ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿ ಮುಚ್ಚೋರಿಲ್ಲ, ಗೋಳು ಕೇಳೋರಿಲ್ಲ

Last Updated 7 ಸೆಪ್ಟೆಂಬರ್ 2011, 11:20 IST
ಅಕ್ಷರ ಗಾತ್ರ

ಹೊಳಲ್ಕೆರೆ: ರಸ್ತೆ ತುಂಬಾ ದೊಡ್ಡ ದೊಡ್ಡ ಗುಂಡಿಗಳು, ಕೆಲವೆಡೆ ರಸ್ತೆ ಮಧ್ಯದಲ್ಲಿಯೇ ಆಳುದ್ದ ಹೊಂಡಗಳು. ಗುಂಡಿ ಮುಚ್ಚಲೆಂದು ರಸ್ತಗೆ ಅಡ್ಡಲಾಗಿ ಸುರಿದ ಮಣ್ಣಿನ ರಾಶಿ. ಮಳೆ ಬಂದರೆ ಗುಂಡಿ ತುಂಬಾ ಕೆಸರು ನೀರು. ಬಿಸಿಲಿದ್ದರೆ ಕೆಂದೂಳು. ಹೊಂಡಗಳಲ್ಲಿ ಕುಲುಕುತ್ತಾ, ವಾಲುತ್ತಾ ಸಾಗುವ ವಾಹನಗಳು... 
 ಇದು ಪಟ್ಟಣದಿಂದ ಹೊಸದುರ್ಗ ಮಾರ್ಗದ ರಾಜ್ಯ ಹೆದ್ದಾರಿ- 47ರ ಅಸಲಿ ಚಿತ್ರಣ.

ಸದಾ ವಾಹನ ಸಂಚಾರ ಇರುವ ಈ ಮುಖ್ಯರಸ್ತೆಯನ್ನು ದಶಕದಿಂದ ದುರಸ್ತಿ ಮಾಡಿಲ್ಲ. ಹೊಸದುರ್ಗದಿಂದ ಪಟ್ಟಣದ ಮಾರ್ಗವಾಗಿ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ನಗರಗಳಿಗೆ ಸಂಚರಿಸಲು ಇದು ಪ್ರಮುಖ ರಸ್ತೆ. ಪಟ್ಟಣದಿಂದಲೂ ಹೊಸದುರ್ಗ ಮೂಲಕ ಬೆಂಗಳೂರು, ಚಿಕ್ಕಮಗಳೂರು, ಹಾಸನ ಕಡೆಗೆ ಇದೇ ರಸ್ತೆಯಲ್ಲೇ ಸಂಚರಿಸಬೇಕು.

ಈ ರಸ್ತೆಯಲ್ಲಿ ಪ್ರತಿ 5 ನಿಮಿಷಕ್ಕೆ ಒಂದರಂತೆ ಖಾಸಗಿ ಮತ್ತು ಸರ್ಕಾರಿ ಬಸ್‌ಗಳು ಸಂಚರಿಸುತ್ತವೆ. ಅಲ್ಲದೇ, ಆಟೋ ರಿಕ್ಷಾ, ಕಾರು, ಬೈಕು, ಲಾರಿ ಮತ್ತಿತರ ವಾಹನಗಳಿಗೆ ಲೆಕ್ಕವಿಲ್ಲ. ಪಟ್ಟಣದಿಂದ ಹೊಸದುರ್ಗ ಗಡಿವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.
 
ಗುಂಡಿಗಳಲ್ಲಿ ವಾಹನ ಓಡಿಸುವುದು ಚಾಲಕರಿಗಂತೂ ಒಂದು ದೊಡ್ಡ ಸವಾಲು. ಮಳೆ ಬಂದರಂತೂ, ಗುಂಡಿಗಳಲ್ಲಿ ಕೆಸರು ನೀರು ನಿಲ್ಲುವುದರಿಂದ ದ್ವಿಚಕ್ರ ವಾಹನ ಸವಾರರು ಮುಂದೆ ಚಲಿಸಲಾಗುವುದಿಲ್ಲ, ಎದುರಿನಿಂದ ಬರುವ ವಾಹನಗಳು ಸಿಡಿಸುವ ಕೊಳಕು ನೀರು ಮೈಮೆಲೆ ಸುರಿದು ಬಟ್ಟೆಗಳೆಲ್ಲ ಕೆಸರಾಗುತ್ತವೆ.

ರಾತ್ರಿ ವೇಳೆ ಬೈಕ್, ಕಾರು, ಆಟೋಗಳಂತಹ ಲಘು ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಬೈಕ್ ಸವಾರರು ಗುಂಡಿಯಲ್ಲಿ ಬೀಳುವ ಘಟನೆಗಳು ಇಲ್ಲಿ ಸಾಮಾನ್ಯವಾಗಿವೆ. ಲೋಕೊಪಯೋಗಿ ಇಲಾಖೆಯವರು ಕಳೆದ ವರ್ಷ ಕಾಟಾಚಾರಕ್ಕೆ ಗುಂಡಿ ಮುಚ್ಚಿ ಕೈತೊಳೆದುಕೊಂಡರು. ಈ ಮಳೆಗಾಲದಲ್ಲಿ ಇನ್ನೂ ಹೆಚ್ಚಿನ ಗುಂಡಿಗಳಾಗಿವೆ. ಗುಂಡಿ ಮುಚ್ಚಲು ರಸ್ತೆ ಪಕ್ಕದಲ್ಲಿ ಮಣ್ಣಿನ ರಾಶಿ ಹಾಕಲಾಗಿದ್ದು, ಯಾರೊಬ್ಬರು ಇತ್ತ ತಿರುಗಿ ನೋಡಿಲ್ಲ. 

ರೂ. 5 ಕೋಟಿ ವೆಚ್ಚದಲ್ಲಿ ನೂತನ ರಸ್ತೆ ನಿರ್ಮಿಸುವುದಾಗಿ ಶಾಸಕ ಎಂ. ಚಂದ್ರಪ್ಪ ಹೇಳಿದ್ದಾರೆ. ಆದರೆ, ಹೊಸ ರಸ್ತೆ ನಿರ್ಮಾಣ ಆಗುವವರೆಗಾದರೂ, ತಾತ್ಕಾಲಿಕವಾಗಿ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಿ ಎನ್ನುವುದು ಸಾರ್ವಜನಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT