ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಸ್ಪಷ್ಟನೆ: ಭಾರತಕ್ಕೆ ನೀಡಿದ್ದು ಅಧಿಕೃತ ಟ್ರೋಫಿ

Last Updated 5 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ವಾಂಖೇಡೆ ಕ್ರೀಡಾಣಗಣದಲ್ಲಿ ಶನಿವಾರ ರಾತ್ರಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಗೆದ್ದ   ಭಾರತ ತಂಡಕ್ಕೆ ನೀಡಲಾದ ವಿಶ್ವಕಪ್ ಟ್ರೋಫಿಯು ನಕಲಿ ಅಲ್ಲ. ಅದು ನಿಜವಾದ ಟ್ರೋಫಿಯಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸ್ಪಷ್ಟಪಡಿಸಿದೆ.

ವಿಜೇತ ತಂಡಕ್ಕೆ ನೀಡಿದ ಟ್ರೋಫಿಯು ನಕಲಿ ಎಂಬ ವಿವಾದದ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಐಸಿಸಿಯು, ‘ನಕಲಿ ಟ್ರೋಫಿ ಎನ್ನುವ ಪ್ರಶ್ನೆಯೇ ಇಲ್ಲ. 2011ರ ವಿಶ್ವಕಪ್ ಟೂರ್ನಿಯ ವಿಜಯಿಗಳಿಗಾಗಿಯೇ ಮಾಡಿದ್ದ ನಿಜವಾದ ಟ್ರೋಫಿಯದು. ಅದರ ಮೇಲೆ ಅಧಿಕೃತವಾದ ಐಸಿಸಿ ಲಾಂಛನವೂ ಇದೆ. ಈ ಟ್ರೋಫಿಗಾಗಿಯೇ 14 ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸಿದ್ದವು’ ಎಂದು ಹೇಳಿದೆ.

‘ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿರುವ ಟ್ರೋಫಿಯು 2011ರದ್ದಲ್ಲ. ಅದು ಪ್ರಚಾರಕ್ಕಾಗಿ ಬಳಸಲಾಗುವ ಮತ್ತು ದುಬೈನ ಐಸಿಸಿ ಕಚೇರಿಯಲ್ಲಿ ಇಡಲಾಗುವ ಟ್ರೋಫಿ. ಇದರ ಮೇಲೆ ಐಸಿಸಿಯ ಕಾರ್ಪೋರೇಟ್ ಲಾಂಛನವಿದೆ. 2011ರ ಟೂರ್ನಿಯ ಲಾಂಛನವಲ್ಲ. ಈ ಟ್ರೋಫಿಯನ್ನು ಮಂಗಳವಾರ ಐಸಿಸಿ ಅಧಿಕಾರಿಗಳು ಕಸ್ಟಮ್ಸ್ ಅಧಿಕಾರಿಗಳಿಂದ ಬಿಡಿಸಿಕೊಂಡು ದುಬೈಗೆ ತೆಗೆದುಕೊಂಡು ಹೋಗಲಿದ್ದಾರೆ’ ಎಂದು ಐಸಿಸಿ ತಿಳಿಸಿದೆ.

ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ನೀಡಿರುವ ಟ್ರೋಫಿಯು ಅಸಲಿಯಲ್ಲ ಎಂಬ ಮಾಧ್ಯಮ ವರದಿಗಳಿಂದಾಗಿ  ಸೋಮವಾರ ವಿವಾದ ಭುಗಿಲೆದ್ದಿತ್ತು. ಹಲವೆಡೆ ಐಸಿಸಿ ಮುಖ್ಯಸ್ಥ ಶರದ್ ಪವಾರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಏಪ್ರಿಲ್ 1ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ನಿಜವಾದ ಟ್ರೋಫಿಯನ್ನು ಸುಂಕ ಕಟ್ಟದ ಕಾರಣ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದನ್ನು ಟ್ಯಾಬ್ಲಾಯ್ಡಾ ಪತ್ರಿಕೆಯೊಂದು ಪ್ರಕಟಿಸಿತ್ತು. ಅದರಲ್ಲಿ 2003ರಲ್ಲಿ ಚಾಂಪಿಯನ್ ಆಸ್ಟ್ರೇಲಿಯಕ್ಕೆ ನೀಡಿದ್ದ ಟ್ರೋಫಿಗೂ ಮತ್ತು ಈ ಬಾರಿ ಭಾರತಕ್ಕೆ ನೀಡಿದ್ದ ಟ್ರೋಫಿಯಲ್ಲಿರುವ ವ್ಯತ್ಯಾಸವನ್ನು ಚಿತ್ರ ಸಮೇತ ಪ್ರಕಟಿಸಿತ್ತು.

ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಸೆಂಟ್ರಲ್ ಎಕ್ಸೈಸ್ ಮತ್ತು ಕಸ್ಟಮ್ಸ್ ಮಂಡಳಿಯ ಅಧ್ಯಕ್ಷ ಸುಮಿತ್ ದತ್ ಮುಜುಮದಾರ, ‘ಐಸಿಸಿಯ ಮನವಿಯ ಮೇರೆಗೆ ಈ ಕಪ್ ಅನ್ನು ಇಲ್ಲಿ ಇಟ್ಟುಕೊಳ್ಳಲಾಗಿದೆ. ಏಪ್ರಿಲ್ 1ರಂದು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದ ಐಸಿಸಿ ನೀಡಿದ್ದ ಸರಂಜಾಮುಗಳ ಪಟ್ಟಿಯಲ್ಲಿ ಈ ಟ್ರೋಫಿಯ ಹೆಸರು ಇರಲಿಲ್ಲ. ಆದ್ದರಿಂದ ಅಧಿಕಾರಿಗಳು ಇದನ್ನು ವಶಪಡಿಸಿಕೊಳ್ಳಬೇಕಾಯಿತು. ಅದರ ಬಗ್ಗೆ ಸ್ಪಷ್ಟನೆ ನೀಡಿ ಸ್ವೀಕರಿಸಲು ಐಸಿಸಿಯ ಯಾವುದೇ ಅಧಿಕಾರಿ ಈ ಸಂದರ್ಭದಲ್ಲಿ ಇರಲಿಲ್ಲ’ ಎಂದು ತಿಳಿಸಿದ್ದಾರೆ.

‘ವಿಶ್ವಕಪ್ ಟೂರ್ನಿಗಾಗಿ ಐಸಿಸಿಯು ತಾತ್ಕಾಲಿಕವಾಗಿ ಆಮದು ಮಾಡಿಕೊಂಡಿದ್ದ ಸಾಮಗ್ರಿಗಳಿಗೆ ಸುಂಕ ವಿನಾಯ್ತಿ ನೀಡಲಾಗಿತ್ತು. ಟ್ರೋಫಿಯು ವಿನಾಯ್ತಿ ಪಟ್ಟಿಯಲ್ಲಿ ಇರದ ಕಾರಣ ಅದರ ಮೌಲ್ಯದ ಶೇಕಡಾ 35ರಷ್ಟು ಹಣವನ್ನು ಕಟ್ಟುವಂತೆ ಅದನ್ನು ತಂದ ವ್ಯಕ್ತಿಗೆ ತಿಳಿಸಲಾಗಿತ್ತು. ವಿಷಯದ ಮಹತ್ವ ಅರಿತ ಅಧಿಕಾರಿಗಳು ಕೂಡಲೇ ಐಸಿಸಿಯನ್ನು ಸಂಪರ್ಕಿಸಿತ್ತು. ಆದರೆ ತಮ್ಮ ಬಳಿ ನಿಜವಾದ ಕಪ್ ಇದೆ. ವಶಪಡಿಸಿಕೊಂಡಿರುವುದನ್ನು ನಿಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿರಿ ಎಂದು ಸ್ಪಷ್ಟಪಡಿಸಲಾಗಿತ್ತು’ ಎಂದು ಮಜುಮದಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT