ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗದದ ಹುಲಿಯಾದ ಅಂತರ್ಜಲ ನಿಯಮ

Last Updated 25 ಏಪ್ರಿಲ್ 2013, 19:41 IST
ಅಕ್ಷರ ಗಾತ್ರ

`ಸಂಕಲ್ಪ' ಸಿದ್ಧಿಸೀತೇ?  ಭಾಗ- 2

ಬೆಂಗಳೂರು: ಅಂತರ್ಜಲದ ಲೂಟಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ `ಕರ್ನಾಟಕ ಅಂತರ್ಜಲ ನಿಯಮ-2012' ಕಾಗದದ ಹುಲಿ ಆಗಿದೆ. ಗಡುವು ವಿಸ್ತರಣೆಯಾದ ಬಳಿಕವೂ ನಗರದಲ್ಲಿ ನೋಂದಣಿಯಾದ ಕೊಳವೆಬಾವಿಗಳ ಸಂಖ್ಯೆಶೇ 5ರಷ್ಟು ಮಾತ್ರ. ಕಾಯ್ದೆ ದುರ್ಬಲವಾಗಿರುವುದರಿಂದಲೇ ಜನರು ನೋಂದಣಿಗೆ ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ 10 ಜಿಲ್ಲೆಗಳ 35 ತಾಲ್ಲೂಕುಗಳಲ್ಲಿ ಅಂತರ್ಜಲದ ಬಳಕೆ ಅಪಾಯಕಾರಿ ಹಂತ ತಲುಪಿದ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಕಾನೂನು ಜಾರಿಗೆ ತರಲು ಮುಂದಾಯಿತು. ಅಂತರ್ಜಲದ ರಕ್ಷಣೆಗೆ 16 ವರ್ಷಗಳ ಹಿಂದೆ ಕರಡು ಸಿದ್ಧಪಡಿಸಲಾಗಿತ್ತು. 2011ರಲ್ಲಿ ಕರ್ನಾಟಕ ಅಂತರ್ಜಲ ಕಾಯ್ದೆ (ನಿಯಂತ್ರಣ ಹಾಗೂ ನಿರ್ವಹಣೆ) ಕಾಯ್ದೆಗೆ ಒಪ್ಪಿಗೆ ನೀಡಲಾಯಿತು.

ನಿಯಮಗಳನ್ನು ರೂಪಿಸಿ 2012ರ ಅಂತ್ಯದಲ್ಲಿ `ಕರ್ನಾಟಕ ಅಂತರ್ಜಲ ಪ್ರಾಧಿಕಾರ' ರಚಿಸಲಾಯಿತು. ನಗರದಲ್ಲಿರುವ ಎಲ್ಲಾ ಕೊಳವೆಬಾವಿಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು 120 ದಿನಗಳ ಗಡುವನ್ನೂ ವಿಧಿಸಲಾಯಿತು. ಜನರ ನೀರಸ ಪ್ರತಿಕ್ರಿಯೆ ಹಾಗೂ ಮಾಹಿತಿ ಕೊರತೆಯ ಕಾರಣದಿಂದ ಗಡುವನ್ನು ಏಪ್ರಿಲ್ 30ರ ವರೆಗೆ ವಿಸ್ತರಿಸಲಾಗಿದೆ.

ಈಗಿರುವ ಬೋರ್‌ವೆಲ್‌ಗಳ ನೋಂದಣಿಗೆ ಈವರೆಗೆ 5,552 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 1,658 ಕೊಳವೆಬಾವಿಗಳ ನೋಂದಣಿಗೆ ಅನುಮೋದನೆ ನೀಡಲಾಗಿದೆ. ಹೊಸ ಕೊಳವೆಬಾವಿಗಳ ತೋಡಲು 174 ಅರ್ಜಿಗಳ ಸಲ್ಲಿಕೆಯಾಗಿತ್ತು. ಈ ಪೈಕಿ 97 ಕೊಳವೆಬಾವಿಗಳ ತೋಡಲು ಅನುಮತಿ ನೀಡಲಾಗಿದೆ. ಏಪ್ರಿಲ್ 3ರ ವೆರೆಗೆ 4,118 ಅರ್ಜಿಗಳು ಸಲ್ಲಿಕೆಯಾಗಿದ್ದವು. 1477 ಕೊಳವೆಬಾವಿಗಳ ನೋಂದಣಿ ಮಾಡಿಕೊಳ್ಳಲಾಗಿತ್ತು. ಹೊಸ ಕೊಳವೆಬಾವಿಗಳ ತೋಡಲು 137 ಅರ್ಜಿಗಳು ಸಲ್ಲಿಕೆಯಾಗಿದ್ದರೆ, 94 ಕೊಳವೆಬಾವಿಗಳ ತೋಡಲು ಅನುಮತಿ ನೀಡಲಾಗಿತ್ತು. ಗಡುವು ವಿಸ್ತರಣೆಯ ಬಳಿಕವೂ ನೋಂದಣಿಯಾದ ಕೊಳವೆಬಾವಿಗಳ ಸಂಖ್ಯೆ ಅಂದಾಜು ಒಂದು ಸಾವಿರದಷ್ಟು.

ಸಮಸ್ಯೆ ಮೂಲ ಎಲ್ಲಿದೆ: ಬಹುತೇಕ ಮಹಾನಗರಗಳು ನೀರಿನ ಆಸರೆಯಿರುವ ನದಿ ತೀರದಲ್ಲೇ ಉಗಮಿಸಿವೆ. ಬೆಂಗಳೂರು ಈ ಮಾತಿಗೆ ಅಪವಾದ. ನಗರದ ನೀರು ಪೂರೈಕೆಯು ಸುಮಾರು 100 ಕಿ.ಮೀ. ದೂರದಲ್ಲಿರುವ ಕಾವೇರಿ ನದಿಯನ್ನು ಅವಲಂಬಿಸಿದೆ.

226 ಚದರ ಕಿ.ಮೀ. ವ್ಯಾಪ್ತಿಯ ನಗರ 2007ರ ಜನವರಿ 16ರಂದು ಸುತ್ತಮುತ್ತಲ ಪಟ್ಟಣ ಹಾಗೂ ಗ್ರಾಮಗಳನ್ನು ತೆಕ್ಕೆಗೆ ಸೆಳೆದುಕೊಂಡು `ಬಿಬಿಎಂಪಿ'ಯಾಗಿ ಪರಿವರ್ತನೆಗೊಂಡಿತು. ಕೆಂಗೇರಿ ಪುರಸಭೆ, ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಬೊಮ್ಮನಹಳ್ಳಿ, ಕೃಷ್ಣರಾಜಪುರ, ಮಹದೇವಪುರ, ಬ್ಯಾಟರಾಯನಪುರ, ಯಲಹಂಕ ನಗರ ಸಭೆಗಳು ಹಾಗೂ 110 ಗ್ರಾಮಗಳು ನಗರದೊಳಗೆ ಬಂದಿವೆ.

ನಗರದ ಹೃದಯ ಭಾಗಕ್ಕೆ ಮಾತ್ರ `ಕಾವೇರಿ' ನೀರು ಹರಿಯುತ್ತಿದೆ. ಉಳಿದ ಭಾಗದ ಜನರ ನೀರಿನ ಪ್ರಮುಖ ಮೂಲ ಕೊಳವೆಬಾವಿಗಳು ಹಾಗೂ ಟ್ಯಾಂಕರ್ ನೀರು. ನಗರದ ಸುತ್ತಮುತ್ತಲಿನ 10 ತಾಲ್ಲೂಕುಗಳಲ್ಲಿ ಅಂತರ್ಜಲ ಲೂಟಿ ಹೊಡೆಯಲಾಗಿದೆ. ಈ ಪೈಕಿ `ಬೆಂಗಳೂರು ದಕ್ಷಿಣ' ತಾಲ್ಲೂಕು (ಶೇ 178), ಹೊಸಕೋಟೆ (ಶೇ 144) ತಾಲ್ಲೂಕಿಗೆ ಅಗ್ರಪಟ್ಟ. ನಗರದಲ್ಲಿ ಶೇ 68ರಷ್ಟು ಅಂತರ್ಜಲ ಅತಿ ಬಳಕೆ ಆಗಿದೆ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಿದೆ.

ನಗರಕ್ಕೆ ಬೀಳುವ ವಾರ್ಷಿಕ ಮಳೆ ಪ್ರಮಾಣ 900 ಮಿ.ಮೀ. ನಗರದಲ್ಲಿ 3 ಲಕ್ಷಕ್ಕೂ ಅಧಿಕ ಕೊಳವೆಬಾವಿಗಳು ಇವೆ. ಇದರಲ್ಲಿ ಬಿಬಿಎಂಪಿ ಹಾಗೂ ಜಲಮಂಡಳಿಗೆ ಸೇರಿದ ಬೋರ್‌ವೆಲ್‌ಗಳು ಸೇರಿವೆ. ಭೂಮಿಯನ್ನು 1,000 ಅಡಿಯಷ್ಟು ಬಗೆದರೂ ನೀರು ದಕ್ಕುತ್ತಿಲ್ಲ. ಕೊಳವೆಬಾವಿಗಳನ್ನು ತೋಡುವ ಪ್ರವೃತ್ತಿ ಎಗ್ಗಿಲ್ಲದೆ ಮುಂದುವರಿದಿದೆ. ಕೊಳವೆಬಾವಿಗಳ ಸಮರ್ಪಕ ನಿರ್ವಹಣೆಯೂ ಆಗುತ್ತಿಲ್ಲ. ಬೇಸಿಗೆಯಲ್ಲಿ ಒಂದು ಬಾರಿ ಬತ್ತಿದ ಬಳಿಕ ಪಕ್ಕದಲ್ಲೇ ಮತ್ತೊಂದು ಕೊಳವೆಬಾವಿಯನ್ನು ತೋಡಲಾಗುತ್ತಿದೆ.

`ರಾಜ್ಯ ಸರ್ಕಾರ ಅಂತರ್ಜಲ ಕೊಳ್ಳೆ ಹೊಡೆದ ಬಳಿಕ ಕಾನೂನು ಜಾರಿಗೆ ತಂದಿದೆ. ಈ ಕಾಯ್ದೆ ಊರು ಸೂರೆಯಾದ ಬಳಿಕ ದಿಡ್ಡಿ ಬಾಗಿಲು ಹಾಕಿದಂತೆ ಆಗಿದೆ. ಈ ಕಾಯ್ದೆಯೂ ದುರ್ಬಲವಾಗಿದೆ. ನೋಂದಣಿ ಮಾಡಿಕೊಳ್ಳದೆ ಕೊಳವೆಬಾವಿಗಳನ್ನು ತೋಡಿದರೆ ರೂ. 2,000ರಿಂದ ರೂ. 10,000ದವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಆದರೆ, ನೋಂದಣಿಯಾಗದ ಕೊಳವೆಬಾವಿಗಳ ಪತ್ತೆಗೆ ತಂಡ ರಚಿಸುವ ಪ್ರಸ್ತಾವವೇ ಇಲ್ಲ' ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಲೋಪದೋಷಗಳ ಬಗ್ಗೆ ಬೆಳಕು ಚೆಲ್ಲಿದರು.

`ಕಾಯ್ದೆಯ ಬಗ್ಗೆ ಅಧಿಕಾರಿಗಳಿಗೂ ಮಾಹಿತಿಯ ಕೊರತೆ ಇದೆ. ಜನರಲ್ಲೂ ಜಾಗೃತಿ ಮೂಡಿಸುವ ಕೆಲಸ ಆಗಿಲ್ಲ. ನೋಂದಣಿ ಮಾಡಿಕೊಳ್ಳದೆ ಇದ್ದರೂ ಸಮಸ್ಯೆ ಆಗುವುದಿಲ್ಲ ಎಂಬ ಭಾವನೆ ಬಂದಿದೆ. ವಿದ್ಯುತ್ ಸಂಪರ್ಕ ಕಡಿತ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರೆ ನೋಂದಣಿ ಪ್ರಮಾಣ ಹೆಚ್ಚುತ್ತಿತ್ತು. ಗಡುವು ಅಂತ್ಯಗೊಂಡ ಬಳಿಕ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ನಮಗೆ ಸ್ಪಷ್ಟತೆ ಇಲ್ಲ' ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

`ನಗರದ ಜನಸಂಖ್ಯೆ ಒಂದು ಕೋಟಿಗೆ ಹತ್ತಿರ ಬಂದಿದೆ. ನೀರಿನ ಮೂಲಗಳೆಲ್ಲ ಬತ್ತುತ್ತಿವೆ. ಸಾವಿರ ಅಡಿ ಕೊರೆದರೂ ನೀರು ದೊರಕುತ್ತಿಲ್ಲ. ಜನರಿಗೆ ಪರ್ಯಾಯ ಮೂಲಗಳೇ ಇಲ್ಲ. ಕೊಳವೆಬಾವಿಗಳಿಗೆ ಕಡಿವಾಣ ಹಾಕಲು ಸರ್ಕಾರ ಪ್ರಬಲ ಕಾನೂನು ರೂಪಿಸಿಲ್ಲ. ನಗರದಲ್ಲಿರುವ ಕೆರೆಗಳ ಪುನರುಜ್ಜೀವನಕ್ಕೆ ಮೊದಲ ಆದ್ಯತೆ ನೀಡಿದರೆ ತಕ್ಕಮಟ್ಟಿಗೆ ಈ ಸಮಸ್ಯೆ ಪರಿಹಾರ ಆದೀತು' ಎಂದು ಜಲತಜ್ಞರು ಅಭಿಪ್ರಾಯಪಡುತ್ತಾರೆ.

ಪ್ರಣಾಳಿಕೆಯಲ್ಲಿ ಹೇಳಿದ್ದೇನು?

`ಬೆಂಗಳೂರು ಅಭಿವೃದ್ಧಿ ಪಥ-2020' ಘೋಷಣೆಯಡಿ ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ `ನಗರದ ಅಂತರ್ಜಲ  ಕಾಪಾಡುವ ಉದ್ದೇಶದಿಂದ ಕೊಳವೆಬಾವಿಗಳನ್ನು ತೋಡುವ ಕಾರ್ಯ ನಿಯಂತ್ರಿಸಲಾಗುವುದು' ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT