ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ಮಾಹಿತಿ ಕಣಜ...

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

ಭಾರತ...ಏನು ಎತ್ತ: ಸೋಮದೇವ ದೇವವರ್ಮನ್

ತ್ರಿಪುರದ  `ರಾಜಕುಮಾರ~ ಸೋಮದೇವ ದೇವವರ್ಮನ್ ಲಂಡನ್ ಒಲಿಂಪಿಕ್ಸ್‌ನ ಟೆನಿಸ್‌ನಲ್ಲಿ ಎತ್ತರದ ಸಾಧನೆ ತೋರುವ ಅತ್ಯುತ್ಸಾಹದಲ್ಲಿದ್ದಾರೆ. ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿರುವ ಇವರು ಭಾರತದ ಸವಾಲನ್ನು ಯಾವ ರೀತಿ ಎತ್ತಿ ಹಿಡಿಯುತ್ತಾರೆಂಬುದನ್ನು ಕಾದು ನೋಡಬೇಕಿದೆ.

ಚೀನಾದ ಗುವಾಂಗ್‌ಜೌನಲ್ಲಿ 2010ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಸಿಂಗಲ್ಸ್ ಪ್ರಶಸ್ತಿ ಗೆದ್ದ ಇವರು, ಡಬಲ್ಸ್‌ನಲ್ಲಿಯೂ ಬಂಗಾರದ ಸಾಮರ್ಥ್ಯ ತೋರಿದ್ದರು. ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಇದಕ್ಕಿಂತ ಕೆಲವು ತಿಂಗಳ ಮೊದಲು ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಸಿಂಗಲ್ಸ್ ಚಿನ್ನದ ಪದಕ ಗೆದ್ದ ಹೆಗ್ಗಳಿಕೆ ಇವರದಾಗಿದೆ. ಅತ್ಯುತ್ತಮ ಫಾರ್ಮ್ ತಲುಪುತ್ತಿದ್ದಾಗಲೇ ತೀವ್ರವಾದ ಭುಜದ ನೋವಿನಿಂದ ಬಳಲಿದ ಇವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆ ನೋವಿನಿಂದ ಈಚೆಗಷ್ಟೇ ಚೇತರಿಸಿಕೊಂಡಿರುವ ಇವರು ಲಂಡನ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ಆತ್ಮವಿಶ್ವಾಸ ವ್ಯಕ್ತ ಪಡಿಸಿರುವುದು ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ.

ಸೋಮದೇವ್ ಹುಟ್ಟಿದ್ದು ಗುವಾಹಟಿಯಲ್ಲಿ. ಇವರ ತಂದೆ ತಾಯಿ ತ್ರಿಪುರ ರಾಜ್ಯದವರು. ಇವರ ಅಜ್ಜ ವಿಕ್ರಮೇಂದ್ರ ಕಿಶೋರ್ ದೇವವರ್ಮನ್ ಅವರು ಸ್ವಾತಂತ್ರ್ಯಪೂರ್ವದಲ್ಲಿ ತ್ರಿಪುರಾದ ಮಹಾರಾಜರಾಗಿದ್ದರು. ಸೋಮದೇವ್ ತಮ್ಮ ಎಂಟನೇ ವರ್ಷ ವಯಸ್ಸಿನವರೆಗೆ ಕೆಲವು ಸಮಯ ಕೋಲ್ಕತ್ತದಲ್ಲಿದ್ದು, ಶಿಕ್ಷಣ ಪಡೆದಿದ್ದರು. ನಂತರ ಚೆನ್ನೈಯಲ್ಲಿದ್ದರು. ಇವರ ತಂದೆ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ಅವರಿಗೆ  ವರ್ಗಾವಣೆಯಾಗುತ್ತಿದ್ದುದರಿಂದ ಸೋಮದೇವ್ ಬೇರೆ ಬೇರೆ ನಗರಗಳಲ್ಲಿ ಶಿಕ್ಷಣ ಪಡೆಯುವಂತಾಗಿತ್ತು. ಇವರು ಅಮೆರಿಕಾದ ವರ್ಜಿನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ಅಮೆರಿಕಾದಲ್ಲಿ ಓದುತ್ತಿರುವಾಗಲೇ ಇವರ ಆಸಕ್ತಿ ಟೆನಿಸ್ ಕಡೆಗೇ ಇತ್ತು. ಆ ದಿನಗಳಲ್ಲಿಯೇ ಇವರು ಅಮೆರಿಕಾದ ಹತ್ತು ಹಲವು ಟೂರ್ನಿಗಳಲ್ಲಿ ಆಡಿ ಅನುಭವ ಗಳಿಸಿದ್ದರು.

2008ರಿಂದ ವೃತ್ತಿಪರರಾಗಿರುವ ಇವರು ಜೊಹಾನ್ಸ್‌ಬರ್ಗ್‌ನಲ್ಲಿ ಎಸ್‌ಎ ಓಪನ್, ದುಬೈ ಟೆನಿಸ್ ಚಾಂಪಿಯನ್‌ಷಿಪ್ ಹಲವಾರು ಟೂರ್ನಿಗಳಲ್ಲಿ ಸೋಮದೇವ್ ಆಡಿದ್ದಾರೆ. ಡೇವಿಸ್ ಕಪ್‌ನಲ್ಲಿ ಆಡಿದ್ದಾರೆ. ಕಳೆದ ವರ್ಷ ವಿಂಬಲ್ಡನ್ ಟೆನಿಸ್‌ನ ಎರಡನೇ ಸುತ್ತು ತಲುಪಿ ನಿರಾಸೆಗೊಂಡಿದ್ದರು. ಕಳೆದ ವರ್ಷ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಇವರು 62ನೇ ಸ್ಥಾನಕ್ಕೇರಿದ್ದರು. ಪ್ರಸಕ್ತ ಇವರು 337ನೇ ಕ್ರಮಾಂಕದಲ್ಲಿದ್ದಾರೆ.

ಬಾರ್ಸಿಲೋನಾ (1992)

ಬಾರ್ಸಿಲೋನಾ ಒಲಿಂಪಿಕ್ಸ್ ಎಂದರೆ ತಕ್ಷಣ ಸ್ಮೃತಿಪಠಲದಲ್ಲಿ ಮೂಡುವ ಹೆಸರು ಜಾನ್ ಅಂಟಾನಿಯೊ ಸಮರಾಂಚ್. ಇವರು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಏಳನೇ ಅಧ್ಯಕ್ಷರಾಗಿದ್ದರು. 1980ರಿಂದ 2001ರವರೆಗೆ ಈ ಹುದ್ದೆಯಲ್ಲಿದ್ದಾಗ ಒಲಿಂಪಿಕ್ಸ್ ಆಂದೋಲನವನ್ನು ಆರ್ಥಿಕವಾಗಿ ಸದೃಢಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಸ್ಪೇನ್ ದೇಶದ ಬಾರ್ಸಿಲೋನ ನಗರವೇ ಇವರ ಹುಟ್ಟೂರು. ತಮ್ಮೂರಲ್ಲೇ ಒಲಿಂಪಿಕ್ಸ್ ಸಂಘಟಿಸಬೇಕೆಂಬ ಇವರ ಆಸಕ್ತಿಯಿಂದಾಗಿ ಈ ಮಹಾನಗರದಲ್ಲಿಯೇ 1992ರಲ್ಲಿ ಒಲಿಂಪಿಕ್ಸ್ ಕೂಟ ನಡೆಯಿತು.

ಈ ಕೂಟದಲ್ಲಿ 170 ದೇಶಗಳ 9,356 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ವರ್ಣಭೇದ ನೀತಿಯಿಂದಾಗಿ 1960ರಿಂದ ಒಲಿಂಪಿಕ್ ಆಂದೋಲನದಿಂದ ದೂರವಾಗಿದ್ದ ದಕ್ಷಿಣ ಆಫ್ರಿಕ ಮತ್ತೆ ಒಲಿಂಪಿಕ್ಸ್ ತೆಕ್ಕೆಗೆ ಸೇರಿಕೊಂಡಿತು. ಸೋವಿಯತ್ ಒಕ್ಕೂಟ ಛಿದ್ರವಾಗಿದ್ದರಿಂದ ಅದರೊಳಗಿಂದ ಪ್ರತ್ಯೇಕ ದೇಶಗಳಾಗಿ ಸಿಡಿದ ಎಸ್ತೋನಿಯ, ಲಾಟ್ವಿಯ, ಲಿಥುವೇನಿಯ ಮುಂತಾದ ದೇಶಗಳು ಇಲ್ಲಿ ಪಾಲ್ಗೊಂಡಿದ್ದವು. ಉಕ್ರೇನ್ ಸೇರಿದಂತೆ ಇನ್ನೂ ಕೆಲವು ಹೊಸ ದೇಶಗಳು ರಷ್ಯಾದ ಸಂಯಕ್ತ ತಂಡವಾಗಿ ಭಾಗವಹಿಸಿದ್ದವು. 1990ರಲ್ಲಿ ಪಶ್ಚಿಮ ಜರ್ಮನಿ ಮತ್ತು ಪೂರ್ವ ಜರ್ಮನಿಗಳು ಒಂದಾಗಿದ್ದರಿಂದ ಏಕೀಕತ ಜರ್ಮನಿ ತಂಡ ಇಲ್ಲಿಗೆ ಬಂದಿತ್ತು.

ಸಂಯುಕ್ತ ರಷ್ಯಾ ತಂಡವೇ ಈ ಕೂಟದ ಬಹುತೇಕ ಸ್ಪರ್ಧೆಗಳಲ್ಲಿ ಮೇಲುಗೈ ಸಾಧಿಸಿತ್ತು. ಈ ತಂಡ ಒಟ್ಟು 45 ಚಿನ್ನವೂ ಸೇರಿದಂತೆ 112 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತ್ತು. ನಂತರದ ಸ್ಥಾನಗಳಲ್ಲಿ ಅಮೆರಿಕ (108 ಪದಕ) ಮತ್ತು ಜರ್ಮನಿ (82) ಪಡೆದುಕೊಂಡವು.

ಜಪಾನ್‌ನ ಕ್ಯೂಕೊ ಇವಾಸಾಕಿ ಮಹಿಳಾ ವಿಭಾಗದ 200ಮೀ. ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಾಗ ಎಲ್ಲೆಡೆ ಅಚ್ಚರಿಯ ಅಲೆ ಎದ್ದಿತ್ತು. ಏಕೆಂದರೆ ಇವಾಸಕಿಗೆ ಆಗ ಕೇವಲ 14 ವರ್ಷ 6 ದಿನಗಳಾಗಿತ್ತಷ್ಟೆ. ಪುರುಷರ 3000ಮೀಟರ್ಸ್ ಸ್ಟೀಪಲ್‌ಚೇಸ್ ಓಟದ ಎಲ್ಲಾ ಮೂರು ಪದಕಗಳನ್ನು ಕೆನ್ಯಾ ದೇಶದ ಓಟಗಾರರೇ ಪಡೆದುಕೊಂಡಿದ್ದೊಂದು ವಿಶೇಷ. ಮ್ಯಾಥ್ಯೂ ಬಿರಿರ್ (8ನಿ.08.84ಸೆ.), ಪ್ಯಾಟ್ರಿಕ್ ಸ್ಯಾಂಗ್ (8ನಿ.09.55ಸೆ.) ಮತ್ತು ವಿಲಿಯಂ ಮುತ್ವೋಲ್ (8ನಿ.07.96ಸೆ.) ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಗೆದ್ದುದೂ ಒಂದು ದಾಖಲೆಯೇ. ಏಕೆಂದರೆ ಅಲ್ಲಿಯವರೆಗೆ ಈ ಸ್ವರ್ಧೆಯಲ್ಲಿ ಯಾವುದೇ ಒಂದು ದೇಶದವರೇ ಮೂರೂ ಪದಕಗಳನ್ನು ಗೆದ್ದುಕೊಂಡಿರಲಿಲ್ಲ. ಇಂತಹದೇ ಸಾಧನೆ 2004ರ ಅಥೆನ್ಸ್ ಒಲಿಂಪಿ ಕ್ಸ್‌ನಲ್ಲಿ ಕಂಡು ಬಂದಿತ್ತು. ಅಲ್ಲಿ ಕೂಡಾ ಸ್ಟೀಪಲ್‌ಚೇಸ್‌ನಲ್ಲಿಯೇ ಮತ್ತೆ ಕೆನ್ಯಾದವರೇ ಮೂರೂ ಪದಕಗಳನ್ನು ಗೆದ್ದುಕೊಂಡಿದ್ದರು.

ಈ ಒಲಿಂಪಿಕ್ಸ್ ಮುಗಿದ ಮೇಲೆ  ಯೂರೊಪ್‌ನಲ್ಲಿ ಅತ್ಯಧಿಕ ಪ್ರವಾಸಿಗರನ್ನು ಆಕರ್ಷಿಸುವ ಲಂಡನ್, ಪ್ಯಾರಿಸ್, ರೋಮ್ ನಗರಗಳ ನಂತರದ ಸ್ಥಾನವನ್ನು ಬಾರ್ಸಿಲೋನ ಪಡೆದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT