ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪತ್ರಿಕೆ ಮೌಲ್ಯಮಾಪನಕ್ಕೆ ಅನನುಭವಿಗಳು!

Last Updated 2 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಮುಂತಾದ ಪ್ರಮುಖ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ನಡೆಸುವ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಹೇಗಿರುತ್ತವೆ ಎನ್ನುವುದು ಈಗ ಎಲ್ಲರಿಗೂ ಗೊತ್ತಿರುವ ವಿಚಾರ. ಅಂತಹ ಪ್ರಶ್ನೆಗಳಿಗೆ ಹೇಗೋ ತಲೆ ಖರ್ಚು ಮಾಡಿ ಉತ್ತರ ಬರೆದರೆ ಅದನ್ನು ಮೌಲ್ಯಮಾಪನ ಮಾಡುವವರು ಕೂಡ ಅನುಭವ ಇಲ್ಲದವರೇ ಆಗಿರುತ್ತಾರೆ.

ಕರ್ನಾಟಕ ಲೋಕಸೇವಾ ಆಯೋಗದ ನಿಯಮಾವಳಿ ಪ್ರಕಾರ ಯಾವುದೇ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡುವವರು ಪದವಿ ಕಾಲೇಜಿನಲ್ಲಿ ಕನಿಷ್ಠ 10 ವರ್ಷಗಳ ಕಾಲ ಪಾಠ ಮಾಡಿದ ಅನುಭವ  ಹೊಂದಿರಬೇಕು. ಲಿಂಗಣ್ಣ ಕುಚಬಾಳ್ ಮತ್ತಿತರರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಹೇಳಿಕೆ ಸಲ್ಲಿಸಿದ ಆಯೋಗವು, ಪರೀಕ್ಷಾ ವಿಧಾನ ಮತ್ತು ಮೌಲ್ಯಮಾಪನ ಹೇಗಿರಬೇಕು ಎನ್ನುವುದರ ಬಗ್ಗೆ ತಿಳಿಸಿದೆ.

ಮೌಲ್ಯಮಾಪನ ಪೂರ್ವ ಮತ್ತು ಮೌಲ್ಯಮಾಪನದ ನಂತರದ ಕೆಲಸಗಳ ಬಗ್ಗೆಯೂ ತಿಳಿಸಿದೆ. ಅದರಲ್ಲಿಯೂ ಮೌಲ್ಯಮಾಪಕರ ಅರ್ಹತೆ ಯಾವುದಿರಬೇಕು ಎಂದು ಸ್ಪಷ್ಟವಾಗಿ ಹೇಳಿದೆ.

ನಿಯಮ ಉಲ್ಲಂಘನೆ: ಮೌಲ್ಯಮಾಪಕರ ಅರ್ಹತೆಯ ಬಗ್ಗೆ ಹೈಕೋರ್ಟ್‌ಗೆ ಹೇಳಿಕೆ ನೀಡಿದ ಆಯೋಗವೇ ಮೌಲ್ಯಮಾಪಕರನ್ನು ಆಯ್ಕೆ ಮಾಡುವಾಗ ನಿಯಮವನ್ನು ಉಲ್ಲಂಘಿಸುತ್ತದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಗಳಿವೆ. 2010ರಲ್ಲಿ ನಡೆದ ಗೆಜೆಟೆಡ್ ಪ್ರೊಬೇಷನರಿ ಗ್ರೇಡ್-1 ಮತ್ತು ಗ್ರೇಡ್-2 ಮುಖ್ಯ ಪರೀಕ್ಷೆಯ ಮೌಲ್ಯಮಾಪನಕ್ಕೆ ಆಯೋಗ 10 ವರ್ಷಕ್ಕಿಂತ ಕಡಿಮೆ ಅನುಭವ ಇರುವವರನ್ನು ಬಳಸಿಕೊಂಡಿದೆ.

2008ರ ಏಪ್ರಿಲ್ 3ರಂದು ಕರ್ತವ್ಯಕ್ಕೆ ಸೇರಿದ ಮೈಸೂರು ವಿಶ್ವವಿದ್ಯಾಲಯದ ಡಾ.ಟಿ.ಜಯಲಕ್ಷ್ಮಿ, 2007ರ ಮಾರ್ಚ್ 23ರಂದು ಕರ್ತವ್ಯಕ್ಕೆ ಸೇರಿದ ಎಚ್.ಆರ್.ಮಂಜುನಾಥ್, 2007ರ ಏಪ್ರಿಲ್ 21ರಂದು ಕೆಲಸಕ್ಕೆ ಸೇರಿದ ಡಾ.ಆರ್.ಡಿ.ಪವಮಾನ ಅವರನ್ನು ಮೌಲ್ಯಮಾಪನಕ್ಕೆ ಬಳಸಿಕೊಳ್ಳಲಾಗಿದೆ.

ಕನ್ನಡಿಗರಿಗೆ ಎಚ್ಚರಿಕೆ ಗಂಟೆ
ಕೆಎಎಸ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಭಾಷಾಂತರ ಅಧ್ವಾನದ ಭಯ ಸ್ವತಃ ಕೆಪಿಎಸ್‌ಸಿಗೇ ಇದೆ. ಅದಕ್ಕೆ ಪ್ರತಿ ಪ್ರಶ್ನೆ ಪತ್ರಿಕೆಯ ಆರಂಭದಲ್ಲಿ ನೀಡಲಾಗುವ ಸೂಚನೆಯಲ್ಲಿ `ಪ್ರಶ್ನೆಗಳು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿರುತ್ತವೆ.

ಕನ್ನಡ ಪ್ರಶ್ನೆಗಳಲ್ಲಿ ಸಂದೇಹ ಉಂಟಾದರೆ ದಯವಿಟ್ಟು ಆಂಗ್ಲಭಾಷೆಯ ಪ್ರಶ್ನೆಯನ್ನು ಗಮನಿಸುವುದು' ಎಂದು ತಿಳಿಸಲಾಗಿದೆ. ಇದು ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆ ನಡೆಸುವ ಪರಿ.

ಒಂದು ಉತ್ತರ ಪತ್ರಿಕೆಯನ್ನು ಮೂರು ಮೌಲ್ಯಮಾಪಕರು ನೋಡುತ್ತಾರೆ.ಮೌಲ್ಯಮಾಪನಕ್ಕೆ ಮೊದಲು ಮುಖ್ಯ ಮತ್ತು ಪ್ರಧಾನ ಮೌಲ್ಯಮಾಪಕರು ಸೇರಿ ಮಾದರಿ ಉತ್ತರಗಳನ್ನು ಸಿದ್ಧಪಡಿಸುತ್ತಾರೆ.

ಮೌಲ್ಯಮಾಪನ ಆರಂಭವಾಗುವುದಕ್ಕೆ ಮೊದಲು ಈ ಮಾದರಿ ಉತ್ತರಗಳನ್ನು ಎಲ್ಲ ಮೌಲ್ಯಮಾಪಕರಿಗೂ ನೀಡಲಾಗುತ್ತದೆ. ಹೀಗೆಂದು ಆಯೋಗ ಹೈಕೋರ್ಟ್‌ಗೆ ಹೇಳಿಕೆ ನೀಡಿದೆ.

ಅಂಕಗಳಲ್ಲಿ ವ್ಯತ್ಯಾಸ: ಮಾದರಿ ಉತ್ತರಗಳನ್ನು ಮೌಲ್ಯಮಾಪಕರಿಗೆ ನೀಡಿದರೂ ಮೂವರೂ ಮೌಲ್ಯಮಾಪಕರು ಒಂದು ಉತ್ತರ ಪತ್ರಿಕೆಗೆ ಬೇರೆ ಬೇರೆ ಅಂಕಗಳನ್ನೇ ನೀಡುತ್ತಾರೆ. ಅಂಕಗಳ ವ್ಯತ್ಯಾಸ ನೂರು ಅಂಕಕ್ಕಿಂತಲೂ ಜಾಸ್ತಿ ಇರುವ ಉದಾಹರಣೆಗಳೂ ಇವೆ.

2010ರ ಮುಖ್ಯ ಪರೀಕ್ಷೆಗೆ ಹಾಜರಾಗಿದ್ದ ನೋಂದಣಿ ಸಂಖ್ಯೆ 2575ರ ಕನ್ನಡ ಸಾಹಿತ್ಯ ಉತ್ತರ ಪತ್ರಿಕೆಯನ್ನು ಮೂವರು ಮೌಲ್ಯಮಾಪಕರು ಪರಿಶೀಲಿಸಿದ್ದಾರೆ. ಕನ್ನಡ ಸಾಹಿತ್ಯ ಉತ್ತರ ಪತ್ರಿಕೆ-1ಕ್ಕೆ ಮೊದಲ ಮೌಲ್ಯಮಾಪಕರು 100 ಅಂಕ ನೀಡಿದರೆ ಎರಡನೇ ಮೌಲ್ಯಮಾಪಕರು 186 ಅಂಕ ನೀಡಿದ್ದಾರೆ. ಮೂರನೇ ಮೌಲ್ಯಮಾಪಕರು 88 ಅಂಕ ನೀಡಿದ್ದಾರೆ.

ಅದೇ ರೀತಿ ಪತ್ರಿಕೆ-2ಕ್ಕೆ ಮೊದಲ ಮೌಲ್ಯಮಾಪಕರು 70, 2ನೇ ಮೌಲ್ಯಮಾಪಕರು 150 ಹಾಗೂ ಮೂರನೇ ಮೌಲ್ಯಮಾಪಕರು 92 ಅಂಕಗಳನ್ನು ನೀಡಿದ್ದಾರೆ. ಅದೇ ರೀತಿ ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ಉತ್ತರ ಪತ್ರಿಕೆಗೆ ಮೊದಲ ಮೌಲ್ಯಮಾಪಕರು 87 ಅಂಕ ನೀಡಿದರೆ 2ನೇ ಮೌಲ್ಯಮಾಪಕರು 140 ಅಂಕ ನೀಡಿದ್ದಾರೆ. ಮೂರನೇ ಮೌಲ್ಯಮಾಪಕರು 124 ಅಂಕ ನೀಡಿದ್ದಾರೆ. ಮಾದರಿ ಉತ್ತರಗಳನ್ನು ಮೌಲ್ಯಮಾಪಕರಿಗೆ ನೀಡಲಾಗಿದ್ದರೂ ಅಂಕಗಳಲ್ಲಿ ಇಷ್ಟೊಂದು ವ್ಯತ್ಯಾಸ ಬರುವುದು ಹೇಗೆ ಮತ್ತು ಯಾಕೆ ಎಂಬ ಪ್ರಶ್ನೆ ಅಭ್ಯರ್ಥಿಗಳನ್ನು ಇನ್ನೂ ಕಾಡುತ್ತಲೇ ಇದೆ.

ಸರಾಸರಿ ಅಂಕ ನೀಡಿಕೆಯಲ್ಲೂ ಮೋಸ: ಹೀಗೆ ಮೂವರು ಮೌಲ್ಯಮಾಪಕರು ಒಂದೇ ಉತ್ತರ ಪತ್ರಿಕೆಯನ್ನು ಪರಿಶೀಲಿಸಿ ಅಂಕಗಳನ್ನು ನೀಡಿದಾಗ ಮೂವರೂ ಮೌಲ್ಯಮಾಪಕರು ನೀಡಿದ ಅಂಕಗಳ ಸರಾಸರಿ ಲೆಕ್ಕ ಮಾಡಿ ಅದನ್ನು ಅಭ್ಯರ್ಥಿಗೆ ನೀಡಬೇಕು. ಆದರೆ ಆಯೋಗ ಹೀಗೆ ಮಾಡುವುದಿಲ್ಲ. ಇಬ್ಬರ ಅಂಕಗಳನ್ನು ಮಾತ್ರ ಸೇರಿಸಿ ಸರಾಸರಿ ಅಂಕವನ್ನು ಲೆಕ್ಕ ಮಾಡುತ್ತದೆ.

ಉದಾಹರಣೆಗೆ ಮೊದಲ ಮೌಲ್ಯಮಾಪಕರು 100, ಎರಡನೇ ಮೌಲ್ಯಮಾಪಕರು 186, ಮೂರನೇ ಮೌಲ್ಯಮಾಪಕರು 88 ಅಂಕ ನೀಡಿದಾಗ ಆಯೋಗ ತನಗೆ ಬೇಕಾಗಿರುವ ಅಭ್ಯರ್ಥಿಯಾದರೆ 100 ಮತ್ತು 186 ಅಂಕಗಳನ್ನು ಸೇರಿಸಿ ಅದರ ಸರಾಸರಿ ಅಂಕವನ್ನು ಅಭ್ಯರ್ಥಿಗೆ ಕೊಡುತ್ತದೆ.

ಬೇಡದ ಅಭ್ಯರ್ಥಿಯಾಗಿದ್ದರೆ 100 ಮತ್ತು 88 ಅಂಕವನ್ನು ಸೇರಿಸಿ ಅದರ ಸರಾಸರಿ ನೀಡುತ್ತದೆ ಎನ್ನುವುದು ಅಭ್ಯರ್ಥಿಗಳ ಆರೋಪ. ಮೂವರು ಮೌಲ್ಯಮಾಪಕರು ನೀಡಿದ ಅಂಕಗಳನ್ನು ಸೇರಿಸಿ ಸರಾಸರಿ ಅಂಕವನ್ನು ಅಭ್ಯರ್ಥಿಗಳಿಗೆ ನೀಡಬೇಕು ಎನ್ನುವುದು ಅವರ ಒತ್ತಾಯ.

ಅವಸರದಲ್ಲಿ ಮೌಲ್ಯಮಾಪನ: 362 ಮಂದಿ ಗೆಜೆಟೆಡ್ ಅಧಿಕಾರಿಗಳ ನೇಮಕಾತಿಗಾಗಿ 2011ರಲ್ಲಿ ನಡೆದ ಮುಖ್ಯ ಪರೀಕ್ಷೆಗೆ ಹಾಜರಾದವರು 7,240 ಅಭ್ಯರ್ಥಿಗಳು. ಈ ಎಲ್ಲ ಅಭ್ಯರ್ಥಿಗಳು ಬರೆದ ಉತ್ತರ ಪತ್ರಿಕೆಗಳ ಸಂಖ್ಯೆ 57,920. ಇಷ್ಟೊಂದು ಉತ್ತರ ಪತ್ರಿಕೆಗಳನ್ನು ಕೇವಲ 50 ದಿನಗಳಲ್ಲಿ ಮೌಲ್ಯಮಾಪನ ಮಾಡಲಾಗಿದೆ.

ಯುಜಿಸಿ ನಿಯಮಾವಳಿ ಪ್ರಕಾರ ನೂರು ಅಂಕಗಳಿಗೆ ನಡೆದ ಪರೀಕ್ಷೆಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುವಾಗ ದಿನಕ್ಕೆ 24 ಪತ್ರಿಕೆಗಳಿಗಿಂತ ಹೆಚ್ಚು ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವಂತಿಲ್ಲ. ಆದರೆ ಆಯೋಗ 300 ಅಂಕಗಳ ಉತ್ತರ ಪತ್ರಿಕೆಗಳನ್ನು ದಿನಕ್ಕೆ 30ರಂತೆ ಮೌಲ್ಯಮಾಪನ ಮಾಡಿಸುತ್ತದೆ.

ಅವಸರವೇ ಅವ್ಯವಹಾರಕ್ಕೆ ಕಾರಣ: ಹೀಗೆ ಅವಸರದಲ್ಲಿ ಮೌಲ್ಯಮಾಪನ ಮಾಡಿಸಿದ್ದೇ ಅವ್ಯವಹಾರಕ್ಕೂ ಕಾರಣವಾಗಿದೆ ಎನ್ನುವುದು ಈ ಬಾರಿಯ ಪ್ರಮುಖ ಆರೋಪ. ಈ ಬಾರಿ ಪರೀಕ್ಷೆ ಬರೆದ ಗಂಗಾಧರಯ್ಯ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿಯೂ ಇದನ್ನೇ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. `ಅನನುಭವಿಗಳನ್ನು ಮೌಲ್ಯಮಾಪಕರನ್ನಾಗಿ ನೇಮಿಸಲಾಗಿದೆ.

ಅಲ್ಲದೆ ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ಉತ್ತರ ಪತ್ರಿಕೆಯನ್ನು ಅರ್ಥಶಾಸ್ತ್ರ, ಸಮಾಜ ಶಾಸ್ತ್ರದ ಅಧ್ಯಾಪಕರು ಮೌಲ್ಯಮಾಪನ ಮಾಡಿದ್ದಾರೆ. ಕನ್ನಡ ಮಾಧ್ಯಮದ ಮೌಲ್ಯಮಾಪಕರು ಇಂಗ್ಲಿಷ್ ಮಾಧ್ಯಮದ ಉತ್ತರ ಪತ್ರಿಕೆಯನ್ನೂ ಮೌಲ್ಯಮಾಪನ ಮಾಡಿದ್ದಾರೆ. ಇದರಿಂದಾಗಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸರಿಯಾಗಿ ನಡೆದಿಲ್ಲ' ಎಂದು ಅವರು ದೂರಿದ್ದಾರೆ.

ಕೆಪಿಎಸ್‌ಸಿ ಸಹಾಯಕ ಕಾರ್ಯದರ್ಶಿ ಪದ್ಮಜಾ ಅವರ ಪುತ್ರ ಅಭಿಷೇಕ್ ಹೆಗಡೆ ಪೂರ್ವಭಾವಿ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಪಡೆದಿದ್ದರೂ ಮುಖ್ಯ ಪರೀಕ್ಷೆಯಲ್ಲಿ ಅವರಿಗೆ 995 ಅಂಕ ನೀಡಲಾಗಿದೆ. ಇದು ಕೆಪಿಎಸ್‌ಸಿ ಕಾರ್ಯದರ್ಶಿ ಸುಂದರ್ ಮತ್ತು ಪೀಠಾಧಿಕಾರಿ ಅರುಣಾಚಲಂ ಅವರ ಕೈಚಳಕ ಎಂದು ಗಂಗಾಧರಯ್ಯ ತಮ್ಮ ದೂರಿನಲ್ಲಿ ತಿಳಿಸಿದ್ದು ಇದರ ಆಧಾರದಲ್ಲಿಯೇ ಡಿಪಿಎಆರ್ ವಿಧಾನಸೌಧ ಪೊಲೀಸರಿಗೆ ದೂರು ಸಲ್ಲಿಸಿದೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಯ ಹೊಣೆಯನ್ನು ಸಿಐಡಿಗೆ ನೀಡಿದ್ದಾರೆ. ಈಗ ಅದರ ಬಗ್ಗೆಯೂ ಸಿಐಡಿ ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT