ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ನಡಿಗೆ-ಜನರ ಬಳಿಗೆ ಚಾಲನೆ: ಸರ್ಕಾರದ ವಿರುದ್ಧ ಆಕ್ರೋಶ

Last Updated 15 ಜೂನ್ 2011, 18:30 IST
ಅಕ್ಷರ ಗಾತ್ರ

ತುಮಕೂರು: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೆಲವು ಸಚಿವರನ್ನು ಜೈಲಿಗೆ ಕಳುಹಿಸುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದರು.

ತಾಲ್ಲೂಕಿನ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾದಲ್ಲಿ ಬುಧವಾರ ಚಾಲನೆ ನೀಡಲಾದ `ಕಾಂಗ್ರೆಸ್ ನಡಿಗೆ ಜನರ ಬಳಿಗೆ~ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ನೆರಡು ವರ್ಷಗಳಲ್ಲಿ ಯಾವಾಗ ಬೇಕಾದರೂ ವಿಧಾನಸಭೆಗೆ ಚುನಾವಣೆ ನಡೆಯಬಹುದು. ಭ್ರಷ್ಟ ಸರ್ಕಾರ ಕಿತ್ತೊಗೆಯಲು ಕಾರ್ಯಕರ್ತರು ಸಜ್ಜಾಗುವಂತೆ ಕರೆ ನೀಡಿದರು.

ಪ್ರೇರಣಾ ಟ್ರಸ್ಟ್‌ಗೆ ಜಿಂದಾಲ್ ಕಂಪೆನಿಯಿಂದ ರೂ. 40 ಕೋಟಿ ಹಣ ಪಡೆದಿದ್ದು, ಪುತ್ರ ರಾಘವೇಂದ್ರನಿಗೆ ಕಾನೂನು ಬಾಹಿರವಾಗಿ ಬಿಡಿಎ ನಿವೇಶನ ಹಂಚಿಕೆ ಮಾಡಿದ್ದನ್ನು ದಾಖಲೆ ಸಮೇತ ಹೇಳುತ್ತಿದ್ದೇವೆ. ಹೊಟ್ಟೆಕಿಚ್ಚಿಗಾಗಿ ಸುಳ್ಳು ಯಾಕೆ ಹೇಳಬೇಕು. ರಾಜ್ಯದ ಇತಿಹಾಸದಲ್ಲಿ ಸ್ವಜನಪಕ್ಷಪಾತ, ಕಾನೂನುಬಾಹಿರ, ಭ್ರಷ್ಟಾಚಾರದ ಕಾರಣಕ್ಕಾಗಿ ರಾಜ್ಯಪಾಲರಿಂದ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶ ಮಾಡಿಸಿಕೊಟ್ಟ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ ಎಂದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಸತ್ಯ ಎಂದರು.

ಪಕ್ಷದ ಬಲವರ್ಧನೆಯ ಆಸೆ ಇಟ್ಟುಕೊಂಡು `ಕಾಂಗ್ರೆಸ್ ನಡಿಗೆ- ಜನರ ಬಳಿಗೆ~ ಕಾರ್ಯಕ್ರಮ ರೂಪಿಸಲಾಗಿದ್ದು ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲೇ ಬೇಕಾಗಿದೆ ಎಂದು ಅವರು ಹೇಳಿದರು.

`ಸುಪ್ರೀಂ ಕೋರ್ಟ್‌ಗೆ ಹೋದ ಹದಿನಾರು ಕಳ್ಳ, ಖದೀಮ ಶಾಸಕರಿಂದಾಗಿ ರಾಜ್ಯಕ್ಕೆ ಈ ಕಂಟಕ ಬಂತು~ ಎಂದು ವಿಧಾನ ಪರಿಷತ್ ನಾಯಕಿ ಮೋಟಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರು ಮಾತನಾಡಿ, ಮಾಧ್ಯಮಗಳಲ್ಲಿ ನೀಡುತ್ತಿರುವ ಜಾಹೀರಾತು ಫಲಕಗಳಲ್ಲಿ ಮಾತ್ರವೇ ಬಿಜೆಪಿಯ ಅಭಿವೃದ್ಧಿ ಕಾಣುತ್ತಿದ್ದು ವಾಸ್ತವದಲ್ಲಿ ಅಲ್ಲ. ಜನ ಲೋಕಪಾಲ್ ಮಸೂದೆಗಾಗಿ ಹಠ ಹಿಡಿಯುವ ಅಣ್ಣಾ ಹಜಾರೆ, ಯಡಿಯೂರಪ್ಪ ಭ್ರಷ್ಟಾಚಾರದ ವಿರುದ್ಧ ಏಕೆ ದನಿ ಎತ್ತುವುದಿಲ್ಲ. ಆರ್‌ಎಸ್‌ಎಸ್ ಏನಾದರೂ ಸೂಚನೆ ನೀಡಿದೆಯೇ ಎಂದು ಪ್ರಶ್ನಿಸಿದರು.

ರಾಮ್‌ದೇವ್, ಅಣ್ಣಾ ಹಜಾರೆ ವಿರುದ್ಧ ಕಿಡಿಕಾರಿದ ಎಐಸಿಸಿ ಕಾರ್ಯದರ್ಶಿ ಸಂಜಯ್ ನಿರುಪಮ್, ಇಬ್ಬರೂ ಸೇರಿ ಕೇಂದ್ರ ಸರ್ಕಾರ ಉರುಳಿಸುವ ಸಂಚು ರೂಪಿಸಿದ್ದರು. ಇದಕ್ಕೆ ಆರ್‌ಎಸ್‌ಎಸ್, ಬಿಜೆಪಿ ಅಣತಿ ಇತ್ತು ಎಂದರು.

ರೈಲ್ವೆ ಸಚಿವ ಕೆ.ಎಚ್.ಮುನಿಯಪ್ಪ, ಎಂ.ವಿ.ರಾಜಶೇಖರನ್, ವೀರಣ್ಣ ಮತ್ತಿಕಟ್ಟಿ, ಲೂಸಿಯಾ ಫೆಲೋರಿಯಾ, ವಿನಯಕುಮಾರ್ ಸೊರಕೆ, ಟಿ.ಬಿ.ಜಯಚಂದ್ರ, ಕಾಗೋಡು ತಿಮ್ಮಪ್ಪ, ರಾಣಿ ಸತೀಶ್, ಮಹಿಮಾ ಪಟೇಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT