ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಬ್ಬರ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

Last Updated 16 ಜುಲೈ 2013, 9:28 IST
ಅಕ್ಷರ ಗಾತ್ರ

ಹಿರೇಕೆರೂರ: ತಾಲ್ಲೂಕಿನಲ್ಲಿ ಯೂರಿಯಾ ಗೊಬ್ಬರ ಕೊರತೆಯಿಂದ ಬೆಳೆಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಕೂಡಲೇ ಸಾಕಷ್ಟು ಯೂರಿಯಾ ಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ವಿ.ಕೆಂಚಳ್ಳೇರ, ಎರಡು ವರ್ಷಗಳ ಭೀಕರ ಬರಗಾಲದಿಂದ ರೈತ ಸಮುದಾಯ ತತ್ತರಿಸಿ ಹೋಗಿದೆ. ಈ ವರ್ಷ ಉತ್ತಮ ಮಳೆ ಬೀಳುತ್ತಿರುವುದರಿಂದ ಬೆಳೆಗಳಿಗೆ ಯೂರಿಯಾ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ರೈತರು ಬಳಕೆ ಮಾಡುತ್ತಿದ್ದಾರೆ. ಇದರಿಂದ ಗೊಬ್ಬರ ಕೊರತೆ ಕಂಡು ಬಂದಿದ್ದು, ಖಾಸಗಿ ಮಾರಾಟಗಾರರು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಯೂರಿಯಾ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಅಗತ್ಯವಿರುವಷ್ಟು ಗೊಬ್ಬರವನ್ನು ದಾಸ್ತಾನು ಮಾಡುವಲ್ಲಿ ತಾಲ್ಲೂಕು ಆಡಳಿತ ಹಾಗೂ ಕೃಷಿ ಇಲಾಖೆ ವಿಫಲವಾಗಿವೆ. ತಾಲ್ಲೂಕಿಗೆ 10 ಸಾವಿರ ಟನ್ ಯೂರಿಯಾ ಗೊಬ್ಬರದ ಅಗತ್ಯವಿದ್ದರೂ ಕೇವಲ 4ಸಾವಿರ ಟನ್ ಗೊಬ್ಬರವನ್ನು ವಿತರಣೆ ಮಾಡಲಾಗಿದೆ. ಟಿಎಪಿಸಿಎಂಎಸ್ ಹಾಗೂ ವಿಎಸ್‌ಎಸ್ ಬ್ಯಾಂಕ್‌ಗಳ ಮೂಲಕ ಸಮರ್ಪಕ ಗೊಬ್ಬರ ಮಾರಾಟ ನಡೆದಿದ್ದು, ವರ್ತಕರು ಮಾತ್ರ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಗಂಗಪ್ಪನವರ ಮಾತನಾಡಿ, ಸರ್ಕಾರದ ರಿಯಾಯಿತಿ ದರದಲ್ಲಿ ಪೂರೈಕೆ ಮಾಡಿರುವ ಬಿತ್ತನೆ ಬೀಜಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಸಿ.ಪಿ. 818 ಗೋವಿನ ಜೋಳವು ತೀರಾ ಕಳಪೆಯಾಗಿದ್ದು, ಬೀಜ ಸರಿಯಾಗಿ ಹುಟ್ಟದೇ ರೈತರಿಗೆ ನಷ್ಟ ಉಂಟು ಮಾಡಿದೆ. ಈ ಬಗ್ಗೆ ಕಂಪೆನಿಯಿಂದ ನಷ್ಟವಾಗಿರುವ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.

ಹಾವೇರಿಯ ಉಗ್ರಾಣ ನಿಗಮದಿಂದ ದಾಸ್ತಾನು ಇರುವ ಯೂರಿಯಾ ಗೊಬ್ಬರವನ್ನು ಬಿಡುಗಡೆ ಮಾಡಲು ರಸ್ತೆ ಹಾಳಾಗಿರುವ ಕಾರಣವನ್ನು ನೀಡುತ್ತಾ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ. ತಕ್ಷಣ ಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಸಂಘದ ಮುಖಂಡರಾದ ಎಸ್.ವಿ.ಚಪ್ಪರದಹಳ್ಳಿ, ಶಂಕರಗೌಡ ಮಕ್ಕಳ್ಳಿ, ಮಹೇಶ ಕೊಟ್ಟೂರ, ಗಂಗನಗೌಡ ಮುದಿಗೌಡ್ರ, ಸತೀಶ ಬಣಕಾರ, ಮಂಜು ಕೆಂಚಳ್ಳೇರ, ಯೋಗಿಗೌಡ ಪಾಟೀಲ, ಮಲ್ಲನಗೌಡ ಮಾಳಗಿ, ಚಂದ್ರಪ್ಪ ಸಣ್ಣಪ್ಪನವರ, ಹನುಮಂತಪ್ಪ ಸಣ್ಣಭರಮಣ್ಣನವರ, ಪ್ರಭು ಪ್ಯಾಟಿ, ಮಾದೇವಕ್ಕ ಹರಿಜನ, ಪ್ರೇಮಾ ಹರಿಜನ, ಸರೋಜಾ ಪೂಜಾರ, ಯಶೋಧಾ ಡೊಂಬರ, ಮಲ್ಲೇಶಪ್ಪ ಕಡೂರ ಇತರರು ಪ್ರತಿಭಟನೆಯಲ್ಲಿದ್ದರು.

ತಹಸೀಲ್ದಾರ್ ತುಷಾರ ಹೊಸೂರ, ಸಿಪಿಐ ವಿಜಯ ಮುರಗುಂಡಿ, ಸಹಾಯಕ ಕೃಷಿ ನಿರ್ದೇಶಕ ಪಿ.ಸೇವಾನಾಯ್ಕ, ಪಿಎಸ್‌ಐ ಜಿ.ಟಿ.ಶ್ರೀಶೈಲಮೂರ್ತಿ ಸ್ಥಳದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT