ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವ: ಸಂಚಾರ ಬದಲಾವಣೆ

Last Updated 25 ಜನವರಿ 2011, 6:40 IST
ಅಕ್ಷರ ಗಾತ್ರ

ಬೆಂಗಳೂರು: ಗಣರಾಜ್ಯೋತ್ಸವದ ಪ್ರಯುಕ್ತ ನಗರದ ಎಂ.ಜಿ.ರಸ್ತೆಯ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ಬುಧವಾರ (ಜ.26) ಕವಾಯತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶದ ಸಂಚಾರ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.

ಬುಧವಾರ ಬೆಳಿಗ್ಗೆ ಆರು ಗಂಟೆಯಿಂದ 10.30ರವರೆಗೆ ಕಬ್ಬನ್ ರಸ್ತೆಯಲ್ಲಿ ಬಿ.ಆರ್.ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ ಎರಡು ದಿಕ್ಕುಗಳಲ್ಲೂ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಕಬ್ಬನ್ ರಸ್ತೆಯಲ್ಲಿ ಸಿ.ಟಿ.ಓ ವೃತ್ತದಿಂದ ಮಣಿಪಾಲ್ ಸೆಂಟರ್ ಕಡೆಗೆ ಹೋಗುವ ವಾಹನಗಳು ಬಿ.ಆರ್.ವಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಸೆಂಟ್ರಲ್ ರಸ್ತೆ ಜಂಕ್ಷನ್‌ಗೆ ಬಂದು ಬಲಕ್ಕೆ ತಿರುಗಿ ಇನ್‌ಫೆಂಟ್ರಿ ರಸ್ತೆ, ಸಫೀನಾ ಪ್ಲಾಜಾ ಕಡೆಗೆ ಹೋಗಿ ನಂತರ ಎಡ ತಿರುವು ಪಡೆದು ಮೈನ್‌ಗಾರ್ಡ್ ರಸ್ತೆ, ಅಲಿ ವೃತ್ತ, ಕಾಮರಾಜ ರಸ್ತೆ ಮೂಲಕ ಡಿಕನ್ಸನ್ ರಸ್ತೆ ಜಂಕ್ಷನ್‌ಗೆ ಬರಬೇಕು. ಬಳಿಕ ಬಲಕ್ಕೆ ತಿರುಗಿ ಕಾಮರಾಜ ರಸ್ತೆ, ಕಬ್ಬನ್ ರಸ್ತೆಯಲ್ಲಿ ಸಾಗಿ ಕಾಮರಾಜ ರಸ್ತೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಕಬ್ಬನ್ ರಸ್ತೆ ಮೂಲಕ ಮಣಿಪಾಲ್ ಸೆಂಟರ್ ಕಡೆಗೆ ಹೋಗಬೇಕು.

ಮಣಿಪಾಲ್ ಸೆಂಟರ್ ಜಂಕ್ಷನ್‌ನಿಂದ ಸಿ.ಟಿ.ಓ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ಕಬ್ಬನ್ ರಸ್ತೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ ಕಾಮರಾಜ ರಸ್ತೆಗೆ ಬಂದು ಕಾವೇರಿ ಎಂಪೋರಿಯಂ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಎಂ.ಜಿ.ರಸ್ತೆಯಲ್ಲಿ ಸಾಗಿ ಅನಿಲ್ ಕುಂಬ್ಳೆ ವೃತ್ತದಲ್ಲಿ ಬಲಕ್ಕೆ ತಿರುಗಿ ಬಿ.ಆರ್.ವಿ ಜಂಕ್ಷನ್‌ಗೆ ಬಂದು ಎಡ ತಿರುವು ಪಡೆದು ಮುಂದೆ ಸಾಗಬೇಕು.

ಅನಿಲ್ ಕುಂಬ್ಳೆ ವೃತ್ತದಿಂದ ಕಬ್ಬನ್ ರಸ್ತೆ ಕಡೆಗೆ ಹೋಗುವ ವಾಹನಗಳು ನೇರವಾಗಿ ಸೆಂಟ್ರಲ್ ರಸ್ತೆಯಲ್ಲಿ ಸಾಗಿ ಇನ್‌ಫೆಂಟ್ರಿ ರಸ್ತೆಗೆ ಬಲ ತಿರುವು ಪಡೆದು ಸಫೀನಾ ಪ್ಲಾಜಾದ ಬಳಿ ಬಂದು ಎಡಕ್ಕೆ ತಿರುಗಿ ಮೈನ್‌ಗಾರ್ಡ್ ರಸ್ತೆ, ಅಲಿ ವೃತ್ತ, ಕಾಮರಾಜ ರಸ್ತೆ, ಡಿಕೆನ್ಸನ್ ರಸ್ತೆ ಜಂಕ್ಷನ್ ಮೂಲಕ ಮುಂದೆ ಸಾಗಬೇಕು.

ವಾಹನ ನಿಲುಗಡೆ: ಕಾರ್ಯಕ್ರಮ ವೀಕ್ಷಣೆಗೆ ಬರುವ ಸಾರ್ವಜನಿಕರ ವಾಹನ ನಿಲುಗಡೆಗೆ ವಿಶೇಷ ಸ್ಥಳಾವಕಾಶ ಕಲ್ಪಿಸಲಾಗಿದೆ. ಹಳದಿ ಪಾಸ್ ಹೊಂದಿರುವ ಆಹ್ವಾನಿತರು ಮಾಣೆಕ್ ಷಾ ಪೆರೇಡ್ ಮೈದಾನದ ಒಂದನೇ ಪ್ರವೇಶ ದ್ವಾರದ ಮೂಲಕ ಒಳ ಬಂದು ಮೈದಾನದ ಪಶ್ಚಿಮ ಭಾಗದಲ್ಲಿ ವಾಹನ ನಿಲುಗಡೆ ಮಾಡಬೇಕು.

ಬಿಳಿ ಪಾಸ್ ಹೊಂದಿರುವ ಗಣ್ಯ ವ್ಯಕ್ತಿಗಳು, ಸಚಿವರು, ಸರ್ಕಾರದ ಕಾರ್ಯದರ್ಶಿಗಳು, ಸೇನಾಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಮೈದಾನದ ಎರಡನೇ ಪ್ರವೇಶ ದ್ವಾರದ (ಮಿಲಿಟರಿ ಕ್ಯಾಂಟೀನ್ ಮುಂಭಾಗ) ಮೂಲಕ ಒಳ ಬಂದು ಪಶ್ಚಿಮ ಭಾಗದಲ್ಲಿ ವಾಹನ ನಿಲ್ಲಿಸಬೇಕು.

ಪಿಂಕ್ ಪಾಸ್ ಹೊಂದಿರುವವರು ಎಂ.ಜಿ.ರಸ್ತೆ ಮೂಲಕ ಮೈದಾನದೊಳಗೆ ಬಂದು ವಾಹನ ನಿಲುಗಡೆ ಮಾಡಿ ಒಂದನೇ ಪ್ರವೇಶ ದ್ವಾರದಲ್ಲಿ ಹೋಗಬೇಕು. ಹಸಿರು ಬಣ್ಣದ ಪಾಸ್ ಹೊಂದಿರುವವರು ಕಾಮರಾಜ ರಸ್ತೆ, ಮೈನ್‌ಗಾರ್ಡ್ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಿ ನಂತರ ಮೂರನೇ ಪ್ರವೇಶ ದ್ವಾರದ ಮೂಲಕ ಮೈದಾನದೊಳಗೆ ಬರಬೇಕು.

ಕವಾಯತು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಕರೆ ತರುವ ವಾಹನಗಳು ಮೂರನೇ ಪ್ರವೇಶ ದ್ವಾರದ ಮೂಲಕ ಮೈದಾನಕ್ಕೆ ಬರಬೇಕು. ನಂತರ ಆ ವಾಹನಗಳನ್ನು ಮೈದಾನದ ಕೋಟೆ ಗೋಡೆ ಹಿಂಭಾಗದಲ್ಲಿ ನಿಲ್ಲಿಸಬೇಕು. ಲೋಕೋಪಯೋಗಿ ಇಲಾಖೆ, ಬಿಬಿಎಂಪಿ ಮತ್ತಿತರ ಸರ್ಕಾರಿ ಇಲಾಖೆಗಳ ವಾಹನಗಳು ಮೂರನೇ ಪ್ರವೇಶ ದ್ವಾರದ ಮೂಲಕ ಮೈದಾನದೊಳಗೆ ಬರಬೇಕು.

ಎಲ್ಲ ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳನ್ನು ಕಾಮರಾಜ ರಸ್ತೆಯಲ್ಲಿ ನಿಲ್ಲಿಸಿ ಮೂರನೇ ಪ್ರವೇಶ ದ್ವಾರದ ಮೂಲಕ ಮೈದಾನಕ್ಕೆ ಬರಬೇಕು. ಕಾರಿನ ಪಾಸ್ ಹೊಂದಿರದ ವ್ಯಕ್ತಿಗಳು ಕಾಮರಾಜ ರಸ್ತೆಯಲ್ಲಿ ವಾಹನ ನಿಲ್ಲಿಸಿ ಮೂರನೇ ಪ್ರವೇಶ ದ್ವಾರದ ಮೂಲಕ ಒಳ ಹೋಗಬೇಕು.

ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಗೆ ಬರುವ ಸಾರ್ವಜನಿಕರು ಮೊಬೈಲ್ ಫೋನ್, ಕ್ಯಾಮೆರಾ, ರೇಡಿಯೊ ಹಾಗೂ ಛತ್ರಿಗಳನ್ನು ಮೈದಾನದೊಳಗೆ ತರುವುದನ್ನು ಭದ್ರತೆ ದೃಷ್ಟಿಯಿಂದ ನಿರ್ಬಂಧಿಸಲಾಗಿದೆ.

ಇಂತಹ ವಸ್ತುಗಳನ್ನು ತರುವ ವ್ಯಕ್ತಿಗಳನ್ನು ಮೈದಾನದೊಳಗೆ ಬಿಡುವುದಿಲ್ಲ ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT