ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ ಅರ್ಜಿ-ತೀರ್ಪು ಕಾಯ್ದಿಟ್ಟ ಹೈಕೋರ್ಟ್

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿಗಳಾಗಿದ್ದ ವೇಳೆ ಅಕ್ರಮ ಗಣಿಗಾರಿಕೆಗೆ ಸಹಕಾರ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾದ ದೂರು ಹಾಗೂ ಆ ದೂರಿನ ಅನ್ವಯ ದಾಖಲಾದ ಎಫ್‌ಐಆರ್ ರದ್ದತಿಗೆ ಕೋರಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.

ಪ್ರಥಮ ಮಾಹಿತಿ ವರದಿಗೆ (ಎಫ್‌ಐಆರ್) ಈ ಹಿಂದೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಇದೇ 15ರವರೆಗೆ ವಿಸ್ತರಿಸಿ ನ್ಯಾಯಮೂರ್ತಿ ಎನ್.ಆನಂದ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ 15ರ ಒಳಗೆ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ನಗರದ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಎಂಬುವರು ದಾಖಲು ಮಾಡಿರುವ ಖಾಸಗಿ ದೂರು ಹಾಗೂ ಆ ದೂರಿನ ಆಧಾರದ ಮೇಲೆ ಲೋಕಾಯುಕ್ತ ವಿಶೇಷ ಕೋರ್ಟ್ ನಿರ್ದೇಶನದಂತೆ ದಾಖಲಾದ ಎಫ್‌ಐಆರ್ ವಿವಾದ ಇದಾಗಿದೆ.
 
ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 6,832 ಹೆಕ್ಟೇರ್ ಮೀಸಲು ಗಣಿ ವಲಯವನ್ನು ಕಾನೂನುಬಾಹಿರವಾಗಿ ಖಾಸಗಿ ಗಣಿಗಾರಿಕೆಗೆ ಮುಕ್ತಗೊಳಿಸಿದ ಆರೋಪ ಅವರ ಮೇಲಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್) ಮೂಲಕ ಕೆಲ ಖಾಸಗಿ ಕಂಪೆನಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆರೋಪವೂ ಇದೆ. ಕೃಷ್ಣ ಪರವಾಗಿ ಸುಪ್ರೀಂಕೋರ್ಟ್ ಹಿರಿಯ ವಕೀಲ ಯು.ಯು.ಲಲಿತ್ ಹಾಗೂ ಖುದ್ದು ವಾದ ಮಂಡಿಸುತ್ತಿರುವ ದೂರುದಾರ ಅಬ್ರಹಾಂ ಅವರ ಸುದೀರ್ಘ ವಾದ, ಪ್ರತಿವಾದ ಆಲಿಸಿದ ನಂತರ ತೀರ್ಪನ್ನು ಕಾಯ್ದಿರಿಸಲಾಯಿತು.

ನೀಡದ ಮಾಹಿತಿ: ಈ ಪ್ರಕರಣದಲ್ಲಿ ಅಬ್ರಹಾಂ ಅವರು ಅಂಚೆ ಮೂಲಕ ಲೋಕಾಯುಕ್ತ ಕೋರ್ಟ್‌ಗೆ ದೂರು ಕಳುಹಿಸಿದ್ದರು. ಈ ದೂರಿನ ಆಧಾರದ ಮೇಲೆ ಕೋರ್ಟ್ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಅದಕ್ಕೆ ನ್ಯಾ. ಆನಂದ್ ಅವರು ಲೋಕಾಯುಕ್ತ ಪರ ವಕೀಲ ರಾಜೇಂದ್ರ ರೆಡ್ಡಿ ಅವರನ್ನು ಉದ್ದೇಶಿಸಿ, `ಲೋಕಾಯುಕ್ತ ಕೋರ್ಟ್‌ಗೆ ಈ ರೀತಿಯಾಗಿ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಳ್ಳುವ ಅಧಿಕಾರ ಇದೆಯೇ~ ಎಂದು ಪ್ರಶ್ನಿಸಿದರು.

ಆದರೆ ವಕೀಲರಿಗೆ ಈ ಕುರಿತು ಮಾಹಿತಿ ಇರಲಿಲ್ಲ. ಗುರುವಾರ ಮಾಹಿತಿ ನೀಡುವುದಾಗಿ ತಿಳಿಸಿದರು. ಇದರಿಂದ ನ್ಯಾ.ಆನಂದ್ ತೀವ್ರ ಅಸಮಾಧಾನಗೊಂಡರು. `ಲೋಕಾಯುಕ್ತ ವಕೀಲರಾಗಿ ಇಂತಹ ಮೂಲ ವಿಷಯದ ಮಾಹಿತಿ ಇಲ್ಲ ಎಂದರೆ ಹೇಗೆ, ಹಲವು ದಿನಗಳಿಂದ ವಿಚಾರಣೆ ನಡೆಯುತ್ತಿದೆ. ಆದರೂ ಈ ಕುರಿತು ಮಾಹಿತಿ ಕಲೆಹಾಕಿಲ್ಲ ಎಂದರೆ ಏನರ್ಥ~ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT