ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಶಾಲೆ ಆರಂಭಕ್ಕೆ ಸರ್ಕಾರದ ತಾತ್ಸಾರ: ಮಿನಿ ವಿಧಾನಸೌಧಕ್ಕೆ ರೈತರ ಮುತ್ತಿಗೆ

Last Updated 29 ಜೂನ್ 2012, 19:30 IST
ಅಕ್ಷರ ಗಾತ್ರ

ಕುಷ್ಟಗಿ: ಮುಂಗಾರು ಮಳೆ ಸುರಿಯದೆ ಮೇವಿನ ಅಭಾವ ಉಂಟಾಗಿದ್ದರೂ ಗೋಶಾಲೆ ಆರಂಭಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ತಾಲ್ಲೂಕಿನ ತಳುಗೇರಾ ಗ್ರಾಮದ ನೂರಾರು ರೈತರು ಜಾನುವಾರುಗಳೊಂದಿಗೆ ಇಲ್ಲಿನ ಮಿನಿವಿಧಾನಸೌಧಕ್ಕೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಸುಮಾರು 7 ಕಿ.ಮೀ ದೂರದ  ತಳುವಗೇರಾದಿಂದ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಎತ್ತಿನ ಗಾಡಿ, ಎತ್ತು, ಎಮ್ಮೆ, ಹಸು ಕರುಗಳೊಂದಿಗೆ ಪಟ್ಟಣದ ತಹಶೀಲ್ದಾರರ ಕಚೇರಿವರೆಗೆ ಪಾದಯಾತ್ರೆ ಮೂಲಕ ಆಗಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 

ಪ್ರತಿಭಟನೆಯಿಂದಾಗಿ ವಿವಿಧ ಇಲಾಖೆಗಳ ಕಚೇರಿಗಳನ್ನೊಳಗೊಂಡ ಮಿನಿ ವಿಧಾನಸೌಧದ ಆವರಣ ಎತ್ತಿನಗಾಡಿ, ದನಕರುಗಳು, ನೂರಾರು ರೈತರಿಂದ ತುಂಬಿ ಹೋಗಿತ್ತು. ಯಾವುದೇ ವಾಹನಗಳು ಒಳಗೆ ಬರಲು ಸಾಧ್ಯವಾಗಲಿಲ್ಲ. ಸುಮಾರು ಆರು ತಾಸು ಜನ ಮತ್ತು ಜಾನುವಾರುಗಳು, ಎತ್ತಿನಗಾಡಿಗಳು ಕಚೇರಿ ಮುಂದೆಯೇ ಬೀಡು ಬಿಟ್ಟಿದ್ದರಿಂದ ಸರ್ಕಾರದ ಕೆಲಸಕಾರ್ಯಗಳಿಗೆ ಅಡ್ಡಿಯಾಗಿತ್ತು.

ಕಳೆದ ವರ್ಷವೇ ಬರ ಅನುಭವಿಸಿದ್ದೇವೆ, ಈ ವರ್ಷವೂ ಪರಿಸ್ಥಿತಿ ಭೀಕರವಾಗಿದೆ, ನಾವು ಹೇಗೋ ಹೊಟ್ಟೆ ತುಂಬಿಸಿಕೊಳ್ಳುತ್ತೇವೆ, ಮೂಕಪ್ರಾಣಿಗಳು ಮೇವಿಲ್ಲದೇ ಸೊರಗಿವೆ. ಸಾಕಿದ ಎತ್ತು, ಹಸು ಕರುಗಳು ಉಪವಾಸದಿಂದ ಮುಖ ನೋಡುತ್ತಿದ್ದರೆ ಕೈಯಲ್ಲಿನ ತುತ್ತು ಗಂಟಲಿಗೆ ಇಳಿಯುವುದಿಲ್ಲ. ಎತ್ತು, ದನಕರುಗಳು ಇಲ್ಲವೆಂದರೆ ನಮ್ಮ ಕುಟುಂಬಗಳೇ ನಾಶವಾದಂತೆ. ಬದುಕಿನ ಆಧಾರವೇ ಇಲ್ಲದಿರುವ ನಾವು ಇದ್ದರೇನು ಪ್ರಯೋಜನ? ಎಂದು ರೈತರು ಆಕ್ರೋಶವ್ಯಕ್ತಪಡಿಸಿದರು.

ಸರ್ಕಾರ ನೆರವಿಗೆ ಬಂದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ಗೋಶಾಲೆ ಆರಂಭಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಗಮನಹರಿಸಿಲ್ಲ. ಗೋಶಾಲೆ ಆರಂಭಿಸುವವರೆಗೂ ಇಲ್ಲಿಯೇ ಬಿಡಾರ ಹೂಡುತ್ತೇವೆ ಎಂದು ತಿಳಿಸಿ ಧರಣಿ ಕುಳಿತರು.

ಸಂಜೆ ಸ್ಥಳಕ್ಕೆ ಆಗಮಿಸಿದ ಶಾಸಕ ಅಮರೇಗೌಡ ಬಯ್ಯಾಪುರ ಗೋಶಾಲೆ ಆರಂಭಿಸುವ ಭರವಸೆ ನೀಡಿದ ನಂತರ ರೈತರು ಮುತ್ತಿಗೆ ಹಿಂತೆಗೆದುಕೊಂಡು ಗ್ರಾಮಕ್ಕೆ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT