ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುಗತೆಗಳು

Last Updated 6 ಜುಲೈ 2013, 19:59 IST
ಅಕ್ಷರ ಗಾತ್ರ

ಪ್ರೇಮ ಪರೀಕ್ಷೆ
ತನ್ನ ಇಷ್ಟದ ಹುಡುಗನ ಜೊತೆ ಹೋದ ಮಗಳನ್ನು ಅವಳಪ್ಪ ಬಲಾತ್ಕಾರದಿಂದ ತಂದು ಕೂಡಿ ಹಾಕಿದ. ದಿನಗಳು ಉರುಳಿದುವು, ವಾರ ತಿಂಗಳುಗಳಾಗಿ.

ಅಪ್ಪ ಮಗಳಲ್ಲಿ ಹೇಳಿದ- “ನೋಡಿದೆಯಾ, ಅವನು ಈಗ ಹೇಗೆ ಓಡಾಡುತ್ತಿದ್ದಾನೆ. ನಿನ್ನ ಮೇಲಿರುವುದು ನಿಜವಾದ ಪ್ರೀತಿಯಾಗಿದ್ದರೆ ಅವನು ಯಾವಾಗಲೋ ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದ”.


ಶೋಕಾಚರಣೆ
ಹುತಾತ್ಮ ದಿನಾಚರಣೆ ಮೂಲಕ ತನ್ನ ಅನುಯಾಯಿಗಳನ್ನು ಸದಾ ಕ್ರಿಯಾಶೀಲರನ್ನಾಗಿಸುವುದು ಆ ಪಕ್ಷದ ರೀತಿಯಾಗಿತ್ತು. ಈಗಾಗಲೇ ಇರುವ ದಿನಾಚರಣೆಗಳೊಂದಿಗೆ ಹಲವರನ್ನು ಕೊಂದೂ, ಕೊಲ್ಲಿಸಿಯೂ ದಿನಾಚರಣೆಗಳ ಸಂಖ್ಯೆಗಳನ್ನು ಹೆಚ್ಚಿಸುತ್ತಿತ್ತು.

ಕಾರ್ಯಕರ್ತರೆಲ್ಲ ವಾರದ ಕೊನೆಯ ರಜಾದಿನಗಳಲ್ಲಿ ಈ ದಿನಾಚರಣೆಯಲ್ಲಿ ಭಾಗವಹಿಸಬೇಕಾಗುತ್ತಿತ್ತು.
ಹೀಗಿರುವಾಗ ಒಂದು ವಾರದ ರಜಾದಿನದಂದು ಆಚರಣೆಗೆ ಕಾರಣ ಸಿಗಲಿಲ್ಲ. ಅಂದು ಅವರು ನಾಯಕನನ್ನೇ ಕೊಂದು ಸಂತಾಪಸೂಚಕ ದಿನ ಆಚರಿಸಿದರು.

ನೀತಿ ಪಾಠದ ಗುಣ
ನರಿಯ ಮುಂದಿನ ತಲೆಮಾರಿಗೆ ಗೊತ್ತಿತ್ತು - ದ್ರಾಕ್ಷಿ ಹುಳಿಯಲ್ಲ. ಪಠ್ಯ ಪುಸ್ತಕದಲ್ಲಿ ಸೇರಿಹೋದ ಒಂದು ಸುಳ್ಳನ್ನು, ಮುಂದಿನ ತಲೆಮಾರು ಕಲಿಯುವುದರಲ್ಲಿ ಅವುಗಳಿಗೆ ಸಹಮತವಿರಲಿಲ್ಲ. ಇದರ ಹಿಂದೆ ಮನುಷ್ಯನ ದುರಾಲೋಚನೆ ಇದೆ ಎಂದೇ ಅವುಗಳು ತಿಳಿದವು. ಆದರೂ ಅವುಗಳು ಪಾಠವನ್ನು ಬದಲಿಸಲು ಹೋಗಲಿಲ್ಲ.
ಇದು ತಿಳಿಯದ ಮನುಷ್ಯ ಆ ಹಳೆಯ ಪಾಠವನ್ನೇ ಹೊಸ ತಲೆಮಾರಿಗೆ ಹೇಳತೊಡಗಿದ.

ನರಿ ಮತ್ತು ಕೋಳಿ
ಹಾಗೆ ಆ ಹುಂಜ ನರಿಯ ಬಲೆಗೆ ಬಿತ್ತು. ನರಿಯಾದರೋ ಹುಂಜವನ್ನು ಬಹಳ ಪ್ರೀತಿಯಿಂದಲೇ ನೋಡಿಕೊಂಡಿತು. ತನ್ನ ಪರಂಪರಾಗತ ಆಹಾರದ ಮೇಲೆ ಹಗೆತನ ತೋರುವ ಪೈಕಿ ಅಲ್ಲ ನರಿ. ಅದು ಹೇಳಿತು-

“ಕೇಳು, ನಮಗೆ ನಿನ್ನ ಮೇಲಾಗಲಿ, ನಿನ್ನವರ ಮೇಲಾಗಲೀ ಯಾವ ವೈರವೂ ಇಲ್ಲ. ನೀವುಗಳು ಮಾತ್ರ ನಮ್ಮನ್ನು ಕಂಡ ಕೂಡಲೇ ಶತ್ರುಗಳನ್ನು ಕಂಡ ಹಾಗೆ ಕೂಗತೊಡಗುತ್ತೀರಿ. ಯಾಕೆ? ಇನ್ನು ನಿಮ್ಮ ಆಚೆಯವರು ಇದಾರಲ್ಲ, ಯಾರು? ಅದೇ ಮನುಷ್ಯರು, ಅವರ ಹಿಂದೆಯೇ ಹೋಗುತ್ತೀರಿ. ಮುಂದಿರುವವನು ಒಬ್ಬ ಕೊಲೆಗಾರ ಎಂಬುದನ್ನು ತಿಳಿದೂ.

ನಮ್ಮಳಗೆ ಹಗೆತನ ಸೃಷ್ಟಿಸಿ ಕತೆ ಕಟ್ಟಿದವನೂ ಮನುಷ್ಯನೇ. ಅದು ಅವನ ಲಾಭಕ್ಕೆ. ಇದನ್ನು ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸಿ ಮುಂದಿನ ತಲೆಮಾರಿಗೂ ಹಂಚಿದರು”.
ಹುಂಜ ಕೇಳಿದಷ್ಟು ಕೇಳಿತು. ಬಿಟ್ಟಷ್ಟು ಬಿಟ್ಟಿತು.

ಅಡುಗೆ ತಯಾರಿಸಿ, ಈಗ ಇಷ್ಟೇ ಎಂದು ಮಧ್ಯಾಹ್ನ ಅನ್ನ ಸಾರು ಬಡಿಸಿತು.
“ನಾವು ಪ್ರಾಣಿಗಳು, ಪ್ರಕೃತಿ ನಿಯಮ ಪಾಲಿಸುವವರು. ಪರಸ್ಪರರ ಪ್ರೀತಿಯನ್ನು ಲೋಕಕ್ಕೆ ತಿಳಿಸಲೆಂದೇ ನಿನ್ನನ್ನು ಇಲ್ಲಿಗೆ ಕರೆ ತಂದೆ. ಈಗ ಇಷ್ಟು, ರಾತ್ರಿ ಮಾಂಸದಡಿಗೆ ಮಾಡುವ” ಎಂದಿತು ನರಿ.

ಹುಂಜಕ್ಕೂ ನರಿಯ ಮಾತು ಸತ್ಯ ಅನಿಸಿತು. `ಅನ್ನ ಸಾರು ಇಷ್ಟು ರುಚಿಯಾಗಿರಬೇಕಾದರೆ ಮಾಂಸದಡಿಗೆ ಇನ್ನೆಷ್ಟು ರುಚಿಯೋ' ಎಂದು ಹಸಿದ ಹೊಟ್ಟೆ ತುಂಬಿಸುತ್ತಾ ಹುಂಜ ಯೋಚಿಸಿತು.
ಕತ್ತಲಾಯಿತು.

ನರಿಯ ಸ್ನೇಹಿತರು ಬಂದು ಸೇರಿ ವಾತಾವರಣಕ್ಕೆ ಉತ್ಸಾಹ ತುಂಬಿತು. ಎಲ್ಲರೂ ಹುಂಜವನ್ನು ಪ್ರೀತಿಯಿಂದ ನೋಡುವವರೇ. ಮೈದಡವುವವರೇ.
ಅಂದು ರಾತ್ರಿ ಸ್ನೇಹಿತರೆಲ್ಲ ಸೇರಿ ಮಾಂಸದಡಿಗೆ ಮಾಡಿ ಉಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT