ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚತುಷ್ಪಥ ಕಾಮಗಾರಿ ಇನ್ನಷ್ಟು ವಿಳಂಬ?

Last Updated 20 ಫೆಬ್ರುವರಿ 2012, 10:35 IST
ಅಕ್ಷರ ಗಾತ್ರ

ಪಡುಬಿದ್ರಿ: ಪಡುಬಿದ್ರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯೇ ಸೂಕ್ತ ಎನ್ನುವ ಉಡುಪಿ ಜಿಲ್ಲಾಧಿಕಾರಿ ವರದಿಯ ಹೊರತಾಗಿಯೂ ರಾಜ್ಯ ಸರ್ಕಾರ ಬೈಪಾಸ್ ಯೋಜನೆಗೆ ಹಸಿರು ನಿಶಾನೆ ತೋರಿಸಿದೆ. ಬೈಪಾಸ್ ರಚನೆಯಿಂದ ಪಡುಬಿದ್ರಿಯಲ್ಲಿ ಚತುಷ್ಪಥ ಕಾಮಗಾರಿ ಇನ್ನಷ್ಟು ವಿಳಂಬವಾಗುವ ಆತಂಕ ಎದುರಾಗಿದೆ. 

ಸುರತ್ಕಲ್-ಕುಂದಾಪುರ ನಡುವಣ ಹೆದ್ದಾರಿ ಚತುಷ್ಪಥ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿರುವಾಗಲೇ ಪಡುಬಿದ್ರಿಯಲ್ಲಿ ಬೈಪಾಸ್ ನಿರ್ಮಿಸಬೇಕೇ ಅಥವಾ ರಸ್ತೆ ವಿಸ್ತರಿಸಬೇಕೇ ಎಂಬ ಬಗ್ಗೆ ಗೊಂದಲ ಎದುರಾಗಿತ್ತು. ಈ ಬಗ್ಗೆ ಕೇಂದ್ರ ಸರ್ಕಾರದ ಆದೇಶ ಹೊರಬೀಳುವ ಮುನ್ನವೇ ಚತುಷ್ಪಥ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ನವಯುಗ್ ಕಂಪೆನಿ ಬೈಪಾಸ್ ನಿರ್ಮಾಣ ಕಾಮಗಾರಿ ಆರಂಭಿಸಿದೆ. ಇಲ್ಲಿನ ಕಲ್ಸಂಕದಲ್ಲಿ ಕಿರು ಸೇತುವೆ ಕಾಮಗಾರಿಗೆ ಚಾಲನೆ ನೀಡಿದ್ದು, ಇದರಿಂದ ಬೈಪಾಸ್ ನಿರ್ಮಾಣಕ್ಕೆ ಅನುಕೂಲವಾಗಲಿದೆ ಎಂದು ಮೂಲಗಳು ತಿಳಿಸಿವೆ. 

ಚೆಂಡು ಕೇಂದ್ರ ಸರ್ಕಾರದ ಅಂಗಳದಲ್ಲಿ: ಪಡುಬಿದ್ರಿಯಲ್ಲಿ ಬೈಪಾಸ್ ನಿರ್ಮಾಣಕ್ಕೆ ಸ್ಥಳೀಯರಿಂದ ಪರ ವಿರೋಧ ವ್ಯಕ್ತವಾದ ಬಳಿಕ ಉಡುಪಿ ಜಿಲ್ಲಾಧಿಕಾರಿ ಎಂ.ಟಿ.ರೇಜು ಅವರು ಕಳೆದ ಆ. 31ರಂದು ಅಭಿಪ್ರಾಯ ಸಂಗ್ರಹ ಸಭೆ ಕರೆದಿದ್ದರು. ಈ ಸಭೆಯಲ್ಲಿ ಪ್ರಸ್ತಾವಿತ ಬೈಪಾಸ್ ಯೋಜನೆಯ ಬದಲು ಪಡುಬಿದ್ರಿಯಲ್ಲಿ ಹೆದ್ದಾರಿ ವಿಸ್ತರಣೆಯೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
 
ಈ ವೇಳೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ತಯಾರಿಸಿದ ವರದಿಯಲ್ಲಿ ಪಡುಬಿದ್ರಿಯಲ್ಲಿ ಹೆದ್ದಾರಿ ವಿಸ್ತರಣೆಯೇ ಸೂಕ್ತ ಎಂದು ಶಿಫಾರಸು ಮಾಡ್ದ್ದಿದರು. ಈ ವರದಿಯನ್ನು  ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ರವಾನಿಸಿದ್ದರು. ಆದರೆ ರಾಜ್ಯ ಸರ್ಕಾರ ವರದಿ ಕೈಸೇರಿದ ಆರು ತಿಂಗಳ ಬಳಿಕ ಜಿಲ್ಲಾಧಿಕಾರಿ ಶಿಫಾರಸನ್ನು ಕಡೆಗಣಿಸಿ ಬೈಪಾಸ್ ಯೋಜನೆಗೆ ಹಸಿರುನಿಶಾನೆ ತೋರಿಸಿದೆ.

ಇದನ್ನು ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಗೆ ಕಳುಹಿಸಿಕೊಡಲಾಗಿದೆ. ಇದೀಗ ಪಡುಬಿದ್ರಿ ಬೈಪಾಸ್ ಸಂಬಂಧಪಟ್ಟ ಚೆಂಡು ಕೇಂದ್ರ ಸರ್ಕಾರದ ಅಂಗಳದಲ್ಲಿದ್ದು, ಕೇಂದ್ರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಬೈಪಾಸ್ ಎಲ್ಲಿಂದ: ಬೈಪಾಸ್ ರಸ್ತೆ ಪಡುಬಿದ್ರಿ ಪೇಟೆಯ ಪೂರ್ವ ಭಾಗದ ಕಲ್ಸಂಕದಿಂದ ಹೆದ್ದಾರಿಯನ್ನು ಬೇರ್ಪಟ್ಟು  ಜನವಸತಿ ಇರುವ ಪ್ರದೇಶವಾದ ಪಾದೆಬೆಟ್ಟು, ರಾಮನಗರ, ದೀನ್ ಸ್ಟ್ರೀಟ್ ಮೂಲಕ  ಸಾಗಿ ಮತ್ತೆ ರಾಷ್ಟ್ರೀಯ ಹೆದ್ದಾರಿ ಸೇರಲಿದೆ.  60 ಮೀಟರ್‌ನಷ್ಟು ಈ ಪ್ರದೇಶದಲ್ಲಿ ಹೆದ್ದಾರಿ ಪ್ರಾಧಿಕಾರ ಭೂಸ್ವಾಧೀನ ನಡೆಸಲು ಪ್ರಾಧಿಕಾರ ಸಿದ್ಧತೆ ನಡೆಸಿದೆ, ಈ ನಿರ್ಧಾರದಿಂದ ದಲಿತ ಕುಟುಂಬದ 28 ಮನೆಗಳ ಸಹಿತ 58 ಮನೆಗಳು ಈ ಯೋಜನೆಯಿಂದ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಹೆಚ್ಚಾಗಿ ಕೃಷಿಕರೇ ಇರುವ ಈ ಪ್ರದೇಶದಲ್ಲಿ ಕೃಷಿ ಯೋಗ್ಯ ಭೂಮಿಯನ್ನೂ ಕಳೆದುಕೊಳ್ಳಬೇಕಾದ ಅನಿವಾರ್ಯತೆ ಈ ಯೋಜನೆಯಿಂದಾಗಿ ಸೃಷ್ಟಿಯಾಗಿದೆ. 

ಡಿ.ಸಿ. ವರದಿಯಲ್ಲಿ ಏನಿದೆ?: ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿ ನಡೆಸಿದಲ್ಲಿ ಖರ್ಚು ಹಾಗೂ ಸಮಯ, ಹಾನಿಯೂ ಕಡಿಮೆ. ಆದರೆ ಬೈಪಾಸ್ ನಿರ್ಮಿಸುವುದರಿಂದ ಖರ್ಚು, ಸಮಯ, ಹಾನಿಯೂ ಹೆಚ್ಚು ಎಂದು ಜಿಲ್ಲಾಧಿಕಾರಿ ವರದಿಯಲ್ಲಿ ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ಕಾಮಗಾರಿ ವಿಸ್ತರಿಸಬೇಕಾದರೆ 12 ಎಕರೆ ಭೂಮಿ ಮಾತ್ರ ಸಾಕು. ಆದರೆ ಬೈಪಾಸ್ ನಿರ್ಮಾಣವಾದಲ್ಲಿ 45 ಎಕರೆ ಭೂಮಿಯನ್ನು ಸ್ವಾಧೀಪಡಿಸಿಕೊಳ್ಳಬೇಕಾಗುತ್ತದೆ. ಇದರಲ್ಲಿ ಹೆಚ್ಚಿನವು ಕೃಷಿ ಭೂಮಿ. ಹೆದ್ದಾರಿಯಲ್ಲಿ ಕೆಲವು ಕಟ್ಟಡಗಳಿದ್ದು, ಅವುಗಳನ್ನು ತೆರವುಗೊಳಿಸಿದಲ್ಲಿ ಕಾಮಗಾರಿಗೆ ಅನುಕೂಲವಾಗುತ್ತದೆ.
 
ಅಲ್ಲದೆ ಪಡುಬಿದ್ರಿ ಇನ್ನಷ್ಟು ಅಭಿವೃದ್ಧಿ ಸಾಧ್ಯ. ಬೈಪಾಸ್ ರಸ್ತೆ ಆದಲ್ಲಿ ಇಲ್ಲಿ 14 ದಲಿತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ಅಲ್ಲದೆ ಇತರ 45 ಮನೆಗಳಿಗೆ ಸಂಪೂರ್ಣ ಹಾನಿಯಾಗಲಿದೆ. ಬೈಪಾಸ್‌ಗೆ ಶೇ. 100ರಷ್ಟು ಭೂಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ. ಅದರಲ್ಲಿ ಶೇ. 60ರಷ್ಟು ಕೃಷಿ ಭೂಮಿ ಇದೆ. 2012ರ ಡಿ. 31ರೊಳಗೆ ಈ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳಬೇಕಾಗಿರುವುದರಿಂದ ಹೆದ್ದಾರಿ ವಿಸ್ತರಿಸುವುದೇ ಸೂಕ್ತ ಎಂದು ವರದಿಯಲ್ಲಿ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ಬೈಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರವೂ ಮುಂದಾದಲ್ಲಿ ಈ ಕಾಮಗಾರಿಗೆ ತಡೆಯಾಜ್ಞೆ ದೊರಕುವ ಸಾಧ್ಯತೆ ಇದೆ. ಸಾರ್ವಜನಿಕ ಹಿತಾಸಕ್ತಿಯ ಮೇಲೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟಿನಲ್ಲಿ ಈ ಬಗ್ಗೆ ಪ್ರಶ್ನಿಸಬೇಕಾಗುತ್ತದೆ. ಅಲ್ಲದೆ ಡಿಸೆಂಬರ್ ಒಳಗೆ ಈ ಕಾಮಗಾರಿ ಪೂರ್ಣಗೊಳ್ಳಬೇಕಾಗಿರುವುದರಿಂದ ಬೈಪಾಸ್ ಆದಲ್ಲಿ ಇದು ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.
 
ನ್ಯಾಯಾಲಯದಲ್ಲಿ ಇದು ತೀರ್ಪು ಬರಲು ಕೆಲವು ಸಮಯ ತಗಲಬಹುದು.  ಸಂತ್ರಸ್ತರು ಮತ್ತೆ ನ್ಯಾಯಾಲಯದಲ್ಲಿ ದಾವೆ ಹೂಡುವ ಸಾಧ್ಯತೆ ಇದೆ. ಹೆದ್ದಾರಿಯ ಅಕ್ಕಪಕ್ಕದಲ್ಲಿ ಕಟ್ಟಡ ನಿರ್ಮಿಸುವಾಗ 40 ಮೀಟರ್ ಸ್ಥಳ ಬಿಡಬೇಕು ಎಂಬ ನಿಯಮ ಉಲ್ಲಂಘನೆ ಆಗಿದೆ. ಅದನ್ನು ಸರಿಪಡಿಸುವ ಬದಲು ಕೃಷಿಕರ, ದಲಿತರ ಭೂಮಿ ಕಿತ್ತುಕೊಳ್ಳುವುದು ನ್ಯಾಯವೇ?~ ಎಂದು ಅಭಿಪ್ರಾಯಪಡುತ್ತಾರೆ ಕಾನೂನು ತಜ್ಞರು.

 ಬೈಪಾಸ್‌ಗೆ ವಿರೋಧ
ಪಡುಬಿದ್ರಿಯಲ್ಲಿ ಬೈಪಾಸ್ ಯೋಜನೆಗೆ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಈ ಯೋಜನೆಯಿಂದ ಸಂತ್ರಸ್ತರಾಗಲಿರುವರು ಕಾನೂನು ಹೋರಾಟಕ್ಕೆ ಸಿದ್ಧವಾಗಿದ್ದು, ಈ ಯೋಜನೆಯನ್ನು ಅಕ್ರಮ ಕಟ್ಟಡ ಉಳಿಸಲು ಜನಪ್ರತಿನಿಧಿಗಳು ಬಂಡವಾಳ ಶಾಹಿಗಳೊಂದಿಗೆ ಕೈಜೋಡಿಸಿದ್ದಾರೆ ಎಂದು ಬೈಪಾಸ್ ವಿರೋಧಿ ಹೋರಾಟ ಸಮಿತಿ ಆರೋಪಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT