ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ಭಾಷಾಂತರದ ಸುವರ್ಣಯುಗ

Last Updated 6 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕದಲ್ಲಿ ನಡೀತಾ ಇರುವಷ್ಟು ಭಾಷಾಂತರ ಚಟುವಟಿಕೆ ರಾಷ್ಟ್ರದ ಬೇರೆ ಯಾವ ಭಾಷೆಯಲ್ಲೂ ನಡೆಯುತ್ತಿಲ್ಲ. 21ನೇ ಶತಮಾನ ಕರ್ನಾಟಕದಲ್ಲಿ ಭಾಷಾಂತರದ ಸುವರ್ಣ ಯುಗ ಎನಿಸಿಕೊಳ್ಳುತ್ತದೆ.’

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ‘ಕನ್ನಡದಲ್ಲಿ ಅನುವಾದ ಸಾಹಿತ್ಯ’ಗೋಷ್ಠಿಯ ಅಧ್ಯಕ್ಷತೆ ವಹಿಸಿ, ಆಶಯ ನುಡಿಗಳನ್ನಾಡಿದ ಕುವೆಂಪು ಭಾಷಾ ಭಾರತಿಯ ಅಧ್ಯಕ್ಷ ಡಾ. ಪ್ರಧಾನ ಗುರುದತ್ ಅಭಿಪ್ರಾಯ ಇದು.

ಭಾಷಾಂತರಕ್ಕೆ ಈ ಮನ್ನಣೆ ಸುಮ್ಮನೆ ಬಂದಿದ್ದಲ್ಲ. ಅದಕ್ಕೊಂದು ದೀರ್ಘ ಇತಿಹಾಸವೇ ಇದೆ ಎಂಬುದನ್ನೂ ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.ಮೈಸೂರು ವಿಶ್ವವಿದ್ಯಾಲಯದಲ್ಲಿ ದೇ.ಜವರೇಗೌಡರು ಭಾಷಾಂತರ ತರಬೇತಿ ತರಗತಿಗಳನ್ನು ಆರಂಭಿಸಿದಾಗ ಅಧ್ಯಾಪಕರೇ ಇರಲಿಲ್ಲ. ಎಸ್.ವಿ. ರಂಗಣ್ಣ, ಸುಜನಾ ಮುಂತಾದವರು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಭಾಷಾಂತರ ತರಗತಿಗಳಿಗೆ ಪ್ರತ್ಯೇಕ ಅಧ್ಯಾಪಕರು ಬೇಕೆಂಬ ಮಂಡನೆಗೆ ಆಗಿನ ಕುಲಪತಿ ಶ್ರೀಮಾಲಿ ಅವರು ‘ಅನುವಾದ ಎನ್ನುವುದು ಅಧ್ಯಯನ ವಿಷಯವೆ?’ಎಂದು ಕೇಳಿದ್ದೂ ಉಂಟು. ಆದರೆ ಭಾಷಾಂತರ ಶಿಕ್ಷಣ ಪಡೆದವರ್ಯಾರೂ ನಿರುದ್ಯೋಗಿಗಳಾಗಿಲ್ಲ ಎಂದು ಅವರು ಪ್ರತಿಪಾದಿಸಿದರು.
ಭಾಷಾಂತರಕಾರರೆಂದರೆ ಭಾಷೆ ಕೊಲ್ಲುವ ಕೊಲೆಗಡುಕರು, ಎರಡನೇ ದರ್ಜೆ ಪ್ರಜೆಗಳು ಎಂಬಂತಹ ಸ್ಥಿತಿ ಈಗಿಲ್ಲ. ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಕೃತಿಗಳಿಗಾಗಿ ‘ಅನುವಾದ ಪ್ರಶಸ್ತಿ’ಯನ್ನೂ ಈಗ ನೀಡುತ್ತಿದೆ.

1000 ಶಬ್ದಗಳಿಗೆ ರೂ 200ರ ಲೆಕ್ಕದಲ್ಲಿ, ಟಾಲ್‌ಸ್ಟಾಯ್‌ನ ‘ವಾರ್ ಅಂಡ್ ಪೀಸ್’ ಬೃಹತ್ ಕಾದಂಬರಿಯ ಕನ್ನಡ ಅನುವಾದಕ್ಕಾಗಿ 1 ಲಕ್ಷ  30 ಸಾವಿರ ರೂಪಾಯಿ ಸಂಭಾವನೆ ಕೊಟ್ಟಿದ್ದೇವೆ ಎಂದರೆ ಭಾಷಾಂತರಕಾರರ ಸ್ಥಿತಿಗತಿ ಎಷ್ಟು ಸುಧಾರಿಸಿದೆ ಎಂದು ಊಹಿಸಿ ಎಂದೂ ಗುರುದತ್ ಹೇಳಿದರು.ಕರ್ನಾಟಕ ಅನುವಾದ ಅಕಾಡೆಮಿಯನ್ನು ವಿಲೀನಗೊಳಿಸಿಕೊಂಡಿರುವ ಕುವೆಂಪು ಭಾಷಾ ಭಾರತಿಯ ಕಾರ್ಯಚಟುವಟಿಕೆಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದ ಪ್ರಧಾನ ಗುರುದತ್ ಈ ವರ್ಷಾಂತ್ಯಕ್ಕೆ ಇನ್ನೂ 50 ಪುಸ್ತಕಗಳು ಪ್ರಕಟವಾಗಲಿವೆ ಎಂದರು.

ರವೀಂದ್ರನಾಥ ಟ್ಯಾಗೋರರ ‘ಗೀತಾಂಜಲಿ’ಯ 13 ಆವೃತ್ತಿಗಳು ಬಂದಿವೆ ಕನ್ನಡದಲ್ಲಿ. ಕುವೆಂಪು ಭಾಷಾ ಭಾರತಿ ನೇರ ಬಂಗಾಳಿಯಿಂದಲೇ ‘ಗೀತಾಂಜಲಿ’ಯನ್ನು ಕನ್ನಡಕ್ಕೆ ತಂದಿದೆ ಎಂದರು. ಜೊತೆಗೆ ಕನ್ನಡದ ಶ್ರೇಷ್ಠಸಾಹಿತ್ಯವನ್ನೂ ಬೇರೆ ಭಾಷೆಗಳಿಗೆ ಕೊಡಲಿದೆ ಎಂದೂ ಹೇಳಿದರು.ಎಲ್ಲಾ ಭಾಷೆಗಳ ಶ್ರೇಷ್ಠ ಕೃತಿಗಳಿಂದ ಕನ್ನಡ ಸಮೃದ್ಧವಾಗಬೇಕು. ಅತ್ಯಂತ ಜನಪ್ರಿಯ ಕೃತಿಯಾದ ‘ಹ್ಯಾರಿಪ್ಯಾಟರ್’ಗೂ ಮಿಗಿಲಾದಂತಹ ಸೋಮದೇವನ ‘ಕಥಾಸರಿತ್ಸಾಗರ’ವನ್ನು 10 ಸಂಪುಟಗಳಲ್ಲಿ ಹೊರತಂದಿದ್ದೇವೆ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದರು.

ಪ್ರತಿ ವರ್ಷ ಕರ್ನಾಟಕದಲ್ಲಿ 4000 ಪುಸ್ತಕಗಳು ಪ್ರಕಟವಾಗುತ್ತಿವೆ. ಇವುಗಳಲ್ಲಿ 800 ರಿಂದ 1000 ಪುಸ್ತಕಗಳು ಎಂದರೆ ಶೇ 25ರಷ್ಟು ಪುಸ್ತಕಗಳು ಅನುವಾದ ಕೃತಿಗಳಾಗಿರುತ್ತವೆ. ಈ ಅನುವಾದಗಳು ಸಾಹಿತ್ಯಕ್ಕಷ್ಟೇ ಸೀಮಿತವಾಗಿರುವುದಿಲ್ಲ ಎಂದೂ ವಿವರಿಸಿದರು.ಭಾಷಾಂತರ -ಪತ್ರಿಕೋದ್ಯಮ,ಭಾಷಾಂತರ-ಕಾನೂನು, ಹಿಂದಿ ಮತ್ತು ಕನ್ನಡ ಹೀಗೆ ವಿವಿಧ ವಿಷಯಗಳ ತರಗತಿಗಳನ್ನೂ ಕುವೆಂಪು ಭಾಷಾ ಭಾರತಿ ಈ ವರ್ಷದಿಂದ ಆರಂಭಿಸಲಿದೆ ಎಂದೂ ಅವರು ಹೇಳಿದರು.

‘ಉಪನ್ಯಾಸ’ ಎಂದರೆ ಕನ್ನಡದಲ್ಲಿ ‘ಭಾಷಣ’, ಹಿಂದಿಯಲ್ಲಿ ‘ಕಾದಂಬರಿ’, ‘ಸಾಂಪ್ರದಾಯಿಕತೆ’ ಎಂದರೆ ಹಿಂದಿಯಲ್ಲಿ ‘ಕೋಮುಭಾವನೆ’ ಎಂಬ ಅರ್ಥ ಬರುತ್ತದೆ. ಹೀಗಾಗಿ ಸಮಾನಾರ್ಥಕ, ವಿಭಿನ್ನಾರ್ಥಕ ಪರ್ಯಾಯ ಪದಕೋಶಗಳನ್ನು ಹೊರತರುವ ಯೋಜನೆಯೂ ಕುವೆಂಪು ಭಾಷಾ ಭಾರತಿಗಿದೆ ಎಂದರು.

‘ಕಳೆದ ದಶಕದಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರ’ ಕುರಿತು ಮಾತನಾಡಿದ ಎಸ್. ಗಂಗಾಧರಯ್ಯ ಅವರು ಅನುವಾದ ಇಂದು ಅಗತ್ಯ; ಆದರೆ ಸಮಸ್ಯೆಯೂ ಆಗ್ತಿದೆ ಎಂದರು. ಭಾಷೆ ಎನ್ನುವುದು ಸಾಂಸ್ಕೃತಿಕ ಅನುಭವವನ್ನೂ ಅವಲಂಬಿಸಿರುತ್ತದೆ. ಈ ಅನುಭವ ಇಲ್ಲದೆ ಆಗುವ ಅನುವಾದ ಸಾಂಸ್ಕೃತಿಕ ಎಡವಟ್ಟಿಗೆ ಕಾರಣವಾಗುತ್ತದೆ. ದೇಸಿ ಕೃತಿಯೊಂದು ಇಂಗ್ಲಿಷ್‌ಗೆ ಅನುವಾದವಾಗಿ ಮತ್ತೆ ದೇಸಿ ಭಾಷೆಗೆ ಬರುವಾಗ ಮೂಲ ಸಂಸ್ಕೃತಿ ಸೊರಗಲಿಕ್ಕೆ ಶುರುವಾಗುತ್ತದೆ ಎಂದು ವಿಷಾದಿಸಿದರು.

ಕನ್ನಡದಲ್ಲಿ ದೊಡ್ಡ ಅನುವಾದ ಪರಂಪರೆಯೇ ಇದೆ. ಹಿಂದಿನ ದೊಡ್ಡ ಲೇಖಕರು ಅನುವಾದಕಾರ್ಯವನ್ನೂ ಸೃಜನಶೀಲತೆಯ ಭಾಗ ಎಂದೇ ಭಾವಿಸಿದ್ದರು. ಈಗಿನದು ಬರೀ ಶುದ್ಧ ಸಾಹಿತ್ಯದ ಕಾಲ ಅಲ್ಲ. ಅನ್ಯ ಶಿಸ್ತುಗಳ ವಿಚಾರಗಳ ಅನುವಾದದಲ್ಲಿ ಕಾರ್ಪೊರೇಟ್ ರಂಗ ಹಾಗೂ ಎನ್‌ಜಿಓ ಗಳು ಹೆಚ್ಚು ಸ್ಪಂದಿಸಿವೆ ಎಂದೂ ಅವರು ಅಭಿಪ್ರಾಯ ಪಟ್ಟರು.

ಜಾಗತೀಕರಣದ ನಂತರ ಸಾಂಸ್ಕೃತಿಕ ಸಾರ್ವತ್ರೀಕರಣ ಆರಂಭವಾಯಿತು. ಸಾಂಸ್ಕೃತಿಕ ಹೆಬ್ಬಾಗಿಲು ತೆರೆಯಲು ಭಾಷಾಂತರವೂ ಕಾರಣ. ಸಂಸ್ಕೃತಿಯ ಸಾರ್ವತ್ರೀಕರಣ ಸಾಹಿತ್ಯದ ಮೇಲೆ ಮಾತ್ರ ಪರಿಣಾಮ ಬೀರಿಲ್ಲ. ಕೃಷಿ, ಪರಿಸರ, ವಿಜ್ಞಾನವನ್ನೂ ಇದು ಆವರಿಸಿಕೊಂಡಿದೆ. ಈ ದಿಸೆಯಲ್ಲಿ ತೇಜಸ್ವಿಯವರ ಮಿಲೆನಿಯಮ್ ಸರಣಿಯ 16 ಪುಸ್ತಕಗಳ ಗುಚ್ಛ ಮಹತ್ವದ್ದು ಎಂದರು. 25 ವರ್ಷಗಳ ಹಿಂದೆ ಫುಕುವೊಕಾರ ‘ಒಂದು ಹುಲ್ಲಿನ ಕ್ರಾಂತಿ’ ಕೃಷಿಲೋಕದಲ್ಲಿ ಸಂಚಲನವನ್ನೇ ಉಂಟು ಮಾಡಿತ್ತು.ಈ ಬಗೆಯ ಅನ್ಯ ಶಿಸ್ತಿನ ವಿಚಾರಗಳನ್ನು ತಿಳಿಸುವ ಅನುವಾದ ಕಾರ್ಯ ಇನ್ನೂ ಹೆಚ್ಚು ಆಗಬೇಕಿದೆ. ಪ್ರಪಂಚದಲ್ಲಿ ನೀರಿನ ಮಿತ ಬಳಕೆಗೆ ಇಸ್ರೇಲ್ ಮಾದರಿ, ಆ ಬಗ್ಗೆ ನಮ್ಮಲ್ಲಿ ಪುಸ್ತಕಗಳು ಇಲ್ಲ. ಚೀನಾದಲ್ಲಿ ಯಶಸ್ವಿಯಾಗಿರುವ ಕೃಷಿ ಪದ್ಧತಿ ವಿವರಿಸುವ ಪುಸ್ತಕಗಳೂ ಇಲ್ಲ ಎಂದರು.

ಸಾಮಾಜಿಕ ಜವಾಬ್ದಾರಿ: ಅನುವಾದ ಎನ್ನುವುದು ಎರಡು ಭಾಷೆ ಬಲ್ಲವರ ಸಾಮಾಜಿಕ ಜವಾಬ್ದಾರಿ. ವರ್ತಮಾನದ ತುಡಿತಗಳಿಗೆ ಸ್ಪಂದಿಸುವ ಅನುವಾದ ಕಾರ್ಯವನ್ನು ಪ್ರೀತಿಯಿಂದ ಕೈಗೆತ್ತಿಕೊಳ್ಳುವುದು ಈ ಸಂದರ್ಭದ ತುರ್ತು ಅಗತ್ಯ ಎಂದೂ ಅವರು ಪ್ರತಿಪಾದಿಸಿದರು.

‘ಭಾರತದ ಇತರೆ ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರ’ ವಿಷಯ ಕುರಿತು ಪ್ರಬಂಧ ಮಂಡಿಸಿದ ಪ್ರೊ. ಪಾರ್ವತಿ ಜಿ. ಐತಾಳ್ ಅವರು ಅನುವಾದ ಎಂಬುದು ತೌಲನಿಕ ಸಾಹಿತ್ಯದ ಅಡಿಗಲ್ಲು ಎಂದರು.  ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದ ಸುಲಭ. ಆದರೆ ಹೀಗೆ ನೇರ ಅನುವಾದಿಸುವವರ ಸಂಖ್ಯೆ ಕಡಿಮೆ ಇದೆ. ಭಾರತೀಯ ಭಾಷೆಯ ಕೃತಿ ಇಂಗ್ಲಿಷ್‌ಗೆ ಹೋಗಿ ನಂತರ ಅನುವಾದವಾಗುವಾಗ  ಭಾಷೆಯ ಸೊಗಡಿನ ಸೋರಿಕೆ ಹೆಚ್ಚಾಗುತ್ತದೆ ಎಂದರು. ಮರುಜನ್ಮವೀಯುವ ತಾಯಿ ಹೃದಯದ ಅನುವಾದಕರು ಬೇಕಾಗಿದ್ದಾರೆ ಎಂದರು.

ವಾಕ್ಯ ರಚನೆ, ಪದ ಪ್ರಯೋಗಗಳ ಅಧ್ಯಯನ ಮಾಡದೆ ಯಾಂತ್ರಿಕವಾಗಿ ಮಾಡುವ ಅನುವಾದಗಳು ಶಾಬ್ದಿಕ, ನೀರಸ  ಅನುವಾದಗಳಾಗಿ ಹಲವು ಆಭಾಸಗಳಾಗುವುದೂ ಉಂಟು. ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಪ್ರಕಟಿಸಿರುವ ಪುಸ್ತಕಗಳಲ್ಲೇ ಈ ಬಗೆಯ ಹಲವು ದೋಷಗಳು ನುಸುಳಿವೆ. ಅನುವಾದಕರಿಂದ ಪ್ರಕಾಶಕರವರೆಗೆ ಈ ಬಗ್ಗೆ ಕಾಳಜಿ ವಹಿಸುವುದು ಅಗತ್ಯ ಎಂದು ಅವರು ಸೂಚಿಸಿದರು.

ಅನುವಾದಕರು ಅವಗಣನೆಗೆ ತುತ್ತಾದವರು ಎಂದು ವಿಷಾದ ವ್ಯಕ್ತಪಡಿಸಿದ ಅವರು ಅನುವಾದ ಯಾಂತ್ರಿಕ ಕ್ರಿಯೆ ಅಲ್ಲ. ಅದಕ್ಕೆ ವಿಮರ್ಶಾ ಪ್ರಜ್ಞೆ, ಬೌದ್ಧಿಕತೆ, ಭಾಷಾ ಪ್ರಬುದ್ಧತೆ, ಸೃಜನಶೀಲತೆ ಎಲ್ಲವೂ ಬೇಕು. ಹೀಗಿದ್ದೂ ಪುಸ್ತಕಗಳ ಪ್ರಕಾಶಕರು ಮೂಲ ಲೇಖಕರ ಹೆಸರನ್ನು ಪುಸ್ತಕದ ಮೇಲೆ ಪ್ರಕಟಿಸಿ ಅನುವಾದಕರ ಹೆಸರನ್ನು ಒಳ ಪುಟಗಳಲ್ಲಿ ಪ್ರಕಟಿಸುವ ಪರಂಪರೆ ಇದೆ ಎಂದು ವಿಷಾದಿಸಿದರು. ‘ಭಾಷಾಂತರ - ಸಂಸ್ಕೃತದಿಂದ ಕನ್ನಡಕ್ಕೆ’ ವಿಷಯ ಕುರಿತು ಮಾತನಾಡಿದ ಡಾ ಸುರೇಶ ಪಾಟೀಲ ಅವರು ಅನುವಾದ ಪ್ರಕ್ರಿಯೆ ಕನ್ನಡದಲ್ಲಿ ಶುರುವಾದದ್ದೇ ಸಂಸ್ಕೃತದಿಂದ ಎಂದು ಇತಿಹಾಸ ಸ್ಮರಿಸಿದರು. ಸ್ವತಂತ್ರ ಸಾಹಿತ್ಯದ ಜೊತೆ ಜೊತೆಯೇ ಅನುವಾದಗಳೂ ನಡೆದಿವೆ.  ಸಂಸ್ಕೃತ - ಕನ್ನಡ ಒಡನಾಟ ಆಪ್ತ ಬಾಂಧವ್ಯವಾಗಿದ್ದೂ ಉಂಟು, ಪ್ರೀತಿ-ದ್ವೇಷದ ಸಂಬಂಧ ಆದದ್ದೂ ಉಂಟು ಎಂದು ವಿಶ್ಲೇಷಿಸಿದರು.

ಕನ್ನಡದೊಳಗೆ ಸಾಹಿತ್ಯ ರಚನೆ ಆರಂಭವಾದಾಗ ಅದು ಒಂದು ಪ್ರದೇಶಕ್ಕೆ ಸೀಮಿತವಾಯಿತು. ಅಂದಿನ ಕಾಲದ ಕವಿಗಳೆಲ್ಲಾ ‘ಉಭಯ ಭಾಷಾ ವಿಶಾರದರು’. ಸಂಸ್ಕೃತದಲ್ಲಿ ಬರೆದದ್ದೆಲ್ಲಾ ‘ಮಾರ್ಗ’. ಇದು ಕನ್ನಡ ಕವಿಗಳಿಗೆ ಸವಾಲಾಯಿತು, ಮಾರ್ಗದಿಂದ ದೇಸಿ ಕಡೆಗೆ ಅವರು ಹೊರಳಿದರು. ದೇಸಿಗೆ ಲೌಕಿಕ ಎನ್ನುವ ಅರ್ಥ ಬಂತು. ನಂತರ ಮಾರ್ಗ- ದೇಸಿಗಳ ಸಮನ್ವಯ ಮಾಡಿದರು. ಸ್ಥೂಲವಾಗಿ ಹೋಲಿಸುವುದಾದರೆ ಆಗಿನ ಸಂಸ್ಕೃತಕ್ಕಿದ್ದ ಸ್ಥಾನ ಈಗ ಕಂಪ್ಯೂಟರ್ ಜ್ಞಾನಕ್ಕಿದೆ. ಮತ್ತೆ ಈಗ ಮಾರ್ಗ - ದೇಸಿ ಸಮನ್ವಯಗೊಳಿಸಿ ಭಾಷೆಯನ್ನು ಉಳಿಸಬೇಕಿದೆ ಎಂದು ವ್ಯಾಖ್ಯಾನಿಸಿದರು.ಡಾ. ಚಿತ್ತಯ್ಯ ಪೂಜಾರ್ ನಿರೂಪಿಸಿದರು. ಎನ್. ಪ್ರಹ್ಲಾದ್ ಸ್ವಾಗತಿಸಿದರು. ಟಿ.ಕೆ. ವಿಧಾತ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT