಂಗ್ಲಿಯಾನ ಅವರನ್ನು ‘ಹೊರಗಿನವರು’ ಎಂಬ ಭೇದವಿಲ್ಲದೇ ಬೆಂಗಳೂರು ಉತ್ತರದ ಮತದಾರರು ಕೈಹಿಡಿದರು.

ಕಳೆದ (2009) ಲೋಕಸಭಾ ಚುನಾವಣೆಯಲ್ಲಿ ಸಾಂಗ್ಲಿಯಾನ ಕಾಂಗ್ರೆಸ್‌ ಪಕ್ಷಕ್ಕೆ ಜಿಗಿದು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದರು. ಕಾಂಗ್ರೆಸ್‌ನಿಂದ ದೂರವಾಗುವ ತಯಾರಿಯಲ್ಲಿದ್ದ ಚಿಕ್ಕಮಗಳೂರು ಮೂಲದ ಡಿ.ಬಿ.ಚಂದ್ರೇಗೌಡ ಅವರನ್ನು ಕರೆತಂದು, ಅಖಾಡಕ್ಕೆ ಇಳಿಸಿದ ಬಿಜೆಪಿ ಮತ್ತೆ ಜಯಭೇರಿ ಬಾರಿಸಿತು.

ಈಗಲೂ ‘ಹೊರಗಿನವರ’ ಪೈಪೋಟಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯುವ ಇಂಗಿತವನ್ನು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದ ಗೌಡ ಅವರು ಕೆಲ ದಿನಗಳ ಹಿಂದೆ ಪ್ರಕಟಿಸಿದ್ದರು. ಅಷ್ಟಾಗುತ್ತಿದ್ದಂತೆಯೇ ಜೋರು ದನಿಯಲ್ಲಿ ಅದನ್ನು ವಿರೋಧಿಸಿದ್ದ ಶಾಸಕ ಆರ್‌.ಅಶೋಕ, ‘ಹೊರಗಿನವರಿಗೆ ಟಿಕೆಟ್‌ ಕೊಡಬೇಡಿ’ ಎಂಬ ಒತ್ತಡವನ್ನು ಪಕ್ಷದ ನಾಯಕರ ಮೇಲೆ ತಂದಿದ್ದರು. ಆದರೂ, ಅದನ್ನು ಲೆಕ್ಕಿಸದೇ ಬಿಜೆಪಿ ಸದಾನಂದ ಗೌಡ ಅವರಿಗೆ ಟಿಕೆಟ್‌ ನೀಡಿದೆ.

ಪ್ರಾಥಮಿಕ ಚುನಾವಣೆಯ ಮೂಲಕ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಹಿಂದೆ ಜನತಾ ದಳದಿಂದ ಒಮ್ಮೆ ಸಂಸದರಾಗಿದ್ದ ಸಿ.ನಾರಾಯಣ­ಸ್ವಾಮಿ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ. ಅವರ ಸ್ವಗ್ರಾಮವನ್ನು ಆಧರಿಸಿ ಹೇಳುವುದಾದರೆ, ಅವರು ಈಗ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹೊರಗಿನವರೇ ಆಗುತ್ತಾರೆ. ಜೆಡಿಎಸ್‌ ಇನ್ನೂ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಆದರೂ, ಈ ಬಾರಿಯೂ ಇಲ್ಲಿ ‘ಹೊರಗಿನವರ’ ನಡುವೆಯೇ ಜಿದ್ದಾಜಿದ್ದಿ ನಡೆಯು­ವಂತೆ ಕಾಣುತ್ತಿದೆ.

ಮತ್ತೆ ಒಕ್ಕಲಿಗರತ್ತ ಒಲಿದ ಕ್ಷೇತ್ರ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಮೂರು, ನಾಲ್ಕು ಮತ್ತು ಐದನೇ ಚುನಾವಣೆಯಲ್ಲಿ ಒಕ್ಕಲಿಗ ಜಾತಿಗೆ ಸೇರಿದ ಕೆಂಗಲ್‌ ಹನುಮಂತಯ್ಯ ಗೆದ್ದಿದ್ದರು. ನಂತರ ಅಲ್ಪಸಂಖ್ಯಾತರಿಗೆ ಈ ಕ್ಷೇತ್ರ ದೀರ್ಘಕಾಲ ಒಲಿದಿತ್ತು.

1996ರಲ್ಲಿ ನಾರಾಯಣಸ್ವಾಮಿ ಅವರ ಗೆಲುವಿನೊಂದಿಗೆ ಮತ್ತೆ ಒಕ್ಕಲಿಗರ ಹಿಡಿತಕ್ಕೆ ಬಂದಿತ್ತು. 1998ರಿಂದ 2004ರವರೆಗೂ ಪುನಃ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳನ್ನು (ಜಾಫರ್‌ ಷರೀಫ್‌ ಮತ್ತು ಸಾಂಗ್ಲಿಯಾನ) ಇಲ್ಲಿನ ಮತದಾರರು ಬೆಂಬಲಿಸಿದ್ದರು. 2009ರ ಚುನಾವಣೆಯಲ್ಲಿ ಚಂದ್ರೇಗೌಡರ ಗೆಲುವಿನೊಂದಿಗೆ ಮತ್ತೊಮ್ಮೆ ಒಕ್ಕಲಿಗರೇ ಈ ಕ್ಷೇತ್ರದ ಸಂಸದರಾದರು. ಈ ಬಾರಿ ಎರಡು ರಾಷ್ಟ್ರೀಯ ಪಕ್ಷಗಳು ಒಕ್ಕಲಿಗರನ್ನೇ ಕಣಕ್ಕಿಳಿಸಿವೆ.

ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿಯ ಮಾಜಿ ಪ್ರಾಧ್ಯಾಪಕ ಪ್ರೊ.ಬಾಬು ಮ್ಯಾಥ್ಯು ಅವರು ಆಮ್‌ ಆದ್ಮಿ ಪಕ್ಷದ ಹುರಿಯಾಳು. ಈ ಬಾರಿ ಯಾವುದೇ ಪ್ರಮುಖ ರಾಜಕೀಯ ಪಕ್ಷಗಳಿಂದ ಅಲ್ಪಸಂಖ್ಯಾತರು ಕಣಕ್ಕಿಳಿಯುವ ಸಾಧ್ಯತೆ ತೀರಾ ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT