ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುಹಣ : ಗುಟ್ಟು ಬಿಡದ ಸರ್ಕಾರ

Last Updated 5 ಫೆಬ್ರುವರಿ 2011, 16:40 IST
ಅಕ್ಷರ ಗಾತ್ರ

 ಕೋಲ್ಕತ್ತ (ಪಿಟಿಐ): ವಿದೇಶಿ ಬ್ಯಾಂಕುಗಳಲ್ಲಿ ಕಪ್ಪುಹಣ ಹೊಂದಿರುವ ಭಾರತೀಯರ ಹೆಸರು ಬಹಿರಂಗಪಡಿಸಲು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಶನಿವಾರ ಮತ್ತೆ ನಿರಾಕರಿಸಿದ್ದಾರೆ. ಲೀಚ್‌ಟೆನ್‌ಸ್ಟೀನ್‌ನ ಬ್ಯಾಂಕಿನಲ್ಲಿ ರಹಸ್ಯ ಖಾತೆ ಹೊಂದಿರುವ 17 ಮಂದಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ ಎಂದಷ್ಟೇ ತಿಳಿಸಿದ್ದಾರೆ.

ತೆಹೆಲ್ಕಾ ನಿಯತಕಾಲಿಕ ಇವರಲ್ಲಿ ಮೂರು ಟ್ರಸ್ಟ್‌ಗಳು ಸೇರಿದಂತೆ 15 ಮಂದಿಯ ಹೆಸರು ಬಹಿರಂಗ ಮಾಡಿ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಇಷ್ಟಾದರೂ ಸಚಿವರು ಈ ವಿಷಯದಲ್ಲಿ ತಮ್ಮ ಹಿಂದಿನ ನಿಲುವಿಗೇ ಅಂಟಿಕೊಂಡಿದ್ದಾರೆ. ಈ ಬ್ಯಾಂಕಿನಲ್ಲಿ 18 ಮಂದಿ ರಹಸ್ಯ ಖಾತೆಗಳನ್ನು ಹೊಂದಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಆದ್ದರಿಂದ 17 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮುಖರ್ಜಿ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸರ್ಕಾರ ಸ್ವಪ್ರೇರಿತವಾಗಿ ಖಾತೆದಾರರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ. ಇದು ಅವರ ಗೋಪ್ಯ ಆದಾಯವಾಗಿದೆ. ವಿಚಾರಣೆ ಆರಂಭವಾಗಿ ವಿಷಯ ಕೋರ್ಟ್‌ನ ಮುಂದೆ ಬಂದಾಗ ಹೆಸರುಗಳು ಹೊರಬರುತ್ತವೆ. ಅತ್ಯಂತ ಶೀಘ್ರದಲ್ಲೇ ವಿಚಾರಣೆ ಆರಂಭವಾಗುತ್ತದೆ ಎಂದು ತಿಳಿಸಿದ್ದಾರೆ.

ಮಾಹಿತಿ ಹೊರಬಂದದ್ದು ಹೀಗೆ
ಲೀಚ್‌ಟೆನ್‌ಸ್ಟೀನ್‌ನ ಆಡಳಿತಾರೂಢ ಕುಟುಂಬದ ಎಲ್‌ಜಿಟಿ ಗ್ರೂಪ್‌ಗೆ ಸೇರಿದ ‘ಎಲ್‌ಜಿಟಿ’ ಬ್ಯಾಂಕಿನಲ್ಲಿ ಇರುವ ಕಪ್ಪುಹಣ ಬರೀ ಭಾರತಕ್ಕಷ್ಟೇ ಸೀಮಿತವಾದುದಲ್ಲ. ತೆರಿಗೆ ವಂಚಿಸಿ ಹೀಗೆ ಕದ್ದುಮುಚ್ಚಿ ಇಲ್ಲಿ ಹಣ ಇಟ್ಟವರ ಪತ್ತೆಗಾಗಿ ಹಿಂದೆ ಜರ್ಮನಿ ಹರಸಾಹಸವನ್ನೇ ನಡೆಸಿತ್ತು. ಇದರ ಫಲವಾಗಿ 2008ರಲ್ಲಿ ಈ ಬ್ಯಾಂಕಿನ 1400 ಖಾತೆದಾರರ ಪಟ್ಟಿಯನ್ನು ಯಾರೋ ಕದ್ದು ಜರ್ಮನಿಯ ತೆರಿಗೆ ಅಧಿಕಾರಿಗಳಿಗೆ ರವಾನಿಸಿದ್ದರು. ಇದಕ್ಕಾಗಿ ಅಲ್ಲಿನ ಸರ್ಕಾರ 7.4 ದಶಲಕ್ಷ ಡಾಲರ್‌ನಷ್ಟು ಹಣವನ್ನು ವ್ಯಯಿಸಿತ್ತು. ಈ ಪಟ್ಟಿಯಲ್ಲಿ ಈಗ ಬೆಳಕಿಗೆ ಬಂದಿರುವ 18 ಭಾರತೀಯರ ಹೆಸರುಗಳೂ ಸೇರಿದ್ದವು. ಪಟ್ಟಿ ಕೈಸೇರಿದ ನಂತರ ತನ್ನ ಹಲವಾರು ನಾಗರಿಕರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದ ಜರ್ಮನಿ, 600ಕ್ಕೂ ಹೆಚ್ಚು ತೆರಿಗೆದಾರರ ವಿರುದ್ಧ ಕ್ರಮ ಜರುಗಿಸಿತ್ತು. ಜತೆಗೆ ಭಾರತವೂ ಸೇರಿದಂತೆ ಪಟ್ಟಿಯಲ್ಲಿದ್ದ ಇತರ ದೇಶಗಳ ನಾಗರಿಕರ ಬಗ್ಗೆ ಆಯಾಯ ದೇಶಗಳಿಗೆ ಮಾಹಿತಿ ರವಾನಿಸಿತ್ತು.

ತೆಹೆಲ್ಕಾ ಬಹಿರಂಗಪಡಿಸಿರುವ ಮಾಹಿತಿ
ಮನೋಜ್ ಧುಪೀಲಿಯ, ರೂಪಲ್ ಧುಪೀಲಿಯ, ಮೋಹನ್ ಧುಪೀಲಿಯ, ಹಸ್‌ಮುಖ್ ಗಾಂಧಿ, ಚಿಂತನ್ ಗಾಂಧಿ, ದಿಲೀಪ್ ಮೆಹ್ತಾ, ಅರುಣ್ ಮೆಹ್ತಾ, ಅರುಣ್ ಕೊಚಾರ್, ಗುಣವಂತಿ ಮೆಹ್ತಾ, ರಜನೀಕಾಂತ್ ಮೆಹ್ತಾ, ಪ್ರಬೋದ್ ಮೆಹ್ತಾ, ಅಶೋಕ್ ಜೈಪುರಿಯ, ರಾಜ್ ಫೌಂಡೇಷನ್, ಊರ್ವಶಿ ಫೌಂಡೇಷನ್ ಮತ್ತು ಅಂಬ್ರುನೋವ ಟ್ರಸ್ಟ್. ಈ ಮೂರೂ ಟ್ರಸ್ಟ್‌ಗಳನ್ನು ಭಾರತದ ಹೊರಗೆ ನೋಂದಾಯಿಸಲಾಗಿದೆ ಎಂದು ತೆಹಲ್ಕಾ ವರದಿ ತಿಳಿಸಿದೆ. ಆದರೆ ಈ ವ್ಯಕ್ತಿಗಳ ವಿಳಾಸ, ಅವರ ವ್ಯವಹಾರ, ಬ್ಯಾಂಕಿನಲ್ಲಿ ಅವರು ಇರಿಸಿರುವ ಹಣದ ಮೊತ್ತದಂತಹ ಯಾವ ವಿವರಗಳನ್ನೂ ನಿಯತಕಾಲಿಕ ಹೊರಗೆಡವಿಲ್ಲ.

ಲಭ್ಯವಾಗಿರುವ ಮಾಹಿತಿಯ ಪ್ರಕಾರ, ದಿಲೀಪ್ ಮೆಹ್ತಾ ಮತ್ತು ಅರುಣ್ ಮೆಹ್ತಾ ಮುಂಬೈ ಮೂಲದ ರೋಸಿ ಬ್ಲೂ ಡೈಮಂಡ್ಸ್ ಉದ್ದಿಮೆಯ ಮಾಲೀಕರು. ಜಗತ್ತಿನಾದ್ಯಂತ ಇವರ ಕಚೇರಿಗಳಿವೆ. ಕೊಚ್ಚಿ ಐಪಿಎಲ್ ತಂಡದಲ್ಲಿ ಷೇರು ಹೊಂದಿರುವ ‘ಫಿಲ್ಮ್ ವೇವ್ಸ್’ ಸಹ ಇವರ ಒಡೆತನಕ್ಕೆ ಸೇರಿದ್ದು. ಅರುಣ್ ಈ ಗುಂಪಿನ ಸಿಇಒ ಆಗಿದ್ದಾರೆ. ಪ್ರಬೋದ್ ಮೆಹ್ತಾ ಸಹ ಮುಂಬೈ ಮೂಲದ ಗುಜರಾತ್‌ನ ಉದ್ಯಮಿಯಾಗಿದ್ದು, ಮುಂಬೈನಲ್ಲಿ ಪ್ರಸಿದ್ಧ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT