ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕನ್ನಡದತ್ತ ಜನರನ್ನು ಸೆಳೆಯಿರಿ'

Last Updated 26 ಡಿಸೆಂಬರ್ 2012, 9:38 IST
ಅಕ್ಷರ ಗಾತ್ರ

ಬೆಳಗಾವಿ: `ಇಂಗ್ಲಿಷ್ ಭಾಷೆಯ ಅಬ್ಬರದಿಂದಾಗಿ ಇಂದು ಕನ್ನಡ ಭಾಷೆಯನ್ನು ಉಳಿಸಿಕೊಳ್ಳಲು ನಾವು ದಿಟ್ಟ ಹೆಜ್ಜೆಯನ್ನು ಇಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ' ಎಂದು ಮಂಗಳೂರಿನ ವಿಮರ್ಶಕ ಪ್ರೊ. ಎ.ವಿ. ನಾವಡ ಅಭಿಪ್ರಾಯಪಟ್ಟರು.

ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ನಗರದ ಹಿಂದವಾಡಿಯ ಐಎಂಇಆರ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2012ನೇ ಸಾಲಿನ ಸಿರಿಗನ್ನಡ ಗೌರವ ಪ್ರಶಸ್ತಿ', 2011ನೇ ಸಾಲಿನ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಹಾಗೂ ವಿವಿಧ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

`ಕನ್ನಡಿಗರನ್ನೇ ನಾವು ಕನ್ನಡ ಕಾರ್ಯಕ್ರಮಗಳು ಹಾಗೂ ಭಾಷೆಯತ್ತ ಸೆಳೆಯದಿದ್ದರೆ, ಭವಿಷ್ಯದಲ್ಲಿ ಕನ್ನಡ ಭಾಷೆಗೆ ಅಪಾಯ ಎದುರಾಗಲಿದೆ. ಇದು ಕನ್ನಡ ಭಾಷೆಯ ಪಾಲಿಗೆ ಅಪಾಯಕಾರಿ ಬೆಳವಣಿಗೆಯಾಗಿದೆ' ಎಂದು ವಿಷಾದಿಸಿದರು. `ಕನ್ನಡವನ್ನು ಕೇವಲ ವ್ಯವಹಾರ ಹಾಗೂ ಆಡಳಿತಕ್ಕೆ ಮಾತ್ರ ಸೀಮಿತಗೊಳಿಸದೇ, ಇದನ್ನು ಬದುಕಿನ ಭಾಷೆಯನ್ನಾಗಿ ಉಳಿಸಿ ಬೆಳೆಸಬೇಕಾಗಿದೆ' ಎಂದು ಅವರು ಹೇಳಿದರು.

`ಬೆಳಗಾವಿಯು ರಾಜಕೀಯವಾಗಿ ಕನ್ನಡದ ನೆಲವಾಗಿದ್ದರೂ, ಇದು ಕನ್ನಡ ಹಾಗೂ ಮರಾಠಿ ಭಾಷೆಗಳ ಸಾಂಸ್ಕೃತಿಕ ನೆಲೆಗಟ್ಟನ್ನು ಹೊಂದಿದೆ. ಎರಡೂ ಸಂಸ್ಕೃತಿಗಳ ಸಮ್ಮಿಳಿತದಿಂದ ಜನರು ಬಾಳುತ್ತಿರುವುದನ್ನು ನಾವು ಇಲ್ಲಿ ನೋಡಬಹುದು. ಪರಸ್ಪರ ಸಾಹಿತ್ಯದ ವಿನಿಮಯವಾಗುವ ಮೂಲಕ ಎರಡೂ ಭಾಷಿಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಲು ಸಾಧ್ಯ' ಎಂದು ನಾವಡ ಅಭಿಪ್ರಾಯಪಟ್ಟರು.

ಹಿರಿಯ ಲೇಖಕ ರಂ. ಶಾ. ಲೋಕಾಪುರ, `ಕನ್ನಡ ಹಾಗೂ ಮರಾಠಿ ಭಾಷೆಯ ಬಗ್ಗೆ ಬೆಳಗಾವಿಯ ಜನ ಎಂದೂ ತಲೆಕೆಡಿಸಿಕೊಂಡಿಲ್ಲ. ಆದರೆ, ರಾಜಕೀಯ ಪ್ರೇರಣೆಯಿಂದಾಗಿಎರಡು ಭಾಷಿಕರ ನಡುವೆ ವೈಮನಸ್ಸು ಬೆಳೆಯುತ್ತಿದೆ. ಕನ್ನಡ- ಮರಾಠಿ ಭಾಷಿಕರ ನಡುವಿನ ಸಾಮರಸ್ಯ ಶಾಶ್ವತವಾಗಿ ಮುಂದುವರಿಯಬೇಕು' ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ವಾಮನರಾವ್ ಹುಯಿಲಗೋಳ ಮಾತನಾಡಿದರು. ಹಿರಿಯ ವಕೀಲ ಎಸ್.ಎಂ. ಕುಲಕರ್ಣಿ ಹಾಗೂ ಸಾರ್ವಜನಿಕ ಆಡಳಿತ ಹಾಗೂ ಸಂಘಟನೆಗಾಗಿ ಎ.ಎ. ಶೆಟ್ಟಿ ಅವರಿಗೆ `ಸಿರಿಗನ್ನಡ ಗೌರವ' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ. ಬಸು ಬೇವಿನಗಿಡದ ಅವರ `ಬಾಳೆಯ ಕಂಬ' ಹಾಗೂ ಡಾ. ಗುರುಪಾದ ಮರಿಗುದ್ದಿ ಅವರ `ಅಭಿವ್ಯಕ್ತಿ ಮತ್ತು ಅರ್ಥ ವಿನ್ಯಾಸ'ಕ್ಕೆ `ಸಿರಿಗನ್ನಡ ಪುಸ್ತಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ದತ್ತಿ ಇಧಿ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು.
ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಕಾರ್ಯದರ್ಶಿ ಶಿರೀಷ ಜೋಶಿ ಸ್ವಾಗತಿಸಿದರು. ಉಪಾಧ್ಯಕ್ಷ ಡಾ. ಶ್ರೀನಿವಾಸ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಜಯಂತ ಜೋಶಿ  ವಂದಿಸಿದರು. ರಾಧಾ ನಾಯಿಕ ಹಾಗೂ ಸರಸ್ವತಿ ದೇಸಾಯಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT