ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ಇಂದು ಪ್ರಧಾನಿಗೆ ಮೊರೆ

ಸಿ.ಎಂ ನೇತೃತ್ವದ ನಿಯೋಗ ಭೇಟಿ ್ಝ `ಸಿಎಂಸಿ' ಸಭೆಯಲ್ಲಿ ನೀರಿನ ಪ್ರಮಾಣ ನಿರ್ಧಾರ
Last Updated 7 ಡಿಸೆಂಬರ್ 2012, 10:17 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ಕಾವೇರಿ ಕಣಿವೆಯಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಸಮಸ್ಯೆ ಕುರಿತು ವಾಸ್ತವಿಕ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ಕಾವೇರಿ ಜಲಾನಯನ ಪ್ರದೇಶದ ಸಂಸದರ ನಿಯೋಗದೊಂದಿಗೆ ಶುಕ್ರವಾರ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮತ್ತು ಕೇಂದ್ರ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರಕಟಿಸಿದರು.

ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ ಭಾನುವಾರದವರೆಗೂ ನಿತ್ಯ ಹತ್ತು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂಕೋರ್ಟ್ ಬುಧವಾರ ನೀಡಿರುವ ಆದೇಶದ ಕುರಿತು ವಿಧಾನಮಂಡಲದ ಉಭಯ ಸದನಗಳಲ್ಲಿ ನಡೆದ ಚರ್ಚೆಗೆ ಗುರುವಾರ ಸಂಜೆ ಉತ್ತರ ನೀಡಿದ ಮುಖ್ಯಮಂತ್ರಿ, ಈ ವಿಷಯ ತಿಳಿಸಿದರು. ಆದರೆ, ಸುಪ್ರೀಂಕೋರ್ಟ್ ಆದೇಶದಂತೆ ನೀರು ಬಿಡುವ ಅಥವಾ ಬಿಡದಿರುವ ಕುರಿತು ಯಾವುದೇ ದೃಢ ನಿರ್ಧಾರ ಹೊರಹಾಕಲಿಲ್ಲ.

ಸರ್ಕಾರದ ನಿಲುವನ್ನು ವಿರೋಧಿಸಿ ಹಾಗೂ ನೀರು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸುವಂತೆ ಒತ್ತಾಯಿಸಿ ಎರಡೂ ಸದನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಧರಣಿ ನಡೆಸಿದರು. ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮೈಸೂರು ಪ್ರೆಸಿಡೆನ್ಸಿ ಮತ್ತು `ಪ್ರಿನ್ಸ್‌ಲಿ ಸ್ಟೇಟ್'ಗಳ ನಡುವೆ 1892 ಮತ್ತು 1924ರಲ್ಲಿ ನಡೆದ ಒಪ್ಪಂದಗಳಿಂದ ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಈವರೆಗೆ ನಡೆದ ವಿದ್ಯಮಾನಗಳನ್ನು ಒಳಗೊಂಡ ಹತ್ತು ಪುಟಗಳ ಸವಿವರವಾದ ಹೇಳಿಕೆಯನ್ನು ಶೆಟ್ಟರ್ ಸದನದ ಮುಂದಿಟ್ಟರು.

ಈ ವಿವಾದದಲ್ಲಿ ಕಾವೇರಿ ನ್ಯಾಯಮಂಡಳಿ, ಸುಪ್ರೀಂಕೋರ್ಟ್, ಕಾವೇರಿ ಉಸ್ತುವಾರಿ ಸಮಿತಿ ಮತ್ತು ಕಾವೇರಿ ನದಿ ಪ್ರಾಧಿಕಾರಗಳ ಆದೇಶಗಳನ್ನು ಉಲ್ಲಂಘಿಸಿದ ಎಲ್ಲ ಸಂದರ್ಭಗಳಲ್ಲೂ ರಾಜ್ಯದ ರೈತರ ಹಿತಕ್ಕೆ ಧಕ್ಕೆ ಆಗುವಂತಹ ಬೆಳವಣಿಗೆಗಳು ಘಟಿಸಿವೆ ಎಂಬುದನ್ನು ವಿಧಾನಸಭೆ ಹಾಗೂ ಪರಿಷತ್‌ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.

`ತಮಿಳುನಾಡು ಸರ್ಕಾರವು 52 ಟಿಎಂಸಿ ಅಡಿ ಬ್ಯಾಕ್‌ಲಾಗ್ ನೀರಿನ ಬೇಡಿಕೆಯನ್ನೂ ಸುಪ್ರೀಂಕೋರ್ಟ್‌ನ ಮುಂದಿಟ್ಟಿದೆ. ಐದು ದಿನಗಳ ಕಾಲ ಹತ್ತು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವು ಕಾನೂನಿನ ವ್ಯಾಪ್ತಿಯಲ್ಲಿ ರಾಜ್ಯದ ರೈತರ ಹಿತರಕ್ಷಣೆ ಮಾಡುವುದು ಅಗತ್ಯವಾಗಿದೆ' ಎಂದು ಹೇಳಿದರು.

`ಕಾವೇರಿ ನದಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಪ್ರಧಾನಿ ಅವರಿಗೆ ಇತ್ತೀಚಿನ ವಾಸ್ತವಿಕ ಸ್ಥಿತಿ  ಮನವರಿಕೆ ಮಾಡಿಕೊಡಬೇಕಾಗಿದೆ. ಈ ಕಾರಣಕ್ಕೆ ಶುಕ್ರವಾರ ರಾಜ್ಯದ ಕಾವೇರಿ ಕಣಿವೆಯ ಎಲ್ಲ ಸಂಸದರ ನಿಯೋಗದ ಜೊತೆ ಪ್ರಧಾನಿ ಮತ್ತು ಕೇಂದ್ರದ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ. ಜೊತೆಯಲ್ಲೇ ರಾಜ್ಯದ ಪರ ವಾದಿಸುತ್ತಿರುವ ವಕೀಲರು ಮತ್ತು ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ಕ್ರಮಗಳ ಬಗ್ಗೆಯೂ ತೀರ್ಮಾನಕ್ಕೆ ಬರಲಾಗುವುದು' ಎಂದು ಸದನಕ್ಕೆ ತಿಳಿಸಿದರು.

1948ರ ಜನವರಿ 26ರಂದು ರಾಷ್ಟ್ರವು ಹೊಸ ಸಂವಿಧಾನವನ್ನು ಅಳವಡಿಸಿಕೊಂಡಾಗ ಮತ್ತು 1956ರಲ್ಲಿ ಹೊಸ ರಾಜ್ಯ ಸ್ಥಾಪನೆಯ ಸಂದರ್ಭಗಳಲ್ಲಿ ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಹಿಂದಿನ ಒಪ್ಪಂದಗಳನ್ನು ಪ್ರಶ್ನಿಸುವ, ಮುಕ್ತಾಯಗೊಳಿಸುವ ಅವಕಾಶ ಇತ್ತು. ಆದರೆ, ಅವುಗಳನ್ನು ರಾಜ್ಯವು ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ. 1990-1991ರಲ್ಲಿ ಐದು ಟಿಎಂಸಿ ಅಡಿ ನೀರು ಬಿಡುವಂತೆ ಕಾವೇರಿ ನ್ಯಾಯಮಂಡಳಿ ನೀಡಿದ ಆದೇಶವನ್ನು ರಾಜ್ಯ ಸರ್ಕಾರ ಧಿಕ್ಕರಿಸಿದ ಪರಿಣಾಮವಾಗಿ ರಾಜ್ಯವು ದೊಡ್ಡ ಪ್ರಮಾಣದ ಹೊರೆ  ಹೊರಬೇಕಾಗಿ ಬಂತು. 1924ರ ಒಪ್ಪಂದ ಹಾಗೂ ನಿಗದಿತ ಕಾಲಾವಧಿಯಲ್ಲಿ 205 ಟಿಎಂಸಿ ನೀರು ಬಿಡುವಂತೆ ಕಾವೇರಿ ನ್ಯಾಯಮಂಡಳಿ 1991ರಲ್ಲಿ ನೀಡಿದ ಮಧ್ಯಂತರ ಆದೇಶಗಳು ರಾಜ್ಯದ ಪಾಲಿಗೆ ಈಗಲೂ ಮಾರಕವಾಗಿವೆ ಎಂದು ಮುಖ್ಯಮಂತ್ರಿಯವರು ಹೇಳಿದರು.

ಕಾವೇರಿ ನದಿಯಿಂದ ನೀರು ಬಿಡುವಂತೆ ಕೋರಿ ಕಳೆದ ಮೇ ತಿಂಗಳಲ್ಲಿ ತಮಿಳುನಾಡು ಸರ್ಕಾರವು  ಪ್ರಧಾನಿಯವರಿಗೆ ಪತ್ರ ಬರೆದ ನಂತರ ಘಟಿಸಿದ ಎಲ್ಲ ಬೆಳವಣಿಗೆಗಳನ್ನು ಸದನದ ಮುಂದಿಟ್ಟ   ಶೆಟ್ಟರ್, ಎಲ್ಲ ಹಂತದಲ್ಲೂ ಸರ್ಕಾರ ರಾಜ್ಯದ ಪರವಾಗಿ ಬಲವಾಗಿ ವಾದ ಮಂಡಿಸಿದೆ ಎಂದರು. `ರಾಜ್ಯದ ಕಾವೇರಿ ಕಣಿವೆಯಲ್ಲಿರುವ ಜಲಾಶಯಗಳಲ್ಲಿ ಬೆಳೆದುನಿಂತ ಬೆಳೆಗಳು ಹಾಗೂ ಕುಡಿಯುವ ನೀರು ಪೂರೈಕೆಗೆ ಮಾತ್ರ ಸಾಕಾಗುವಷ್ಟು ನೀರಿದೆ ಎಂದು ಕೇಂದ್ರ ಸರ್ಕಾರ ಕಳುಹಿಸಿದ್ದ ತಜ್ಞರ ತಂಡವೇ ವರದಿ ನೀಡಿದೆ. ಆದರೂ, ಕಾವೇರಿ ನದಿ ಪ್ರಾಧಿಕಾರ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುವಂತಹ ಆದೇಶ ನೀಡಿತು' ಎಂದು ಬೇಸರ ವ್ಯಕ್ತಪಡಿಸಿದರು.

ಈ ವರ್ಷ ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ಕಾನೂನು ಹೋರಾಟ ನಡೆಯುತ್ತಿದೆ. ಈ ಅವಧಿಯಲ್ಲಿ ರಾಜ್ಯದ ಪರವಾಗಿ ಪ್ರಬಲ ವಾದ ಮಂಡಿಸಿ, ನ್ಯಾಯ ಪಡೆಯಲು ಸರ್ಕಾರ ಪ್ರಯತ್ನ ನಡೆಸಿದೆ. ಮುಂದೆಯೂ ಇದೇ ರೀತಿ ಕಾನೂನು ಹೋರಾಟ ಮುಂದುವರಿಯುತ್ತದೆ. ಜನರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT