ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಎಫ್‌ಡಿಐ' ನಿಯಮ ಸಡಿಲಿಕೆ

ಚಿಲ್ಲರೆ ವಹಿವಾಟು ವಲಯ
Last Updated 2 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಬಹುಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ `ವಿದೇಶಿ ನೇರ ಬಂಡವಾಳ ಹೂಡಿಕೆ'ಗೆ(ಎಫ್‌ಡಿಐ) ಇದ್ದ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಜಾಗತಿಕ ರಿಟೇಲ್ ಕಂಪೆನಿಗಳು ಭಾರತದಲ್ಲಿ 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ನಗರಗಳಲ್ಲೂ ಮಾರಾಟ ಮಳಿಗೆ ತೆರೆಯಬಹುದು. ಸ್ಥಳೀಯ ಮಾರುಕಟ್ಟೆ ಸಂಸ್ಥೆಗಳಿಂದ ಶೇ 30ರಷ್ಟು ಸರಕು ಖರೀದಿಸಬೇಕು ಎಂಬ ಕಡ್ಡಾಯ ನಿಯಮದಲ್ಲೂ ವಿನಾಯ್ತಿ ನೀಡಲಾಗಿದೆ.

ಮಾರಾಟ ಮಳಿಗೆ ತೆರೆಯಲು ಕನಿಷ್ಠ 1 ಸಾವಿರ ಕೋಟಿ ಡಾಲರ್(ಸುಮಾರು ರೂ. 60,000 ಕೋಟಿ) ಹೂಡಿಕೆ ನಿಗದಿಪಡಿಸಲಾಗಿದೆ. ಇದು ಕಡ್ಡಾಯ. ಭಾರತದಲ್ಲಿನ ಪಾಲುದಾರ ಸಂಸ್ಥೆ ಜತೆ ಸಮಾಲೋಚನೆ ನಡೆಸಿ ಹೂಡಿಕೆ ಮಿತಿ ಹೆಚ್ಚಿಸಬಹುದು.

ಆದರೆ, ವಿದೇಶಿ ಕಂಪೆನಿ ತನ್ನ ವಹಿವಾಟು ವಿಸ್ತರಣೆಗೆ ಅಗತ್ಯವಾದ ಹೆಚ್ಚುವರಿ ಮೂಲಸೌಕರ್ಯ ಅಭಿವೃದ್ಧಿಗೆ ಶೇ 50ರಷ್ಟು ಮಾತ್ರ ಹೂಡಿಕೆ ಮಾಡಬಹುದು. ಈ ನೀತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಈ ಮೊದಲು 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯ ನಗರಗಳಲ್ಲಿ ಮಾತ್ರ ಮಾರಾಟ ಮಳಿಗೆ ತೆರೆಯಲು ಅವಕಾಶ ನೀಡಲಾಗಿತ್ತು.

`ಬಹುಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ಹೂಡಿಕೆ ಮಾಡುವ ವಿದೇಶಿ ಕಂಪೆನಿಗಳು  ಆರಂಭದಲ್ಲಿ ಮಾತ್ರ ಶೇ 30ರಷ್ಟು ಸರಕುಗಳನ್ನು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ(ಎಂಎಸ್‌ಎಂಇ)  ಗಳಿಂದ ಖರೀದಿಸಬೇಕು' ಎಂದು ಕೈಗಾರಿಕಾ ಸಚಿವ ಆನಂದ ಶರ್ಮಾ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

ಕೃಷಿ ಸಹಕಾರ ಸಂಸ್ಥೆಗಳು ಮತ್ತು ರೈತರನ್ನು ಸಹ `ಎಂಎಸ್‌ಎಂಇ' ವರ್ಗದಲ್ಲೇ ಪರಿಗಣಿಸಬೇಕು ಎಂಬ ಬೇಡಿಕೆ ಇತ್ತು. ಇದನ್ನು ಅಂಗೀಕರಿಸಲಾಗಿದೆ. ರೈತರಿಂದ ಮತ್ತು ಕೃಷಿ ಸಹಕಾರ ಸಂಸ್ಥೆಗಳಿಂದ ಸರಕು ಖರೀದಿಸುವುದು ಸಹ ಚಿಲ್ಲರೆ `ಎಫ್‌ಡಿಐ'ನ ಕಡ್ಡಾಯ ನಿಬಂಧನೆಗಳಲ್ಲಿ ಸೇರಿದೆ' ಎಂದು ಅವರು ಹೇಳಿದರು.

ಉದ್ಯಮ ವಲಯ ಸ್ವಾಗತ
ಬಹುಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ `ಎಫ್‌ಡಿಐ' ನಿಯಮ ಸಡಿಲಿಸಿರುವುದು ಉತ್ತಮ ಕ್ರಮ. ಸದ್ಯದ ಸವಾಲಿನ ಆರ್ಥಿಕ ಪರಿಸ್ಥಿತಿಯಲ್ಲಿ ಇದು ಅಗತ್ಯವಾಗಿತ್ತು. ಇದರಿಂದ ದೇಶಕ್ಕೆ ಹೆಚ್ಚಿನ ವಿದೇಶಿ ಬಂಡವಾಳ ಹರಿದುಬರಲಿದ್ದು ಚಾಲ್ತಿ ಖಾತೆ ಕೊರತೆ (ಸಿಎಡಿ) ತಗ್ಗಲಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಅಭಿಪ್ರಾಯಪಟ್ಟಿದೆ. 

`ಎಫ್‌ಡಿಐ ಮಿತಿ ಹೆಚ್ಚಳ ಸೇರಿದಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ಕೆಲವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ. ಇದು ವಿದೇಶಿ ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚುವಂತೆ ಮಾಡಿದೆ' ಎಂದು `ರಿಲಯನ್ಸ್ ರಿಟೇಲ್' ಅಧ್ಯಕ್ಷ ಬೈಜು ಕುರಿಯನ್ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

`ದೇಶೀಯ ರಿಟೇಲ್ ಕಂಪೆನಿಗಳು ವಿದೇಶಿ ಪಾಲುದಾರರನ್ನು ಹೊಂದಲು ಈ ಕ್ರಮ ಸಹಾಯಕವಾಗುತ್ತದೆ' ಎಂದು ಪ್ಯೂಚರ್ ಗ್ರೂಪ್‌ನ `ಸಿಇಒ' ಕಿಶೋರ್ ಬಿಯಾನಿ ಪ್ರತಿಕ್ರಿಯಿಸಿದ್ದಾರೆ.

`ಎಫ್‌ಡಿಐ ನಿಯಮ ಸಡಿಲಿಕೆ ಜತೆಗೆ ಜಾಗತಿಕ ರಿಟೇಲ್ ಕಂಪೆನಿಗಳನ್ನು ಸೆಳೆ ಯಲು ಸರ್ಕಾರ ಇನ್ನಷ್ಟು  ಸುಧಾರಣಾ ಕ್ರಮ ಕೈಗೊಳ್ಳಬೇಕು' ಎಂದು ಭಾರತೀಯ ರಿಟೇಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ರಾಜಗೋಪಾಲನ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT