ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒದ್ದೆ ಅಂಕಣದಲ್ಲಿ ಪ್ರಯಾಸದ ಆಟ

ಚಿತ್ರ: ರಾಜಧಾನಿ ಎಕ್ಸ್‌ಪ್ರೆಸ್ (ಹಿಂದಿ)
Last Updated 5 ಜನವರಿ 2013, 19:59 IST
ಅಕ್ಷರ ಗಾತ್ರ

ನಿರ್ಮಾಪಕರು: ಮನೋಜ್ ಕೇಜ್ರಿವಾಲ್, ರಿತಿಕಾ ಕೊಹ್ಲಿ ಮತ್ತು ರಾಜೇಶ್ ಕೆ. ಪಟೇಲ್
ನಿರ್ದೇಶಕ: ಅಶೋಕ್ ಕೊಹ್ಲಿ
ತಾರಾಗಣ: ಲಿಯಾಂಡರ್ ಪೇಸ್, ಜಿಮ್ಮಿ ಶೆರ್ಗಿಲ್, ಪ್ರಿಯಾಂಶು ಚಟರ್ಜಿ, ಸುಧಾಂಶು ಪಾಂಡೆ, ಪೂಜಾ ಬೋಸ್, ಸಯಾಲಿ ಭಗತ್, ಮುಖೇಶ್ ರಿಷಿ, ಗುಲ್ಶನ್ ಗ್ರೋವರ್ ಮತ್ತಿತರರು.


ಟೆನಿಸ್ ಪಟು ಲಿಯಾಂಡರ್ ಪೇಸ್ ಆಟದ ಅಂಗಳದಿಂದ ಹೊರಬಂದು ಸಿನಿಮಾ ಅಂಗಳಕ್ಕೆ ಕಾಲಿರಿಸಿದ್ದಾರೆ. ಪದಾರ್ಪಣೆಯ ಮೊದಲ ಪಂದ್ಯದಲ್ಲಿ ಅವರಿಗೆ ಪ್ರಯಾಸದ ಗೆಲುವು. ಚಿತ್ರದ ಒಟ್ಟಾರೆ ಫಲಿತಾಂಶ ಮಳೆಯಲ್ಲಿ ತೋಯ್ದ ಅಂಕಣದಂತಾದರೂ ಪೇಸ್ ಅಭಿನಯದಲ್ಲಿ ಗೆದ್ದಿದ್ದಾರೆ. ಟೆನಿಸ್ ಅಂಗಳದಲ್ಲಿ ಪೇಸ್-ಮಹೇಶ್ ಭೂಪತಿ ಜೋಡಿ `ಇಂಡಿಯನ್ ಎಕ್ಸ್‌ಪ್ರೆಸ್' ಎಂದೇ ಹೆಸರಾಗಿತ್ತು.

ಈಗ `ರಾಜಧಾನಿ ಎಕ್ಸ್‌ಪ್ರೆಸ್'ನಲ್ಲಿ ಪೇಸ್‌ಗೆ ಜೊತೆಯಾಗಿರುವುದು ನಿರ್ದೇಶಕ ಅಶೋಕ್ ಕೊಹ್ಲಿ. ಆದರೆ ಆ ಜೋಡಿಯ ಅಂತ್ಯದ ದಿನಗಳನ್ನು ನೆನಪಿಸುವಂತಿದೆ ಈ ಜೋಡಿಯ ಆರಂಭದ ಆಟ. ಕೊಹ್ಲಿ ಎಸಗುವ ತಪ್ಪುಗಳಿಂದಾಗಿ ಪೇಸ್ ಆಟದ ಸೊಗಸು ಸಹ ಕುಂದಿದೆ. ಸಾಮಾಜಿಕ ಮತ್ತು ರಾಜಕೀಯ ಅಂಶಗಳ ಬೆರಕೆಯ ಈ ಥ್ರಿಲ್ಲರ್ ಕಥಾನಕ ನಿರ್ದೇಶಕರ ಅಪ್ರಬುದ್ಧತೆ ಹಾಗೂ ಹಾಸ್ಯಾಸ್ಪದ ಸನ್ನಿವೇಶಗಳಿಂದ ನಿರಾಸೆ ಮೂಡಿಸುತ್ತದೆ.

ದೆಹಲಿಯಿಂದ ಮುಂಬೈಗೆ ಸಾಗುವ `ರಾಜಧಾನಿ ಎಕ್ಸ್‌ಪ್ರೆಸ್' ರೈಲು ಪ್ರಹಸನಗಳಿಗೆ ಸಾಕ್ಷಿ. ಈ ಪಯಣದಲ್ಲಿ ಪೇಸ್ ಒಬ್ಬಂಟಿಯಲ್ಲ. ಅಲ್ಲಿ ಜೊತೆಗೂಡುವುದು ವಿಭಿನ್ನ ಹಿನ್ನೆಲೆಯುಳ್ಳ ಮೂವರು ಸಹಪಯಣಿಗರು. ಬಾಲಿವುಡ್ ಸಿನಿಮಾಗಳಿಗೆ ಸ್ಕ್ರಿಪ್ಟ್ ಬರೆಯುವ ಬಂಗಾಳಿ ವ್ಯಕ್ತಿ, ಐಟಂ ನೃತ್ಯಗಾತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಾಕೆ, ಮತ್ತೊಬ್ಬ ಫ್ಯಾಷನ್ ಡಿಸೈನರ್. ಈ ಮೂವರ ನಡುವೆ ಹೆಚ್ಚು ಬೆರೆಯದ ಕಥಾನಾಯಕನದು ವಿಕ್ಷಿಪ್ತ ಮನಸ್ಸು. ಅದು ಆಗಾಗ್ಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತದೆ.

ಇತ್ತೀಚಿನ ಸಿನಿಮಾಗಳಲ್ಲಿ ಸಾಮಾನ್ಯವೆನಿಸಿರುವ ಪ್ರವೃತ್ತಿ ಕಥೆ ಸಾಗುವ ದಿಕ್ಕನ್ನು ಹೊರಳಿಸಿ ಫ್ಲ್ಯಾಷ್‌ಬ್ಯಾಕ್‌ಗೆ ಸರಿಯುವುದು. ಆತನ ಈ ಪಯಣದ ಉದ್ದೇಶವನ್ನು ಅನಾವರಣಗೊಳಿಸುವ ಈ ಮಾರ್ಗದ ಆಯ್ಕೆ ಸೂಕ್ತವೆನಿಸಿದರೂ ಪರಿಣಾಮಕಾರಿಯಾಗಿಲ್ಲ. ಅನಿರೀಕ್ಷಿತ ತಿರುವುಗಳನ್ನು ನೀಡಿ ಅಚ್ಚರಿ ಮೂಡಿಸುವ ಪ್ರಯತ್ನ ಹಾಗೂ ಮಾಧ್ಯಮವನ್ನು ಚಿತ್ರಿಸುವ ಬಗೆ ಬಾಲಿಶವಾಗಿ ಕಾಣಿಸುತ್ತವೆ. ಥ್ರಿಲ್ಲರ್ ಕಥನಗಳನ್ನು ಬಯಸುವ ಮನಸ್ಸುಗಳಿಗೆ ವಸ್ತು ಇಲ್ಲಿದ್ದರೂ ನಿರ್ದೇಶಕರ ಎಡರು ತೊಡರಿನ ನಡಿಗೆ ರೇಜಿಗೆ ಉಂಟು ಮಾಡುತ್ತದೆ.

`ಪಂದ್ಯ' ಮುಗಿದ ಬಳಿಕವೂ ಮನಸ್ಸಿನಲ್ಲಿ ಉಳಿಯುವ ಅಂಶಗಳು ಸಾಕಷ್ಟಿವೆ. ಲಿಯಾಂಡರ್ ಪೇಸ್ ಮೊದಲ ಸರ್ವ್‌ನಲ್ಲಿಯೇ ಅಂಕಗಳಿಸುತ್ತಾರೆ. ಪಕ್ವ ನಟನಂತೆ ಭಾವನೆಗಳನ್ನು ಚಿಮ್ಮಿಸುತ್ತಾರೆ. ಪ್ರಿಯಾಂಶು ಚಟರ್ಜಿಯ ಪಾತ್ರ ಗಂಭೀರವಾಗಿದ್ದರೆ ಅರ್ಥಪೂರ್ಣವಾಗುತ್ತಿತ್ತು. ಗುಲ್ಶನ್ ಗ್ರೋವರ್ ಕೆಲವು ಸನ್ನಿವೇಶಗಳಲ್ಲಿ ಇಷ್ಟವಾಗುತ್ತಾರೆ. ಪೊಲೀಸ್ ಅಧಿಕಾರಿಯಾಗಿ ಜಿಮ್ಮಿ ಶೆರ್ಗಿಲ್, ಸಹಪಯಣಿಗರಾದ ಸುಧಾಂಶು ಪಾಂಡೆ ಮತ್ತು ಪೂಜಾ ಬೋಸ್ ಹಳಿ ತಪ್ಪಿದ ಬೋಗಿಗಳಂತೆ. ವಿಶಿಷ್ಟ ಎಳೆ ಇದ್ದರೂ ಅದನ್ನು ತರ್ಕಬದ್ಧ ಅಂಶಗಳೊಂದಿಗೆ ಬೆಳೆಸುವಲ್ಲಿ ಕೊಹ್ಲಿ ವೈಫಲ್ಯ ಎದ್ದು ಕಾಣುತ್ತದೆ. ಕುತೂಹಲದ ಅಂಶಗಳು ಸಾಕಷ್ಟಿದ್ದರೂ ಅದು ಅಲ್ಲಲ್ಲಿ ಜಾಳಾಗಿ ಹರಡಿದೆ. ಹಾಡು ಮತ್ತು ಹಾಸ್ಯದ ಮಿಶ್ರಣ ಬೆರೆತಿದ್ದರೆ ಎಕ್ಸ್‌ಪ್ರೆಸ್ ಪ್ರಯಾಣ ಹಿತಕರವೆನಿಸುತ್ತಿತ್ತು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT